ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲುವೆಂಬ ಕುದುರೆಯನೇರಿ

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬದುಕು ಮತ್ತು ಕ್ರೀಡೆಯ ಸವಾಲುಗಳನ್ನು ಸಮರ್ಥವಾಗಿ ಎದುರಿಸುತ್ತಾ, ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ತನ್ನದೇ ಆದ ಹೆಜ್ಜೆ ಗುರುತು ಮೂಡಿಸಿರುವ ಕ್ರೀಡಾಪಟುವೇ ಚೌಡಯ್ಯ.

ಹೌದು ಚೌಡಯ್ಯ ಅಂಗವಿಕಲ ಕ್ರೀಡಾಪಟು. ಒಬ್ಬ ಕ್ರೀಡಾಪಟುವಿಗೆ ಇರಬೇಕಾದ ಕ್ರೀಡಾಸ್ಫೂರ್ತಿ, ಏಕಾಗ್ರತೆ, ಆಸಕ್ತಿ, ಛಲ, ಶಿಸ್ತು ಎಲ್ಲವನ್ನೂ ಮೈಗೂಡಿಸಿಕೊಂಡಿದ್ದಾರೆ. ಎಂಥ ಸವಾಲನ್ನು ಬೇಕಾದರೂ ಎದುರಿಸಬಲ್ಲೆ ಎಂಬ ಆತ್ಮಸ್ಥೈರ್ಯವೇ ಚೌಡಯ್ಯ ಅವರನ್ನು ಒಬ್ಬ ಕ್ರೀಡಾಪಟುವಾಗಿ ರೂಪಿಸಿರುವುದು.

ಚೌಡಯ್ಯ ಡಿಸೆಂಬರ್ 12,1981ರಲ್ಲಿ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕು ಮಾರ್ಚಹಳ್ಳಿಯಲ್ಲಿ ಜನಿಸಿದರು. ತಂದೆ ದೇವನಾಯ್ಕ, ತಾಯಿ ಚಿಕ್ಕಮ್ಮ. ಕೂಲಿ ಕೆಲಸ ಮಾಡಿ ತನ್ನ ಕುಟುಂಬವನ್ನು ಸಾಕುತ್ತಿದ್ದ ದೇವನಾಯ್ಕ ಅವರಿಗೆ ಒಟ್ಟು 9 ಮಂದಿ ಮಕ್ಕಳು. ಅದರಲ್ಲಿ ಎರಡನೆಯವರೇ ಚೌಡಯ್ಯ. ಆರ್ಥಿಕ ಸಂಕಷ್ಟದಿಂದ 7ನೇ ತರಗತಿಗೆ ಅವರ ವಿದ್ಯಾಭ್ಯಾಸ ಮೊಟಕುಗೊಂಡಿತು.

ಗಾಯದ ಮೇಲೆ ಬರೆ: ಚೌಡಯ್ಯ ಅವರ ಅಂಗವೈಕಲ್ಯ ಹುಟ್ಟಿನಿಂದ ಬಂದದ್ದಲ್ಲ, 6-7 ತಿಂಗಳ ಮಗುವಾಗಿದ್ದಾಗ ಮನೆಯಲ್ಲಿದ್ದ ಸೀಮೆಎಣ್ಣೆ ಬುಡ್ಡಿ ಉರುಳಿ, ಬೆಂಕಿ ಹೊತ್ತಿಕೊಂಡು ಮಗುವಿನ ಬಲಗಾಲು ಮಂಡಿಯವರೆಗೆ ಸುಟ್ಟು ಕರಕಲಾಯಿತು. ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ದೇವನಾಯ್ಕ ಅವರ ಕುಟುಂಬಕ್ಕೆ ಇದರಿಂದ ಗಾಯದ ಮೇಲೆ ಮತ್ತೊಂದು ಬರೆ ಎಳೆದಂತಾಯಿತು.

ಅಂಗವಿಕಲನಾದರೂ ಚೌಡಯ್ಯ ಅವರಿಗೆ ಆಟೋಟಗಳ ಮೇಲೆ ತುಂಬಾ ಆಸಕ್ತಿ ಇತ್ತು. ರೊ.ರಾಮಚಂದ್ರ ಅವರ ಪ್ರೋತ್ಸಾಹದಿಂದ ತಮ್ಮ 14ನೇ ವಯಸ್ಸಿನಲ್ಲಿ ಅಂಗವಿಕಲರ ದಿನಾಚರಣೆಯ ಅಂಗವಾಗಿ ಮೈಸೂರಿನಲ್ಲಿ ಏರ್ಪಡಿಸಿದ್ದ ಕ್ರೀಡಾಕೂಟದಲ್ಲಿ ಭಾಗವಹಿಸಿ ಬಹುಮಾನ ಗೆದ್ದರು. ಇದರಿಂದ ವಿಶ್ವಾಸ ಹೆಚ್ಚಿಸಿಕೊಂಡ ಚೌಡಯ್ಯ ಕ್ರೀಡೆಗಳ ಜೈತ್ರಯಾತ್ರೆ ಆರಂಭಿಸಿದರು.

ಜೈತ್ರಯಾತ್ರೆ: ಫರಿದಾಬಾದ್, ಜೈಪುರ, ಹರಿಯಾಣ, ಚೆನ್ನೈ, ಬೆಂಗಳೂರು, ಬಳ್ಳಾರಿ, ಮೈಸೂರು ಹೀಗೆ ವಿವಿಧೆಡೆ ನಡೆದ ರಾಜ್ಯ ಮತ್ತು ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ.

2004ರಲ್ಲಿ ಹೊಸಕೋಟೆಯಲ್ಲಿ ನಡೆದ 9ನೇ ರಾಜ್ಯ ಮಟ್ಟದ ಅಂಗವಿಕಲರ ಕ್ರೀಡಾಕೂಟದ 100ಮೀ. ಓಟ ಸ್ಪರ್ಧೆಯಲ್ಲಿ ಪ್ರಥಮ, ಭಾರತದ ಪ್ಯಾರಲಿಂಪಿಕ್ ಕಮಿಟಿ 2004ರಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ 6ನೇ ರಾಷ್ಟ್ರೀಯ ಅಂಗವಿಕಲರ ಕ್ರೀಡಾಕೂಟದ 100ಮೀ. ಓಟದಲ್ಲಿ ಪ್ರಥಮ, 2010ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟದ ಗುಂಡು ಎಸೆತದಲ್ಲಿ ಪ್ರಥಮ ಹೀಗೆ ಹಲವಾರು ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗಿಟ್ಟಿಸಿದ್ದಾರೆ.

2008ರಲ್ಲಿ ಫರಿದಾಬಾದ್‌ನಲ್ಲಿ ನಡೆದ 10ನೇ ರಾಷ್ಟ್ರೀಯ ಹಿರಿಯರ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್, ಮೈಸೂರು ದಸರಾ ಸೈಕ್ಲಿಂಗ್ ಉಪಸಮಿತಿ ನಡೆಸುವ ಸೈಕ್ಲಿಂಗ್ ಸ್ಪರ್ಧೆ, ಬಳ್ಳಾರಿಯಲ್ಲಿ ನಡೆದ 2ನೇ ರಾಷ್ಟ್ರೀಯ ಮುಕ್ತ ಪ್ಯಾರಾ ಗೇಮ್ಸ ಮುಂತಾದ ಸ್ಪರ್ಧೆಗಳಲ್ಲಿ ಭಾಗವಹಿಸಿದ ಹೆಮ್ಮೆ ಚೌಡಯ್ಯ ಅವರದು.

ಬದುಕು-ಬವಣೆ: `ಕ್ರೀಡಾ ಸಾಧನೆಯಿಂದ ಉತ್ತಮ ಹೆಸರು ದೊರೆತಿದೆ. ನನ್ನನ್ನು ಕ್ರೀಡಾಭಿಮಾನಿಗಳು ಗುರುತಿಸಿ ಮಾತನಾಡಿಸುತ್ತಾರೆ. ಕ್ರೀಡೆ ನನಗೆ ಆತ್ಮ ಸಂತೋಷ ಕೊಟ್ಟಿದೆ, ಆದರೆ ಜೀವನ ನಿರ್ವಹಣೆಗೆ ಆರ್ಥಿಕ ಭದ್ರತೆ ನೀಡಿಲ್ಲ.
 
ಸರ್ಕಾರದಿಂದ ಅಂಗವಿಕಲರ ಮಾಸಾಶನ ರೂ.1,000 ಸಿಗುತ್ತದೆ. ಜತೆಗೆ ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ನೇಹಿತರ ಅಂಗಡಿಯಲ್ಲಿ ಕೆಲಸ ಮಾಡಿ ಸ್ವಲ್ಪ ಹಣ ಗಳಿಸುತ್ತೇನೆ~ ಎನ್ನುತ್ತಾರೆ ಚೌಡಯ್ಯ.

ಇದರ ನಡುವೆಯೂ ಅಂಗವಿಕಲರ ಸಬಲೀಕರಣಕ್ಕಾಗಿ ಕೆ.ಆರ್.ನಗರದಲ್ಲಿ ಅಂಗವಿಕಲರ ಸಂಘ ಸ್ಥಾಪಿಸಿ, ಅಂಗವಿಕಲರಿಗೆ ದೊರೆಯಬೇಕಾದ ಮಾಸಾಶನ, ಸೌಲಭ್ಯ ಮುಂತಾದವುಗಳಿಗಾಗಿ ನೆರವಾಗುತ್ತಾರೆ.
 
ಪ್ರತಿ ವರ್ಷ ಸ್ಥಳೀಯ ಅಂಗವಿಕಲರನ್ನು ಒಂದೆಡೆ ಸೇರಿಸಿ ಅಂಗವಿಕಲರ ದಿನಾಚರಣೆ ಆಚರಿಸುವ ಮೂಲಕ ಬದುಕಿನ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸಂತೋಷದಿಂದಿರಲು ಪ್ರೇರೇಪಿಸುತ್ತಾರೆ.

ಅಂಗವಿಕಲರ ಪಂದ್ಯಾವಳಿ ಎಲ್ಲೇ ನಡೆದರೂ ಸ್ಪರ್ಧಿಸಲು ಮನಸ್ಸು ಹಾತೊರೆಯುತ್ತದೆ. ಆದರೆ ಊಟ, ವಸತಿ, ಸಮವಸ್ತ್ರ ಮುಂತಾದ ಖರ್ಚು ವೆಚ್ಚಗಳನ್ನು ನಾನೇ ಭರಿಸಬೇಕಾದ್ದರಿಂದ ಎಲ್ಲ ಕಡೆ ಸ್ಪರ್ಧಿಸಲು ಸಾಧ್ಯವಾಗುತ್ತಿಲ್ಲ ಎಂದು ಚೌಡಯ್ಯ ಅಳಲು ತೋಡಿಕೊಂಡರು.
 

ಇಂಥ ಕೆಚ್ಚೆದೆಯ ಆಟಗಾರನಿಗೆ ಸರ್ಕಾರ, ಸಂಘ ಸಂಸ್ಥೆಗಳು ಹಣಕಾಸು ನೆರವು ನೀಡಿ, ಪ್ರೋತ್ಸಾಹಿಸುವ ಅಗತ್ಯವಿದೆ. (ಚೌಡಯ್ಯ ಮೊ: 99728 28398) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT