ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದನೂರ: ಶಿಕ್ಷಕರೇ ಇಲ್ಲದ `ನಮ್ಮೂರ ಶಾಲೆ'

Last Updated 1 ಜುಲೈ 2013, 6:01 IST
ಅಕ್ಷರ ಗಾತ್ರ

ಯಾದಗಿರಿ: ಹೆಸರಿಗೆ ಇದು `ನಮ್ಮೂರ ಶಾಲೆ'. ಸೌಲಭ್ಯಗಳು. ಮಾತ್ರ ಇಂದಿಗೂ ಸಿಗುತ್ತಿಲ್ಲ. ತಿಪ್ಪೆಗುಂಡಿಗಳ ಮಧ್ಯೆ ದಾಟಿ ಶಾಲೆಗೆ ಬರುವ ವಿದ್ಯಾರ್ಥಿಗಳು, ಪಾಠ ಬೋಧಿಸಲು ಶಿಕ್ಷಕರಿಲ್ಲದೇ ತೊಂದರೆ ಅನುಭವಿಸುತ್ತಿದ್ದಾರೆ.

ಶಹಾಪುರ ತಾಲ್ಲೂಕಿನ ಗೊಂದೆನೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೌಕರ್ಯಗಳಿಲ್ಲದೇ ವಿದ್ಯಾರ್ಥಿಗಳು ನಿತ್ಯ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ. ಗೊಂದೆನೂರ ಗ್ರಾಮದಲ್ಲಿರುವ ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯಲ್ಲಿ ಒಟ್ಟು 209 ವಿದ್ಯಾರ್ಥಿಗಳ ದಾಖಲಾತಿ ಇದೆ. ನಿತ್ಯ ಶಾಲೆಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆ 190. ಆದರೆ ಇಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ ಎರಡು.

ನಿಯಮದ ಪ್ರಕಾರ ಈ ಶಾಲೆಯಲ್ಲಿ ಏಳು ಶಿಕ್ಷಕರು ಇರಬೇಕು. ಆದರೆ ಕೇವಲ ಇಬ್ಬರೇ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯೋಧ್ಯಾಪಯರು ಒಂದರಿಂದ ಮೂರನೇ ತರಗತಿಯವರೆಗೆ ನಲಿ-ಕಲಿ ಬೋಧನೆ ಮಾಡುತ್ತಾರೆ. ಇನ್ನುಳಿದ ವರ್ಗಗಳನ್ನು ಇನ್ನೊಬ್ಬ ಶಿಕ್ಷಕರು ನೋಡಿಕೊಳ್ಳಬೇಕು.

ಇವರಿಬ್ಬರಲ್ಲಿ ಒಬ್ಬರು ರಜೆಯ ಮೇಲೆ ಹೋದರೆ, ಇಲ್ಲವೇ ಮೇಲಾಧಿಕಾರಿಗಳು ಕರೆದ ಸಭೆಗೆ ಹೋದರೆ ಶಾಲೆಯಲ್ಲಿ ಉಳಿಯುವುದು ಒಬ್ಬರು. ಅವರೊಬ್ಬರೇ ಏಳೂ ತರಗತಿಗಳನ್ನು ನೋಡಿಕೊಳ್ಳುವ ಅನಿವಾರ್ಯತೆ.

ಇನ್ನು ಶಾಲೆಯ ಸುತ್ತಲಿನ ಪರಿಸರವೂ ಚೆನ್ನಾಗಿಲ್ಲ. ಶಾಲೆಯ ಸುತ್ತಲೂ ತಿಪ್ಪೆಗುಂಡಿಗಳನ್ನು ಹಾಕಿದ್ದು,  ಮಕ್ಕಳು ಬರಬೇಕಾದರೆ ತಿಪ್ಪೆಗಳನ್ನು ದಾಟಿಕೊಂಡೇ ಬರಬೇಕು. ಮಳೆ ಬಂತೆಂದರೆ ತಿಪ್ಪೆಗುಂಡಿಗಳ ದುರ್ವಾಸನೆ ಶಾಲಾ ಆವರಣದಲ್ಲಿ ಹರಡುತ್ತಿದ್ದು, ಶಾಲೆಯಲ್ಲಿ ಕೂಡಲೂ ಆಗದಂತಹ ವಾತಾವರಣ ನಿರ್ಮಾಣವಾಗುತ್ತದೆ ಎಂದು ಪಾಲಕರು ದೂರುತ್ತಾರೆ.

ಶಿಕ್ಷಕರ ಕೊರತೆ: ಶಹಾಪುರ ತಾಲ್ಲೂಕಿನಲ್ಲಿ 485 ಶಿಕ್ಷಕರ ಕೊರತೆ ಇದೆ. ತಾಲೂಕಿನ ಪ್ರತಿಯೊಂದು ಶಾಲೆಯಲ್ಲಿ ಶಿಕ್ಷಕರ ಕೊರತೆ ಇದೆ. ನಿತ್ಯ ದೂರುಗಳು ಬರುತ್ತವೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದ ನಂತರ ಸ್ಪಷ್ಟ ಚಿತ್ರಣ ದೊರಕುತ್ತದೆ. ಆಗ ಮಾತ್ರ ಒಂದಿಬ್ಬರು ಶಿಕ್ಷಕರನ್ನು ಇಲ್ಲಿಗೆ ನಿಯೋಜನೆ ಮಾಡಲು ಸಾಧ್ಯ ಎನ್ನುತ್ತಾರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು.

ಶಿಕ್ಷಕರ ಕೊರತೆಯಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳು ಕಲಿಕೆಯಿಂದ ವಂಚಿತರಾಗುವಂತಾಗಿದೆ ಎಂದು ಗ್ರಾಮದ ಹಣಮಂತ ದೊರೆ ದೂರುತ್ತಾರೆ.

ನಮ್ಮೂರ ಶಾಲೆಗೆ ಸೌಕರ್ಯಗಳನ್ನು ಒದಗಿಸಿಕೊಡಬೇಕು. ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುವ ಬೇಡಿಕೆಯನ್ನು ಪಾಲಕರು ಮುಂದಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT