ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಲ್ಲುವ ಛಲದಲ್ಲಿ ಸೂಪರ್ ಕಿಂಗ್ಸ್

Last Updated 17 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸತತ ಐದು ಸೋಲುಗಳು ಡೆಲ್ಲಿ ಡೇರ್‌ಡೆವಿಲ್ಸ್ ಆಟಗಾರರ ವಿಶ್ವಾಸವನ್ನು ಬಹುತೇಕ ಕಸಿದುಕೊಂಡಿವೆ. ಐಪಿಎಲ್ ಆರನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಕನಸು ಕೂಡ ಭಗ್ನಗೊಳ್ಳುವ ಸಾಧ್ಯತೆ ಹೆಚ್ಚಿದೆ. ಟೂರ್ನಿಯಿಂದ ಹೊರಬೀಳುವ ಒತ್ತಡಕ್ಕೆ ಸಿಲುಕಿರುವ ಈ ತಂಡದವರು ಮತ್ತೊಂದು ಪೈಪೋಟಿಗೆ ಸಿದ್ಧವಾಗಬೇಕಾಗಿದೆ.

ಡೇರ್‌ಡೆವಿಲ್ಸ್ ಬಳಗ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ನಡೆಯಲಿರುವ ಟ್ವೆಂಟಿ-20 ಟೂರ್ನಿಯ ಕ್ರಿಕೆಟ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹಾಗಾಗಿ ಡೆವಿಲ್ಸ್ ಬಳಗದ ಮುಂದೆ ಈಗ ಹಲವು ಸಮಸ್ಯೆಗಳು ಹಾಗೂ ಸವಾಲುಗಳು ಇವೆ.
ಬ್ಯಾಟಿಂಗ್ ವೈಫಲ್ಯವೇ ಈ ತಂಡದ ದೊಡ್ಡ ಸಮಸ್ಯೆ. ಯಾರೊಬ್ಬರಿಂದಲೂ ಸ್ಥಿರ ಪ್ರದರ್ಶನ ಮೂಡಿ ಬರುತ್ತಿಲ್ಲ. ಪ್ರಮುಖ ಬ್ಯಾಟ್ಸ್‌ಮನ್‌ಗಳು ಎನಿಸಿರುವ ಸೆಹ್ವಾಗ್, ವಾರ್ನರ್, ಜಯವರ್ಧನೆ ಅವರು ಸತತ ವೈಫಲ್ಯ ಎದುರಿಸುತ್ತಿದ್ದಾರೆ.

ಗಾಯದ ಕಾರಣ ಮೊದಲ ಮೂರು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ವೀರೂ ನಂತರ ಆಡಿದ ಎರಡು ಪಂದ್ಯಗಳಲ್ಲಿ ಉತ್ತಮ ಆರಂಭ ಪಡೆದಿದ್ದರು. ಆದರೆ ಅದನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಜೆಸ್ಸಿ ರೈಡರ್ ಹಾಗೂ ಕೆವಿನ್ ಪೀಟರ್ಸನ್ ಅನುಪಸ್ಥಿತಿ ಈ ತಂಡದ ಮೇಲೆ ಗಾಢ ಪರಿಣಾಮ ಬೀರಿದೆ.

ಮಂಗಳವಾರ ರಾತ್ರಿ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಎದುರಿನ ಪಂದ್ಯದಲ್ಲಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಡೇರ್‌ಡೆವಿಲ್ಸ್ ನೆರವಿಗೆ ನಿಂತಿದ್ದರು. ಬೌಲರ್‌ಗಳ ಪ್ರಭಾವಿ ದಾಳಿಯಿಂದಾಗಿ ಆ ಪಂದ್ಯ ರೋಚಕ ಅಂತ್ಯಕಂಡಿತು. ಉಮೇಶ್ ಯಾದವ್, ಇರ್ಫಾನ್ ಪಠಾಣ್, ಶಹಬಾಜ್ ನದೀಮ್ ಹಾಗೂ ಮೋರ್ನ್ ಮಾರ್ಕೆಲ್ ಉತ್ತಮ ಪ್ರದರ್ಶನ ನೀಡಿದ್ದರು.

ಆದರೆ ಜಯವರ್ಧನೆ ಬಳಗ ಈ ಟೂರ್ನಿಯಲ್ಲಿ ಇದುವರೆಗೆ ಗೆಲುವಿನ ಖಾತೆಯನ್ನೇ ತೆರೆದಿಲ್ಲ. ಆಡಿದ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡು ಪಾಯಿಂಟ್ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದಾರೆ. ಹಾಗಾಗಿ ಸತತ ಆರನೇ ಸೋಲು ತಪ್ಪಿಸಿಕೊಳ್ಳಲು ಈ ತಂಡ ಈಗ ಹರಸಾಹಸಪಡಬೇಕಾಗಿದೆ.
ಇತ್ತ ಸೂಪರ್ ಕಿಂಗ್ಸ್ ಈ ಪಂದ್ಯದಲ್ಲಿ ಗೆಲುವಿನ ಛಲದಲ್ಲಿದೆ. ಹಿಂದಿನ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು ಆಘಾತ ಅನುಭವಿಸಿದ್ದ ಈ ತಂಡಕ್ಕೆ ಆರಂಭಿಕ ಸಮಸ್ಯೆ ಕಾಡುತ್ತಿದೆ. ದೋನಿ ಸಾರಥ್ಯದ ಈ ತಂಡ ಆಡಿದ ನಾಲ್ಕು ಪಂದ್ಯಗಳಿಂದ ನಾಲ್ಕು ಪಾಯಿಂಟ್ ಹೊಂದಿದೆ.

ಮುರಳಿ ವಿಜಯ್, ಮೈಕ್ ಹಸ್ಸಿ, ಸುರೇಶ್ ರೈನಾ, ಎಸ್.ಬದರೀನಾಥ್, ರವೀಂದ್ರ ಜಡೇಜ ಅವರಂಥ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ಈ ತಂಡ ಬಲಿಷ್ಠವಾಗಿಯೇ ಇದೆ. ಆದರೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಮೂಡಿಬರುತ್ತಿಲ್ಲ. ಆದರೆ ಬೌಲಿಂಗ್‌ನಲ್ಲಿ ತಂಡಕ್ಕೆ ಸದಾ ಸಮಸ್ಯೆ ಕಾಡುತ್ತಿರುತ್ತದೆ.
ಆದರೆ ಎರಡು ಬಾರಿ ಟ್ರೋಫಿ  ಎತ್ತಿ ಹಿಡಿದಿರುವ ಸೂಪರ್ ಕಿಂಗ್ಸ್ ಅಪಾಯಕಾರಿ ತಂಡ. ಈ ಹಿಂದೆ ಕೂಡ ಅಪಾಯದ ಸ್ಥಿತಿಯಿಂದ ಮೇಲೆದ್ದು ಅಮೋಘ ಪ್ರದರ್ಶನ ನೀಡಿದೆ. ದೋನಿ ಅವರ ಚಾಣಾಕ್ಷ ನಾಯಕತ್ವ ಇದಕ್ಕೆ ಕಾರಣ. ಹಾಗಾಗಿ ಈ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT