ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಡಚಿ ವೀರಭದ್ರೇಶ್ವರ ರಥೋತ್ಸವ ಇಂದು

Last Updated 28 ಡಿಸೆಂಬರ್ 2012, 6:32 IST
ಅಕ್ಷರ ಗಾತ್ರ

ರಾಮದುರ್ಗ: ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ ವೀರಭದ್ರೇಶ್ವರ ರಥೋತ್ಸವವು ಇದೇ 28 ರಂದು  ವಿಜೃಂಭಣೆಯಿಂದ ಜರುಗುವುದು. ಇದೇ 26 ರಿಂದಲೇ ಜಾತ್ರಾ ಮಹೋತ್ಸವವು ಆರಂಭವಾಗಿದೆ.

ಕಲಿಯುಗದಲ್ಲಿಯೂ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸಬಲ್ಲ ದೈವಾದಿ ಪುರಷನಾಗಿ ಪ್ರಸಿದ್ಧಿ ಪಡೆದು ಭಕ್ತರ ಮನದಲ್ಲಿ ಮನೆ ಮಾಡಿರುವ ಗೊಡಚಿ ಶ್ರೀ ವೀರಭದ್ರೇಶ್ವರ ದೇವರ ದೇವಸ್ಥಾನವು ಈ ಭಾಗದಲ್ಲಿ ನಿರಂತರ ಅನ್ನದಾಸೋಹದಿಂದ ಉತ್ತರ ಕರ್ನಾಟಕದ ಧರ್ಮಸ್ಥಳವೆಂದೇ ಪ್ರಸಿದ್ಧವಾಗಿದೆ.

ಪ್ರತಿ ವರ್ಷದಂತೆ ಈ ಸಲವೂ ಇದೇ 28 ರಂದು ಸಂಜೆ 5ಕ್ಕೆ ಶ್ರೀ ವೀರಭದ್ರ ದೇವರ ರಥೋತ್ಸವವು ಜರುಗುವುದು.  ಈ ನಿಮಿತ್ತ ಇದೇ 27ರ ಮಧ್ಯರಾತ್ರಿಯಿಂದಲೇ 11 ಜನ ಶಾಸ್ತ್ರಿಗಳಿಂದ ಭದ್ರಕಾಳಿ ಮಾತೆಗೆ ಮಹಾಮಸ್ತಕಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಅಮ್ಮನಿಗೆ ಕುಂಕುಮಾರ್ಚನೆ, ಮಹಾ ಮಂಗಳಾರತಿ ಜರುಗುವುದು.
ಜನವರಿ 2 ರಂದು ತೇರಿನ ಕಳಸ ಇಳಿಸುವ ಕಾರ್ಯ ನಡೆಯುವುದು.

ಜಾತ್ರಾ ವಿಶೇಷ: ಬೋರೆ, ಬಾಳೆ ಮತ್ತು ಬಳುವೊಲ ಹಣ್ಣುಗಳು ಜಾತ್ರಾ ಯಾತ್ರಾರ್ಥಿಗಳನ್ನು ಆಕರ್ಷಿಸುವುದು ಈ ಜಾತ್ರೆಯ ವಿಶೇಷ.
ಗೊಡಚಿ ಜಾತ್ರಾ ಅಭಿವೃದ್ಧಿಗೆ ನಿರ್ಮಿತವಾದ ಜಾತ್ರಾ ಕಮಿಟಿ ಮತ್ತು ಗೊಡಚಿ ಗ್ರಾಮ ಪಂಚಾಯಿತಿಯು ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಲಿವೆ. ಸಾಕಷ್ಟು ವಸತಿ ಗೃಹಗಳು, ಸುಲಭ ಶೌಚಾಲಯಗಳು, ಕಲ್ಯಾಣ ಮಂಟಪಗಳು, ಸಾಲಾಗಿ ನಿರ್ಮಿಸಿದ ತಾತ್ಕಾಲಿಕ ವ್ಯಾಪಾರಿ ಮಳಿಗೆಗಳು ಯಾತ್ರಿಗಳ ಸಲುವಾಗಿ ಸಿದ್ಧವಾಗಿವೆ. ಭಕ್ತರಿಗಾಗಿ ಜಾತ್ರೆಯ ದಿನ ಸಿಹಿ ಊಟದ ವ್ಯವಸ್ಥೆ ಇರಲಿದೆ.

ಸುತ್ತಲಿನ ಗ್ರಾಮಸ್ಥರು ಚಕ್ಕಡಿ ಬಂಡಿ, ಟ್ರಕ್, ಟ್ಯಾಕ್ಟರ್‌ಗಳ ಮೂಲಕ ಬಂದು ವಿಶಾಲವಾದ ಬಯಲಿನಲ್ಲಿ ಬಿಡಾರ ಹೂಡಿ ಜಾತ್ರೆಗೆ ಅನುವಾಗುತ್ತಾರೆ. ದೂರದ ಜಿಲ್ಲೆ ಮತ್ತು ರಾಜ್ಯಗಳಿಂದಲೂ ಜನ ಬಂದು ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಹಿನ್ನೆಲೆ: ಪ್ರಾಚೀನ ಸಂಸ್ಥಾನಿಕರ ಕಾಲದಲ್ಲಿ ಗೊಡಚಿ ಕ್ಷೇತ್ರವು ತೊರಗಲ್ಲ ಗ್ರಾಮದ ಶಿಂಧೆ ಮನೆತನದ ಒಡೆತನಕ್ಕೆ ಸೇರಿದ್ದಾಗಿತ್ತು. ಶಿಂಧೆ ಮನೆತನದವರು ಎಲ್ಲ ಧರ್ಮಗಳಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದ್ದರು ಎಂಬುದಕ್ಕೆ ಶ್ರೀ ವೀರಭದ್ರ ದೇವರ ಖ್ಯಾತಿಯೇ ಸಾಕ್ಷಿ. ಶಿಂಧೆ ಮನೆತನವು ಮೂಲತಃ ಮರಾಠಿ ಸಂಸ್ಥಾನಿಕರಿಗೆ ಸೇರಿದೆ. ಆದರೂ ಈ ಭಾಗದಲ್ಲಿ ಹೆಚ್ಚಾಗಿರುವ ಲಿಂಗಾಯತ ಸಮಾಜದವರ ಕುಲದೇವತೆ ಎನಿಸಿಕೊಂಡಿರುವ ಶ್ರೀ ವೀರಭದ್ರ ದೇವರಿಗೆ ಮಹತ್ವ ನೀಡಿ ದೇವಸ್ಥಾನದ ಉನ್ನತಿಗಾಗಿ ಶ್ರಮಿಸಿದೆ. ಇಂದಿಗೂ ಈ ಕ್ಷೇತ್ರ ಹಾಗೂ ದೇವಸ್ಥಾನದ ಸಂಪೂರ್ಣ ಒಡೆತನವು ಶಿಂಧೆ ಮನೆತನವರದ್ದೇ ಆಗಿದೆ.

ಜಾತ್ರಾ ವಿಧಿವಿಧಾನಗಳು ಪ್ರಾರಂಭವಾಗುವುದಕ್ಕೆ ಒಂದು ಐತಿಹಾಸಿಕ ಹಿನ್ನೆಲೆ ಇದೆ. ವೀರಭದ್ರೇಶ್ವರನ ರಥೋತ್ಸವ ಜರುಗಿ ಜಾತ್ರಾ ಕಾರ್ಯಕ್ರಮಗಳು ಜ. 2 ರಂದು ಸಮಾರೋಪಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT