ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋದಾವರಿ, ಕೃಷ್ಣಾ ನದಿ ಜೋಡಣೆ...

ಸುದ್ದಿ ವಿವರಣೆ
Last Updated 20 ಸೆಪ್ಟೆಂಬರ್ 2015, 19:45 IST
ಅಕ್ಷರ ಗಾತ್ರ

ಗೋದಾವರಿ ಮತ್ತು ಕೃಷ್ಣಾ ನದಿ ಜೋಡಿಸುವ ಯೋಜನೆಯು ಆಂಧ್ರಪ್ರದೇಶದಲ್ಲಿ ಕಳೆದ ವಾರ ಕಾರ್ಯಗತಗೊಳ್ಳುವ ಮೂಲಕ, ಹಲವು ದಶಕಗಳ ದೊಡ್ಡ ಕನಸೊಂದು ನನಸಾಗಿದೆ. ದೇಶದ ಮೊದಲ ನದಿ ಜೋಡಣೆ ಯೋಜನೆ ಇದಾಗಿದೆ. ಗೋದಾವರಿ ನದಿ ಯಿಂದ ಕೃಷ್ಣಾ ನದಿಗೆ  80 ಟಿಎಂಸಿ ಅಡಿಗಳಷ್ಟು (80 ಸಾವಿರ ದಶಲಕ್ಷ ಘನ ಅಡಿಗಳಷ್ಟು ನೀರನ್ನು  (thousand million cubic feet –tmc) ಹರಿಸುವ ಯೋಜನೆ ಇದಾಗಿದೆ.

ದೇಶದ ಹಲವು ನದಿಗಳನ್ನು ಪರಸ್ಪರ ಜೋಡಿಸುವ ಮೂಲಕ ಬರ ನೀಗಿಸುವ, ಕುಡಿಯುವ ನೀರು ಪೂರೈಸುವ, ಕೃಷಿ ಅಗತ್ಯ ಈಡೇರಿಸುವ ಮಹತ್ವಾಕಾಂಕ್ಷೆಯ ಯೋಜನೆ ಬಗ್ಗೆ ಹಲವು ದಶಕಗಳಿಂದ ಕನಸು ಕಾಣಲಾಗುತ್ತಿತ್ತು. ಪಟ್ಟಿಸೀಮಾ ಏತ ನೀರಾವರಿ ಯೋಜನೆ ಕಾರ್ಯಾರಂಭ ಮಾಡುವ ಮೂಲಕ, ಗೋದಾವರಿ ನದಿಯು ಕೃಷ್ಣಾ ನದಿ ಜತೆ ಔಪಚಾರಿಕವಾಗಿ ಜೋಡಣೆಗೊಂಡಂತೆ ಆಗಿದೆ.

2014ರ ಜೂನ್‌ ತಿಂಗಳಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಚಂದ್ರಬಾಬು ನಾಯ್ಡು ಸರ್ಕಾರವು ಈ ಯೋಜನೆಯನ್ನು ಯುದ್ಧೋಪಾದಿ ಯಲ್ಲಿ ಕೈಗೊಂಡಿತ್ತು. ಒಂದು ವರ್ಷದಲ್ಲಿ ಈ ಯೋಜನೆ ಪೂರ್ಣಗೊಳಿಸಲು ಮೇಘಾ ಎಂಜಿನಿಯರಿಂಗ್‌ ಆಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ (ಎಂಇಐಎಲ್‌) ಕಾಲಮಿತಿಯನ್ನು ವಿಧಿಸಿತ್ತು. ಉದ್ಯಮದ ಅಂದಾಜಿನ ಪ್ರಕಾರವೇ, ಈ ಯೋಜನೆಗೆ ಅಗತ್ಯ ವಾದ ಕೊಳವೆ ಮತ್ತು ಮೋಟಾರ್‌ ಗಳನ್ನು ಅಳವಡಿಸಲು ಕನಿಷ್ಠ 2 ವರ್ಷಗಳಾದರೂ ಬೇಕಾಗಿತ್ತು.

ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕರು ಹಗಲು ರಾತ್ರಿ ಶ್ರಮಿಸಿ ಈ ಯೋಜನೆಯನ್ನು ಅಲ್ಪಾವಧಿಯಲ್ಲಿ ಕಾರ್ಯಗತಗೊಳಿಸಿದ್ದಾರೆ. ಬ್ರೆಜಿಲ್‌, ಚೀನಾಗಳಿಂದ ಪಂಪ್‌ಸೆಟ್‌ಗಳನ್ನು ಆಮದು ಮಾಡಿಕೊಳ್ಳಲಾಗಿದ್ದು, ಕೆಲ ಬಿಡಿಭಾಗಗಳನ್ನು ಬಿಎಚ್‌ಇಎಲ್‌ನಿಂದಲೂ ಪಡೆಯಲಾಗಿದೆ.

ಕೃಷ್ಣಾ ಕೊಳ್ಳದ ಜನರ ನೀರಿನ ಅಗತ್ಯ ಪೂರೈಸಲು ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶ ಸರ್ಕಾರಗಳ ಮಧ್ಯೆ ಒಪ್ಪಂದ ಏರ್ಪಟ್ಟಿತ್ತು.  ಈ ಎರಡೂ ನದಿಗಳ ಜೋಡಣೆಯಿಂದ ಆಂಧ್ರಪ್ರದೇಶದ  ತೀವ್ರ ಬರಪೀಡಿತ  ಜಿಲ್ಲೆಗಳ ನೀರಿನ ಅಗತ್ಯ ಪೂರೈಸಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ವಿಜಯವಾಡಾ ಜಿಲ್ಲೆಯ ಮತ್ತು   ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಅಮರಾವತಿ ರಾಜಧಾನಿಯ ಕುಡಿಯುವ ನೀರಿನ ಅಗತ್ಯವನ್ನೂ ಈ ಯೋಜನೆ ಪೂರೈಸಲಿದೆ.

ಕೃಷ್ಣಾ, ಗುಂಟೂರು, ಪ್ರಕಾಸಂ, ಕರ್ನೂಲ್‌, ಕಡಪಾ, ಅನಂತಪುರ ಮತ್ತು ಚಿತ್ತೂರು ಜಿಲ್ಲೆಗಳ ಸಾವಿರಾರು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಅಂದಾಜು 17 ಲಕ್ಷ ಎಕರೆಗಳಷ್ಟು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಮತ್ತು ಇದರಿಂದ ವರ್ಷದಲ್ಲಿ ಎರಡು ಬೆಳೆ ಬೆಳೆಯಲು ಸಾಧ್ಯವಾಗಲಿದೆ.

ನೂರಾರು ಹಳ್ಳಿಗಳ ಕುಡಿಯುವ ನೀರು ಪೂರೈಸುವ ಸಮಸ್ಯೆಯೂ ದೂರವಾ ಗಲಿದೆ. ಪಟ್ಟಿಸೀಮಾ ಯೋಜನೆ ಎಂದೇ ಇದು ಹೆಸರಾಗಿದೆ. ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಇದಕ್ಕಾಗಿ ಏತ ನೀರಾವರಿ ಯೋಜನೆ ಯನ್ನು  ₹1,300 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇಲ್ಲಿ ತಲಾ 5,300 ಅಶ್ವಶಕ್ತಿಯ (ಎಚ್‌ಪಿ) 24 ಪಂಪ್‌ ಸೆಟ್‌ಗಳನ್ನು ಅಳವಡಿಸಲಾಗಿದೆ. ಇವುಗಳ ನೀರು ಎತ್ತುವ ಸಾಮರ್ಥ್ಯವು 354 ಕ್ಯೂಸೆಕ್‌ನಷ್ಟಿದೆ. ಗೋದಾವರಿ ನದಿ ನೀರಿನ 14 ಅಡಿಗಳಿಗೆ ತಲುಪಿದಾಗ ಪಂಪ್‌ಸೆಟ್‌ಗಳು ಸ್ವಯಂ ಚಾಲಿತವಾಗಿ ನೀರು ಮೇಲೆತ್ತಲಿವೆ.

ಪಂಪ್‌ಗಳ ಮೂಲಕ ಎತ್ತಲಾಗುವ ನೀರನ್ನು  2 ಕಿ. ಮೀ ದೂರದವರೆಗೆ ಕೊಳವೆಗಳಲ್ಲಿ ಸಾಗಿಸಿ, ಬಹು ಉದ್ದೇಶದ ಪೋಲವರಮ್‌ ಯೋಜನೆ ಬಲದಂಡೆಯ ನಾಲೆಗೆ ಹರಿಸಲಾಗು ತ್ತಿದೆ. ಅಲ್ಲಿಂದ ಈ ನೀರು ಕೃಷ್ಣಾ ಜಿಲ್ಲೆಯ ಇಬ್ರಾಹಿಂಪಟ್ನಂ ಬಳಿ ಕೃಷ್ಣಾ ನದಿಗೆ ಸೇರಲಿದೆ.

ಟೀಕೆ: ಇದೊಂದು ವ್ಯರ್ಥ ಯೋಜನೆ ಎಂದು ಅನೇಕರು ಟೀಕಿಸಿದ್ದೂ ಇದೆ. ಯೋಜನೆಗೆ ದುಂದು ವೆಚ್ಚ ಮಾಡಲಾಗಿದೆ. ದೊಡ್ಡ ಪ್ರಮಾಣದ ಭ್ರಷ್ಟಾ ಚಾರವೂ ನಡೆದಿದೆ ಎನ್ನುವ ಆರೋಪಗಳೂ ಕೇಳಿ ಬಂದಿವೆ. ರಾಷ್ಟ್ರೀಯ ಯೋಜನೆ:  ಮಧ್ಯ ಪ್ರದೇಶದ ಕೆನ್‌ ಮತ್ತು ಉತ್ತರ ಪ್ರದೇಶದ  ಬೆತ್ವಾ ನದಿ ಜೋಡಣೆಯು ರಾಷ್ಟ್ರೀಯ ಮೊದಲ ನದಿ ಜೋಡಣೆ ಯೋಜನೆಯಾಗಿದ್ದು, ಇದೇ ಡಿಸೆಂಬರ್‌ನಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಈ ಯೋಜನೆಗೂ ಮುಂಚೆಯೇ ಚಂದ್ರಬಾಬು ನಾಯ್ಡು ಅವರು ತಮ್ಮ ಕನಸನ್ನು ದಾಖಲೆಯ ಎಂಟು ತಿಂಗಳಲ್ಲಿ ನನಸು ಮಾಡಿಕೊಂಡಿದ್ದಾರೆ.

ದೇಶದ ನದಿಗಳ ಜೋಡಣೆ ಬಗ್ಗೆ 200 ವರ್ಷಗಳ ಹಿಂದೆಯೇ ಬ್ರಿಟನ್ನಿನ ಎಂಜಿನಿಯರ್‌ ಸರ್‌ ಅರ್ಥರ್‌ ಕಾಟನ್‌ ಕನಸು ಕಂಡಿದ್ದರು. ಖ್ಯಾತ ಎಂಜಿನಿ ಯರ್‌ ಮತ್ತು ರಾಜಕಾರಣಿಯೂ ಆಗಿದ್ದ ಡಾ. ಕೆ. ಎಲ್‌. ರಾವ್ ಅವರು ಈ ಕನಸಿಗೆ 50 ವರ್ಷಗಳ ಹಿಂದೆ ಇನ್ನಷ್ಟು  ಜೀವ ತುಂಬಿದ್ದರು. ರಾಜ್ಯದಲ್ಲಿ ನದಿಗಳ ಜೋಡಣೆ ಬಗ್ಗೆ ಟಿಡಿಪಿ ಸ್ಥಾಪಕ ಎನ್‌.ಟಿ. ರಾಮರಾವ್‌ ಮತ್ತು ಮಾಜಿ ಮುಖ್ಯಮಂತ್ರಿ ವೈಎಸ್‌ ರಾಜಶೇಖರ್‌ ರೆಡ್ಡಿ ಅವರೂ ಈ ಬಗ್ಗೆ ಹೆಚ್ಚು ಆಸಕ್ತಿ ತಳೆದಿದ್ದರು. ರಾಷ್ಟ್ರೀಯ ಮಟ್ಟದಲ್ಲಿ ನದಿ ಜೋಡಣೆಯು ಉತ್ತರ ಭಾರತದಲ್ಲಿ ಲಕ್ಷಾಂತರ ಜನರ ಬಾಳು ಬೆಳಗಲಿದೆ.

ದೇಶದಾದ್ಯಂತ 37 ನದಿಗಳನ್ನು 30 ಸಂಪರ್ಕಗಳ ಮೂಲಕ ಜೋಡಿಸಿ, 14,900 ಕಿ. ಮೀಗಳಷ್ಟು ದೂರದ ನಾಲೆಗಳ ಮೂಲಕ 174 ಶತಕೋಟಿ ಘನ ಮೀಟರ್‌ಗಳಷ್ಟು (billion cubic metres – BCM) ನೀರನ್ನು ಹರಿಸುವ ಯೋಜನೆ ಇದೆ. ಈ ಯೋಜನೆ ವ್ಯಾಪ್ತಿಯಲ್ಲಿ 3,000 ಸಣ್ಣ ಅಣೆಕಟ್ಟೆಗಳನ್ನು ನಿರ್ಮಿಸುವ ಆಲೋಚನೆಯೂ ಕೇಂದ್ರ ಸರ್ಕಾರಕ್ಕೆ ಇದೆ. ಇಡೀ ಯೋಜನೆ ಪೂರ್ಣಗೊಂಡರೆ, ದಕ್ಷಿಣ ಏಷ್ಯಾದ ಅತಿದೊಡ್ಡ ನೀರಿನ ಜಾಲ ಇದಾಗಲಿದೆ.

ಪರಿಣಾಮಗಳು:  ಈ ಎಲ್ಲ ಯೋಜನೆ ಗಳು ವಿವಾದಗಳಿಂದ ಮುಕ್ತವಾಗೇನೂ ಇಲ್ಲ. ಈಗಾಗಲೇ ವಿವಿಧ ರಾಜ್ಯಗಳ ಮಧ್ಯೆ ನೀರು ಹಂಚಿಕೆ ವಿವಾದಗಳಿವೆ. ನದಿ ಜೋಡಣೆ ಯೋಜನೆಗಳು ಇಂತಹ ವಿವಾದಗಳಿಗೆ ಇನ್ನಷ್ಟು ಕಿಚ್ಚು ಹಚ್ಚಿಸಲಿವೆಯೇ ಎನ್ನುವ  ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಈ ಯೋಜನೆಗಳಡಿ ಅನೇಕ ಸಣ್ಣ ಅಣೆಕ ಟ್ಟುಗಳು, ನಾಲೆ, ಸುರಂಗಗಳನ್ನು ನಿರ್ಮಿಸಬೇಕಾಗುತ್ತದೆ.

ಇದು ಪರಿಸರ ಮತ್ತು ಜೀವ ವೈವಿಧ್ಯದ ಮೇಲೆ  ಬೀರುವ ಪರಿಣಾಮಗಳನ್ನು ನಿಖರವಾಗಿ ಅಂದಾಜಿಸಿಲ್ಲ. ನಿರಾಶ್ರಿತರ ಪುನರ್ವಸತಿ ಮತ್ತಿತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಟೀಕೆಗಳೂ ಇವೆ.  ಮಳೆ ನೀರು ಸಂಗ್ರಹ, ಅಂತರ್ಜಲ ಪುನಶ್ಚೇತನಗೊಳಿಸುವಂತಹ ಪರ್ಯಾಯ ಆಲೋಚನೆಗಳನ್ನು ನಿರ್ಲಕ್ಷಿಸಿರುವ ಬಗ್ಗೆಯೂ ಒಡಕಿನ ಮಾತು ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT