ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಲಿಯ ಕಂದ ಬೆಳಕಾಗಿ ಬಂದ...

Last Updated 25 ಡಿಸೆಂಬರ್ 2012, 5:31 IST
ಅಕ್ಷರ ಗಾತ್ರ

ಕೇಕ್, ಪ್ರಾರ್ಥನೆ, ಮೋಂಬತ್ತಿ...
ಕ್ರಿಸ್‌ಮಸ್ ಎಂದ ಕೂಡಲೇ ಮುಖ್ಯವಾಗಿ ನೆನಪಾಗುವ ವಸ್ತುಗಳಿವು. ಇವು ಕೇವಲ ವಸ್ತುಗಳಲ್ಲ; ಬದುಕಿನ ಸರಳತೆಯ, ಮೌಲ್ಯಗಳ ಹಾಗೂ ಸಾಂಪ್ರದಾಯಿಕ ಆಚರಣೆಗಳನ್ನು ಸದಾ ನೆನಪು ಮಾಡಿಕೊಡುವ ರೂಪಕಗಳು ಎನ್ನಬಹುದು!
ಹೀಗೆ ಹೇಳುವುದಕ್ಕೆ ಕಾರಣವೂ ಇದೆ. ಏನೆಂದರೆ...

ಕೇಕ್- ಸಿಹಿ. ಪರಸ್ಪರರೊಂದಿಗೆ ಉತ್ತಮ ಬಾಂಧವ್ಯ ಹೊಂದಬೇಕು. ಸಾಧ್ಯವಾದರೆ ಸಿಹಿಯನ್ನು ಹಂಚಿಕೊಳ್ಳಬೇಕು; ಕಹಿ ನೀಡಬಾರದು, ಕೆಟ್ಟದ್ದನ್ನು ಬಯಸಬಾರದು ಎಂಬ ಸಂದೇಶ ಸಾರುವ ತಿನಿಸು ಕೇಕ್. ಸರ್ವರಿಗೂ ಪ್ರಿಯವಾದ ಕೇಕ್ ವಿಶ್ವಮಾನವತೆಯ ಭಾವನೆ ಬಿತ್ತುವ ರೂಪಕ. ಎಲ್ಲರೊಂದಿಗೂ ಕೇಕ್ ಹಂಚಿ ತಿನ್ನುವುದರಲ್ಲಿ ಧನ್ಯತಾ ಭಾವ ಮೂಡುತ್ತದೆ.

ಪ್ರಾರ್ಥನೆ... ಯಾವ ಧರ್ಮದಲ್ಲಿ ಪ್ರಾರ್ಥಿಸುವುದಿಲ್ಲ ಹೇಳಿ? ಬಹುತೇಕ ಎಲ್ಲ ವಯೋಮಾನದವರಿಗೂ, ವರ್ಗದವರಿಗೂ ಪ್ರಿಯವಾಗುವ ಪ್ರಾರ್ಥನೆಯಲ್ಲಿ ರೀತಿಗಳು ಬೇರೆ ಬೇರೆಯಾದರೂ ಬೇಡಿಕೊಳ್ಳುವ ಸಂದೇಶ ಒಂದೇ ಆಗಿರುತ್ತದೆ. ಅದು- ಎ್ಲ್ಲಲರಿಗೂ ಆ ದೇವರು ಒಳ್ಳೆಯದು ಮಾಡಲಿ ಎಂಬುದು. ಪ್ರಾರ್ಥನೆ ಭಕ್ತಿಗೆ ಗುರುತು.

ಪ್ರಾರ್ಥನೆ ನಮ್ಮ ಅಂತರಂಗದ ಭಾವನೆ, ಬೇಡಿಕೆ, ವೇದನೆಗಳನ್ನು, ದೋಷಗಳನ್ನು ದೇವರಲ್ಲಿ ಮುಕ್ತವಾಗಿ ನಿವೇದಿಸುವುದು. ಲೆಸ್ಸಿಂಗ್ ಎಂಬ ತತ್ವಜ್ಞಾನಿ ಪ್ರಕಾರ, ಭಗವಂತನಿಗೆ ಕಳುಹಿಸಿದ ಕೃತಜ್ಞತಾ ಪೂರ್ಣ ಸ್ಮರಣೆಯೇ ಒಂದು ಪರಿಪೂರ್ಣ ಭಾವವೇ ಪ್ರಾರ್ಥನೆ. ಪ್ರಾರ್ಥನೆಯಲ್ಲಿ ಭೇದವುಂಟೇ? ಸಂಕಟ ಬಂದಾಗ ಒಂದಿಲ್ಲಾ ಒಬ್ಬ ದೇವರನ್ನು ಪ್ರಾರ್ಥಿಸುವುದು ಸಾಮಾನ್ಯವಾಗಿಯೇ ಹೋಗಿದೆ!

ಮೋಂಬತ್ತಿ- ತನ್ನನ್ನು ತಾನೇ ಸುಟ್ಟುಕೊಂಡರೂ ಇತರರಿಗೆ `ಬೆಳಕು' ನೀಡುವ ಮೇಣದಬತ್ತಿಯಲ್ಲಿ ಅದೆಂತಹ ಪ್ರೀತಿಯ ಸಂದೇಶ? ಎಲ್ಲ ಅಹಂಗಳನ್ನು ಬದಿಗಿರಿಸಿ, ಪರೋಪಕಾರಿಯಾಗಿ ಬಾಳಬೇಕು ಎಂಬ ಅರಿವನ್ನು ನೀಡುವ ಮೇಣದಬತ್ತಿಯನ್ನು ಬೆಳಗಿ, ಪ್ರಾರ್ಥಿಸುವುದರಲ್ಲಿ ಭಕ್ತಿಯ ಪ್ರತೀಕ ಅಡಗಿದೆ. ಇಷ್ಟಾರ್ಥ ಸಿದ್ಧಿಸಿದವರೂ ಸಹ ಹರಕೆ ತೀರಿಸಲು ಚರ್ಚ್ ಬಳಿ ಮೋಂಬತ್ತಿ ಬೆಳಗುತ್ತಾರೆ.

- ಇಂತಹ ಹತ್ತಾರು ಸಂದೇಶಗಳನ್ನು ಸಾರಿ ಹೇಳುವ, ಶಾಂತಿ, ಸಹಬಾಳ್ವೆಯ ಮಹತ್ವ ತಿಳಿಸುವ, ಎಲ್ಲ ವರ್ಗದವರಿಗೂ ಇಷ್ಟವಾಗುವ ಹಬ್ಬವೇ `ಕ್ರಿಸ್‌ಮಸ್'.

`ಮಧ್ಯ ಕರ್ನಾಟಕ' ದಾವಣಗೆರೆಯಲ್ಲಿಯೂ ಕ್ರಿಸ್‌ಮಸ್ ಹಬ್ಬವನ್ನು ಇಲ್ಲಿನ ಕ್ರೈಸ್ತಬಾಂಧವರು ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕವಾಗಿ ಆಚರಿಸುತ್ತಾರೆ. ಹಬ್ಬದ ಆಚರಣೆಯ ವಿಧಿವಿಧಾನಗಳಲ್ಲಿ ಪ್ರದೇಶದಿಂದ-ಪ್ರದೇಶಕ್ಕೆ ಅಷ್ಟೇನು ಭಿನ್ನತೆ ಕಂಡುಬರುವುದಿಲ್ಲ. ಭಕ್ತಿಯ ಸಮರ್ಪಣೆಗಾಗಿ ಇಲ್ಲಿಯೂ ಸಾಮೂಹಿಕ ವಿಶೇಷ ಪ್ರಾರ್ಥನೆ ನಡೆಯುತ್ತದೆ. ಇದಕ್ಕಾಗಿ, ದಾವಣಗೆರೆ ನಗರದ ಪಿ.ಜೆ. ಬಡಾವಣೆಯಲ್ಲಿರುವ ಸಂತ ಥಾಮಸರ ದೇವಾಲಯ, ಆಕರ್ಷಕ ವಿದ್ಯುತ್ ಅಲಂಕಾರಗಳಿಂದ ಕೆಲ ದಿನಗಳ ಹಿಂದಿನಿಂದಲೇ ಕಂಗೊಳಿಸುತ್ತಿದೆ.

ಕ್ರಿಸ್‌ಮಸ್ ಆಚರಣೆ ಹೇಗೆ?
ಹಬ್ಬದ ಆಚರಣೆಯನ್ನು ಎರಡು ಭಾಗವಾಗಿ ವಿಂಗಡಿಸಬಹುದು. ಬಾಹ್ಯ ಹಾಗೂ ಧಾರ್ಮಿಕ ಆಚರಣೆ. ಬಾಹ್ಯ ಆಚರಣೆ ಎಂದರೆ, ಮನೆಗಳಲ್ಲಿ ಕ್ರೈಸ್ತ ಬಾಂಧವರು ಬಗೆಬಗೆಯ ಕೇಕ್‌ಗಳನ್ನು, ಕರಿದ ತಿಂಡಿತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಹೊಸ ಬಟ್ಟೆ ತೊಟ್ಟು, ಪೂಜೆ ಸಲ್ಲಿಸುವ ಮೂಲಕ ಪಕ್ಕದ ಮನೆಯವರು, ನೆಂಟರಿಷ್ಟರು, ಸ್ನೇಹಿತರಿಗೆ ಕೇಕ್ ಹಂಚಿ ಸಂಭ್ರಮಿಸುತ್ತಾರೆ. ಚರ್ಚ್‌ನಿಂದ 15-20 ಮಂದಿಯ ಯುವಕರ ತಂಡ ಮನೆ ಮನೆಗಳಿಗೆ ತೆರಳಿ, ಶುಭಾಶಯ ಗೀತೆ ಹಾಡುವ ಮೂಲಕ ಹಬ್ಬದ ಶುಭ ಕೋರುವ ಕಾರ್ಯಕ್ರಮ ನಡೆಯುತ್ತದೆ. ಬಡವರಿಗೆ ಸೀರೆ ಹಂಚಲಾಗುತ್ತದೆ. ಹಬ್ಬದ ದಿನದಂದು, ತಮ್ಮಂತೆಯೇ ಅವರೂ ಹಬ್ಬದ ಊಟ ಮಾಡಲಿ ಎಂದು ಉಳ್ಳವರು ಬಡವರಿಗೆ ಅಕ್ಕಿ, ಬೇಳೆ, ಸಕ್ಕರೆ ವಿತರಿಸುತ್ತಾರೆ. ಕೇಕ್ ನೀಡಿ ಸಿಹಿ-ಸಂಭ್ರಮ ಹಂಚಿಕೊಳ್ಳುತ್ತಾರೆ.

ಆಧ್ಯಾತ್ಮಿಕ ಆಚರಣೆ- ಪಾಪ ನಿವೇದನೆಗೆ ಚರ್ಚ್‌ನಲ್ಲಿ ಹಬ್ಬಕ್ಕೆ ಮುನ್ನ ಒಂದು ದಿನ ವಿಶೇಷ ಅವಕಾಶ ಕಲ್ಪಿಸಲಾಗುತ್ತದೆ. ಡಿ. 24ರಂದು ಮಧ್ಯರಾತ್ರಿ ಚರ್ಚ್‌ನಲ್ಲಿ, ನಡುರಾತ್ರಿ ದೇವರಿಗೆ (ಏಸುವಿಗೆ) ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಕೇಕ್ ವಿತರಣೆಯೂ ನಡೆಯುತ್ತದೆ. ಡಿ. 25ರಂದು ಬೆಳಿಗ್ಗೆ ವಿಶೇಷ ಪೂಜೆ- ಸಾಮೂಹಿಕ ಪ್ರಾರ್ಥನೆ ನಡೆಯುತ್ತದೆ. ಈ ವೇಳೆ, ಕ್ರೈಸ್ತರು ಮಾತ್ರವಲ್ಲದೇ ಇತರ ಧರ್ಮದವರೂ ಸಹ ಪಾಲ್ಗೊಳ್ಳುವುದು ವಿಶೇಷ.

ಆಚರಣೆಯ ಹಿನ್ನೆಲೆ...
ಕ್ರಿಸ್‌ಮಸ್ ದಿನದಂದು ಎಲ್ಲ ಕ್ರೈಸ್ತ ಬಾಂಧವರ ಆಚರಣೆ ಒಂದೇ ಆಗಿರುತ್ತದೆ. ಇದರಲ್ಲಿ ಭಿನ್ನತೆ ಕಂಡುಬರುವುದಿಲ್ಲ ಎಂದು ಸಂತ ಥಾಮಸರ ದೇವಾಲಯದ ಫಾ.ರಾಬರ್ಟ್ ಡಿ'ಮೆಲ್ಲೋ ಹೇಳುತ್ತಾರೆ.

ದೇವರು, ವಿಶ್ವ ನಂತರ ಮನುಷ್ಯನನ್ನು ಸೃಷ್ಟಿಸಿದ. ಮನುಷ್ಯರು, ದೇವರು ಆಶಿಸಿದಂತೆ ಜೀವನ ನಡೆಸಲಿಲ್ಲ. ದೇವರ ವಿರುದ್ಧವಾಗಿ ಪಾಪ ಮಾಡಿದರು. ತಮಗೆ ತೋಚಿದಂತೆ ಜೀವನ ಮಾಡಲು ಶುರುವಿಟ್ಟರು. ದೇವರ ಪ್ರೀತಿ, ಆಜ್ಞೆ ಧಿಕ್ಕರಿಸಿದರು. ಹೀಗಾಗಿ, ಸೃಷ್ಟಿ ಶಾಪಗ್ರಸ್ತ; ಜೀವನ ಕಷ್ಟವೆನಿಸಿತು. ಪಾಪವಿಲ್ಲದೇ ಮನುಷ್ಯ ಬಾಳುವುದ ಕಷ್ಟ ಎಂಬ ಮಟ್ಟಕ್ಕೆ ಪ್ರಪಂಚ ಬಂದಿತು.

ಸ್ವಾರ್ಥ, ಅಹಂಕಾರ, ದಬ್ಬಾಳಿಕೆ ಬೆಳೆಯಿತು. ಹೀಗಾಗಿ, ದೇವರು ಮಾನವರಿಗೆ ಮಾರ್ಗದರ್ಶನ ಮಾಡಲಿ ಎಂದು ಪ್ರವಾದಿಗಳನ್ನು ಕಳುಹಿಸುತ್ತಿದ್ದರು. ಪ್ರವಾದಿಗಳು, ದೇವರ ಆಜ್ಞೆಗಳಿಗೆ ವಿಧೇಯರಾಗಿರಿ. ಪರಸ್ಪರ ಪ್ರೀತಿ, ಗೌರವದಿಂದ ಬಾಳಿರಿ ಎಂದು ಕರೆ ಕೊಟ್ಟಿದ್ದರು. ಮಾನವರು ಇದಕ್ಕೆ ಕಿವಿಗೊಡದೇ ಅಜ್ಞಾನದ ಕತ್ತಲು, ಪಾಪದ ಬಂಧನದಲ್ಲಿ ಜೀವನ ನಡೆಸಲು ಶುರುಮಾಡಿದರು.

ಇದರಿಂದಾಗಿ ದೇವರು ತಾನೇ ಮನುಷ್ಯ ರೂಪದಲ್ಲಿ ಬಂದರು. ದೇವರು, ಮನುಷ್ಯನಾಗಿ ಹುಟ್ಟಿದ ಹಬ್ಬವೇ- ಕ್ರಿಸ್‌ಮಸ್. ಹೀಗಾಗಿ, ಪ್ರಭು ಏಸುವನ್ನು ದೇವಮಾನವ- ರಕ್ಷಕ ಎಂದು ಕರೆಯಲಾಗುತ್ತದೆ ಎಂದು ಫಾದರ್ ರಾಬರ್ಟ್, ಕ್ರಿಸ್‌ಮಸ್ ಆಚರಣೆಯ ಹಿನ್ನೆಲೆಯನ್ನು ವಿವರಿಸಿದರು.

ಯೇಸುಸ್ವಾಮಿ ಮನುಷ್ಯನಾಗಿ ಜನ್ಮತಾಳಿದ್ದು ಕನ್ಯಾ ಮರಿಯಮ್ಮ ಅವರಿಗೆ. ದನದ ಕೊಟ್ಟಿಗೆಯಲ್ಲಿ ಜನಿಸಿದ್ದರಿಂದ `ಗೋದಲಿ'ಯಲ್ಲಿ ಮಗುವನ್ನು ಇರಿಸಲಾಗಿತ್ತು. ಅವರು ಬಡವನಾಗಿ, ದೀನರಾಗಿ ಜನಿಸುವ ಮೂಲಕ ದೇವರು ಪ್ರಪಂಚವೇ ನಶ್ವರ ಎಂದು ಸಾರಿದರು; ಬಡತನದ ಹಿರಿಮೆಯನ್ನು ತೋರಿಸಿಕೊಟ್ಟಿದ್ದಾರೆ. ಹಣ, ಆಸ್ತಿ, ಅಹಂಕಾರವನ್ನು ನಾವು ಬರಿದು ಮಾಡಿಕೊಂಡಾಗ ದೇವರ ಪ್ರೀತಿಗೆ ಪಾತ್ರವಾಗುತ್ತೇವೆ ಎಂಬುದು ಇದರ ಸಂದೇಶ ಎಂದು ರಾಬರ್ಟ್ ತಿಳಿಸುತ್ತಾರೆ.

ಹೀಗಾಗಿ, ಕ್ರಿಸ್‌ಮಸ್ ದಿನದಂದು ಚರ್ಚ್ ಬಳಿ `ಗೋದಲಿ' ಮಾದರಿಯನ್ನು ನಿರ್ಮಾಣ ಮಾಡಲಾಗುತ್ತದೆ. ಪೂಜ್ಯ ಭಾವನೆಯಿಂದ ಕಾಣಲಾಗುತ್ತದೆ.

ಅಂತರಂಗದ ಶ್ರೀಮಂತಿಕೆಗೆ `ಬೆಲೆ ಕೊಟ್ಟವರು...
ನಮ್ಮ ದಾರ್ಶನಿಕರು ಬಾಹ್ಯ ಐಶ್ವರ್ಯಕ್ಕೆ ಬೆಲೆ ಕೊಟ್ಟವರಲ್ಲ. ಅಂತರಂಗದ ಶ್ರೀಮಂತಿಕೆಗೆ ಪ್ರಾಧಾನ್ಯತೆ ನೀಡಿದವರು. ಯಹೂದ್ಯರು ರೋಮನ್ನರ ಗುಲಾಮರಾಗಿದ್ದ ಕಾಲದಲ್ಲಿ ಇಂದಿಗೆ ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ಪಶ್ಚಿಮಏಷ್ಯಾದ ಪ್ಯಾಲಸ್ಟೀನ್ ದೇಶದ ಬೆತ್ಲಹೇಮ್ ನಗರದಲ್ಲಿ ಬಡ ಕುಟುಂಬದಲ್ಲಿ ಏಸು ಜನನವಾಯಿತು. ಬಡ ಬಡಗಿಯ ಮಗನಾಗಿದ್ದ ಅವರ ತತ್ವಬೋಧನೆಗೆ ಇಡೀ ಲೋಕವೇ ತಲೆಬಾಗಿತು.

ಅವರು ಶೋಷಿತರ ಪರವಾಗಿದ್ದರು. ಹಾಗೆಂದು, ಶ್ರೀಮಂತರ ವಿರೋಧಿ ಆಗಿರಲಿಲ್ಲ. ತ್ಯಾಗದಿಂದ ಶ್ರೀಮಂತಿಕೆ ಹೊಂದಬೇಕು. ಸುಖಲೋಲುಪತೆಗಾಗಿ ಶ್ರೀಮಂತಿಕೆಯಲ್ಲ ಎಂಬುದು ಅವರ ನಿಲುವಾಗಿತ್ತು; ಅದನ್ನೇ ಬೋಧಿಸಿದರು ಕೂಡ.

ಹಬ್ಬದಲ್ಲಿ ದಾನಕ್ಕೂ ಮಹತ್ವ
ಕ್ರಿಸ್‌ಮಸ್ ಪದವು `ಅಭಿಷೇಕಿಸಲ್ಪಟ್ಟವನಿಗೆ ಅಭಿನಂದನೆ' ಎಂಬ ಅರ್ಥವನ್ನೂ ಹೊಂದಿದೆ. ಕ್ರಿಸ್ತನು ತನ್ನ 12 ಮಂದಿ ಶಿಷ್ಯರನ್ನು ಲೋಕಲ್ಯಾಣಾರ್ಥವಾಗಿ ಕಳುಹಿಸುವಾಗ ನೀಡಿದ ಜ್ಞಾನೋಪದೇಶದ- ಸರಳ, ಸಾತ್ವಿಕ ಹಾಗೂ ಸೇವಾಮನೋಭಾವದ ಜೀವಿತಕ್ಕೆ ಆದ್ಯತೆ ನೀಡಬೇಕು ಎಂಬುದಾಗಿತ್ತು. ಆತ್ಮಕ್ಕೆ ಆದಾಯವಾಗುವಂತಹ ಪ್ರತಿಫಲ ಅಪೇಕ್ಷಿಸಿರಿ. ಪರಹಿತ ಸಾಧನೆ, ಇತರರ ಕೊರತೆಗಳ ನೀಗಿಸುವ ದಾನ ಸುಗಂಧ ದ್ರವ್ಯದಂತೆ ದೇವರಿಗೆ ಸಮರ್ಪಿತ ಎಂದು ತಿಳಿಸಿದ್ದರು. ಹೀಗಾಗಿ, ದಾನಕ್ಕೂ ಹಬ್ಬದ ಸಂದರ್ಭದಲ್ಲಿ ಮಹತ್ವವಿದೆ.

`ಸಾಂಟಾಕ್ಲಾಸ್' ಬಗ್ಗೆ
ಸಾಂಟಾಕ್ಲಾಸ್, ಕ್ರೈಸ್ತಧರ್ಮದ ಜಾನಪದ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ವ್ಯಕ್ತಿ. ಮಕ್ಕಳಿಗೆ, ಸಾಂಟಾಕ್ಲಾಸ್ ಪ್ರೀತಿಯ ಅಜ್ಜ. ಕ್ರಿಸ್‌ಮಸ್ ಹಿಂದಿನ ದಿನ, ಹಿಮಜಿಂಕೆಗಳಿರುವ ತನ್ನ ಗಾಡಿಯಲ್ಲಿ ಹಾರುತ್ತಾ ಎಲ್ಲರ ಮನೆಗೆ ತೆರಳುವ ಸಾಂಟಾಕ್ಲಾಸ್, ಅಲ್ಲಿರುವ ಮಕ್ಕಳಿಗೆ ಉಡುಗೊರೆ ನೀಡುತ್ತಾನೆ ಎಂದು ನಂಬಲಾಗಿದೆ.

ನಕ್ಷತ್ರ ಮಾದರಿ ತೂಗು ಹಾಕುವುದು ಏಕೆ?
ಏಸುಸ್ವಾಮಿ ಹುಟ್ಟಿದಾಗ, ಕುರಿ ಕಾಯುವವರಿಗೆ ಆಕಾಶದಲ್ಲಿ ಬೆಳಕು ಕಾಣಿಸಿತು. ಆ ಬೆಳಕಿನಲ್ಲಿ ದೇವದೂತರು ಕಾಣಿಸಿಕೊಂಡು, ಏಸು ಹುಟ್ಟಿದ ಸಂದೇಶ ನೀಡಿದರು. ದೂರದ ದೇಶಗಳಲ್ಲಿನ  ಮೂವರು ಜ್ಯೋತಿಷಿಗಳಿಗೆ ಆಕಾಶದಲ್ಲಿ ನಕ್ಷತ್ರದ ಚಿಹ್ನೆ ಕಾಣಿಸುತ್ತದೆ. ಚಲಿಸುತ್ತಿದ್ದ ಆ ನಕ್ಷತ್ರದ ದಿಕ್ಕನ್ನು ಹಿಂಬಾಲಿಸಿ ಬಂದ ಜ್ಯೋತಿಷಿಗಳು, ಏಸು ಕ್ರಿಸ್ತ ಜನಿಸಿದ ಪ್ರದೇಶಕ್ಕೆ ಬಂದು ನಕ್ಷತ್ರ ನಿಂತಿದ್ದನ್ನು ಗಮನಿಸುತ್ತಾರೆ. ಮಗುವಿಗೆ (ಏಸು) ಅವರು ತಾವು ತಂದಿದ್ದ ಚಿನ್ನ, ದೂಪ ಹಾಗೂ ರಕ್ತಬೋಳವನ್ನು ಕೊಟ್ಟು ಹೋದರು. ಈ ಹಿನ್ನೆಲೆಯಲ್ಲಿ, ಕ್ರಿಸ್‌ಮಸ್ ಸಂದರ್ಭದಲ್ಲಿ ನಕ್ಷತ್ರದ ಮಾದರಿಗಳನ್ನು ಮನೆಗಳು ಹಾಗೂ ಚರ್ಚ್‌ಗಳಲ್ಲಿ ತೂಗು ಹಾಕಲಾಗುತ್ತದೆ ಎನ್ನುತ್ತಾರೆ ಫಾ.ರಾಬರ್ಟ್.

* ಎಲ್ಲೆಲ್ಲಿ ಯಾವ್ಯಾವ ಚರ್ಚ್?
ರೋಮನ್ ಕ್ಯಾಥೋಲಿಕ್ ಹಾಗೂ ಪ್ರೊಟೆಸ್ಟೆಂಟರು ಸೇರಿ ಜಿಲ್ಲೆಯಲ್ಲಿ ಆರು ಸಾವಿರಕ್ಕೂ ಹೆಚ್ಚು ಕ್ರೈಸ್ತ ಬಾಂಧವರು ಇದ್ದಾರೆ ಎಂಬುದು ಅಂದಾಜು. ದಾವಣಗೆರೆ ತಾಲ್ಲೂಕೊಂದರಲ್ಲಿಯೇ ಒಂದೂವರೆ ಸಾವಿರಕ್ಕೂ ಹೆಚ್ಚು ರೋಮನ್ ಕ್ಯಾಥೋಲಿಕ್ ಪಂಗಡದವರು ಇದ್ದಾರೆ. ರೋಮನ್ ಕ್ಯಾಥೋಲಿಕ್ ಪಂಗಡಕ್ಕೆ ಸೇರಿದವರು ಸಂಪ್ರದಾಯಗಳನ್ನು ಪಾಲಿಸುತ್ತಾರೆ. ಪೋಪ್ ಧರ್ಮಗುರುವನ್ನು ನಂಬುತ್ತಾರೆ. ಆಚರಣೆ ಮುಂದುವರಿಸಿಕೊಂಡು ಬಂದಿದ್ದಾರೆ.

ಸಂತ ಜೋಸೆಫ್, ಸಂತ ಥಾಮಸ್, ಹರಿಹರದ ಆರೋಗ್ಯ ಮಾತೆ, ಹೊನ್ನಾಳಿಯಲ್ಲಿ ಕ್ರೈಸ್ಟ್ ದ ರಿಡೀಮರ್ ಚರ್ಚ್, ಚನ್ನಗಿರಿಯಲ್ಲಿ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್, ಹರಪನಹಳ್ಳಿಯಲ್ಲಿ ನಿರ್ಮಲ ಮಾತೆ, ಜಗಳೂರಿನಲ್ಲಿ ಹೋಲಿ ಸ್ಪಿರಿಟ್ ಚರ್ಚ್ ಇದೆ. ಇದಲ್ಲದೇ, ದಾವಣಗೆರೆ ನಗರದಲ್ಲಿ ಫುಲ್ ಗಾಸ್ಪೆಲ್ ಚರ್ಚ್ ಇದೆ. ಜಯನಗರದಲ್ಲೊಂದು ಚರ್ಚ್ ಇದೆ.
ನಗರದಲ್ಲಿರುವ ಸಂತಥಾಮಸರ ಚರ್ಚ್‌ನ ಈಗಿರುವ ಕಟ್ಟಡ 2003ರಲ್ಲಿ ನಿರ್ಮಾಣವಾಗಿದೆ. 75 ವರ್ಷಗಳಿಂಲೂ ಇಲ್ಲಿ, ಗುರುಗಳು ವಾಸ ಮಾಡಲು ಶುರು ಮಾಡಿದರು ಎನ್ನುತ್ತಾರೆ ಹಿರಿಯರು.

ಶಾಂತಿ, ಸಹಬಾಳ್ವೆ ನೆಲೆಸಲಿ...
ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲಿಯೂ ನೆಲೆಸಲಿ. ಶಾಂತಿ, ಪ್ರೀತಿ, ಸಮಾಧಾನ, ಐಕ್ಯತೆ, ಸಕಾರಾತ್ಮಕ ಗುಣಗಳನ್ನು ಮೈಗೊಡಿಸಿಕೊಂಡು ರಾಜಕೀಯ, ಧಾರ್ಮಿಕ ತಾರತಮ್ಯ ತೊಡೆದು ಹಾಕಿ, ಸಹಬಾಳ್ವೆಯಿಂದ ಇರಬೇಕು. ಅಹಂಕಾರದ ಭಾವ ತೊಲಗಿ, ಪರೋಪಕಾರದ ಗುಣ ಬರಲಿ.
- ಫಾ.ರಾಬರ್ಟ್ ಡಿಮೆಲ್ಲೋ, ಸಂತ ಥಾಮಸರ ದೇವಾಲಯ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT