ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಧ್ರಾ: ಸರ್ಕಾರಕ್ಕೆ ಕೋರ್ಟ್ ನೋಟಿಸ್

Last Updated 15 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಹಮದಾಬಾದ್ (ಪಿಟಿಐ): ದಶಕಗಳ ನಂತರವೂ ಬಿಜೆಪಿ ನೇತೃತ್ವದ ಗುಜರಾತ್ ಸರ್ಕಾರವನ್ನು ಬೆಂಬಿಡದ ಭೂತದಂತೆ ಕಾಡುತ್ತಿರುವ ಗೋಧ್ರಾ ಕೋಮು ಗಲಭೆಗೆ ಸಂಬಂಧಿಸಿದಂತೆ ಬುಧವಾರ ಹೈಕೋರ್ಟ್ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದ್ದು, ನರೇಂದ್ರ ಮೋದಿ ಸರ್ಕಾರಕ್ಕೆ ಮತ್ತೊಮ್ಮೆ ಇರುಸುಮುರುಸು ಉಂಟಾಗಿದೆ.

ಗೋಧ್ರಾ ಗಲಭೆಯಲ್ಲಿ ಅಂಗಡಿಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ಕಳೆದ ವರ್ಷ ಹೊರಡಿಸಲಾದ ಆದೇಶವನ್ನು ಸರ್ಕಾರ ಪಾಲಿಸದ ಹಿನ್ನೆಲೆಯಲ್ಲಿ ಈ ನೋಟಿಸ್ ಜಾರಿ ಮಾಡಲಾಗಿದೆ.

ಗಲಭೆಯಲ್ಲಿ ಧ್ವಂಸಗೊಂಡ 500ಕ್ಕೂ ಹೆಚ್ಚು ಧಾರ್ಮಿಕ ಕೇಂದ್ರ, ಪ್ರಾರ್ಥನಾ ಮಂದಿರಗಳ ಜೀರ್ಣೋದ್ಧಾರ ಮಾಡುವ ಆದೇಶ ಪಾಲಿಸದ ಸರ್ಕಾರದ ಕ್ರಮದ ಬಗ್ಗೆ ಹೈಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದ ವಾರದಲ್ಲಿಯೇ ಈ ಹೊಸ ನೋಟಿಸ್ ನೀಡಲಾಗಿದೆ. ಪರಿಹಾರ ನೀಡದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ 56 ಸಂತ್ರಸ್ತರು ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, `ನಿಮ್ಮ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಯಾಕೆ ದಾಖಲಿಸಬಾರದು~ ಎಂದು ಅಹಮದಾಬಾದ್ ಜಿಲ್ಲಾಡಳಿತವನ್ನು ಪ್ರಶ್ನಿಸಿದೆ. ಮಾರ್ಚ್ 14ರ ಒಳಗಾಗಿ ನೋಟಿಸ್‌ಗೆ ಉತ್ತರಿಸುವಂತೆ ಜಿಲ್ಲಾಧಿಕಾರಿಗೆ ನ್ಯಾಯಮೂರ್ತಿಗಳಾದ ಅಖಿಲ್ ಖುರೇಶಿ ಮತ್ತು ಸಿ.ಎಲ್.ಸೋನಿ ಗಡುವು ನೀಡಿದ್ದಾರೆ.

2002ರಲ್ಲಿ ನಡೆದ ಗೋಧ್ರಾ ಘಟನೆಯ ನಂತರದ ಕೋಮು ಗಲಭೆಯಲ್ಲಿ ರಖಿಯಾಲ್ ಪ್ರದೇಶದ 56 ಅಂಗಡಿಗಳಿಗೆ ಬೆಂಕಿ ಹಚ್ಚಲಾಗಿತ್ತು. ಕೇಂದ್ರ ಸರ್ಕಾರ 2008ರಲ್ಲಿ ಹೆಚ್ಚುವರಿ ಪರಿಹಾರ ಘೋಷಿಸಿದಾಗ ಸಂತ್ರಸ್ತರು ಅದನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದಕ್ಕೆ ಅಹಮದಾಬಾದ್ ಜಿಲ್ಲಾಡಳಿತ ಸ್ಪಂದಿಸದಿದ್ದಾಗ ಸಂತ್ರಸ್ತರು `ಜನ ಸಂಘರ್ಷ ಮಂಚ್~ ಎಂಬ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯ ಮೂಲಕ ಹೈಕೋರ್ಟ್ ಮೊರೆ ಹೋದರು. ಸಂತ್ರಸ್ತರ ಮನವಿ ಪುರಸ್ಕರಿಸಿದ ಹೈಕೋರ್ಟ್, ಪರಿಹಾರ ನೀಡುವಂತೆ ಕಳೆದ ವರ್ಷ ಜಿಲ್ಲಾಡಳಿತಕ್ಕೆ ನಿರ್ದೇಶಿಸಿತ್ತು.

2011ರ ಆಗಸ್ಟ್‌ನಲ್ಲಿಯೇ ಎಲ್ಲ 56 ಪರಿಹಾರ ಅರ್ಜಿಗಳನ್ನೂ ತಿರಸ್ಕರಿಸಲಾಗಿದೆ ಎಂದು ಜಿಲ್ಲಾಡಳಿತ ಈ ವರ್ಷಾರಂಭದಲ್ಲಿ ಸಂತ್ರಸ್ತರಿಗೆ ಪತ್ರ ಬರೆದಿತ್ತು. ಈ ಪತ್ರದ ಆಧಾರದ ಮೇಲೆ ಸಂತ್ರಸ್ತರು ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದರು.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT