ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಟ್ ಹಾಕದಿರಲು ಒತ್ತಾಯ

Last Updated 10 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಯಾದಗಿರಿ: ಸನ್ನತಿ ಬಳಿ ಭೀಮಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ಯಾರೇಜ್‌ಗೆ ಗೇಟ್ ಅಳವಡಿಸಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಮುಂದಾಗಿದ್ದು, ಸುತ್ತಲಿನ ಗ್ರಾಮಗಳ ಜನರು ಮುಳುಗಡೆಯ ಭೀತಿಯಲ್ಲಿದ್ದಾರೆ.

ಶಹಾಪುರ ತಾಲ್ಲೂಕಿನ ಹುರುಸಗುಂಡಿಗಿ ಗ್ರಾಮದ ಬಳಿ ನಿರ್ಮಿಸಲಾದ ಬ್ಯಾರೇಜ್‌ನ ಗೇಟ್‌ಗಳನ್ನು ಪ್ರಯೋಗಾರ್ಥ ಅಳವಡಿಸಲು ಅಧಿಕಾರಿಗಳು ಮುಂದಾಗಿದ್ದು, ನದಿ ದಡದ ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ. ಇದರಿಂದಾ ಇನ್ನೂ ಪರಿಹಾರವನ್ನೇ ಕಾಣದ ಹುರಸಗುಂಡಿಗಿ ಗ್ರಾಮದ ಜನರು ತೀವ್ರ ಆತಂಕ ಎದುರಿಸುವಂತಾಗಿದೆ.

ಮನೆಗಳ ಸ್ಥಳಾಂತರಕ್ಕಾಗಿ ನಿವೇಶನ ಗುರುತಿಸಲಾಗಿದ್ದು, ಅಲ್ಲಿನ ಮಣ್ಣು ಸರಿಯಾಗಿ ಇಲ್ಲದಿರುವುದರಿಂದ ಪರಿಹಾರವಾಗಿ ನೀಡಿದ ರೂ.22 ಸಾವಿರ ಕೇವಲ ಮನೆಗಳ ಬುನಾದಿ ಹಾಕಲು ಸಾಕಾಗುತ್ತಿಲ್ಲ ಎಂದು ಗ್ರಾಮದ ಜನರು ಅಲವತ್ತಿಕೊಳ್ಳುತ್ತಿದ್ದಾರೆ. ಒಂದೆಡೆ ನಿವೇಶನ ಒದಗಿಸಿದ ಜಾಗೆಯ ಮಣ್ಣಿನ ಪರೀಕ್ಷೆಗೆ ತಜ್ಞರ ತಂಡ ಆಗಮಿಸುವುದಾಗಿ ಹೇಳಲಾಗುತ್ತಿದೆ.

ಇನ್ನೊಂದೆಡೆ ಶಾಸಕ ಡಾ.ಎ.ಬಿ. ಮಾಲಕರಡ್ಡಿ, ಹುರಸಗುಂಡಿಗಿ ನಿರಾಶ್ರಿತರಿಗೆ ಸಾವಿರ ಮನೆಗಳನ್ನು ಮಂಜೂರು ಮಾಡಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಇದುವರೆಗೂ ಯಾವುದೇ ಕಾರ್ಯಗಳು ಮುಕ್ತಾಯದ ಹಂತ ತಲುಪಿಲ್ಲ. ಈ ಸಂದರ್ಭದಲ್ಲಿಯೇ ಸನ್ನತ್ತಿ ಬ್ಯಾರೇಜ್‌ಗೆ ಗೇಟ್ ಅಳವಡಿಸಲು ಮುಂದಾಗಿರುವ ಅಧಿಕಾರಿಗಳ ಕ್ರಮಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.

ಗೇಟ್ ಅಳವಡಿಸದಿರಲು ಮನವಿ:
ಸನ್ನತ್ತಿ ಬ್ಯಾರೇಜ್‌ನ ಗೇಟ್‌ಗಳನ್ನು ಹಾಕದಂತೆ ಜೆಡಿಎಸ್ ಮುಖಂಡ ಶ್ರೀನಿವಾಸರೆಡ್ಡಿ ಪಾಟೀಲ್ ಚೆನ್ನೂರ ನೇತೃತ್ವದ ನಿಯೋಗ ಮಂಗಳವಾರ ಖಾನಾಪುರದ ಕೆಬಿಜೆಎನ್‌ಎಲ್‌ನ ಸನ್ನತಿ ಬ್ಯಾರೇಜ್ ಕಚೇರಿಗೆ ದಿಢೀರ್ ಭೇಟಿ ನೀಡಿ, ಕಚೇರಿಯ ಉಪವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ರಿಗೆ ಮನವಿ ಮಾಡಿದರು.

ಈಗಾಗಲೇ ವ್ಯಾಪಕ ಮಳೆ ಸುರಿದಿರುವುದರಿಂದ ಭೀಮಾ ನದಿಗೆ ನೀರು ಬಂದಿದ್ದು, ಬ್ಯಾರೇಜ್‌ನ ಗೇಟ್‌ಗಳು ಹಾಕುವುದರಿಂದ ನೀರು ಸಂಗ್ರಹವಾಗಿ ಹುರಸಗುಂಡಿಗಿ ಗ್ರಾಮದೊಳಗೆ ನುಗ್ಗುವ ಸಾಧ್ಯತೆಗಳಿವೆ. ಹುರುಸಗುಂಡಿಗಿ ಗ್ರಾಮಸ್ಥರು ಸಂತ್ರಸ್ತರಾಗಿದ್ದು, ನೀರು ನುಗ್ಗಿ ಹಾನಿಗೊಳಗಾಗುತ್ತಾರೆ ಎಂದು ತಿಳಿಸಿದರು. 

ಹುರುಸಗುಂಡಿಗಿ ಗ್ರಾಮದ ನಿರಾಶ್ರಿತರಿಗೆ ಇನ್ನೂ ಸರ್ಕಾರದ ಸೌಲಭ್ಯ ಸಿಕ್ಕಿಲ್ಲ. ಕೇವಲ ನಿವೇಶನಗಳ ಹಕ್ಕು ಪತ್ರಗಳನ್ನು ವಿತರಣೆ ಮಾಡಲಾಗಿದ್ದು, ಮನೆಗಳು ನಿರ್ಮಾಣ ಆಗಿಲ್ಲ. ಮನೆ ಕಟ್ಟುವ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದು, ಸಂತ್ರಸ್ತರ ಪರಿಹಾರ, ಮನೆ ನಿರ್ಮಿಸಲು ಹೆಚ್ಚಿಗೆ ಹಣ  ನೀಡಬೇಕು ಎಂದು ಆಗ್ರಹಿಸಿದರು.

ಇನ್ನೂ 90 ಜನರಿಗೆ ಹಕ್ಕು ಪತ್ರ ನೀಡಿಲ್ಲ. ಪುನರ್ವಸತಿ ಯೋಜನೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅರಿಯಬೇಕು. ಕೇವಲ ಹುರುಸಗುಂಡಿಗಿ ಗ್ರಾಮ ಸ್ಥಳಾಂತರ ಎಂಬ ಹೆಸರಿನಲ್ಲಿದೆ. ಹಿನ್ನೀರಿನ ಗ್ರಾಮಸ್ಥರು ಶಾಶ್ವತ ಪರಿಹಾರಕ್ಕಾಗಿ ಪರದಾಡುತ್ತಿದ್ದಾರೆ. ಬ್ಯಾರೇಜ್‌ನ ಗೇಟ್‌ಗಳನ್ನು ಹಾಕದಂತೆ ಸನ್ನತಿ ಬ್ಯಾರೇಜ್‌ನ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.

ಹುರುಸಗುಂಡಿಗಿ ಗ್ರಾಮದ ಸಂತ್ರಸ್ತರಿಗೆ ಸರ್ಕಾರ ಮೂಲ ಸೌಲಭ್ಯ ಒದಗಿಸಬೇಕು. ನಂತರ ಬ್ಯಾರೇಜ್‌ನ ನೀರು ಸಂಗ್ರಹ ಮಾಡಬೇಕು. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ತರಲಾಗುವುದು. ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು, ಸನ್ನತಿ ಬ್ಯಾರೇಜ್‌ನ ಹಿನ್ನೀರಿನ ಪ್ರದೇಶಗಳ ಸ್ಥಳಾಂತರ, ಶಾಶ್ವತ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸುವುದಾಗಿ ಶ್ರೀನಿವಾಸರೆಡ್ಡಿ ಚೆನ್ನೂರ ತಿಳಿಸಿದರು.

ಯುವ ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ವಿಶ್ವನಾಥರಡ್ಡಿ ಗೊಂದೆಡಗಿ, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜಪ್ಪಗೌಡ, ಎಸ್ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಅನಸುಗೂರ, ವಿನೋದ ಶಿರಗೋಳ, ಚೆನ್ನಾರೆಡ್ಡಿ ಗೋಸ್ವಾಮಿ, ಶರಣಗೌಡ ತಂಗಡಿಗಿ ಮುಂತಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT