ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೇಲ್ ಜೊತೆ ಬ್ಯಾಟಿಂಗ್; ಉತ್ತಮ ಅನುಭವ

Last Updated 18 ಮೇ 2012, 19:35 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): `ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಕ್ರಿಸ್ ಗೇಲ್ ಜೊತೆ ಆಡುವ ಅವಕಾಶ ಸಿಕ್ಕಿದ್ದು ಉತ್ತಮ ಅನುಭವ~ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

`ಈ ಪಂದ್ಯ ಅತ್ಯಂತ ರೋಮಾಂಚಕ~ ಎಂದು ಬಣ್ಣಿಸಿರುವ ಕೊಹ್ಲಿ, `ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿತು. ಪ್ಲೇ ಆಫ್ ಹಂತ ಪ್ರವೇಶಿಸಬೇಕು ಎನ್ನುವ ನಮ್ಮ ಆಸೆ ಈಡೇರಬೇಕಾದರೆ, ಕೊನೆಯ ಲೀಗ್ ಪಂದ್ಯದಲ್ಲಿಯೂ ಗೆಲುವು ಸಾಧಿಸಬೇಕಿದೆ~ ಎಂದರು.

ಗುರುವಾರ ರಾತ್ರಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 21 ರನ್‌ಗಳ ಗೆಲುವು ಸಾಧಿಸಿತ್ತು. ಮೊದಲು ಬ್ಯಾಟ್ ಮಾಡಿ ಕೊಹ್ಲಿ ಪಡೆ ನೀಡಿದ್ದ 216 ರನ್‌ಗಳ ಗುರಿಯನ್ನು ಡೇರ್‌ಡೆವಿಲ್ಸ್‌ಗೆ ಮುಟ್ಟಲು ಸಾಧ್ಯವಾಗಲಿಲ್ಲ.

ಡೆವಿಲ್ಸ್ 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 194 ರನ್ ಮಾತ್ರ ಗಳಿಸಲು ಶಕ್ತವಾಗಿತ್ತು. ಗೇಲ್ ಈ ಪಂದ್ಯದಲ್ಲಿ 13 ಸಿಕ್ಸರ್ ಹಾಗೂ ಏಳು ಬೌಂಡರಿ ಸೇರಿದಂತೆ ಅಜೇಯ 128 ರನ್ ಗಳಿಸಿದ್ದರು.

`ಆರ್‌ಸಿಬಿ ಉತ್ತಮ ಆಟವಾಡಿತು. ಆದ್ದರಿಂದ ದೊಡ್ಡ ಮೊತ್ತವನ್ನು ಪೇರಿಸಿತು. ಈ ಪಂದ್ಯದಿಂದ ನಾವು ಸಾಕಷ್ಟು ಸಕಾರಾತ್ಮಕ ಅಂಶಗಳನ್ನು ತಿಳಿದುಕೊಂಡೆವು. ಗೇಲ್ ಯಾವತ್ತಿಗೂ ಅಪಾಯಕಾರಿಯಾದ ಬ್ಯಾಟ್ಸ್‌ಮನ್~ ಎಂದು ಡೇರ್‌ಡೆವಿಲ್ಸ್ ತಂಡದ ನಾಯಕ ಮಾಹೇಲ ಜಯವರ್ಧನೆ ಪಂದ್ಯದ ನಂತರ ಪ್ರತಿಕ್ರಿಯಿಸಿದರು.

ಪ್ರಮುಖ ಆಟಗಾರರು ಈ ಪಂದ್ಯಕ್ಕೆ ಅಲಭ್ಯರಾದ ಬಗ್ಗೆ ಕೇಳಲಾದ ಪ್ರಶ್ನೆಗೆ, `ಮಾರ್ಕೆಲ್ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ವೀರೇಂದ್ರ ಸೆಹ್ವಾಗ್ ಅನಾರೋಗ್ಯದ ಕಾರಣ ವಿಶ್ರಾಂತಿ ಪಡೆದರು. ಆದ್ದರಿಂದ ಆ್ಯಂಡ್ರೆ ರಸೆಲ್‌ಗೆ ಅವಕಾಶ ನೀಡಲಾಯಿತು~ ಎಂದು ಜಯವರ್ಧನೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT