ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೈರುಹಾಜರಾದ ಅಧಿಕಾರಿಗೆ ನೋಟಿಸ್

Last Updated 12 ಜನವರಿ 2013, 10:16 IST
ಅಕ್ಷರ ಗಾತ್ರ

ಚನ್ನಗಿರಿ:  ತಾಲ್ಲೂಕು ಪಂಚಾಯ್ತಿಯಲ್ಲಿ ನಡೆಯುವ ಪ್ರತಿ ಸಭೆಗಳಿಗೂ ಸಹಾಯಕ ಅಧಿಕಾರಿಗಳನ್ನು ಕಳುಹಿಸುವ ಪರಿಪಾಠ ಮುಂದುವರಿದಿದೆ. ಅಲ್ಲದೇ, 28 ಇಲಾಖೆಗಳಲ್ಲಿ ಕೇವಲ 15 ಇಲಾಖೆ ಅಧಿಕಾರಿಗಳು ಮಾತ್ರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಬರೀ ಪ್ರಗತಿ ವರದಿ ಓದಿ ಹೋದರೆ ಸಾಲದು. ನಡೆದಿರುವ ಕಾಮಗಾರಿಗಳ ಬಗ್ಗೆ ಸಂಪೂರ್ಣ ಅಂಕಿ-ಅಂಶಗಳ ವಿವರವನ್ನು ಅಧಿಕಾರಿಗಳು ಒದಗಿಸಬೇಕು ಎಂದು ತಾ.ಪಂ. ಅಧ್ಯಕ್ಷ ಕೆ.ಜಿ. ಮರುಳಸಿದ್ದಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗೈರುಹಾಜರಾದ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡುವಂತೆ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಿದರು.
ತಾಲ್ಲೂಕಿನಲ್ಲಿ ಮೇವಿನ ಕೊರತೆ ಉಂಟಾಗಬಾರದು ಎಂದು ಹೊಸಹಳ್ಳಿ ಹಾಗೂ ತ್ಯಾವಣಿಗೆ ಕೃಷಿ ಫಾರಂಗಳಲ್ಲಿ ಬತ್ತದ ಹುಲ್ಲನ್ನು ಸಂಗ್ರಹ ಮಾಡಲಾಗಿದೆ. ಶೇ. 50ಕ್ಕಿಂತ ಹೆಚ್ಚು ಬೆಳೆಹಾನಿಯಾಗಿದ್ದು, ಬೆಳೆ ಪರಿಹಾರ ಬಂದ ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ವಿದ್ಯಾರ್ಥಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಶುದ್ಧವಾದ ಸಿಹಿನೀರನ್ನು ನೀಡಬೇಕು. ಇದಕ್ಕಾಗಿ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಆದೇಶ ಮಾಡಿದರು.

ತಾಲ್ಲೂಕಿನಲ್ಲಿ 63 ಸರ್ಕಾರಿ ಹಾಗೂ 47 ಖಾಸಗಿ ಅನುದಾನಿತ ಶಾಲೆಗಳಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ಅನುದಾನ ನೀಡಿದೆ. ಇದರಲ್ಲಿ 1ರಿಂದ 100 ಮಕ್ಕಳು ಇರುವ ಶಾಲೆಗೆರೂ3.1 ಲಕ್ಷ, 101ರಿಂದ 200 ಮಕ್ಕಳು ಇರುವಲ್ಲಿರೂ3.61 ಲಕ್ಷ, 201ರಿಂದ 300 ಮಕ್ಕಳು ಇರುವ ಶಾಲೆಗೆರೂ4.21 ಲಕ್ಷ ಹಾಗೂ 300 ಮಕ್ಕಳಿಗಿಂತ ಹೆಚ್ಚು ಇರುವ ಶಾಲೆಗೆರೂ7.23 ಲಕ್ಷ ಅನುದಾನ ಮಂಜೂರು ಆಗಲಿದ್ದು, ಇದರಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಬೇಕಾಗಿದೆ ಎಂದು ತಾಲ್ಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕರಾದ ಕೆ. ಸೋಮಶೇಖರ್ ಸಭೆಗೆ ತಿಳಿಸಿದರು.

ತಾಲ್ಲೂಕು ಸಮಾಜ ಕಲ್ಯಾಧಿಕಾರಿ ಹಟ್ಯಪ್ಪ ಮಾತನಾಡಿ ಚನ್ನಗಿರಿ ವಸತಿಶಾಲೆ, ಕಂಚುಗಾರನಹಳ್ಳಿ ಹಾಗೂ ಕಾರಿಗನೂರು ಗ್ರಾಮಗಳಲ್ಲಿನ ವಿದ್ಯಾರ್ಥಿನಿಲಯಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿತ್ತು. ಈಗ ಇಲ್ಲಿ ಕೊಳವೆಬಾವಿಗಳನ್ನು ಹೊಸದಾಗಿ ಕೊರೆಯಿಸಿ ಮೋಟಾರ್‌ಅಳವಡಿಸಿ ಸಮಸ್ಯೆಯನ್ನು ನಿವಾರಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ 16,701 ವಿದ್ಯಾರ್ಥಿಗಳು ವಿದ್ಯಾರ್ಥಿವೇತನಕ್ಕಾಗಿ ನೋಂದಣಿ ಮಾಡಿಸಿದ್ದಾರೆ ಎಂದರು.

ಉಪಾಧ್ಯಕ್ಷೆ ಆರ್. ಲಲಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ. ಶಿವಕುಮಾರ್, ಕಾರ್ಯನಿರ್ವಹಣಾಧಿಕಾರಿ ಎಸ್.ಇ. ಶಿವಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT