ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧ್ರಾ ದುರಂತ-31 ಜನರ ಪಿತೂರಿ

Last Updated 22 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ


ಅಹಮದಾಬಾದ್ (ಪಿಟಿಐ):
  59 ಜನ ಸಜೀವ ದಹನಗೊಂಡ ಗೋಧ್ರಾ ರೈಲು ಹತ್ಯಾಕಾಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತ್ವರಿತ ನ್ಯಾಯಾಲಯವು 31 ಮಂದಿಯನ್ನು ತಪ್ಪಿತಸ್ಥರು ಎಂದು ಮಂಗಳವಾರ ತೀರ್ಪು ನೀಡಿದೆ.

ಪ್ರಮುಖ ಆರೋಪಿಗಳಾಗಿದ್ದ ಮೌಲ್ವಿ ಸಯೀದ್ ಉಮರಜಿ, ಗೋಧ್ರಾ ನಗರಸಭೆ ಅಧ್ಯಕ್ಷ ಮೊಹಮದ್ ಅಬ್ದುಲ್ ರಹೀಮ್ ಕಲೋಟಾ, ನನ್ನು ಮಿಯಾ ಚೌಧರಿ, ಮೊಹಮದ್ ಅನ್ಸಾರಿ  ಸೇರಿದಂತೆ 63 ಜನರನ್ನು ದೋಷಮುಕ್ತರು ಎಂದು ಪ್ರಕಟಿಸಿದೆ.

ತಪ್ಪಿತಸ್ಥರ ಶಿಕ್ಷೆಯ ಪ್ರಮಾಣವನ್ನು ಈ ತಿಂಗಳ 25ರಂದು ಪ್ರಕಟಿಸಲಾಗುವುದು ಎಂದು ವಿಶೇಷ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಪಿ.ಆರ್.ಪಟೇಲ್ ತಿಳಿಸಿದ್ದಾರೆ.

2002ರ ಫೆ. 27ರಂದು ಅಯೋಧ್ಯೆಯಿಂದ ಕರಸೇವೆ ಮುಗಿಸಿಕೊಂಡು ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ವಾಪಸಾಗುತ್ತಿದ್ದ 59 ಕರಸೇವಕರು ಗೋಧ್ರಾ ಬಳಿ ಸಜೀವ ದಹನಗೊಂಡಿದ್ದರು. ಈ ಹತ್ಯಾಕಾಂಡದ ನಂತರ ಗುಜರಾತ್‌ನ ವಿವಿಧ ಕಡೆಗಳಲ್ಲಿ ನಡೆದ ಕೋಮು ಗಲಭೆಗಳಲ್ಲಿ 1200 ಜನ ಪ್ರಾಣ ಕಳೆದುಕೊಂಡಿದ್ದರು.

ಪೂರ್ವಯೋಜಿತ ಸಂಚಿನಂತೆ ಸಬರಮತಿ ಎಕ್ಸ್‌ಪ್ರೆಸ್‌ಗೆ ಬೆಂಕಿ ಹಚ್ಚಲಾಗಿತ್ತು ಎಂಬ ಪ್ರಾಸಿಕ್ಯೂಷನ್ ವಾದವನ್ನು ಒಪ್ಪಿಕೊಂಡ ನ್ಯಾಯಾಧೀಶರು, ಪ್ರಮುಖ ಆರೋಪಿಗಳಾದ ಹಾಜಿ ಬಿಲ್ಲಾ ಮತ್ತು ರಜಾಕ್ ಕುರ್‌ಕುರ್ ಮತ್ತಿತರರನ್ನು ತಪ್ಪಿತಸ್ಥರು ಎಂದು ಘೋಷಿಸಿದರು.

ವೈಜ್ಞಾನಿಕ ಸಾಕ್ಷಿ, ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆಗಳು, ಸಾಂದರ್ಭಿಕ ಸಾಕ್ಷಿಗಳು ಮತ್ತು ಲಭ್ಯ ದಾಖಲೆಗಳ ಆಧಾರದ ಮೇಲೆ ನ್ಯಾಯಾಧೀಶರು ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸರ್ಕಾರಿ ಅಭಿಯೋಜಕ ಜೆ.ಎಂ.ಪಂಚಾಲ್ ತಿಳಿಸಿದ್ದಾರೆ.

ಬಿಗಿ ಬಂದೋಬಸ್ತ್
ಸಬರಮತಿ ಕೇಂದ್ರ ಕಾರಾಗೃಹದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ನ್ಯಾಯಾಧೀಶರು ತೀರ್ಪು ಪ್ರಕಟಿಸಿದರು. 2009ರ ಜೂನ್‌ನಲ್ಲಿ 94 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸುವುದರೊಂದಿಗೆ ಪ್ರಕರಣದ ವಿಚಾರಣೆ ಆರಂಭವಾಗಿತ್ತು.

ಕೊಲೆ ಮಾಡುವ ಕ್ರಿಮಿನಲ್ ಸಂಚಿನ ಉದ್ದೇಶದಿಂದಲೇ ಗೋಧ್ರಾ ರೈಲು ನಿಲ್ದಾಣದ ಬಳಿ ಸುಮಾರು ಒಂದು ಸಾವಿರ ಜನ ಸೇರಿಕೊಂಡು ರೈಲಿನ ಮೇಲೆ ದಾಳಿ ನಡೆಸಿ ಎಸ್-6 ಬೋಗಿಗೆ ಬೆಂಕಿ ಹಚ್ಚಿದ್ದರು ಎಂದು ಆರೋಪಿಗಳ ವಿರುದ್ಧ ದೋಷಾರೋಪ ಹೊರಿಸಲಾಗಿತ್ತು.

ಬಿಜೆಪಿ ಸ್ವಾಗತ
ತೀರ್ಪನ್ನು ಬಿಜೆಪಿ ಸ್ವಾಗತಿಸಿದೆ. ಇಡೀ ಘಟನೆಯನ್ನು ತಿರುಚುವ ಯುಪಿಎ ಸರ್ಕಾರದ ದುರುದ್ದೇಶ ಬಹಿರಂಗಗೊಂಡಿದೆ ಎಂದು ವಕ್ತಾರ ರವಿಶಂಕರ್ ಪ್ರಸಾದ್ ಸಂಸತ್ ಭವನದ ಎದುರು ಸುದ್ದಿಗಾರರಿಗೆ ಹೇಳಿದ್ದಾರೆ.

ಸಬರಮತಿ ಎಕ್ಸ್‌ಪ್ರೆಸ್ ರೈಲಿನಲ್ಲೇ ಬೆಂಕಿ ಆಕಸ್ಮಿಕ ಸಂಭವಿಸಿತ್ತು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಯು.ಸಿ.ಬ್ಯಾನರ್ಜಿ ನೇತೃತ್ವದ ಸಮಿತಿಯು ವರದಿ ನೀಡಿದ್ದುದನ್ನು ಪ್ರಸಾದ್ ಟೀಕಿಸಿದರು. ಲಾಲೂ ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಬ್ಯಾನರ್ಜಿ ಸಮಿತಿಯನ್ನು ನೇಮಿಸಲಾಗಿತ್ತು.

ಬಿಜೆಪಿಯ ಇನ್ನೊಬ್ಬ ವಕ್ತಾರ ತರುಣ್ ವಿಜಯ್ ಅವರೂ ಯುಪಿಎ ಸರ್ಕಾರದ ದುರುದ್ದೇಶ ಈ ತೀರ್ಪಿನಿಂದ ಬಯಲಾಗಿದೆ ಎಂದು  ಟೀಕಿಸಿದ್ದಾರೆ.

ನಗೆಪಾಟಲು- ಪ್ರಶಾಂತ್
ನವದೆಹಲಿ (ಐಎಎನ್‌ಎಸ್): ಗೋಧ್ರಾ ಪ್ರಕರಣದ ತೀರ್ಪಿನಲ್ಲಿ 63 ಪ್ರಮುಖ ಆರೋಪಿಗಳನ್ನು ದೋಷಮುಕ್ತರನ್ನಾಗಿ ಮಾಡಿರುವುದು ನ್ಯಾಯಾಂಗವನ್ನು ನಗೆಪಾಟಲಿಗೆ ಈಡು ಮಾಡಿದೆ ಎಂದು ಸುಪ್ರೀಂಕೋರ್ಟ್‌ನ ವಕೀಲ ಪ್ರಶಾಂತ್ ಭೂಷಣ್ ಟೀಕಿಸಿದ್ದಾರೆ.

ದೋಷಮುಕ್ತರು ಎಂದು ಪ್ರಕಟಿಸಿರುವ 63 ಜನರಲ್ಲಿ ಬಹುತೇಕರಿಗೆ ಜಾಮೀನು ಸಿಕ್ಕಿಲ್ಲ. ಅವರೆಲ್ಲರೂ ಜೈಲಿನಲ್ಲಿಯೇ ಇದ್ದಾರೆ. ಆದರೂ ಅವರೆಲ್ಲರನ್ನೂ ದೋಷಮುಕ್ತರು ಎಂದು ಪ್ರಕಟಿಸಿರುವುದು ಅಚ್ಚರಿಯಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

49 ಮಂದಿ ಮನೆಗೆ
ಗೋದ್ರಾ ಹತ್ಯಾಕಾಂಡಕ್ಕೆ ಸಂಬಂಧಿಸಿ ಸಬರಮತಿ ಕಾರಾಗೃಹದಲ್ಲಿ  ವಿಚಾರಣಾಧೀನ ಇರಿಸಲಾಗಿದ್ದ 49 ಮಂದಿಯನ್ನು ಮಂಗಳವಾರ ಬಿಡುಗಡೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT