ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಡ, ಕೋಲಿ ಸಮಾಜದ ಧರಣಿ

Last Updated 31 ಮೇ 2012, 5:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ಟೋಕರಿ ಕೋಲಿ ಮತ್ತು ಗೊಂಡ ಸಮಾಜದವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಲು ಒತ್ತಾಯಿಸಿ ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಗೊಂಡ ಸಮಾಜ ಸಂಘ ಮತ್ತು ಕೋಲಿ ಸಮಾಜ ಸಂಘದಿಂದ ಸಂಯುಕ್ತವಾಗಿ ಧರಣಿ ನಡೆಸಲಾಯಿತು.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಧರಣಿ ನಡೆಯಿತು. ತಹಸೀಲ್ದಾರ ಶಿವರಾಜ ಹಲಬರ್ಗೆ ಸ್ಥಳಕ್ಕೆ ಆಗಮಿಸಿ ಇಂದಿನಿಂದಲೇ ಪರಿಶಿಷ್ಟ ಜಾತಿ ಪ್ರಮಾಣಪತ್ರಗಳನ್ನು ಕೊಡಲಾಗುವುದು ಎಂದು ಭರವಸೆ ಕೊಟ್ಟ ನಂತರ ಧರಣಿ ಅಂತ್ಯಗೊಂಡಿತು. ಮೊದಲು ತಹಸೀಲ್ದಾರರು ಈ ಭಾಗದಲ್ಲಿ ಗೊಂಡರು ಮತ್ತು ಟೋಕರಿ ಕೋಲಿ ಸಮಾಜದವರು ಇಲ್ಲ ಎಂದು ಸರ್ಕಾರದ ದಾಖಲೆಗಳು ಹೇಳುತ್ತವೆ ಎಂದಿದ್ದರಿಂದ ಕೆಲಕಾಲ ಗದ್ದಲದ ವಾತಾವರಣ ಉಂಟಾಗಿತ್ತು.

ಆದರೆ ನಂತರ ದಾಖಲೆಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ಒದಗಿಸಲಾಗುವುದು ಎಂದಿದ್ದರಿಂದ ಪರಿಸ್ಥಿತಿ ಶಾಂತಗೊಂಡಿತು. ಪೊಲೀಸರು ಸಹ ಮಧ್ಯಪ್ರವೇಶಿಸಿ ವಾತಾವರಣವನ್ನು ಹತೋಟಿಗೆ ತಂದರು.

ತಹಸೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮತ್ತು ಭಾಲ್ಕಿ ಶಾಸಕರಾದ ಈಶ್ವರ ಖಂಡ್ರೆಯವರು ಮಾತನಾಡಿ ಬೀದರ್‌ಜಿಲ್ಲೆಯಲ್ಲಿ ಗೊಂಡರು ಮತ್ತು ಟೋಕರಿ ಕೋಲಿ ಸಮಾಜದವರು ಇರುವ ಬಗ್ಗೆ ಸಂಶೋಧಕರು ದಾಖಲೆ ಕೊಟ್ಟಿದ್ದಾರೆ. ಮೊದಲು ಜನರಲ್ಲಿ ಜಾಗೃತಿ ಇರಲಿಲ್ಲ ಆದ್ದರಿಂದ ಯಾರೂ ಈ ಬಗ್ಗೆ ಹೋರಾಟ ನಡೆಸಲಿಲ್ಲ.

ಆದರೆ ಕೆಲ ವರ್ಷಗಳಿಂದ ಈ ಸಮಾಜದವರು ಚಳವಳಿ ನಡೆಸಿದ್ದರಿಂದ ಸರ್ಕಾರ ಪ್ರಮಾಣ ಪತ್ರ ಕೊಡಲು ಆದೇಶಿಸಿದೆ. ಸರ್ಕಾರದ ಆದೇಶ ಕಾಲಕಾಲಕ್ಕೆ ಬದಲಾಗುತ್ತದೆಯೇ ಎಂದು ಪ್ರಶ್ನಿಸಿದರು. ಪ್ರಮಾಣ ಪತ್ರ ಕೊಡದಿದ್ದರೆ ಜಿಲ್ಲೆಯಾದ್ಯಂತ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ ಮಾತನಾಡಿ ಜಾತಿ ಪ್ರಮಾಣ ಪತ್ರ ಕೊಡುವಲ್ಲಿ ಯಾವ ಅಡೆತಡೆಗಳಿವೆ ಎಂಬುದರ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಹಿಂದುಳಿದವರ ಮುಖಂಡ ಬಿ.ನಾರಾಯಣರಾವ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತ ಚಿಮಕೋಡ, ಬಿಡಿಎ ಮಾಜಿ ಅಧ್ಯಕ್ಷ ಪಂಡಿತ ಚಿದ್ರಿ ಮುಂತಾದವರು ಮಾತನಾಡಿದರು.

ಕೋಲಿ ಸಮಾಜ ಸಂಘದ ಅಧ್ಯಕ್ಷ ಈಶ್ವರ ಬೊಕ್ಕೆ, ಗೊಂಡ ಸಮಾಜ ತಾಲ್ಲೂಕು ಅಧ್ಯಕ್ಷ ಶಿವಕುಮಾರ ಮೇತ್ರೆ, ಕಾಂಗ್ರೆಸ್ ತಾಲ್ಲೂಕು ಅಧ್ಯಕ್ಷ ಶಂಕರರಾವ ಜಮಾದಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ತುಕಾರಾಮ ಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಶೇಖರ ಮೇತ್ರೆ, ಮುಖಂಡರಾದ ವಾಲ್ಮೀಕಿ ಖನಕೋರೆ, ಡಾ.ಅಜಯ ಜಾಧವ, ಶಿವರಾಜ ಶಂಕೆ, ರಾಜಕುಮಾರ ಗುಂಡೆ, ಚಂದ್ರಕಾಂತ ಮೇತ್ರೆ, ವಿಜಯಕುಮಾರ ಪಾಟೀಲ, ಸುಭಾಷ ರೇಕುಳಗಿ, ಘಾಳೆಪ್ಪ ನಾರಾಯಣಪುರ, ರವಿ ನಾಗೀನಕೆರೆ, ಶಿವರಾಜ ಮಲ್ಲೇಶಿ, ಚಿತ್ರಶೇಖರ ಸೋನಾರೆ, ವಿಜಯಕುಮಾರ ಮೂಲಗೆ ಹಾಗೂ ವಿವಿಧ ಗ್ರಾಮಗಳ ಸಮಾಜ ಬಾಂಧವರು ಪಾಲ್ಗೊಂಡಿದ್ದರು.

ಎಬಿವಿಪಿಯಿಂದ ಬೆಳಿಗ್ಗೆ ಮುಖ್ಯರಸ್ತೆಯಲ್ಲಿ ರ‌್ಯಾಲಿ ನಡೆಸಿ ನಂತರ ಧರಣಿಯಲ್ಲಿ ಪಾಲ್ಗೊಳ್ಳಲಾಯಿತು. ಕಾಂಗ್ರೆಸ್‌ನ ಕೆಲ ಮುಖಂಡರು ಸಹ ಧರಣಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT