ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳತಿಯ ಸ್ನೇಹಿತನ ಕೊಂದ ಯುವಕ

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೆಳತಿಯ ಜತೆ ಸಲುಗೆ ಬೆಳೆಸಿಕೊಂಡಿದ್ದ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ  ವ್ಯಕ್ತಿ, ಸ್ನೇಹಿತೆಗೂ ಚಾಕುವಿನಿಂದ ಇರಿದು ಗಾಯಗೊಳಿಸಿದ ಘಟನೆ ಎಚ್‌ಎಸ್‌ಆರ್ ಲೇಔಟ್‌ನ ಪರಂಗಿಪಾಳ್ಯದಲ್ಲಿ ಭಾನುವಾರ ರಾತ್ರಿ ನಡೆದಿದೆ.

ಕೋರಮಂಗಲ ಏಳನೇ ಹಂತದ ನಿವಾಸಿ ಕೌಶಿಕ್ (24) ಕೊಲೆಯಾದವರು. ಆರೋಪಿ ರವಿ ರಾಣಾಸಿಂಗ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಅಪರ್ಣಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಲಹಾಬಾದ್‌ನ ರವಿ ಮತ್ತು ಚೆನ್ನೈನ ಅಪರ್ಣಾ  ಕೋರಮಂಗಲದಲ್ಲಿರುವ ರಾಷ್ಟ್ರೀಯ ಫ್ಯಾಷನ್ ಟೆಕ್ನಾಲಜಿ ಸಂಸ್ಥೆಯ ವಿದ್ಯಾರ್ಥಿಗಳು. ನಾಲ್ಕು ವರ್ಷಗಳ ಕಾಲ ಸಹಪಾಠಿಗಳಾಗಿದ್ದ ಅವರು ಒಳ್ಳೆಯ ಸ್ನೇಹಿತರಾಗಿದ್ದರು. ಆದರೆ ಅಪರ್ಣಾ ಸ್ನೇಹವನ್ನು ರವಿ ಪ್ರೀತಿ ಎಂದು ಭಾವಿಸಿ ಅವರನ್ನು ಪ್ರೀತಿಸಲಾರಂಭಿಸಿದ್ದ.

ವಿದ್ಯಾಭ್ಯಾಸದ ಬಳಿಕ ಅಪರ್ಣಾ ಮತ್ತು ಕೌಶಿಕ್ ಸಿಂಬಸ್ ಎಂಬ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ರವಿ ಬೊಮ್ಮನಹಳ್ಳಿಯ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ರವಿಯ ನಡತೆ ಸರಿಯಿಲ್ಲ ಎಂದು ಗೊತ್ತಾದ ನಂತರ ಅಪರ್ಣಾ ಆತನ ಸ್ನೇಹ ಕಡಿದುಕೊಳ್ಳಲು ಬಯಸಿದ್ದರು. ಆದರೆ ಆತ ಮಾತ್ರ ಸ್ನೇಹ ಮುಂದುವರಿಸಲು ಇಚ್ಛಿಸಿದ್ದ. ರವಿ ಕರೆ ಮಾಡಿದರೆ ಅಪರ್ಣಾ ಸ್ವೀಕರಿಸುತ್ತಿರಲಿಲ್ಲ.

ಕೌಶಿಕ್ ಜತೆ ಅವರು ಸ್ನೇಹ ಬೆಳೆಸಿಕೊಂಡಿದ್ದ ವಿಷಯ ಆರೋಪಿಗೆ ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ. ಕೌಶಿಕ್ ಭಾನುವಾರ ಮಧ್ಯಾಹ್ನ ಅಪರ್ಣಾರನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಊಟದ ನಂತರ ಅವರನ್ನು ಪರಂಗಿಪಾಳ್ಯದ ಕ್ಲಬ್ ರಸ್ತೆಯಲ್ಲಿರುವ ಮನೆಗೆ ಡ್ರಾಪ್ ಮಾಡಿದರು. ಆಗಲೇ ಸಂಜೆಯಾಗಿತ್ತು. ರಾತ್ರಿ ಏಳು ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ರವಿ  ಅಪರ್ಣಾ ಮತ್ತು ಕೌಶಿಕ್ ಜತೆಯಲ್ಲಿ ಇದ್ದದ್ದನ್ನು ನೋಡಿ ಆಕ್ರೋಶಗೊಂಡು  ಇಬ್ಬರಿಗೂ ಚಾಕುವಿನಿಂದ ಇರಿದಿದ್ದಾರೆ. ಅಲ್ಲಿಂದ ಪರಾರಿಯಾಗಲು ಯತ್ನಿಸಿದ ರವಿ ಕೆಳಗೆ ಹಾರಿದಾಗ ಕಾಲಿಗೆ ಪೆಟ್ಟಾಗಿದೆ. ನಂತರ ಅವರಿಗೆ ಅಲ್ಲಿಂದ ಪರಾರಿಯಾಗಲು ಸಾಧ್ಯವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಅಪರ್ಣಾ ಅವರ ಮನೆ ಇರುವ ಕಟ್ಟಡದ ಮೊದಲನೇ ಮಹಡಿಯ ಮನೆಯವರು ಘಟನೆಯನ್ನು ನೋಡಿ ಠಾಣೆಗೆ ಮಾಹಿತಿ ನೀಡಿದರು. ಕೂಡಲೇ ಸ್ಥಳಕ್ಕೆ ತೆರಳಿ ಮೂರು ಮಂದಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯೆ ಕೌಶಿಕ್ ಮೃತಪಟ್ಟರು. ತೀವ್ರವಾಗಿ ಗಾಯಗೊಂಡಿರುವ ಅಪರ್ಣಾ ಅವರನ್ನು ಗ್ರೀನ್ ವ್ಯೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರವಿ ಸಹ ಆಸ್ಪತ್ರೆಯಲ್ಲೇ ಇದ್ದಾರೆ. ಗುಣಮುಖರಾದ ನಂತರ ಅವರನ್ನು ವಶಕ್ಕೆ ಪಡೆಯಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಗಾಯಾಳುಗಳು ಇನ್ನೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಅವರಿಂದ ಹೇಳಿಕೆ ಪಡೆದ ನಂತರ ಘಟನೆಗೆ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿವಾಳ ಉಪ ವಿಭಾಗದ ಎಸಿಪಿ ಸುಬ್ಬಣ್ಣ, ಇನ್‌ಸ್ಪೆಕ್ಟರ್ ಎನ್.ಟಿ.ಶ್ರೀನಿವಾಸರೆಡ್ಡಿ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಎಚ್‌ಎಸ್‌ಆರ್ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಗಿಲು ಮುಚ್ಚಿದ್ದನ್ನು ತಪ್ಪಾಗಿ ಭಾವಿಸಿದ
ಅಪರ್ಣಾ ಅವರ ಸ್ನೇಹವನ್ನು ರವಿ ಪ್ರೀತಿ ಎಂದು ಭಾವಿಸಿದ್ದರಿಂದಲೇ ಈ ದುರ್ಘಟನೆ ನಡೆದಿದೆ. ವಿದ್ಯಾವಂತೆ ಆಗಿರುವ ಅಪರ್ಣಾ ಎಲ್ಲರೊಂದಿಗೂ ಸ್ನೇಹದಿಂದ ಇರುತ್ತಿದ್ದರು. ಸಹಪಾಠಿಯಾಗಿದ್ದ ರವಿ ಜತೆಯೂ ಅವರು ಸಲುಗೆಯಿಂದಿದ್ದರು. ಅವರ ಜತೆ ಓಡಾಡುತ್ತಿದ್ದರು. ಆದರೆ ಅವರ ನಡತೆ ಬಗ್ಗೆ ಸಂಶಯ ಬಂದ ನಂತರ ಆತನಿಂದ ದೂರವಿರಲು ಪ್ರಯತ್ನಿಸುತ್ತಿದ್ದರು.

ಸಹೋದ್ಯೋಗಿ ಕೌಶಿಕ್ ಜತೆಯೂ ಅವರ ಸ್ನೇಹದಿಂದ ಇದ್ದರು. ಅದೇ ಕಾರಣದಿಂದ ಕೌಶಿಕ್ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರು. ಅಪರ್ಣಾ ಅವರ ಮನೆಯಲ್ಲಿ ಕೆಲ ದಿನಗಳ ಹಿಂದೆ ಸಣ್ಣ ಅಗ್ನಿ ಅನಾಹುತ ಸಂಭವಿಸಿತ್ತು. ಇದರಿಂದಾಗಿ ಗೋಡೆಯ ಕೆಲ ಭಾಗ ಕಪ್ಪುಗಟ್ಟಿತ್ತು. ಇದಕ್ಕೆ ಬಣ್ಣ ಹೊಡೆಯಲು ಅಪರ್ಣಾ ಅವರು ಬಣ್ಣದ ಡಬ್ಬ ತಂದಿಟ್ಟಿದ್ದರು. ಆಕೆಯನ್ನು ಮನೆಗೆ ಡ್ರಾಪ್ ಮಾಡಿದ ಕೌಶಿಕ್ ಮನೆಯೊಳಗೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಪರ್ಣಾ ಅವರು ಬಣ್ಣ ಹೊಡೆಯಬೇಕಿದೆ ಎಂದಿದ್ದಾರೆ.

ಬಾಗಿಲಿನ ಹಿಂಭಾಗದ ಗೋಡೆಗೆ ಬಣ್ಣ ಹೊಡೆಯಬೇಕಿದ್ದ ಕಾರಣ ಅವರು ಬಾಗಿಲು ಮುಚ್ಚಿದ್ದರು. ಅಪರ್ಣಾ, ಕೌಶಿಕ್ ಮನೆಗೆ ಊಟಕ್ಕೆ ಹೋಗಿದ್ದ ವಿಷಯ ತಿಳಿದುಕೊಂಡಿದ್ದ ರವಿ ಅವರನ್ನು ಹಿಂಬಾಲಿಸಿದ್ದರು. ಮನೆಗೆ ಬಂದ ಅವರಿಬ್ಬರು ಬಾಗಿಲು ಹಾಕಿಕೊಂಡಿದ್ದನ್ನು ತಪ್ಪಾಗಿ ಭಾವಿಸಿದ ರವಿ, ಪರಸ್ಪರರು ಲೈಂಗಿಕ ಕ್ರಿಯೆಯಲ್ಲಿ ತೊಡಗಲು ಬಾಗಿಲು ಮುಚ್ಚಿದ್ದಾರೆ ಎಂದುಕೊಂಡಿದ್ದಾನೆ. ಅದೇ ಸಿಟ್ಟಿನಲ್ಲಿ ಅವರು ಮನೆಗೆ ನುಗ್ಗಿ ಏಕಾಏಕಿ ಚಾಕುವಿನಿಂದ ಇರಿದಿದ್ದಾರೆ ಎನ್ನಲಾಗಿದೆ.

ಕೋರಮಂಗಲ ನಿವಾಸಿಯಾಗಿರುವ ರಾಮಕೃಷ್ಣ ಎಂಬುವರ ಎರಡನೇ ಮಗ ಕೌಶಿಕ್. ಪಿಇಎಸ್‌ಐಟಿ ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದ ಅವರು ಸಿಂಬಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ರಾಮಕೃಷ್ಣ ಅವರು ಮಹಾ ಲೆಕ್ಕಪರಿಶೋಧಕರ ಕಚೇರಿಯ ಉದ್ಯೋಗಿಯಾಗಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರು ರೋದಿಸುತ್ತಿದ್ದ ದೃಶ್ಯ ಮನಕಲಕುಂವತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT