ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂದಲಗಳ ನಿವಾರಣೆಗೆ ಮನವಿ

ಹೈ-ಕ ಅಭಿವೃದ್ಧಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹ
Last Updated 4 ಜುಲೈ 2013, 6:44 IST
ಅಕ್ಷರ ಗಾತ್ರ

ಬಳ್ಳಾರಿ: ಸಂವಿಧಾನದ 371ನೇ `ಜೆ' ಕಲಮಿಗೆ ತಿದ್ದುಪಡಿ ತಂದಿರುವುದರಿಂದ ಅತ್ಯಂತ ಹಿಂದುಳಿದಿರುವ ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸೌಲಭ್ಯ ದೊರೆಯಲಿದೆ. ಆದರೆ, ಸೌಲಭ್ಯ ಪಡೆಯಲಿರುವ ಇಲ್ಲಿನ ಮೂಲ ನಿವಾಸಿಗಳು ಯಾರು ಎಂಬುದು ಸ್ಪಷ್ಟಪಡಿಸಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದರು.

ಸಂವಿಧಾನದ 371ನೇ ಕಲಮ್‌ನ ತಿದ್ದುಪಡಿ ಅನುಚ್ಛೇದದ ಕುರಿತ ನಿಯಮಾವಳಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೊಸಪೇಟೆಯಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಉಪ ಸಮಿತಿ ಸಭೆಯಲ್ಲಿ ಸಾರ್ವಜನಿಕರ ಸಲಹೆ- ಸೂಚನೆ ಸ್ವೀಕರಿಸಲು ಏರ್ಪಡಿಸಿದ್ದ  ಸಭೆಯಲ್ಲಿ ಮಾತನಾಡಿದ ತಜ್ಞರು, ಹೋರಾಟಗಾರರು ಹಾಗೂ ಸಂಘ- ಸಂಸ್ಥೆಗಳ ಸದಸ್ಯರು ಈ ಕುರಿತ ಮನವಿ ಸಲ್ಲಿಸಿದರು.

ಹೈದರಾಬಾದ್ ಕರ್ನಾಟಕಕ್ಕೆ ಸೇರಿದ, 1ರಿಂದ 10ನೇ ತರಗತಿವರೆಗೆ ಇಲ್ಲೇ ಓದಿದವರಿಗೆ ಮಾತ್ರ ಮೂಲನಿವಾಸಿ ಪ್ರಮಾಣಪತ್ರ ನೀಡಿ, ಸೌಲಭ್ಯ ಒದಗಿಸುವ ಪ್ರಸ್ತಾವನೆ ಕೇಳಿಬಂದಿದೆ. ಆದರೆ, ಈ ಜಿಲ್ಲೆಯವರು ಅನಿವಾರ್ಯ ಕಾರಣಗಳಿಂದ ಬೇರೆ ಜಿಲ್ಲೆಯಲ್ಲಿ ಓದಿದರೂ ಅವರಿಗೆ ಸೂಕ್ತ ಸೌಲಭ್ಯ ದೊರೆಯುವ ಸಾಧ್ಯತೆಗಳಿಲ್ಲದ್ದರಿಂದ ತೀವ್ರ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಈ ಕುರಿತ ಗೊಂದಲ ನಿವಾರಿಸಬೇಕು ಎಂದು ಕೊಪ್ಪಳ ಜಿಲ್ಲೆಯ ಹೊಸಳ್ಳಿಯ ಮಾದು ಬೊಮ್ಮನಕಟ್ಟಿ ಕೋರಿದರು.

ಸ್ಥಳೀಯವಾಗಿ ಲಭ್ಯವಾಗುವ ಶಿಕ್ಷಣ ಮತ್ತು ಉದ್ಯೋಗದಲ್ಲಿ ಈ ಭಾಗದವರಿಗೆ ಶೇ 80ರಷ್ಟು ಮೀಸಲಾತಿ ನೀಡಬೇಕು. ರಾಜ್ಯದ ಇತರಡೆ ಲಭ್ಯವಿರುವ ಉದ್ಯೋಗದಲ್ಲಿ ಶೇ 21ರಷ್ಟು ಮೀಸಲಾತಿ ಈ ಭಾಗದವರಿಗೆ ನೀಡಲು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

ಗುಳೆ ಹೋದವರ ಮಕ್ಕಳು ಮಧ್ಯದಲ್ಲಿ ಒಂದೆರಡು ವರ್ಷಗಳ ಕಾಲ ಬೇರೆಡೆ ವಿದ್ಯಾಬ್ಯಾಸ ಮಾಡಿರುವ ಸಾಧ್ಯತೆಗಳೂ ಇರುವುದರಿಂದ ಅಂಥವರಿಗೆ ಸೌಲಭ್ಯ ನೀಡುವ ಕುರಿತ ಗೊಂದಲಗಳನ್ನು ಹೋಗಲಾಡಿಸಿ, ಸೂಕ್ತ ನಿಯಮ ರೂಪಿಸಬೇಕು ಎಂದು ಕುಷ್ಟಗಿಯ ಮಾಜಿ ಶಾಸಕ ಕೆ.ಶರಣಪ್ಪ ಮನವಿ ಮಾಡಿದರು.

ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡುವುದಲ್ಲದೆ, ಈ ಭಾಗದಲ್ಲಿ ಸ್ಥಾಪನೆಯಾಗುವ ಕೈಗಾರಿಕೆಗಳು ಸ್ಥಳೀಯ ಶಾಲೆಗಳನ್ನು ಕಡ್ಡಾಯವಾಗಿ ದತ್ತು ಪಡೆಯುವಂತೆ ಷರತ್ತು ವಿಧಿಸಬೇಕು ಎಂದು ಅವರು ಆಗ್ರಹಿಸಿದರು.

ಹೊಸದಾಗಿ ರಚನೆಯಾಗಲಿರುವ ಹೈ-ಕ ಅಭಿವೃದ್ಧಿ ಮಂಡಳಿಯಲ್ಲಿ ಕೇವಲ ಚುನಾಯಿತ ಪ್ರತಿನಿಧಿಗಳು ಮಾತ್ರವಲ್ಲದೆ, ತಜ್ಞರು, ರೈತರು ಮತ್ತು ಸಾಮಾಜಿಕ ಕಾರ್ಯಕರ್ತರನ್ನು ಸೇರಿಸಿಕೊಳ್ಳಬೇಕು ಎಂದು ಜನಾರ್ದನ ಅವರು ಮನವಿ ಸಲ್ಲಿಸಿದರು.

ಆರೂ ಜಿಲ್ಲೆಗಳ ಕನಿಷ್ಠ ಇಬ್ಬರು ಸಂಸದರು, ಅರ್ಧ ಸಂಖ್ಯೆಯ ಶಾಸಕರು ಮಂಡಳಿಯ ಅಧಿಕಾರ ವ್ಯಾಪ್ತಿಗೆ ಬರುವಂತೆ ನೋಡಿಕೊಳ್ಳಬೇಕು. ನೇಕಾರರು, ಶಿಕ್ಷಣ ತಜ್ಞರು, ರೈತರು, ಹೋರಾಟಗಾರರನ್ನು ಈ ಮಂಡಳಿಯಲ್ಲಿ ಸೇರಿಸಿಕೊಳ್ಳಬೇಕು ಎಂದು ಪತ್ರಕರ್ತ ಕೊಟ್ರಪ್ಪ ಅವರು ಕೋರಿದರು.

ರಾಜ್ಯಮಟ್ಟದಲ್ಲಿ ಲಭ್ಯವಿರುವ ಉದ್ಯೋಗದಲ್ಲಿ ಈ ಭಾಶಗದವರಿಗೆ ಶೇ 30ರಷ್ಟು ಮೀಸಲಾತಿ ಕಲ್ಪಿಸಬೇಕು. ಅಭಿವೃದ್ಧಿಗಾಗಿ ಬಜೆಟ್‌ನಲ್ಲೇ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಮಾದಿಗ ಅಭಿವೃದ್ಧಿ ಮಂಡಳಿ ಸ್ಥಾಪಿಸಿ ಹಿಂದುಳಿದಿರುವ ದಲಿತರ ಅಭ್ಯುದಯಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಿದರು.

ಅಖಂಡ ಕರ್ನಾಟಕದ ಸ್ಫೂರ್ತಿಗೆ ಧಕ್ಕೆ ಬರದ ರೀತಿಯಲ್ಲಿ ನಿಯಮ ರೂಪಿಸುವುದಲ್ಲದೆ, ಜನಪ್ರತಿನಿಧಿಗಳ ಮತ್ತು ಜನರ ಆಶಯದಂತೆ  ಈ ಭಾಗದವರಿಗೆ ಶೇ 21ರಷ್ಟು ಮೀಸಲಾತಿಯನ್ನು ರಾಜ್ಯ ಮಟ್ಟದ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಬೇಕು ಎಂದು ಜನಸಂಗ್ರಾಮ ಪರಿಷತ್‌ನ ಸಂಚಾಲಕ ರಾಘವೇಂದ್ರ ಕುಷ್ಟಗಿ ಮನವಿ ಸಲ್ಲಿಸಿದರು.

ಬೆಂಗಳೂರಿನಲ್ಲಿರುವ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ, ಸಚಿವಾಲಯ, ಕರ್ನಾಟಕ ಲೋಕ ಸೇವಾ ಆಯೋಗಗಳಲ್ಲಿನ ಹುದ್ದೆಗಳಿಗೂ ಇಲ್ಲಿನವರಿಗೆ ಆದ್ಯತೆ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಸ್ಥಳೀಯ ಕನ್ನಡ ಭಾಷಾ ಪತ್ರಿಕೆಗಳ ಅಭ್ಯುದಯಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಈ ಭಾಗದ ಪತ್ರಕರ್ತರಿಗೂ ವಿಶೇಷ ಸೌಲಭ್ಯಗಳನ್ನು ಜಾರಿಗೊಳಿಸಬೇಕು ಎಂದು ಪತ್ರಕರ್ತ ವೆಂಕಟಸಿಂಗ್ ಕೋರಿದರೆ, ವಿಫಲವಾಗಿರುವ ವಿದರ್ಭ ಮತ್ತು ತೆಲಂಗಾಣ ಅಭಿವೃದ್ಧಿ ಮಾದರಿಯನ್ನು ಅನುಸರಿಸದೆ, ಪ್ರತ್ಯೇಕ ನಿಯಮಗಳನ್ನು ರೂಪಿಸಿ, ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಉಪನ್ಯಾಸಕ ರಜಾಕ್ ಉಸ್ತಾದ್ ತಿಳಿಸಿದರು.

ಪ್ರಾದೇಶಿಕ ಅಸಮಾನತೆಯ ಅಧ್ಯಯನ ನಡೆಸಿ ವರದಿ ಸಲ್ಲಿಸಿರುವ ಎಸ್.ನಂಜುಂಡಪ್ಪ ಆಯೋಗದ ಆಶಯಕ್ಕೆ ಧಕ್ಕೆ ಬಾರದಂತೆ ವಿಶೇಷ ನೀತಿ, ನಿಯಮ ರೂಪಿಸಿ, ಹೈದರಾಬಾದ್ ಕರ್ನಾಟಕದ ಸಮಗ್ರ ಬೆಳವಣಿಗೆಯತ್ತ ಬೆಳಕು ಚೆಲ್ಲಬೇಕು ಎಂದು ಬಳ್ಳಾರಿಯ ಹೈ-ಕ ಹೋರಾಟ ಸಮಿತಿಯ ಎಸ್.ಪನ್ನರಾಜ್ ಮನವಿ ಮಾಡಿದರು.

ಉಪ ಸಮಿತಿಯ ಅಧ್ಯಕ್ಷ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಸಚಿವರಾದ ಉಮಾಶ್ರೀ, ಖಮರುಲ್ ಇಸ್ಲಾಂ, ಟಿ.ಬಿ. ಜಯಚಂದ್ರ, ಪಿ.ಟಿ. ಪರಮೇಶ್ವರ ನಾಯ್ಕ, ಶಿವರಾಜ ತಂಗಡಗಿ ಉಪಸ್ಥಿತರಿದ್ದರು.

ಶಾಸಕರಾದ ಆನಂದಸಿಂಗ್, ಭೀಮಾನಾಯ್ಕ, ಬಿ.ಎಂ.ನಾಗರಾಜ, ಜಿಪಂ ಅಧ್ಯಕ್ಷೆ ಸುಮಂಗಲಾ, ಉಪಾಧ್ಯಕ್ಷೆ ಮಮತಾ ಸುರೇಶ, ಸದಸ್ಯ ವಸಂತ, ಲಕ್ಷ್ಮಣ,  ರೋಗಾಣಿ ಹುಲುಗಪ್ಪ, ಜಿಲ್ಲಾಧಿಕಾರಿ ಎ.ಎ.ಬಿಸ್ವಾಸ್, ಹೆಚ್ಚುವರಿ ಪೊಲೀಸ್‌ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಜಿಲ್ಲಾಧಿಕಾರಿ ವೆಂಕಟೇಶ ಹಾಜರಿದ್ದರು.

ಮೂರು ಜಿಲ್ಲೆಗಳ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಮಠಾಧೀಶರು, ಸಾರ್ವಜನಿಕರಿಂದ ನೂರಕ್ಕೂ ಅಧಿಕ ಮನವಿಗಳು ಸಲ್ಲಿಕೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT