ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊರನಾಳ, ಬನ್ನಿಹಟ್ಟಿಯಲ್ಲಿ ನೀರಿನ ಸಮಸ್ಯೆ

Last Updated 20 ಫೆಬ್ರುವರಿ 2013, 6:11 IST
ಅಕ್ಷರ ಗಾತ್ರ

ತಾಂಬಾ: ಬೇಸಿಗೆ ಸಮೀಪಿಸಿದರೆ ಸಾಕು ಗೊರನಾಳ ಮತ್ತು ಬನ್ನಿಹಟ್ಟಿ ಗ್ರಾಮದಲ್ಲಿ ನೀರಿನ ಸಮಸ್ಯೆ  ತೀವ್ರವಾಗಿ ಕಾಡುತ್ತದೆ.
ಗ್ರಾಮದ ಸುತ್ತಮುತ್ತಲಿರುವ ಬಾಂದಾರ ಹಳ್ಳಗಳು ಬತ್ತಿ ಹೋಗಿವೆ. ಬರಿದಾಗಿರುವ ಬಾಂದಾರ ಪರಿಣಾಮ ಕೊಳವೆ ಬಾವಿಗಳಲ್ಲಿನ ನೀರು ಪಾತಾಳ ಕಂಡಿದೆ. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿ ಗ್ರಾಮಸ್ಥರಲ್ಲಿ ಆತಂಕ ಉಂಟುಮಾಡಿದೆ.

ನೀರಿನ ಅಲಭ್ಯತೆಯಿಂದಾಗಿ 3-4 ಕಿಲೋ ಮೀಟರ್ ದೂರ ಅಲೆದು ಅವರಿವರ ಖಾಸಗಿ ತೋಟದಿಂದ  ನೀರು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಗ್ರಾಮಕ್ಕೆ ಮಲತಾಯಿ ಧೋರಣೆ ತೋರಿದ್ದಾರೆ ಎಂದು ತಾ.ಪಂ ಸದಸ್ಯ ಸೋಮಣ್ಣ ಗಂಗನಳ್ಳಿ, ಗ್ರಾ.ಪಂ.ಅಧ್ಯಕ್ಷ ಬಸವರಾಜ ಹಟ್ಟಿ,ವೆಂಕಟರಾವ್ ಪಾಟೀಲ ಆರೋಪಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ವಿದ್ಯುತ್ ಕಣ್ಣಾ ಮುಚ್ಚಾಲೆಯೂ ಗ್ರಾಮಸ್ಥರ ಕೋಪಕ್ಕೆ  ಕಾರಣವಾಗಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನೀರಿನ ಬವಣೆ ಇನ್ನಷ್ಟು ತಾರಕಕ್ಕೇರುವಂತೆ ಮಾಡಿದೆ. ವಿದ್ಯುತ್ ಕೊರತೆಯಿಂದ ಸ್ಥಳಿಯರಿಗೆ ಬೋರ್‌ವೆಲ್‌ಗಳ ನೀರು ಗಗನ ಕುಸುಮವಾಗಿ ಹೋಗಿದೆ.

  ಸುಮಾರು ನಾಲ್ಕು ಸಾವಿರ ಜನ ಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ ಕುಡಿಯಲು ನೀರು ಸಿಗದಂತಹ ಪರಿಸ್ಥಿತಿ ನಿರ್ಮಾಣ ಗೊಂಡಿದ್ದು ನೀರಿನ ಬರದಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅಲ್ಲಲ್ಲಿ ಕೈ ಪಂಪುಗಳಿದ್ದರೂ ಕೂಡ  ಗಂಟೆಗಟ್ಟಲೆ ಕೈಪಂಪ್ ಹೊಡೆದರೂ ನೀರು ಸಿಗದೇ ಜನ ಹತಾಶೆಗೊಂಡಿದ್ದಾರೆ. ಕುಡಿಯುವ ನೀರಿನ ಕೊರತೆಯಿಂದ ಕಂಗೆಟ್ಟಿರುವ ಗ್ರಾಮಸ್ಥರಿಗೆ ಅಲ್ಲಲ್ಲಿ ಖಾಸಗಿ ತೋಟಗಳ ಮಾಲೀಕರು ಮಾನವೀಯತೆಯ ದೃಷ್ಟಿಯಿಂದ ನೀರು ಪೂರೈಕೆ ಮಾಡುತ್ತಿದ್ದಾರೆ.

ಹೀಗಾಗಿ ಖಾಸಗಿ ತೋಟಗಳಿಂದ ಸಿಗುವ ನೀರಿಗಾಗಿ  ನಾಲ್ಕು ಕಿ.ಮೀ ಅಲೆದಾಡುವುದು ಅನಿವಾರ್ಯ ವಾಗಿದೆ ಎಂದು ಗ್ರಾಮದ ಶಾಂತಯ್ಯ ಮಠಪತಿ, ಮಹಾದೇವ ತಳವಾರ ಮಲ್ಲನಗೌಡ ಹಟ್ಟಿ ಮುಂತಾದವರ ಅಭಿಪ್ರಾಯವಾಗಿದೆ.

ಒಂದೆಡೆ ನೀರಿಲ್ಲ, ಮತ್ತೊಂದೆಡೆ ವಿದ್ಯುತ್ತಿಲ್ಲ, ಒಟ್ಟಾರೆ ಗೊರನಾಳ ಜನರು ನೀರಿಗಾಗಿ ಅಲೆದಾಡುವುದು ತಪ್ಪ್ಲ್ಲಿಲ. ದಿನ ಬೆಳಗಾದರೆ ವಯೋವೃದ್ಧರು, ಮಕ್ಕಳು, ಮಹಿಳೆಯರು, ಕೊಡ ನೀರಿಗಾಗಿ ದಿನವಿಡೀ ಬೋರವೆಲ್‌ಬಳಿ ಕಾಯುವುದು ಅನಿವಾರ್ಯವಾಗಿದೆ.

ಗ್ರಾಮದ ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳದಿದ್ದರೆ ಗ್ರಾಮಸ್ಥರ ನೇತೃತ್ವದಲ್ಲಿ  ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT