ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಂಬೆಗಳ ಗೆಳತಿ

Last Updated 12 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

‘ಕಣ್ಣು, ತುಟಿ, ಕೆನ್ನೆಗಳಿಗೆ ಕಾಡಿಗೆ ಪೂಸಿ, ಬಣ್ಣ ತೀಡಿದರೂ ನನ್ನ ನೈಜ ವರ್ಣ ಮರೆಯಾಗುವುದಿಲ್ಲ. ಮೊಗಕ್ಕೆ ಬಣ್ಣ ತೀಡುವುದಕ್ಕಿಂತ ಪಾತ್ರದ ಭಾವಗಳಿಗೆ ರಂಗು ತುಂಬಬೇಕು. ಆಗ ಮಾತ್ರ ಕಲಾವಿದರ ವರ್ಣ, ವಿವರ್ಣಗಳು ತೆರೆದುಕೊಳ್ಳುತ್ತದೆ. ಇಲ್ಲಿಯವರೆಗೂ ನನಗೆ ಸಿಕ್ಕಿರುವುದು ಭಾವ ತುಂಬುವ ಪಾತ್ರಗಳೇ ವಿನಾ ಬಣ್ಣದ ಲೇಪದಲ್ಲಿ ಲಯಕಂಡುಕೊಳ್ಳುವ ರೋಲುಗಳಲ್ಲ’– ನಟಿ ಪಾವನಾ ಅವರ ಈ ಮಾತುಗಳೇ ಈಕೆ ಎಲ್ಲರಂತಲ್ಲ ಎನ್ನುವುದನ್ನು ಸೂಚಿಸುತ್ತವೆ.

ಪಾವನಾ ಅವರ ಹೆಸರು ಬಹು ಮಂದಿಗೆ ಎಲ್ಲೋ ಕೇಳಿದ ನೆನಪು. ಆದರೆ ‘ಗೊಂಬೆಗಳ ಲವ್’ ಚಿತ್ರದ ನಾಯಕಿ ಕಮಲಿ ಎಂದೊಡನೆ ಪ್ರೇಕ್ಷಕರಷ್ಟೇ ಅಲ್ಲ, ಸಿನಿಮಾ ಲೋಕದ ಮಂದಿಯೂ ಕಣ್ಣು ಅರಳಿಸುತ್ತಾರೆ. ‘ಗೊಂಬೆಗಳ ಲವ್’ ಚಿತ್ರ ವಿಮರ್ಶಕರಿಂದ ಸೈ ಎನಿಸಿಕೊಂಡರೂ ಪ್ರೇಕ್ಷಕರಿಂದ ಹೆಚ್ಚು ಅಂಕ ಪಡೆಯಲಿಲ್ಲ. ಆದರೆ ಚಿತ್ರದ ನಾಯಕಿ ಕಮಲಿ ಮಾತ್ರ ಗಳಿಸಿದ್ದು ಶೇ 100 ಅಂಕ.
 
ಗೊಂಬೆಗಳ ಲವ್‌ ನಂತರ ಹೆಚ್ಚೇನೂ ಸುದ್ದಿಯಲ್ಲಿ ಇಲ್ಲದ ಪಾವನಾ ಅವರ ಅಭಿನಯದ ಚಿತ್ರಗಳು ಈಗ ಸಾಲಾಗಿ ಬಿಡುಗಡೆಗೆ ಸಿದ್ಧತೆ ನಡೆಸುತ್ತಿವೆ. ಅವರ ಅಭಿನಯದ ‘ಜಟ್ಟ’, ‘ಅದ್ವೈತ’, ‘ಕಲಿಗಾಲ’ ಚಿತ್ರಗಳ ಚಿತ್ರೀಕರಣ ಮುಗಿದಿದೆ. ‘ಟಿಪಿಕಲ್‌ ಕೈಲಾಸ್‌’ ಚಿತ್ರೀಕರಣ ಅಂತಿಮ ಹಂತದಲ್ಲಿದೆ.

ಪಾವನಾ ಮಂಡ್ಯ ಜಿಲ್ಲೆಯ ಬೆಳ್ಳೂರಿನವರು. ಮೈಸೂರಿನಲ್ಲಿ ಪದವಿ ಅಭ್ಯಾಸ ನಡೆಸುತ್ತಿರುವಾಗಲೇ ಸಿನಿಮಾ ಲೋಕ ಪ್ರವೇಶಿಸಿದರು. ಗಿರಿರಾಜ್ ನಿರ್ದೇಶನದ ‘ಅದ್ವೈತ’ದಲ್ಲಿ ಮೊದಲ ಅವಕಾಶ. ಆಗ ಅವರಿನ್ನೂ ಬಿ.ಎ. ವಿದ್ಯಾರ್ಥಿನಿ. ಅವರ ನಟನೆಯ ತುಡಿತ ಅರಿತ ಗಿರಿರಾಜ್ ತಮ್ಮ ಮುಂದಿನ ಚಿತ್ರ ‘ಜಟ್ಟ’ದಲ್ಲೂ ಅವಕಾಶವಿತ್ತರು. ನಂತರದ್ದು ‘ಗೊಂಬೆಗಳ ಲವ್’. ತೊಗಲು ಗೊಂಬೆಗಳಿಗೆ ಜೀವ ತುಂಬಿ ಆಡಿಸುವಂತೆ ನಿರ್ದೇಶಕರು ಕೊಟ್ಟ ಪಾತ್ರಕ್ಕೆ ಜೀವ ಮತ್ತು ಭಾವ ತುಂಬಿದರು. ಆದರೆ ಸಿನಿಮಾ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತಲಿಲ್ಲ. ಪ್ರಚಾರದ ಕೊರತೆ ಚಿತ್ರದ ಸೋಲಿಗೆ ಕಾರಣ ಎನ್ನುವುದು ಗೊಂಬೆಗಳ ಗೆಣಗಾರ್ತಿಯ ಮಾತು.

‘ಟಿಪಿಕಲ್‌ ಕೈಲಾಸ್’ ಹೊರತು ಪಡಿಸಿ ಅವರಿಗೆ ಸಿಕ್ಕ ಪಾತ್ರಗಳೆಲ್ಲ ಕಲಾತ್ಮಕತೆಯ ಸ್ಪರ್ಶವಿರುವ ಪಾತ್ರಗಳೇ. ಹೆಣ್ಣೊಬ್ಬಳ ಮನದ ತಾಕಲಾಟ, ತೊಯ್ದಾಟಗಳನ್ನು ‘ಜಟ್ಟ’ನ ಬೆಳ್ಳಿ ಪ್ರತಿನಿಧಿಸುತ್ತಾಳೆ. 16ನೇ ವಯಸ್ಸಿನಲ್ಲಿಯೇ ವಿವಾಹವಾದ ಆದಿವಾಸಿ ಸಮುದಾಯದ ಹೆಣ್ಣೊಬ್ಬಳ ಸಂಕಷ್ಟಗಳನ್ನು ಆಕೆ ತೆರೆದಿಡುತ್ತಾಳಂತೆ. ‘ಅದ್ವೈತ’ದ ಚಿನ್ನಿಯೂ ಸಂದೇಶಾತ್ಮಕ ಪಾತ್ರವಂತೆ. ಎರಡೂ ಚಿತ್ರಗಳ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆಯ ಹಂತದಲ್ಲಿವೆ. ಪ್ರಸ್ತುತ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವ ಅವರು ಎರಡು ದೋಣಿಯ ಪಯಣಿಗರು.

ತಮ್ಮ ನಟನೆ ಏಕತಾನತೆಯತ್ತ ಹೊರಳುತ್ತಿದೆ ಎನ್ನುವ ಅರಿವು ಮೂಡಿದಾಗಲೇ ಅವರಿಗೆ ಸಿಕ್ಕಿದ್ದು ‘ಟಿಪಿಕಲ್ ಕೈಲಾಸ್’ನಲ್ಲಿ ಅವಕಾಶ. ಕಲಾತ್ಮಕ ಬಣ್ಣಗಳನ್ನೆಲ್ಲ ಬಿಸುಟು ಪೂರ್ಣ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ ಪಾವನಾ. ‘ನಾನು ಇಲ್ಲಿಯವರೆಗೆ ಅಭಿನಯಿಸಿರುವ ಚಿತ್ರಗಳಲ್ಲಿ ಪಕ್ಕಾ ಕಮರ್ಷಿಯಲ್ ಚಿತ್ರ ‘ಟಿಪಿಕಲ್ ಕೈಲಾಸ್’. ಇದರಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ. ಸಿನಿಮಾ ಲೋಕ ಪ್ರವೇಶ ಕುಟುಂಬಕ್ಕೆ ಈಗಲೂ ಇಷ್ಟವಿಲ್ಲ. ಆದ್ದರಿಂದ ಪೋಷಕರ ಮನಸ್ಸಿಗೆ ನೋವು ಮತ್ತು ಮುಜುಗರವಾಗದ ಪಾತ್ರಗಳಲ್ಲಿ ಅಭಿನಯಿಸುತ್ತೇನೆ’ ಎನ್ನುತ್ತಾರೆ ಪಾವನಾ.

ಆನಂದ್ ನಿರ್ದೇಶನದ ‘ಇಶಾರೆ’ ಚಿತ್ರ ಮತ್ತು ‘ಆರೋಹಿ’ ಆಲ್ಬಂಗಳು ಪ್ರಸ್ತುತ ಪಾವನಾ ಮುಂದಿರುವ ಪ್ರಾಜೆಕ್ಟ್‌ಗಳು. ‘ಇಶಾರೆ’ ಚಿತ್ರ ಬದುಕಿಗೆ ಹೊಸ ತಿರುವ ನೀಡುವ ನಂಬಿಕೆ ಅವರದ್ದು. ‘ಆರೋಹಿ’ ಅಲ್ಬಂನ ಎರಡು ಗೀತೆಗಳಲ್ಲಿ ಪಾವನಾ ಕಾಣಿಸಿಕೊಳ್ಳಲಿದ್ದಾರಂತೆ. 

‘ಪ್ರೇಕ್ಷಕರು ಎರಡೂವರೆ ಗಂಟೆಗಳ ಕಾಲ ಚಿತ್ರಮಂದಿರಲ್ಲಿ ನಮ್ಮಿಂದ ಹೊಸತನವನ್ನು ನಿರೀಕ್ಷಿಸುತ್ತಾರೆ. ಆ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು’ ಎನ್ನುತ್ತ ಮಂದಹಾಸ ಬೀರುವ ಪಾವನಾ ಅವರಿಗೆ, ಚಿತ್ರರಂಗದಲ್ಲಿ ಗಟ್ಟಿಯಾಗಿ ತಳವೂರಲು ವ್ಯಾಪಾರಿ ಚಿತ್ರಗಳು ಅಗತ್ಯ ಎನ್ನುವ ವಾಸ್ತವದ ಅರಿವಿದೆ. ಆ ಕಾರಣದಿಂದಲೇ ಅವರು ಸದ್ಯ ವ್ಯಾಪಾರಿ ಚಿತ್ರಗಳತ್ತ ನೋಟ ಬೀರಿದ್ದಾರೆ.

ಕಾಸ್ಟ್ಯೂಮ್‌ಗಿಂತ ಕ್ಯಾರೆಕ್ಟರ್ ಮುಖ್ಯವೆನ್ನುವುದು ಅವರ ನಿಲುವು. ಸಣ್ಣಕಥೆಗಳ ಓದು ಪಾವನಾಗೆ ಅಚ್ಚುಮೆಚ್ಚು. ಕಲಾವಿದೆಯಾದವಳಿಗೆ ಓದು ಮುಖ್ಯ ಎನ್ನುವುದು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT