ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟ್ ಉರುಳಿ ಬಿದ್ದು ಬಾಲಕ ಸಾವು

ಶಾಲೆಗೆ ತೆರಳುತ್ತಿದ್ದ ವೇಳೆ ದುರ್ಘಟನೆ
Last Updated 11 ಡಿಸೆಂಬರ್ 2012, 20:04 IST
ಅಕ್ಷರ ಗಾತ್ರ

ಬೆಂಗಳೂರು: ಕಲ್ಯಾಣ ಮಂಟಪದ ಪ್ರವೇಶದ್ವಾರದಲ್ಲಿನ ಕಬ್ಬಿಣದ ಗೇಟ್ ಉರುಳಿ ಬಿದ್ದು ಬಾಲಕ ಸಾವನ್ನಪ್ಪಿರುವ ಘಟನೆ ಯಶವಂತಪುರ ಸಮೀಪದ ಮೋಹನ್‌ಕುಮಾರ್ ನಗರದಲ್ಲಿ ಮಂಗಳವಾರ ನಡೆದಿದೆ.

ಪಂಪಾನಗರ ನಿವಾಸಿ ರಾಜು ಎಂಬುವರ ಪುತ್ರ ಪೆರುಮಾಳ್ (10) ಮೃತಪಟ್ಟ ಬಾಲಕ. ತ್ರಿವೇಣಿ ರಸ್ತೆಯ ಬಾಪು ಬಾಲಿಕಾ ಶಾಲೆಯಲ್ಲಿ ಮೂರನೇ ತರಗತಿ ಓದುತ್ತಿದ್ದ ಆತ, ಅಕ್ಕ ನಂದಿನಿ ಜತೆ ಬೆಳಿಗ್ಗೆ ಶಾಲೆಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ನಂದಿನಿ, ಅದೇ ಶಾಲೆಯಲ್ಲಿ ಐದನೇ ತರಗತಿ ಓದುತ್ತಿದ್ದಾಳೆ. ತಮಿಳುನಾಡು ಮೂಲದ ರಾಜು, ಶಾಲಾ ವಾಹನ ಚಾಲಕರಾಗಿದ್ದಾರೆ. ಅವರ ಪತ್ನಿ ಶಿವಶಕ್ತಿ ಅವರು ಮನೆಗಳಲ್ಲಿ ಕೆಲಸ ಮಾಡುತ್ತಾರೆ.ಶಾಲೆಗೆ ಹೊರಟಿದ್ದ ನಂದಿನಿ ಮತ್ತು ಪೆರುಮಾಳ್ ಮನೆಯಿಂದ ಮೋಹನ್‌ಕುಮಾರ್ ನಗರ ಬಸ್ ನಿಲ್ದಾಣಕ್ಕೆ ನಡೆದು ಬಂದು ಬಸ್‌ಗಾಗಿ ಕಾಯುತ್ತಿದ್ದರು. ಆ ಬಸ್ ನಿಲ್ದಾಣದ ಮುಂಭಾಗದಲ್ಲೇ ವೆಂಕಟೇಶ್ವರ ಕಲ್ಯಾಣ ಮಂಟಪವಿದೆ. ಆ ಜಾಗದಲ್ಲಿದ್ದ ಎರ‌್ರಮ್ಮ ಕಲ್ಯಾಣ ಮಂಟಪದ ಕಟ್ಟಡವನ್ನು ನವೀಕರಿಸಿ ವೆಂಕಟೇಶ್ವರ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗುತ್ತಿದೆ.

ಬಸ್ ನಿಲ್ದಾಣದ ಬಳಿ ನಿಂತಿದ್ದ ಪೆರುಮಾಳ್ ಚೆಂಡಾಟ ಆಡಲಾರಂಭಿಸಿದ. ಈ ವೇಳೆ ಚೆಂಡು ಕಲ್ಯಾಣ ಮಂಟಪದ ಆವರಣಕ್ಕೆ ಹೋಯಿತು. ಬಾಲಕ ಕಲ್ಯಾಣ ಮಂಟಪ ಪ್ರವೇಶದ್ವಾರದ ಸ್ಲೈಡಿಂಗ್ ಗೇಟ್ ಸರಿಸಿ, ಒಳ ಹೋಗಿ ಚೆಂಡು ತೆಗೆದುಕೊಂಡು ಹೊರ ಬರುವಾಗ ಗೇಟ್ ಆತನ ಮೇಲೆ ಉರುಳಿ ಬಿದ್ದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಯಶವಂತಪುರ ಪೊಲೀಸರು ತಿಳಿಸಿದ್ದಾರೆ.

ಕಬ್ಬಿಣದ ಪಟ್ಟಿಯ ಮೇಲೆ ಅಳವಡಿಸಿದ್ದ ಚಕ್ರಗಳ ಮೂಲಕ ಆ ಗೇಟ್ ಹಿಂದೆ ಮುಂದೆ ಸರಿದಾಡುತ್ತಿತ್ತು. ಪಟ್ಟಿಯ ಅಂತ್ಯದಲ್ಲಿ ತಡೆಯನ್ನು (ಸ್ಟಾಪರ್) ಅಳವಡಿಸಿರಲಿಲ್ಲ. ಇದರಿಂದಾಗಿ ಪೆರುಮಾಳ್, ಗೇಟ್ ತಳ್ಳುತ್ತಿದ್ದಂತೆ ಸಂಪೂರ್ಣ ಮುಂದೆ ಹೋಗಿ ಆತನ ಮೇಲೆ ಉರುಳಿ ಬಿದ್ದಿದೆ. ಘಟನೆ ಸಂಬಂಧ ಕಲ್ಯಾಣ ಮಂಟಪದ ಮಾಲೀಕರಾದ ಪ್ರಶಾಂತ್‌ಗೌಡ ಮತ್ತು ಉತ್ತಮ್‌ಚಂದ್ ಜೈನ್ ಅವರ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

`ಬಸ್ ನಿಲ್ದಾಣದ ಬಳಿ ಚೆಂಡಾಟ ಆಡದಂತೆ ಬುದ್ಧಿ ಮಾತು ಹೇಳಿದರೂ ಕೇಳದ ಪೆರುಮಾಳ್, ಚೆಂಡಾಟ ಆಡುತ್ತಿದ್ದ. ಈ ಸಂದರ್ಭದಲ್ಲಿ ಚೆಂಡು ಕಲ್ಯಾಣ ಮಂಟಪದ ಆವರಣಕ್ಕೆ ಹೋಯಿತು. ಆತ ಚೆಂಡು ತೆಗೆದುಕೊಂಡು ಕಲ್ಯಾಣ ಮಂಟಪದ ಆವರಣದಿಂದ ಹೊರ ಬರುತ್ತಿದ್ದಾಗ ಜೋರು ಶಬ್ದ ಕೇಳಿಸಿತು. ಆ ಕಡೆ ತಿರುಗಿ ನೋಡಿದಾಗ ಗೇಟ್ ತಮ್ಮನ ಮೇಲೆ ಬಿದ್ದಿತ್ತು. ಗೇಟಿನ ಕೆಳ ಭಾಗದಲ್ಲಿ ಸಿಲುಕಿ ಗಾಯಗೊಂಡಿದ್ದ ಆತನ ತಲೆಯಿಂದ ರಕ್ತ ಸುರಿಯುತ್ತಿತ್ತು' ಎಂದು ಘಟನೆಯ ಪ್ರತ್ಯಕ್ಷದರ್ಶಿ ನಂದಿನಿ `ಪ್ರಜಾವಾಣಿ'ಗೆ ತಿಳಿಸಿದಳು.

`ಮಗನನ್ನು ವಿದ್ಯಾವಂತನಾಗಿ ಮಾಡಿ ಒಳ್ಳೆಯ ಕೆಲಸಕ್ಕೆ ಸೇರಿಸಬೇಕೆಂದು ಕನಸು ಕಂಡಿದ್ದೆವು. ಮಗ ನಮ್ಮಂತೆ ಕಷ್ಟಪಡಬಾರದೆಂದು ಮನೆಗಳಲ್ಲಿ ಕೆಲಸ ಮಾಡಿ ಆತನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುತ್ತಿದ್ದೆ. ಈಗ ಆತನೇ ಇಲ್ಲ' ಎಂದು ಶಿವಶಕ್ತಿ ಅವರು ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.

`ಬಡ ಕುಟುಂಬದಿಂದ ಬಂದ ಪೆರುಮಾಳ್ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಆತನ ತಾಯಿ ಮಗನ ವಿದ್ಯಾಭ್ಯಾಸದ ಬಗ್ಗೆ ಹೆಚ್ಚು ಕಾಳಜಿ ಹೊಂದಿದ್ದರು. ಇದು ನಿಜಕ್ಕೂ ದುರದೃಷ್ಟಕರ' ಎಂದು ಬಾಪು ಬಾಲಿಕಾ ಶಾಲೆಯ ಪ್ರಾಂಶುಪಾಲರಾದ ಕಮಲಮ್ಮ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT