ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲ ನಿವಾರಿಸಿ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರದ ಹಗರಣಗಳಿಂದ ವರ್ಚಸ್ಸು ಕಳೆದುಕೊಂಡಿರುವ ರಾಜ್ಯದ ಬಿಜೆಪಿ ಸರ್ಕಾರ ಎರಡು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ಆಡಳಿತದಲ್ಲಿ ಸುಧಾರಣೆ ತರಬಹುದೆಂದು ನಿರೀಕ್ಷೆ ಮೂಡಿಸಿತ್ತು.

ವಾರದಲ್ಲಿ ನಾಲ್ಕು ದಿನ ವಿಧಾನಸೌಧದ ಕಚೇರಿಯಲ್ಲಿ ಕೆಲಸ ಮಾಡುವುದಾಗಿ ಮುಖ್ಯಮಂತ್ರಿ ಸದಾನಂದಗೌಡರು ನೀಡಿದ್ದ ಭರವಸೆಯನ್ನು ಸ್ವತಃ ಅವರೇ ಈಡೇರಿಸುವುದಕ್ಕೆ ಇನ್ನೂ ಸಮಯ ಕೂಡಿ ಬಂದಿಲ್ಲ.

ಸಹೋದ್ಯೋಗಿಗಳು ಯಾರೂ ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಪಕ್ಷದ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ ವರದಿಗಳು ಮುಖ್ಯಮಂತ್ರಿಗಳ ಬಗ್ಗೆ ಜನ ಕನಿಕರ ಪಡುವಂತೆ ಮಾಡಿವೆ.

ಸರ್ಕಾರದ ನೇತೃತ್ವ ವಹಿಸಿದ ನಾಯಕ ಅಸಹಾಯಕನಾದರೆ ಅದು ಒಟ್ಟು ಆಡಳಿತದಲ್ಲಿ ಕೆಟ್ಟ ಪರಿಣಾಮ ಬೀರುತ್ತದೆ. ಅಧಿಕಾರಿಗಳು ಸಚಿವರ ಆದೇಶಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಸಚಿವರು ದಕ್ಷತೆಯನ್ನು ಪ್ರದರ್ಶಿಸದಿದ್ದರೆ ಆಡಳಿತ ಯಂತ್ರವನ್ನು ಚುರುಕುಗೊಳಿಸುವುದು ಸಾಧ್ಯವಿಲ್ಲ. ಕಾನೂನಿನ ಅರಿವು ಇರುವ ಪ್ರಾಮಾಣಿಕ ಜನಪ್ರತಿನಿಧಿಯ ಆದೇಶಗಳನ್ನು ಅಧಿಕಾರಶಾಹಿ ಕಡೆಗಣಿಸಲು ಸಾಧ್ಯವಿಲ್ಲ.

ಆದರೆ ಸಚಿವರ ವಿರುದ್ಧ ಕಾನೂನು ಉಲ್ಲಂಘನೆಯ ಇಲ್ಲವೇ ಅಕ್ರಮ ನಡವಳಿಕೆಯ ಆರೋಪಗಳಿದ್ದರೆ ಅದು ಸರ್ಕಾರದ ವರ್ಚಸ್ಸನ್ನು ಹೆಚ್ಚಿಸಲಾರದು.ರಾಜ್ಯದ ಅರಣ್ಯ ಖಾತೆ ಸಚಿವ ಸಿ.ಪಿ.ಯೋಗೀಶ್ವರ್ ವಿರುದ್ಧ, ಬಡಾವಣೆ ನಿರ್ಮಿಸಿ ನಿವೇಶನ ನೀಡುವುದಾಗಿ ಸಾರ್ವಜನಿಕರಿಂದ ಹಣ ಪಡೆದು ವಂಚಿಸಿದ ಆರೋಪ ಕೇಳಿ ಬಂದಿರುವ ಬಗ್ಗೆ ರಾಜ್ಯಪಾಲರು ಮುಖ್ಯಮಂತ್ರಿ ಅವರಲ್ಲಿ ವಿವರಣೆ ಕೇಳಿರುವ ವರದಿ ಸದಾನಂದಗೌಡರ ಸರ್ಕಾರ ಹೊಸದಾಗಿ ಎದುರಾಗಿರುವ ಸಮಸ್ಯೆ.

ಮುಖ್ಯಮಂತ್ರಿ ಅವರಿಂದ ಈ ಸಂಬಂಧದಲ್ಲಿ ವಿವರ ಕೋರಿರುವುದನ್ನು ರಾಜ್ಯಪಾಲರು ಸ್ವತಃ ಬಹಿರಂಗಪಡಿಸಿದ್ದರೂ ಅಂಥ ಪ್ರಸ್ತಾಪವೇನೂ ತಮ್ಮಿಬ್ಬರ ಮಾತುಕತೆ ಸಂದರ್ಭದಲ್ಲಿ ಬಂದೇ ಇಲ್ಲವೆಂದು ಸದಾನಂದಗೌಡರು ನೀಡಿರುವ ಸ್ಪಷ್ಟನೆ ಈ ವಿಷಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿಗಳು ಸುಳ್ಳು ಹೇಳಲಾರರು ಎಂಬುದೇ ಜನತೆಯ ನಂಬಿಕೆ ಮತ್ತು ನಿರೀಕ್ಷೆ. ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕೆಂಬುದು ಮುಖ್ಯಮಂತ್ರಿಯ ಪರಮಾಧಿಕಾರ ಎಂಬುದು ರಾಜ್ಯಪಾಲರಿಗೆ ಗೊತ್ತಿಲ್ಲದ ಸಂಗತಿಯಲ್ಲ.

ಆದರೂ ಸಚಿವರೊಬ್ಬರ ವಿರುದ್ಧ ಸಾರ್ವಜನಿಕರನ್ನು ವಂಚಿಸಿದ ದೂರು ಕೇಳಿಬಂದಿದ್ದು, ಅಂಥ ದೂರಿನ ಬಗ್ಗೆ ಕೇಂದ್ರ ಸರ್ಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಖಚಿತಪಡಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳಿಂದ ಮಾಹಿತಿ ಪಡೆಯುವ ಸಾಂವಿಧಾನಿಕ ಕರ್ತವ್ಯವನ್ನು ರಾಜ್ಯಪಾಲರು ನಿರ್ವಹಿಸಿದ್ದು ಸಹಜ ಪ್ರಕ್ರಿಯೆ. ಈ ಸಂಬಂಧದಲ್ಲಿ ಮುಖ್ಯಮಂತ್ರಿ ಅವರಿಂದ ಸ್ಪಷ್ಟ ಹೇಳಿಕೆ ಅವಶ್ಯಕವಾಗಿದೆ.

ಜನರನ್ನು ವಂಚಿಸಿದ ಆರೋಪ ಹೊತ್ತವರನ್ನು ಸಂಪುಟದಲ್ಲಿರಿಸಿಕೊಳ್ಳುವುದರಿಂದ ಸರ್ಕಾರದ ವರ್ಚಸ್ಸು ಹೆಚ್ಚುವುದಿಲ್ಲ ಎಂಬುದು ಮುಖ್ಯಮಂತ್ರಿಗಳಿಗೆ ತಿಳಿಯದ ಸಂಗತಿಯಲ್ಲ.

ಕಳಂಕ ಹೊತ್ತವರು ನಿರಪರಾಧಿಯೆಂದು ನ್ಯಾಯಾಲಯದಲ್ಲಿ ತೀರ್ಮಾನವಾಗುವವರೆಗೆ ಜನತೆ ಅವರನ್ನು ಸಂಶಯದಿಂದಲೇ ನೋಡುತ್ತಾರೆ.

ಯಾವುದೇ ಆರೋಪ ರಾಜಕೀಯ ಪ್ರೇರಿತವಾಗಿದ್ದರೆ ಅದನ್ನು ರಾಜಕೀಯವಾಗಿ ಎದುರಿಸುವುದು ಸೂಕ್ತವಾಗಿದ್ದರೂ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಿರುವಾಗ ಅದನ್ನು ಕಾನೂನು ದೃಷ್ಟಿಯಿಂದಲೇ ನೋಡುವುದು ಅನಿವಾರ್ಯ.

ನ್ಯಾಯಾಲಯ ನಿರಪರಾಧಿ ಎಂದು ಹೇಳಿದ ನಂತರ ಅವರಿಗೆ ಯಾವುದೇ ಸ್ಥಾನ ನೀಡಿದರೂ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಬಾರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT