ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೆಳೆಯರ ನೆನಪಿನಲ್ಲಿ ಒಂದಿಷ್ಟು ಸ್ವಗತ...

Last Updated 18 ಜನವರಿ 2011, 14:00 IST
ಅಕ್ಷರ ಗಾತ್ರ

ಆ  ದಿನಗಳೇ ಹಾಗೆ, ಜೀವನದಲ್ಲಿ ಎಂದೂ ಮರೆಯಲು ಆಗುವುದಿಲ್ಲ. ಎಷ್ಟೋ ವಿದ್ಯಾರ್ಥಿಗಳು ತಮ್ಮ ಕಾಲೇಜಿನ ದಿನಗಳನ್ನು ನಿತ್ಯ ಜೀವನದಲ್ಲಿ ಮೆಲುಕು ಹಾಕಿ ಆ ದಿನಗಳನ್ನು ನೆನಪಿಸಿಕೊಂಡು ಮುಗಳ್ನಗೆ ಬೀರುತ್ತಾರೆ. ಸ್ನೇಹಿತರೇ, ಅಂತಹ ನನ್ನ ದಿನಗಳನ್ನು ನೆನಪಿಸಿಕೊಂಡರೆ ಒಮ್ಮೊಮ್ಮೆ ಖುಷಿ ಆಗುತ್ತದೆ, ಜೊತೆಗೆ ದುಃಖ ಕೂಡಾ.  ಹೌದು ಗೆಳೆಯರೆ. 

ನಾನು ಕತ್ತಲಲ್ಲಿ ಬೆಳಕನ್ನು ಅರಸುತ್ತಾ ಶಿಕ್ಷಣ ಪಡೆಯಬೇಕೆಂಬ ಒಂದೇ ಹಠದಿಂದ ಬಡತನದಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ಇನ್ನೂ ಮುಂದುವರೆಸುತ್ತಿದ್ದೇನೆ. ಆದರೆ ನನ್ನ ಶಿಕ್ಷಣಕ್ಕೆ ಬಡತನ ಎಂದೂ ಅಡ್ಡ ಬಂದಿಲ್ಲ. ಕಾರಣ ನನಗೆ ಸಿಕ್ಕ ವಿದ್ಯಾ ಗುರುಗಳು ಹಾಗೂ ಸ್ನೇಹಿತರು ಅಂಥವರು! ನನ್ನನ್ನು ತುಂಬಾ ಆತ್ಮೀಯವಾಗಿ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಜೀವನದಲ್ಲಿ ನನಗೆ ಪಾಠ ಕಲಿಸಿದ್ದೆ ನನ್ನ ಬಡತನ. 

  ಒಮ್ಮೊಮ್ಮೆ ಆ ದೇವರು ನನ್ನನ್ನು ಅಗ್ನಿ ಪರೀಕ್ಷೆಗೆಂದು ಇಳೆಗೆ ಬಿಟ್ಟಿದ್ದಾನೆನೋ ಅಂತಾ ಅನಿಸಿ ಬಿಡುತ್ತಿತ್ತು. ಬೆಳಿಗ್ಗೆ ಎದ್ದು ಪೇಪರ್ ಹಾಕಬೇಕು. ಸಂಜೆ ಬಾರ್‌ನಲ್ಲಿ ಕೆಲಸ ಮಾಡಬೇಕು. ಅದರ ಮಧ್ಯೆ ಕಾಲೇಜಿಗೆ ಹೋಗಬೇಕು.   ಮನೆಯ ಆರ್ಥಿಕ ಪರಿಸ್ಥಿತಿಯೇ ಇದಕ್ಕೆ ಕಾರಣವಾಗಿತ್ತು.

ಎಲ್ಲಿ ಬಡತನ ನನ್ನ ಕಲಿಕೆಗೆ ಅಡ್ಡಿಯಾಗುತ್ತೋ ಎಂಬ ಭಯ ನನ್ನನ್ನು ಸಂಪೂರ್ಣವಾಗಿ ಆವರಿಸಿತ್ತು. ಆದರೂ ತಂದೆತಾಯಿ ನನ್ನನ್ನು ಶಾಲೆಗೆ ಕಳಿಸುತ್ತಿದ್ದರು. ಅವರು ಪಡುವ ಕಷ್ಟಗಳನ್ನು ನೋಡಿ, ಬಡತನ ಮೆಟ್ಟಿ ನಿಂತು ಕಲಿಯಬೇಕು ಅಂದುಕೊಂಡು ಕಾಲೇಜಿಗೆ ಹೋಗುತ್ತಿದ್ದೆ. ನನ್ನ ಕಲಿಕೆಯ ಖರ್ಚು ನಾನೇ ನಿಭಾಯಿಸುತ್ತಿದ್ದೆ.

ನನ್ನಲ್ಲಿ ಇರುವ ಪ್ರತಿಭೆ ಗುರುತಿಸಿದವರು ಸ್ನೇಹಿತರು ಹಾಗೂ ವಿದ್ಯೆ ನೀಡಿದ ಗುರುಗಳು. ನಮ್ಮ ಕಾಲೇಜಿನಲ್ಲಿ  ಕವಿಗೋಷ್ಠಿ ಏರ್ಪಡಿಸಿದ್ದರು. ನನಗೆ ಕವನ, ಸಾಹಿತ್ಯದ ಒಲವು ಹೆಚ್ಚಾಗಿದ್ದರಿಂದ ನಾನು ಭಾಗವಹಿಸಿ ನಾನು ವಾಚಿಸಿದ ಮೊದಲ ಕವನಕ್ಕೆ ಪ್ರಥಮ ಬಹುಮಾನ ಬಂತು. ಬಹುಮಾನವಾಗಿ ಸಿಕ್ಕಿದ್ದು ಒಂದು ಪುಸ್ತಕ ‘ಜೋನಾಥನ್ ಲಿವಿಂಗ್‌ಸ್ಟನ್ ಸೀಗಲ್’. ನನ್ನ ಬದುಕನ್ನು ಬದಲಿಸಿದ ಪುಸ್ತಕ ಇದು ಎಂದರೆ ತಪ್ಪಾಗಲಾರದು. ನಾನು ಬರೆಯುತ್ತಿರುವ ಕವನ, ಲೇಖನಗಳನ್ನು ಓದಿ,  ನೀನು ಕವಿ ಆಗ್ತೀಯಾ ಇಲ್ಲದಿದ್ದರೆ ಪತ್ರಕರ್ತ ಆಗ್ತೀಯಾ ಅಂತ ಗೆಳೆಯರು ಹೇಳುತ್ತಿದ್ದರು. ಅವರ ಮಾತು ನಿಜವಾಯಿತು.. ನಾನೀಕ ಪತ್ರಿಕೋದ್ಯಮವನ್ನೇ ಅಭ್ಯಸುತ್ತಿದ್ದೇನೆ.

ಜೀವನದಲ್ಲಿ ಸ್ನೇಹ ಪ್ರೀತಿಯ ಮಹತ್ವ ತಿಳಿಸಿಕೊಟ್ಟದ್ದು, ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರ. ಕಾಲೇಜಿನ ಆ ಕ್ಷಣಗಳನ್ನು ಮರೆಯೋಕೆ ಆಗೋಲ್ಲ. ಯಾಕೆಂದರೆ ನನಗೆ ಸಿಕ್ಕ ಸ್ನೇಹಿತರು ಅಂತವರಾಗಿದ್ದರು. ಇಂದಿಗೂ ಕೂಡಾ ಆ ನನ್ನ ವಿದ್ಯಾದೇವಾಲಯವನ್ನು ನೆನಪಿಸಿಕೊಂಡರೆ ಅಲ್ಲಿ ನನ್ನ ಸ್ನೇಹಿತರು ಕಂಡಂತೆ ಆಗುತ್ತದೆ. ಸ್ನೇಹದ ಕಡಲಲ್ಲಿ ತೇಲಿಸಿದಂತಾಗುತ್ತದೆ. ಗೆಳೆಯರು ನನ್ನ ಬಡತನದ ಪರಿಸ್ಥಿತಿ ಅರಿತು ಸಹಾಯ ಮಾಡಿದ್ದರು. ಸಹಕಾರ ನೀಡಿದ್ದರು. ಅವರ ಆ ನೆರವನ್ನು ಮರೆಯಲು ಸಾಧ್ಯವಿಲ್ಲ. ಋಣವನ್ನು ತೀರಿಸಲು ಸಾಧ್ಯವಿಲ್ಲ.

ಸ್ನೇಹಿತರೆಲರ್ಲೂ ಕೂಡಿ ಕ್ಯಾಂಟೀನಿನಲ್ಲಿ ಬೈಟು ಚಹಾ, ಗಿರಮಿಟ್, ಬಜ್ಜಿ ತಿನ್ನುತ್ತಿದ್ದುದನ್ನು ಈಗ ನೆನಪಿಸಿಕೊಂಡರೆ, ತನ್ನಂತಾನೆ ಬಾಯಿ ಚಪ್ಪರಿಸಿ ಹೋಗುತ್ತದೆ!  ಒಂದು ಮಾತನ್ನು ಹೇಳ್ತೀನಿ ಗೆಳೆಯರೆ.  ಒಂದು ಕಪ್ಪು ಚಹಾವನ್ನು ಬೈಟು ಮಾಡುತ್ತಿತ್ತು ಸ್ನೇಹ. ಒಂದು ತುತ್ತು ಅನ್ನವನ್ನು ಹಂಚಿಕೊಳ್ಳುತ್ತಿತ್ತು ಆ ಸ್ನೇಹ. ಅಂತಹ ಸ್ನೇಹವನ್ನು, ಸ್ನೇಹಿತನನ್ನು ಜೀವನದಲ್ಲಿ ವರೆಯಲು ಸಾಧ್ಯವೇ ಖಂಡಿತಾ ಇಲ್ಲ ಅಲ್ವಾ.

ಯಾರಲ್ಲಿ ಕಷ್ಟ ನೋವುಗಳನ್ನು ಎದುರಿಸುವ ಸಾಮರ್ಥ್ಯ ಇರುತ್ತದೆಯೋ ಅಂತವರಿಗೆ ಹೆಚ್ಚು ಕಷ್ಟಗಳನ್ನು ದೇವರು ನೀಡುತ್ತಾನೆ ಅಂತಾರೆ ನಿಜಾನಾ? ಪದವಿ ಕಾಲೇಜು ಜೀವನ ಮುಗಿದಾಗ ನನಗನ್ನಿಸಿದ್ದು ಹಾಗೆ.  ಅದುವರೆಗೆ ಜೀವಕ್ಕೆ ಜೀವ ಕೊಟ್ಟಿದ್ದ ಸ್ನೇಹಿತರು, ವಿದ್ಯಾದಾನ ಮಾಡಿದ್ದ ಗುರುಗಳಿಂದ ಬೀಳ್ಕೊಡುವ ಸಮಯ ಬಂದಿತ್ತು. ಕೊನೆಯ ಗಳಿಗೆ ಪ್ರೀತಿ ವಿಶ್ವಾಸ ನಂಬಿಕೆ ಒಗ್ಗೂಡಿದ ಸ್ನೇಹದಲ್ಲಿ ಮುಂದಿನ ಜೀವನದ ಕನಸು, ಗುರಿಗಳನ್ನು ಒಬ್ಬರಿಗೊಬ್ಬರು ಅಪ್ಪಿಕೊಳ್ಳುತ್ತಾ, ದು:ಖ ಹಂಚಿಕೊಂಡೆವು.

‘ನಿನಗೂ ಒಳ್ಳೆಯ ಕಾಲ ಬರುತ್ತದೆ. ನಿನ್ನ ತೊಂದರೆಗಳನ್ನು ಸ್ವತಃ ನೀನೆ ನೀಗಿಸಬಲ್ಲೆ. ನಿನ್ನ ಗುರಿಯನ್ನು ಯಶಸ್ವಿಯಾಗಿ ಮುಟ್ಟುತ್ತಿಯಾ ಎಂಬ ನಂಬಿಕೆ ನಮ್ಮಲ್ಲಿದೆ’ ಎಂಬ ಸ್ನೇಹಿತರ ಮಾತು ನನ್ನಲ್ಲಿ ಮತ್ತಷ್ಟು ಆತ್ಮ ವಿಶ್ವಾಸ  ತುಂಬಿ ಗುರಿಯೆಡೆಗೆ  ಸಾಗಲು ಉತ್ತೇಜನ ನೀಡುತ್ತಿತ್ತು. ನಾನು ಒಬ್ಬಂಟಿಗನಾಗಿ ಕುಳಿತಾಗ ನಾನು ಕವಲು ದಾರಿಯಲಿ ನಿಂತಿದ್ದಿನಾ...? ಎಂದು ಕಾಡುತ್ತಿದ್ದ ಭಯವನ್ನು ನಿವಾರಿಸಿದ್ದು ಗೆಳೆಯರು ಹೇಳಿದ ಈ ಮಾತುಗಳೇ.

ಕತ್ತಲಲ್ಲಿ ಬೆಳಕನ್ನು ಅರಸುತ್ತಾ ಬದುಕಿನ ಸರೋವರದ ಅರ್ಧದಲ್ಲಿ ಬಂದು ನಿಂತಿದ್ದೇನೆ. ಮುಂದೆ ಹೇಗೆ ನನ್ನ ಜೀವನ? ಬರೀ ಪಾರ್ಟ್‌ಟೈಮ್ ಕೆಲಸವೇ ಆಯಿತು. ನಿರ್ದಿಷ್ಟವಾದ ನನ್ನ ಕನಸು ಗುರಿ ಏರಬಲ್ಲೆನಾ? ನಾಲ್ಕು ಜನ ಗುರುತಿಸುವ ಉತ್ತಮವಾದ ಶಿಕ್ಷಣವನ್ನು ಪಡೆಯುತ್ತೇನಾ? ಹೀಗೆ ಪದವಿಯಲ್ಲಿ ಕಾಡುತ್ತಿದ್ದ ಹಲವು ಪ್ರಶ್ನೆಗಳಿಗೆ ಇಂದು ಸಣ್ಣ ಸಣ್ಣ ವಾಕ್ಯದ ಉತ್ತರಗಳನ್ನು ಕಂಡುಕೊಂಡಿದ್ದೇನೆ.

ಜೀವನದಲ್ಲಿ ಪ್ರತಿಯೊಬ್ಬರಿಗೂ ಒಂದು ಒಳ್ಳೆಯ ಕಾಲ ಬಂದೇ ಬರುತ್ತದೆ ಅಲ್ವಾ ಸ್ನೇಹಿತರೆ. ಇಂದು ನೋಡಿ ಅಂತಹ ಪ್ರಶ್ನೆಗಳು ಕೂಡ ಇಂದು ನನ್ನ ಮನಸ್ಸಲ್ಲಿ ಮೂಡುತ್ತಿಲ್ಲ. ಏಕೆಂದರೆ ಅಂತಹ ಶಿಕ್ಷಣವನ್ನೆ ನಾನು ಇಂದು ಪಡೆಯುತ್ತಿದ್ದೇನೆ. ನನ್ನ ಸ್ನೇಹಿತರ ಹಾಗೂ ಗುರುಗಳ ಆಸೆಯನ್ನು ಈಡೇರಿಸುತ್ತೇನೆ ಎನ್ನುವ ಅಚಲವಾದ ನಂಬಿಕೆ ನನ್ನಲ್ಲಿದೆ ಇದೆ. ಈ ಅಚಲ ನಂಬಿಕೆ ಮೂಡಲು ಕಾರಣರಾದ ನನ್ನ ಗೆಳೆಯರಿಗೆ, ಗುರುಗಳಿಗೆ ಒಂದು ಪುಟ್ಟ ಥ್ಯಾಂಕ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT