ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಡೆ ಮೇಲೊಂದು ಕೈತೋಟ...

Last Updated 9 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

 ಗೋಡೆ ಮೇಲಿನ ಉದ್ಯಾನ- ಶೈಲಿ ಅನುಸರಿಸಿದರೆ ಕಾಂಪೌಂಡ್ ಮೇಲೆ ನೀರಿಳಿಯುತ್ತದೆ, ಕಾಂಪೌಂಡ್‌ಗೆ ಹಚ್ಚಿದ ಬಣ್ಣ ಕ್ರಮೇಣ ಅಳಿಸಿ ಹೋಗುತ್ತದೆ. ನಿತ್ಯ ಒದ್ದೆಯಾಗುತ್ತಾ ಇರುವುದರಿಂದ ದಿನಕಳೆದಂತೆ ಗೋಡೆ ಕುಸಿಯಲೂಬಹುದು~.
ಇದು ಕಾಂಪೌಂಡ್ ಮೇಲೆ ಕುಂಡ ಅಥವಾ ಬಾಕ್ಸ್‌ನಲ್ಲಿ ಉದ್ಯಾನ ಮಾಡಲು ಯತ್ನಿಸಿದವರ ಆತಂಕದ ನುಡಿ.

`ಗೋಡೆಯೊಳಗೆ

ನೀರಿಳಿದರೆ ಇಂಥ ಅನಾಹುತಗಳಾಗುತ್ತವೆ. ನೀರಿಳಿಯದಂತೆ ಗೋಡೆಯನ್ನು ಸರಿಯಾಗಿ `ಬಂದೋಬಸ್ತ್~ ಮಾಡಿದರೆ, ಗಿಡಗಳಿಗೆ ಹಾಕಿದ ನೀರು ಗೋಡೆಯೊಳಕ್ಕೆ ಸೇರಿಕೊಳ್ಳದೇ ಸರಾಗವಾಗಿ ಹೊರ ಹೋಗಲು ಬೇರೆ ದಾರಿ ತೋರಿದರೆ?~...

ಹೌದು, ಕಾಂಪೌಂಡ್‌ಗೆ ಬಾಕ್ಸ್ ಮಾಡಿಸುವಾಗ ಅಥವಾ ಕುಂಡಗಳನ್ನು ಇಡುವಾಗ ಗೋಡೆ ರಕ್ಷಣೆಗೆ ಕೆಲವು ಕ್ರಮಗಳನ್ನು ಅನುಸರಿಸಬೇಕು. ಮೊದಲು, ಕಾಂಪೌಂಡ್ ಅಥವಾ ಅದರ ಮೇಲೆ ಗಿಡಗಳಿಗಾಗಿ ಬಾಕ್ಸ್ ನಿರ್ಮಿಸುವಾಗಲೇ ಸಿಮೆಂಟ್‌ಗೆ `ಜಲ ನಿರೋಧಕ~ (ವಾಟರ್ ಪ್ರೂಫ್) ಪುಡಿ ಅಥವಾ ದ್ರವವನ್ನು ಮಿಶ್ರ ಮಾಡಿಕೊಳ್ಳಬೇಕು.

ಗಿಡ ನೆಡುವ ಕುಂಡಗಳ ಒಳಭಾಗಕ್ಕೂ ಈ ಜಲನಿರೋದಕ ಪುಡಿ ಮಿಶ್ರಿತ ಸಿಮೆಂಟಿನ ತಿಳಿಯನ್ನು ಲೇಪಿಸಿದರೆ ನೀರು ಗೋಡೆ ಮೇಲೆ ಜಿನುಗುವುದನ್ನು ತಡೆಗಟ್ಟಬಹುದು. ತಾರಸಿಯಲ್ಲಿ ತೋಟ ಮಾಡುವವರೂ ತಾರಸಿಗೆ `ಚುರುಕಿ~ ಹಾಕಿಸಿದ ನಂತರ, ಸಿಮೆಂಟ್ ಪ್ಲಾಸ್ಟರಿಂಗ್ ಮಾಡುವಾಗ ಈ `ಜಲ ನಿರೋಧಕ~ ಪುಡಿ ಅಥವಾ ದ್ರವ ಬಳಸಿದರೆ ಒಳಿತು.


 ಇದರ ಜತೆಗೆ...
ಬಾಕ್ಸ್ ಮತ್ತು ಕುಂಡಗಳ ಕೆಳಗಿನ ರಂಧ್ರಗಳನ್ನು ಯಥಾರೀತಿ ಬಿಡದೆ ಅವುಗಳಿಗೆ ಉದ್ದನೆಯ ಕೊಳವೆ ಜೋಡಿಸಬೇಕು. ಇದರಿಂದ ಹೆಚ್ಚುವರಿ ನೀರು ಕಾಂಪೌಂಡ್‌ನೊಳಕ್ಕೆ ಇಂಗದೆ ಹೊರಕ್ಕೆ ಹರಿದು ಹೋಗುತ್ತದೆ. ಈ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರೆ ಕಾಂಪೌಂಡ್ ಬದಿಯಲ್ಲಿ ಹುಲ್ಲು ಹಾಸು/ಮಣ್ಣಿನ ಹಾಸಿಗೆ ಜಾಗ ಬಿಟ್ಟುಕೊಂಡು, ಅಲ್ಲಿಗೆ ಹೆಚ್ಚುವರಿ ನೀರು ಹರಿಸಬೇಕು. ಇದರಿಂದ ನೀರನ್ನು ಭೂಮಿಗೆ ಇಂಗಿಸಿದಂತಾಗುತ್ತದೆ. ಇಲ್ಲವಾದರೆ ಒಳಚರಂಡಿಗಾದರೂ ಹರಿದುವ ಹೋಗುವಂತೆ ವ್ಯವಸ್ಥೆ ಮಾಡಬಹುದು. ಇಂಥ ರಚನೆಗಳನ್ನೇನಿದ್ದರೂ ಮನೆ ಕಟ್ಟುವ ಆರಂಭದಲ್ಲೇ ಯೋಜನೆಯಲ್ಲಿ
ಸೇರಿಸಿಕೊಳ್ಳಿರಿ.

ಗಿಡಗಳ ಆಯ್ಕೆಯೂ ಮುಖ್ಯ
ಕಾಂಪೌಂಡ್ ಮೇಲೆ ಜೋಡಿಸುವ ಬಾಕ್ಸ್ ಅಥವಾ ಕುಂಡದ ಆಳ 12ರಿಂದ 17 ಇಂಚು. ಇಷ್ಟು ಆಳಕ್ಕೆ ಬೇರು ಬಿಡದಂತಹ ಅಥವಾ ಇರುವಷ್ಟೇ ಜಾಗದಲ್ಲಿ ಹರಡಿಕೊಳ್ಳುವ ಗಿಡಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಇಲ್ಲದಿದ್ದರೆ ಬೇರು ಹರಡಿಕೊಳ್ಳದೇ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಅಥವಾ ಬಾಕ್ಸ್‌ನ ಗೋಡೆ, ಕುಂಡ ಬಿರುಕುಬಿಡುವ, ಒಡೆಯುವ ಅಪಾಯ ಇರುತ್ತದೆ.

ಕುಂಡಗಳಲ್ಲೇ ಹರಡಿಕೊಳ್ಳುವಂತಹ ಗಿಡ, ಬಣ್ಣಬಣ್ಣದ ಜೆರೇನಿಯಂಗಳಂತಹ ಅಲಂಕಾರಿಕ ಸಸ್ಯಗಳನ್ನೂ ಇಲ್ಲಿ ಬೆಳೆಸಬಹುದು. ಹೂವಿನ ಗಿಡ ಬೆಳೆಸುವುದಾದರೆ ಸದಾಕಾಲ ಹೂವು ಬಿಡುವ `ಇಂಪೇಷನ್ಸ್~ ಸೂಕ್ತ. ಒಂದೆರಡು ಬಣ್ಣದ ಹೂವಿನ ಗಿಡಗಳನ್ನು ನೆಟ್ಟರೆ ಪರಾಗ ಸ್ಪರ್ಷ ಕ್ರಿಯೆಯಿಂದಾಗಿ, ಬೇರೆ ಬೇರೆ ಬಣ್ಣದ ಹೂವಿನ ಗಿಡಗಳು ತಾವೇ ತಾವಾಗಿ ಹುಟ್ಟುತ್ತವೆ.

ಈ ಗಿಡದ ಬೀಜಗಳು ಬಹು ಬೇಗ ಸಿಡಿಯುವುದರಿಂದ ಬೀಜ ಸಂಗ್ರಹಣೆ ಕಷ್ಟ. ಹಾಗಾಗಿಯೇ ಇದಕ್ಕೆ `ಅಸಹನೆಯ(ಇಂಪೇಷನ್ಸ್) ಹೂಗಿಡ~ ಎಂದೇ ಹೆಸರು. ಆದರೆ ಬಹು ಬೇಗ ಸಸಿಗಳು ಹುಟ್ಟುವುದರಿಂದ ಸಸ್ಯಾಭಿವೃದ್ಧಿ ಸುಲಭ.

`ಕಾಪೌಂಡ್, ಕುಂಡಗಳಿಗೆ `ಸಂಜೆ ಮಲ್ಲಿಗೆ~ ಅತ್ಯಂತ ಸೂಕ್ತ ಗಿಡ. ಹೆಸರೇ ಹೇಳುವಂತೆ ಸಂಜೆ 4 ಗಂಟೆ ನಂತರ ಅರಳುವ ಈ ಹೂವು ಹಲವಾರು ಬಣ್ಣಗಳಲ್ಲಿರುತ್ತದೆ. ಇವುಗಳನ್ನು ಬಣ್ಣಗಳಿಗೆ ಅನುಗುಣವಾಗಿ ಜೋಡಿಸಬಹುದು. ಮನೆ ತಾರಸಿಯಲ್ಲಿ ಇಂಥ ವಿವಿಧ ಜಾತಿಯ ಮಲ್ಲಿಗೆ, ನಾಲ್ಕಾರು ಬಣ್ಣದ ಇಂಪೇಷನ್ಸ್ ಗಿಡಗಳಿವೆ~ ಎನ್ನುತ್ತಾರೆ ತಾರಸಿ ತೋಟ ರೂಪಿಸುವುದರಲ್ಲಿ ನಿಪುಣರಾಗಿರುವ ಅನುಸೂಯಾ ಶರ್ಮಾ.

ಸಾಧಾರಣವಾಗಿ ಈ ವಿನ್ಯಾಸಗಳು ಮನೆಯ ಮುಂಭಾಗದಲ್ಲಿದ್ದರೆ, ಅವುಗಳಲ್ಲಿ ತುಳಸಿ, ಮರುಗ, ಸೀಮೆ ಧವನ, ಕಾಮ ಕಸ್ತೂರಿ ಗಿಡಗಳನ್ನು ಬೆಳೆಸಬಹುದು. ಕರ್ಣ ಕುಂಡಲ, ಕಾಸ್ಮಾಸ್ ಹೂವಿನ ಗಿಡಗಳು ಸಹ ತುಂಬ ಹೂವು ಬಿಡುವ ಗಿಡಗಳು ಚೆನ್ನಾಗಿ ಬೆಳೆಯುತ್ತವೆ. ಹೆಚ್ಚು ಬಿಸಿಲು ಬೀಳುವ ಜಾಗದಲ್ಲಿ ಕಾಂಪೌಂಡ್ ಇದ್ದರೆ, ಅಲ್ಲಿ ಸೇವಂತಿಗೆ, ಆಸ್ಟರ್ಸ್‌ ಹಾಕಬಹುದು.

ಸ್ವಲ್ಪ ಮನಸ್ಸು ಮಾಡಿದರೆ, ಬಾಕ್ಸ್‌ಗಳಲ್ಲಿ ಪುದೀನ, ಕೊತ್ತಂಬರಿ, ಲೆಟ್ಯೂಸ್, ಪಾಲಕ್ ಬೆಳೆದು ಮನೆಗೆ ತರಕಾರಿಯಾಗಿ ಬಳಸಬಹುದ. ಹರಡಿಕೊಳ್ಳುವ ಗುಣವಿರುವ ಗಿಡಗಳಿಗೆ ಹೆಚ್ಚು ಸ್ಥಳ ಸಿಗುವುದರಿಂದ ಸೊಂಪಾಗಿ ಬೆಳೆಯುತ್ತವೆ. 

ಕಾಂಪೌಂಡ್ ನಡುವೆ ಕಂಬಗಳಿದ್ದರೆ ಅವುಗಳ ಮೇಲೆ `ಗಿರಿ ಕರ್ಣಿಕೆ~ (ಶಂಖ ಪುಷ್ಪಿ) ಹೂವಿನ ಬಳ್ಳಿ ಹಬ್ಬಿಸಬಹುದು. ಇವುಗಳಲ್ಲಿರುವ ಬಿಳಿ, ನೀಲಿ ಹೂಗಳ ಬಣ್ಣ ವೈವಿಧ್ಯ ಅತ್ಯಾಕರ್ಷಕ.

ಉದ್ಯಾನದಲ್ಲಿ ಗಿಡ ನೆಡುವ ಹವ್ಯಾಸ ಬೆಳೆಸಿಕೊಂಡರೆ ನಮ್ಮೆದುರಿಗೆ ನೂರಾರು ಗಿಡಗಳು ತೆರೆದುಕೊಳ್ಳುತ್ತವೆ. ಆದರೆ ನಮ್ಮ ನೋಟ ಚುರುಕಾಗಿರಬೇಕಷ್ಟೇ !

ಗಿಡ ಬೆಳೆಸುವ ರೀತಿ
ಕಾಂಪೌಂಡ್‌ನಲ್ಲಿ ಬೆಳೆಸುವ ಗಿಡಗಳಿಗೆ ಆರಂಭದಲ್ಲಿ ಅಂದರೆ, ಚೆನ್ನಾಗಿ ಬೆಳೆದು ಕುಂಡದ ಭರ್ತಿ ಆಗುವವರೆಗೂ ಸ್ವಲ್ಪ ದ್ರವರೂಪದ ಗೊಬ್ಬರ ತಿಂಗಳಿಗೊಮ್ಮೆ ಕೊಡಬೇಕು. ಒಂದು ವರ್ಷದೊಳಗೆ ಗಿಡಗಳು ಕುಂಡದ ಭರ್ತಿ ಬೆಳೆಯುತ್ತವೆ. 3-4 ವರ್ಷಗಳಿಗೊಮ್ಮೆ ಅಥವ ಗಿಡ ತುಂಬ ಬೆಳೆದಿದೆ ಎನ್ನಿಸಿದಾಗ ಗಿಡಗಳನ್ನು ಬೇರೆ ಕುಂಡಗಳಿಗೆ ವರ್ಗಾಯಿಸಬಹುದು. ಆಗಿಂದಾಗ್ಗೆ ಒಣಗಿದ ಎಲೆಗಳನ್ನು, ಅನವಶ್ಯಕವಾಗಿ ಬೆಳೆದಿರುವ ಹೆಚ್ಚುವರಿ ಭಾಗಗಳನ್ನು ಕತ್ತರಿಸಿ ಗಿಡಗಳು ಸೊಂಪಾಗಿ ಕಾಣುವಂತೆ ಮಾಡುವುದು ಜಾಣತನ.

ಹಗುರ ಕುಂಡ ಉತ್ತಮ
ಕಾಂಪೌಂಡ್ ಮೇಲೆ ಅಥವಾ ಬಾಕ್ಸ್‌ಗಳಲ್ಲಿ ಕುಂಡಗಳನ್ನಿಡುವ ಯೋಚನೆಯಿದ್ದರೆ, ಕಡಿಮೆ ತೂಕದ, ಗಟ್ಟಿಯಾದ ಪ್ಲಾಸ್ಟಿಕ್ ಕುಂಡಗಳನ್ನೇ ಆಯ್ಕೆ ಮಾಡಿಕೊಳ್ಳಿ. ಒಳಭಾಗದಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸ್ಪಾಗ್ನಮ್ ಮಾಸ್ ಅಥವಾ ಕಾಯರ್‌ವಿತ್ (ತೆಂಗಿನ ನಾರಿನಿಂದ ತಯಾರಿಸಿದ ಕಾಂಪೋಸ್ಟ್) ಬೆರೆಸಿದ ಕಾಂಪೋಸ್ಟ್ ಹಾಕಿದಾಗ ಗಿಡಗಳ ಬೆಳವಣಿಗೆ ಸಮರ್ಪಕವಾಗಿರುತ್ತದೆ. ಇದರಿಂದ ಕಾಂಪೌಂಡ್ ಸುರಕ್ಷಿತವಾಗಿರುತ್ತದೆ. ಕುಂಡಗಳಿಗೂ, ಬಾಕ್ಸ್‌ಗಳಿಗೂ ಹೆಚ್ಚಿನ ವ್ಯತ್ಯಾಸವಿಲ್ಲ. ಒಂದು ದೊಡ್ಡ ವ್ಯತ್ಯಾಸವೆಂದರೆ ಕುಂಡಗಳು ಒಡೆಯುತ್ತವೆ. ಬಾಕ್ಸ್‌ಗಳು ಒಡೆಯುವುದಿಲ್ಲ. ಒಮ್ಮೆ ಮಾಡಿಸಿದರೆ, ಹತ್ತಾರು ವರ್ಷಗಳು ಇರುತ್ತವೆ.

ಕುಂಡಗಳಿಗೆ ತುಂಬುವ ರೀತಿಯಲ್ಲೇ ಒಂದು ಭಾಗ ಮಣ್ಣು ಒಂದು ಭಾಗ ಮರಳು ಮತ್ತು ಎರಡು ಭಾಗ ಗೊಬ್ಬರ(1:1:2) ಬೆರೆಸಿ ಹಾಕಬೇಕು. 2-3 ಕುಂಡಗಳನ್ನು ಜೋಡಿಸಿದಷ್ಟು ಉದ್ದ ಅಗಲವಿರುವ ಬಾಕ್ಸ್‌ಗಳಲ್ಲೂ ಇದೇ ಅನುಪಾತದಲ್ಲಿ ಗೊಬ್ಬರ-ಮಣ್ಣು ಬೆರೆಸಬೇಕು.
ಮನೆಯ ಮುಂದಿನ ಗಿಡಗಳು ಅಂದಕ್ಕೆ, ಅಲಂಕಾರಕ್ಕೆ, ಆರೋಗ್ಯಕ್ಕೆ, ಮನೋಲ್ಲಾಸಕ್ಕೆ ಬೆಳೆಯುವುದಷ್ಟೇ ಅಲ್ಲ, ನಾವು ಉಸಿರಾಡಲು ಶುದ್ಧವಾದ ಗಾಳಿಗಾಗಿ ಸಹ.
 
ಬೆಳಗಾದರೆ ಕಾಣುವ ಹಸಿರು ಕಣ್ಣಿಗೆ ತಂಪು. ಹೊರಗಿನಿಂದ ಬರುವ ದೂಳನ್ನು ಇವು ತಡೆ ಹಿಡಿಯುತ್ತವೆ. ಹಾಗೆಂದು ಗಿಡಗಳನ್ನು ಹಾಗೆಯೇ ಬಿಡದಿರಿ. ವಾರಕ್ಕೊಮ್ಮೆ ಅವುಗಳ ಮೇಲಿನ ದೂಳು ತೆಗೆಯಿರಿ. ಇಲ್ಲವೇ ನೀರು ಸಿಂಪಡಿಸಿ. ಆಗ ಎಲೆಗಳು ಹೊಳೆಯುತ್ತವೆ. ವಾತಾವರಣ ಸಹ ತಂಪಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT