ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾಮಿಗೆ ಬೆಂಕಿ- ಕೋಟ್ಯಂತರ ರೂಪಾಯಿ ನಷ್ಟ

Last Updated 28 ಜುಲೈ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬ್ಯಾಟರಾಯಪುರ ಬಳಿಯಟಿಂಬರ್ ಯಾರ್ಡ್‌ನಲ್ಲಿರುವ ಕೊರಿಯರ್ ಕಂಪೆನಿಯ ಗೋದಾಮಿಗೆ ಶನಿವಾರ ಬೆಳಿಗ್ಗೆ ಬೆಂಕಿ ಹೊತ್ತಿಕೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಟಿಂಬರ್‌ಯಾರ್ಡ್‌ನ ಒಂದನೇ ಮುಖ್ಯರಸ್ತೆಯಲ್ಲಿ ಮನೋಜ್ ಕಾರ್ಗೋ ಕ್ಯಾರಿಯರ್ ಲಿಮಿಟೆಡ್ ಎಂಬ ಕೊರಿಯರ್ ಕಂಪೆನಿ ಇದೆ. ಅದರ ಗೋದಾಮಿನಲ್ಲಿ ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತು. ಸ್ಥಳೀಯರು ನೀಡಿದ ಮಾಹಿತಿಯಿಂದ ಕೂಡಲೇ 19 ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಸಂಜೆ ನಾಲ್ಕು ಗಂಟೆವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಗೋದಾಮಿನಲ್ಲಿ ದಟ್ಟ ಹೊಗೆ ಆವರಿಸಿದ್ದರಿಂದ ಕಾರ್ಯಾಚರಣೆ ವೇಳೆ ಪೊಲೀಸ್ ಸಿಬ್ಬಂದಿ ಮತ್ತು ಗೋದಾಮಿನ ನೌಕರರೊಬ್ಬರು ಉಸಿರುಗಟ್ಟಿ ಅಸ್ವಸ್ಥಗೊಂಡಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಪೊಲೀಸರು ತಿಳಿಸಿದರು.

`ಕೆಲವರು ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನುತ್ತಾರೆ. ಮತ್ತೆ ಕೆಲವರು ದೀಪದ ಕಿಡಿಯಿಂದ ಅನಾಹುತ ಸಂಭವಿಸಿದೆ ಎಂದು ಹೇಳುತ್ತಿದ್ದಾರೆ. ಆದರೆ, ಖಚಿತ ಕಾರಣ ಗೊತ್ತಾಗಿಲ್ಲ~ ಎಂದು ಮುಖ್ಯ ಅಗ್ನಿಶಾಮಕ ಅಧಿಕಾರಿ ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

 `ಕಂಪ್ಯೂಟರ್ ಉಪಕರಣಗಳು, ಪೀಠೋಪಕರಣಗಳು, ಕೊರಿಯರ್ ಪೆಟ್ಟಿಗೆಗಳು ಸೇರಿದಂತೆ 5 ರಿಂದ 10 ಕೋಟಿ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ಕಂಪೆನಿ ಮಾಲೀಕ ಪಿ.ಆರ್.ಬಾಲಾಜಿ ಅವರು ಹೇಳಿದ್ದಾರೆ. ಈ ಬಗ್ಗೆ ವಿಚಾರಣೆ ನಡೆಸಿ ನಷ್ಟದ ಪ್ರಮಾಣವನ್ನು ಖಚಿತಪಡಿಸಲಾಗುವುದು~ ಎಂದು ಮಾಹಿತಿ ನೀಡಿದರು.

`ಕಟ್ಟಡ ಇತ್ತೀಚೆಗಷ್ಟೆ ನೀರ್ಮಾಣವಾಗಿರುವುದರಿಂದ ಶಾರ್ಟ್ ಸರ್ಕಿಟ್‌ನಿಂದ ಅವಘಡ ಸಂಭವಿಸಿರುವ ಸಾಧ್ಯತೆ ಕಡಿಮೆ. ಗೋದಾಮಿನಲ್ಲಿ ಅಲಂಕಾರಿಕ ವಸ್ತುಗಳು, ತಿನ್ನರ್ ಸೇರಿದಂತೆ ಹೆಚ್ಚಿನ ಪ್ರಮಾಣದಲ್ಲಿ ರಸಾಯನಿಕ ವಸ್ತುಗಳಿದ್ದವು. ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಬಹುದು. ತನಿಖೆ ನಂತರ ಸತ್ಯಾಂಶ ತಿಳಿಯಲಿದೆ~ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ತಾಂತ್ರಿಕ ನಿರ್ದೇಶಕ ಹಂಪಗೋಳ್ ತಿಳಿಸಿದರು. ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT