ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಬ್ಬರ ಅಕ್ರಮ ದಾಸ್ತಾನು ಪತ್ತೆ: ವಶ

Last Updated 10 ಜೂನ್ 2011, 9:35 IST
ಅಕ್ಷರ ಗಾತ್ರ

ಹುಣಸೂರು: ಅಕ್ರಮ ರಸಗೊಬ್ಬರ ದಾಸ್ತಾನು ಮಾಡಿದ್ದ ತೋಟದ ಮನೆ ಮೇಲೆ ಕೃಷಿ ಸಹಾಯಕ ನಿರ್ದೇಶಕ ಕೆಂಚೇಗೌಡ ಮತ್ತು ತಂಡ ದಾಳಿ ನಡೆಸಿ ಸಂಗ್ರಹಿಸಿದ್ದ 15 ಕ್ವಿಂಟಲ್ ಗೊಬ್ಬರ ವಶಪಡಿಸಿಕೊಂಡಿದ್ದಾರೆ.

 ತಾಲ್ಲೂಕಿನ ಮರದೂರು ಕಾವಲ್ ಗ್ರಾಮದ ಕರಿಗೌಡರ ಮಗ ಶಿವೇಗೌಡ ಅವರ ತೆಂಗಿನ ತೋಟದ ಹೊಗೆ ಸೊಪ್ಪು ಹದಗೊಳಿಸುವ ಬ್ಯಾರನ್‌ನಲ್ಲಿ ಸಂಗ್ರಹಿಸಿದ್ದ ಸಿ.ಎ.ಎನ್. ರಸ ಗೊಬ್ಬರ ವನ್ನು ಕೃಷಿ ಇಲಾಖೆ ಅಧಿಕಾರಿಗಳ ತಂಡ ಜಪ್ತಿ ಮಾಡಿ ವಶಕ್ಕೆ ತೆಗೆದುಕೊಂಡು ತೋಟದ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ತಾಲ್ಲೂಕಿನಾದ್ಯಂತ ತಂಬಾಕಿಗೆ ಅಗತ್ಯ ಬೇಕಿರುವ ಸಿ.ಎ.ಎನ್. ರಸಗೊಬ್ಬರಕ್ಕೆ ಬೇಡಿಕೆ ಹೆಚ್ಚಿದ್ದು, ಖಾಸಗಿ ಅಂಗಡಿಗಳಲ್ಲಿ ಕಂಪನಿ ನಿಗದಿಗೊಳಿಸಿರುವ ಮುದ್ರಿತ ದರಕ್ಕೆ ಮಾರಾಟ ಮಾಡದೆ ವ್ಯಾಪಾರಿಗಳು ಗ್ರಾಮೀಣ ಪ್ರದೇಶದಲ್ಲಿ ತಾತ್ಕಾಲಿಕ ಕಳ್ಳ ಗೋದಾಮು ತೆರೆದು, ಗೂಡ್ಸ್ ಆಟೋಗಳಲ್ಲಿ ರಸ ಗೊಬ್ಬರವನ್ನು ರೈತನ ಮನೆ ಬಾಗಿಲಿಗೆ 2000-2500 ಸಾವಿರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಕೆಂಚೇಗೌಡರು ತಿಳಿಸಿದರು.

ಖಾತ್ರಿ ಪಡಿಸಿಕೊಳ್ಳಿ: ಕಳ್ಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವ ಸಿ.ಎ.ಎನ್. ರಸಗೊಬ್ಬರ ಕಲಬೆರಿಕೆಯಾಗಿದ್ದು, ಯೂರಿಯಾ ಗೊಬ್ಬರ ಮಿಶ್ರಣ ಮಾಡಿ ಸಿ.ಎ.ಎನ್.ಗೊಬ್ಬರ ಎಂದು ಮಾರಾಟ ಮಾಡುತ್ತಿದ್ದಾರೆ. ರೈತರು ರಾತ್ರಿ ಸಮಯ ಖರೀದಿಸಿ ಮೋಸ ಹೋಗ ಬೇಡಿ ಎಂದು ಮನವಿ ಮಾಡಿದರು.

ಪರ್ಯಾಯ: ತಂಬಾಕು ಬೆಳೆಯುವ ರೈತರು ಅಧಿಕ ದರ ನೀಡಿ ಸಿ.ಎ.ಎನ್.ರಸಗೊಬ್ಬರ ನೀಡಬೇಕು ಎಂಬುದನ್ನು ಬಿಟ್ಟು, ರೂ 450ಕ್ಕೆ ಸಿಗುವ ಅಮೋನಿಯಂ ಸಲ್ಫೇಟ್ ರಸಗೊಬ್ಬರ ನೀಡಿ. ಖರ್ಚು ಕಡಿಮೆ ಆಗುತ್ತದೆ ಸಿ.ಎ.ಎನ್.ಗೊಬ್ಬರಕ್ಕೆ ತಾತ್ಕಾಲಿಕ ಬೇಡಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಸಲಹೆ ನೀಡಿದರು.
ಪತ್ತೆ ಕಾರ್ಯ: ತಾಲ್ಲೂಕಿನ ಬನ್ನಿಕುಪ್ಪೆ ಸೇರಿದಂತೆ ಹನಗೋಡು ಭಾಗದಲ್ಲಿ ಕೆಲವು ತೋಟದ ಮನೆಗಳಲ್ಲಿ ರಸಗೊಬ್ಬರ ಮಾರಾಟಗಾರರು ಅಕ್ರಮ ದಾಸ್ತಾನು ಮಾಡಿರುವ ಬಗ್ಗೆ ಮಾಹಿತಿ ಇದ್ದು, ಈ ಕೇಂದ್ರಗಳ ಮೇಲೆ ಸದ್ಯದಲ್ಲೇ ದಾಳಿ ನಡೆಸಲಿದ್ದೇವೆ ಎಂದರು.

ನಾಪತ್ತೆ: ಅಕ್ರಮವಾಗಿ ತೋಟದ ಮನೆಯಲ್ಲಿ ಸಂಗ್ರಹಿಸಿದ್ದ ರಸಗೊಬ್ಬರ ಜಪ್ತಿ ಮಾಡುತ್ತಿರುವ ವಿಷಯ ತಿಳಿದ ತೋಟದ ಮಾಲೀಕ ಶಿವೇಗೌಡ ನಾಪತ್ತೆ ಯಾಗಿದ್ದಾನೆ. ತೋಟದ ಮನೆಯಲ್ಲಿ ಯಾರೂ ಇಲ್ಲ. ಪೊಲೀಸ್ ಸಮ್ಮುಖ ದಲ್ಲಿ ಮಹಜರ್ ಮಾಡಿ ಗೊಬ್ಬರವನ್ನು ಸಹಕಾರಿ ಸಂಘದಿಂದ ಮಾರಾಟ ಮಾಡಿಸುವ ಕ್ರಮ ತೆಗೆದು ಕೊಳ್ಳುವುದಾಗಿ ತಿಳಿಸಿದರು.

ದಾಳಿಯಲ್ಲಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ಗೋವಿಂದರಾಜು ಹೊನ್ನೇಗೌಡ ಮತ್ತು ಇತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT