ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್ ಉಳಿಸಿಕೊಂಡ ಆರ್‌ಸಿಬಿ

Last Updated 20 ಜನವರಿ 2012, 19:35 IST
ಅಕ್ಷರ ಗಾತ್ರ

ಬೆಂಗಳೂರು:ವೆಸ್ಟ್ ಇಂಡೀಸ್‌ನ ಆಕ್ರಮಣಕಾರಿ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್‌ಸಿಬಿ) ತನ್ನಲ್ಲಿಯೇ ಉಳಿಸಿಕೊಂಡಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿಯೂ ಗೇಲ್, ಚಾಲೆಂಜರ್ಸ್ ತಂಡದ ಪರವಾಗಿಯೇ ಆಡಲಿದ್ದಾರೆ. ಕಳೆದ ಬಾರಿ ಬೆಂಗಳೂರಿನ ತಂಡಕ್ಕೆ ಬ್ಯಾಟಿಂಗ್ ವಿಭಾಗದಲ್ಲಿ ಭಾರಿ ಬಲ ನೀಡಿದ್ದ ಆಟಗಾರನನ್ನು ಆರ್‌ಸಿಬಿ ಮಾಲೀಕ ವಿಜಯ್ ಮಲ್ಯ ಅವರು ಹರಾಜಿಗೆ ಬಿಟ್ಟುಕೊಟ್ಟಿಲ್ಲ.

ಗೇಲ್ ಅವರನ್ನು ಆರ್‌ಸಿಬಿ ತನ್ನಲ್ಲಿಯೇ ಉಳಿಸಿಕೊಳ್ಳುವ ನಿರ್ಣಯದೊಂದಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದೆ ಎಂದು ಐಪಿಎಲ್ ಆಡಳಿತವು ಶುಕ್ರವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2011ರಲ್ಲಿ ವಿಂಡೀಸ್‌ನ ಈ ಆಟಗಾರ ಆರ್‌ಸಿಬಿ ಸೇರಿದ್ದ. ಡಿರ್ಕ್ ನ್ಯಾನ್ಸ್ ಬದಲಿಗೆ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿತ್ತು. ನಾಲ್ಕನೇ ಅವತರಣಿಕೆಯಲ್ಲಿ ಪ್ರಭಾವಿ ಬ್ಯಾಟಿಂಗ್‌ನಿಂದ ಗಮನ ಸೆಳೆದಿದ್ದ ಅವರು ಅತಿ ಹೆಚ್ಚು ರನ್ ಗಳಿಸುವ ಮೂಲಕ `ಆರೆಂಜ್ ಕ್ಯಾಪ್~ ಗೌರವಕ್ಕೆ ಪಾತ್ರರಾಗಿದ್ದರು. ಅದಕ್ಕೂ ಮುನ್ನ ಅವರು ಮೊದಲ ಮೂರು ಐಪಿಎಲ್‌ನಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಪರವಾಗಿ ಆಡಿದ್ದರು.

`ಗೇಲ್ ಅವರನ್ನು ನಮ್ಮ ತಂಡದ ಖಾಯಂ ಸದಸ್ಯರನ್ನಾಗಿ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ಇಂಥ ಆಟಗಾರ ತಂಡದಲ್ಲಿರುವುದು ಹೆಮ್ಮೆಯ ಸಂಗತಿ. ಕಳೆದ ವರ್ಷ ಅವರ ಆಟದ ಫಲವಾಗಿ ನಮ್ಮ ತಂಡವು ಫೈನಲ್‌ಗೆ ಅರ್ಹತೆ ಪಡೆದಿತ್ತು~ ಎಂದು ರಾಯಲ್ ಚಾಲೆಂಜರ್ಸ್ ಕ್ರೀಡಾ ನಿಯಮಿತ ಸಂಸ್ಥೆ ನಿರ್ದೇಶಕ ಸಿದ್ಧಾರ್ಥ್ ಮಲ್ಯ ತಿಳಿಸಿದ್ದಾರೆ.

`ಐದನೇ ಅವತರಣಿಕೆಯಲ್ಲಿ ತಂಡವು ಚೊಚ್ಚಲ ಐಪಿಎಲ್ ಟ್ರೋಫಿ ಪಡೆಯಬೇಕು ಎನ್ನುವುದು ಆಶಯ. ಆ ನಿಟ್ಟಿನಲ್ಲಿ ತಂಡವನ್ನು ಬಲಗೊಳಿಸಲು ಎಲ್ಲ ಪ್ರಯತ್ನ ಮಾಡಲಾಗುವುದು~ ಎಂದು ಹೇಳಿದ್ದಾರೆ.

`ವಿಂಡೀಸ್ ಕ್ರಿಕೆಟಿಗ ಟ್ವೆಂಟಿ-20ಗೆ ತಕ್ಕ ಶೈಲಿ ಹೊಂದಿದ್ದು, ಈ ಬಾರಿಯೂ ಅವರಿಂದ ಭರ್ಜರಿ ಬ್ಯಾಟಿಂಗ್ ನಿರೀಕ್ಷಿಸುವುದು ಸಹಜ~ ಎಂದಿದ್ದಾರೆ ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT