ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವಿನ ಹಾದಿಗೆ ಮರಳಿದ ಮುಂಬೈ

Last Updated 20 ಏಪ್ರಿಲ್ 2011, 19:00 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):  ಸುಲಭ ಗುರಿ ಮುಂದಿದ್ದರೂ ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲುವು ಪಡೆಯಲು ಕೊನೆಯ ಎಸೆತದವರೆಗೆ ಕಾಯಬೇಕಾಯಿತು. ಪುಣೆ ವಾರಿಯರ್ಸ್ ನೀಡಿದ್ದ 119 ರನ್‌ಗಳ ಗೆಲುವಿನ ಗುರಿಯನ್ನು ಬಹಳ ಪ್ರಯಾಸದಿಂದ ತಲುಪಿದ ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ತಂಡ ಏಳು ವಿಕೆಟ್‌ಗಳ ಜಯ ಸಾಧಿಸಿತು.

ವಾಂಖೇಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಐಪಿಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಯುವರಾಜ್ ಸಿಂಗ್ ನೇತೃತ್ವದ ಪುಣೆ ವಾರಿಯರ್ಸ್ ತಂಡವನ್ನು 17.2 ಓವರ್‌ಗಳಲ್ಲಿ 118 ರನ್‌ಗಳಿಗೆ ನಿಯಂತ್ರಿಸುವಲ್ಲಿ ಮುಂಬೈ ಬೌಲರ್‌ಗಳು ಯಶಸ್ವಿಯಾದರು. ‘ಪಂದ್ಯಶ್ರೇಷ್ಠ’ ಮುನಾಫ್ ಪಟೇಲ್ (8ಕ್ಕೆ 3) ಒಳಗೊಂಡಂತೆ ಮುಂಬೈ ತಂಡದ ಎಲ್ಲ ಬೌಲರ್‌ಗಳು ಪ್ರಭಾವಿ ಎನಿಸಿದರು.

ಆದರೆ ಈ ಗುರಿಯನ್ನು ಬೆನ್ನಟ್ಟಲು ಸಚಿನ್ ಬಳಗ ಪೂರ್ಣ 20 ಓವರ್‌ಗಳನ್ನು ತೆಗೆದುಕೊಂಡಿತು. ಜೇಮ್ಸ್ ಫ್ರಾಂಕ್ಲಿನ್ (6) ಅವರನ್ನು ಬೇಗನೇ ಕಳೆದುಕೊಂಡ ತಂಡಕ್ಕೆ ಎಂದಿನಂತೆ ಸಚಿನ್ (39 ಎಸೆತಗಳಲ್ಲಿ 35) ಆಸರೆಯಾದರು. ಅವರು ಅಂಬಟಿ ರಾಯುಡು (40 ಎಸೆತಗಳಲ್ಲಿ 37) ಜೊತೆ ಎರಡನೇ ವಿಕೆಟ್‌ಗೆ 12 ಓವರ್‌ಗಳಲ್ಲಿ 74 ರನ್‌ಗಳನ್ನು ಪೇರಿಸಿದರು.

ಆದರೆ ಇವರಿಬ್ಬರು ಏಳು ರನ್‌ಗಳ ಅಂತರದಲ್ಲಿ ಪೆವಿಲಿಯನ್‌ಗೆ ಮರಳಿದರು. ಸಚಿನ್ ಅವರು ಆಡಿದ ನಾಲ್ಕು ಪಂದ್ಯಗಳಲ್ಲಿ ಇದೇ ಮೊದಲ ಬಾರಿಗೆ ಔಟಾದರು. ‘ಮಾಸ್ಟರ್ ಬ್ಲಾಸ್ಟರ್’ ಕಳೆದ ಮೂರು ಪಂದ್ಯಗಳಲ್ಲೂ ಅಜೇಯರಾಗುಳಿದಿದ್ದರು.

ಬಳಿಕ ಜೊತೆಗೂಡಿದ ರೋಹಿತ್ ಶರ್ಮ ಮತ್ತು ಆ್ಯಂಡ್ರ್ಯೂ ಸೈಮಂಡ್ಸ್ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಇದರಿಂದ ಗೆಲುವು ತಡವಾಗಿ ಲಭಿಸಿತು. ಮುಂಬೈ ಜಯಕ್ಕೆ ಕೊನೆಯ ಓವರ್‌ನಲ್ಲಿ ಐದು ಹಾಗೂ ಅಂತಿಮ ಎಸೆತದಲ್ಲಿ ಒಂದು ರನ್ ಬೇಕಿತ್ತು. ಮುರಳಿ ಕಾರ್ತಿಕ್ ಎಸೆದ ಈ ಓವರ್‌ನ ಅಂತಿಮ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ರೋಹಿತ್ (18 ಎಸೆತಗಳಲ್ಲಿ 20) ಗೆಲುವು ತಂದಿತ್ತರು. ಆ್ಯಂಡ್ರ್ಯೂ ಸೈಮಂಡ್ಸ್ 16 ರನ್ ಗಳಿಸಿ ಔಟಾಗದೆ ಉಳಿದರು.

‘ನಮ್ಮ ಬ್ಯಾಟಿಂಗ್ ಇನ್ನಷ್ಟು ಉತ್ತಮವಾಗಿದ್ದರೆ ಚೆನ್ನಾಗಿತ್ತು. 17 ಅಥವಾ 18ನೇ ಓವರ್‌ನಲ್ಲಿ ಗೆಲುವಿನ ಗುರಿ ತಲುಪಬೇಕಿತ್ತು. ಕೊನೆಯಲ್ಲಿ ಸಾಕಷ್ಟು ಗೊಂದಲ ಉಂಟಾಯಿತು.

ಬ್ಯಾಟ್ಸ್‌ಮನ್‌ಗಳು ದೊಡ್ಡ ಹೊಡೆತಕ್ಕೆ ಮುಂದಾಗಿದ್ದಲ್ಲಿ, ಗೆಲುವು ಬೇಗನೇ ಲಭಿಸುವ ಸಾಧ್ಯತೆಯಿತ್ತು’ ಎಂದು ಪಂದ್ಯದ ಬಳಿಕ ಸಚಿನ್ ತೆಂಡೂಲ್ಕರ್ ಪ್ರತಿಕ್ರಿಯಿಸಿದರು.
ಮಿಂಚಿದ ಮುನಾಫ್: ಮೊದಲು ಬ್ಯಾಟ್ ಮಾಡಿದ ಪುಣೆ ತಂಡಕ್ಕೆ ಮುನಾಫ್ ಪಟೇಲ್ ಆಘಾತ ನೀಡಿದರು. ಅಲಿ ಮುರ್ತಜಾ (18ಕ್ಕೆ2), ಲಸಿತ್ ಮಾಲಿಂಗ (28ಕ್ಕೆ 2) ಮತ್ತು ಅಬು ನೆಚಿಮ್ ಅಹ್ಮದ್ (13ಕ್ಕೆ2) ಅವರೂ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು.

17 ರನ್‌ಗಳಿಸುವಷ್ಟರಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ತಂಡ ಬಳಿಕ ಚೇತರಿಸಿಕೊಳ್ಳಲೇ ಇಲ್ಲ. ಯುವರಾಜ್ ಸಿಂಗ್ ಯಾವುದೇ ರನ್ ಗಳಿಸದೆ ಮುನಾಫ್‌ಗೆ ವಿಕೆಟ್ ಒಪ್ಪಿಸಿದರು. 45 ರನ್ ಗಳಿಸಿದ ರಾಬಿನ್ ಉತ್ತಪ್ಪ ಅವರು ‘ಟಾಪ್ ಸ್ಕೋರರ್’ ಎನಿಸಿದರು. ಕೊಡಗಿನ ಈ ಬ್ಯಾಟ್ಸ್‌ಮನ್ 37 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ವಿಕೆಟ್ ನಷ್ಟವಿಲ್ಲದೆ 16 ರನ್ ಗಳಿಸಿದ್ದ ತಂಡ ಆ ಮೊತ್ತಕ್ಕೆ ಒಂದು ರನ್ ಸೇರಿಸುವಷ್ಟರಲ್ಲಿ ನಾಲ್ಕು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿತು.

ಅಬು ನೆಚಿನ್ ಅಹ್ಮದ್ ಅವರು ನಾಲ್ಕನೇ ಓವರ್‌ನಲ್ಲಿ ಜೆಸ್ಸಿ ರೈಡರ್ ಮತ್ತು ಮಿಥುನ್ ಮನ್ಹಾಸ್ ಅವರ ವಿಕೆಟ್ ಪಡೆದು ಪುಣೆ ತಂಡದ ಕುಸಿತಕ್ಕೆ ಚಾಲನೆ ನೀಡಿದರು.

ಸ್ಕೋರು ವಿವರ
 ಪುಣೆ ವಾರಿಯರ್ಸ್: 17.2 ಓವರ್‌ಗಳಲ್ಲಿ 118
ಜೆಸ್ಸಿ ರೈಡರ್ ಸಿ ತೆಂಡೂಲ್ಕರ್ ಬಿ ನೆಚಿಮ್ ಅಹ್ಮದ್  12
ಟಿಮ್ ಪೈನ್ ಬಿ ಮುನಾಫ್ ಪಟೇಲ್  02
ಮಿಥುನ್ ಮನ್ಹಾಸ್ ಸಿ ರಾಯುಡು ಬಿ ನೆಚಿಮ್ ಅಹ್ಮದ್  00
ರಾಬಿನ್ ಉತ್ತಪ್ಪ ಸಿ ಪೊಲಾರ್ಡ್ ಬಿ ಅಲಿ ಮುರ್ತಜಾ  45
ಯುವರಾಜ್ ಸಿಂಗ್ ಸಿ ರಾಯುಡು ಬಿ ಮುನಾಫ್ ಪಟೇಲ್  00
ಮೋನಿಶ್ ಮಿಶ್ರಾ ಸಿ ಶರ್ಮ ಬಿ ಅಲಿ ಮುರ್ತಜಾ  12
ಮುರಳಿ ಕಾರ್ತಿಕ್ ಸಿ ಸೈಮಂಡ್ಸ್ ಬಿ ಲಸಿತ್ ಮಾಲಿಂಗ  11
ವೇಯ್ನ್ ಪಾರ್ನೆಲ್ ಬಿ ಜೇಮ್ಸ್ ಫ್ರಾಂಕ್ಲಿನ್  09
ರಾಹುಲ್ ಶರ್ಮ ಸಿ ಮುರ್ತಜಾ ಬಿ ಮುನಾಫ್ ಪಟೇಲ್  13
ಶ್ರೀಕಾಂತ್ ವಾಗ್ ಸಿ ಸೈಮಂಡ್ಸ್ ಬಿ ಲಸಿತ್ ಮಾಲಿಂಗ  02
ಅಲ್ಫೋನ್ಸೊ ಥಾಮಸ್ ಔಟಾಗದೆ  00
ಇತರೆ: (ಲೆಗ್‌ಬೈ-6, ವೈಡ್-2, ನೋಬಾಲ್-4)  12
ವಿಕೆಟ್ ಪತನ: 1-16 (ರೈಡರ್; 3.3), 2-17 (ಮನ್ಹಾಸ್; 3.5), 3-17 (ಪೈನ್; 4.2), 4-17 (ಯುವರಾಜ್; 4.4), 5-52 (ಮಿಶ್ರಾ; 8.3), 6-87 (ಕಾರ್ತಿಕ್; 12.6), 7-98 (ಉತ್ತಪ್ಪ; 14.2), 8-111 (ಪಾರ್ನೆಲ್; 15.6), 9-118 (ವಾಗ್; 16.4), 10-118 (ಶರ್ಮ; 17.2)
ಬೌಲಿಂಗ್: ಅಲಿ ಮುರ್ತಜಾ 4-0-18-2, ಲಸಿತ್ ಮಾಲಿಂಗ 4-0-28-2, ಅಬು ನೆಚಿಮ್ ಅಹ್ಮದ್ 3-1-13-2, ಮುನಾಫ್ ಪಟೇಲ್ 2.2-0-8-3, ಕೀರನ್ ಪೊಲಾರ್ಡ್ 1-0-13-0, ಜೇಮ್ಸ್ ಫ್ರಾಂಕ್ಲಿನ್ 3-0-32-1

ಮುಂಬೈ ಇಂಡಿಯನ್ಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 124
ಜೇಮ್ಸ್ ಫ್ರಾಂಕ್ಲಿನ್ ಸಿ ಮನ್ಹಾಸ್ ಬಿ ಶ್ರೀಕಾಂತ್ ವಾಗ್  06
ಸಚಿನ್ ತೆಂಡೂಲ್ಕರ್ ಸಿ ಥಾಮಸ್ ಬಿ ರಾಹುಲ್ ಶರ್ಮ  35
ಅಂಬಟಿ ರಾಯುಡು ಸಿ ಶರ್ಮ ಬಿ ಅಲ್ಫೋನ್ಸೊ ಥಾಮಸ್  37
ರೋಹಿತ್ ಶರ್ಮ ಔಟಾಗದೆ  20
ಆ್ಯಂಡ್ರ್ಯೂ ಸೈಮಂಡ್ಸ್ ಔಟಾಗದೆ  16
ಇತರೆ: (ಬೈ-2, ಲೆಗ್‌ಬೈ-6, ವೈಡ್-2)  10
ವಿಕೆಟ್ ಪತನ: 1-9 (ಫ್ರಾಂಕ್ಲಿನ್; 1.4), 2-83 (ತೆಂಡೂಲ್ಕರ್; 13.4), 3-89 (ರಾಯುಡು; 14.6)
ಬೌಲಿಂಗ್: ಅಲ್ಫೋನ್ಸೊ ಥಾಮಸ್ 4-0-16-1, ಶ್ರೀಕಾಂತ್ ವಾಗ್ 2-0-9-1, ಮುರಳಿ ಕಾರ್ತಿಕ್ 4-0-29-0, ವೇಯ್ನೊ ಪಾರ್ನೆಲ್ 4-0-28-0, ರಾಹುಲ್ ಶರ್ಮ 3-0-14-1, ಜೆಸ್ಸಿ ರೈಡರ್ 2-0-15-0, ಯುವರಾಜ್ ಸಿಂಗ್ 1-0-5-0
ಫಲಿತಾಂಶ: ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್ ಜಯ; ಪಂದ್ಯಶ್ರೇಷ್ಠ: ಮುನಾಫ್ ಪಟೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT