ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋನವಾರ ಗ್ರಾಮಕ್ಕೆ ಸೌಲಭ್ಯದ ಚಿಂತೆ

Last Updated 24 ಡಿಸೆಂಬರ್ 2013, 6:17 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ಗೋನವಾರ ಗ್ರಾಮ­ದಲ್ಲಿ ಸೌಲಭ್ಯ ಕೊರತೆಯಿಂದ ಇಲ್ಲಿನ ನಿವಾಸಿ­ಗಳು ನಿತ್ಯವೂ ಸಂಕಷ್ಟ ಅನುಭವಿಸುವಂತ ಸ್ಥಿತಿ ಇದೆ. 5000 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಗ್ರಾಮದಲ್ಲಿ ಸರ್ಕಾರದ ಯೋಜನೆಗಳ ಅಸಮರ್ಪಕ ಅನುಷ್ಠಾನವಾಗುತ್ತಿಲ್ಲ ಎಂಬ ನೋವು ಜನರನ್ನು ಕಾಡುತ್ತಿದೆ.

ಗ್ರಾಮ ಪಂಚಾಯಿತಿ ಇದೆ. ಆಡಳಿತ ಮಂಡಳಿ ಅಭಿವೃದ್ಧಿಗೆ ಕಾಳಜಿ ವಹಿಸದೇ ಇರುವುದರಿಂದ ರಸ್ತೆ, ಶುದ್ಧ ಕುಡಿಯುವ ನೀರು, ಶೌಚಾಲಯ, ಚರಂಡಿ ಹಾಗೂ ಆರೋಗ್ಯ ಸೇರಿದಂತೆ ಇನ್ನಿತರ ಸೌಕರ್ಯಗಳಿಂದ ವಂಚಿತರಾಗಿದ್ದಾರೆ.

ಆಯನೂರು ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 1 ಕಿ.ಮೀ. ಅಂತರದ ರಸ್ತೆಯಲ್ಲಿ ಎರಡೂ ಬದಿ ಜಾಲಿ ಮರ ಬೆಳೆದಿವೆ. ಈ ರಸ್ತೆ ಕಾಲ್ನಡಿಗೆಗೂ ಯೋಗ್ಯವಾಗಿಲ್ಲ. ಗ್ರಾಮದ ಪ್ರಮುಖ ಓಣಿಗಳ ರಸ್ತೆಗಳಂತೂ ಹದಗೆಟ್ಟಿವೆ. ಮಳೆ ಬಂದರೆ ಸಂಚಾರ ಇಲ್ಲಿ ಕಷ್ಟಮಯವಾಗಿದೆ.

ಗ್ರಾಮದಲ್ಲಿ ಕುಡಿಯುವ ನೀರು ಒದಗಿಸುವ ಶಾಶ್ವತ ಯೋಜನೆ ಕನಸು ಈಡೇರಿಲ್ಲ. ಹೀಗಾಗಿ ಗ್ರಾಮದ ಬಹುತೇಕ ಜನರು ಹಳ್ಳದ ಒರತೆ ಅವಲಂಬಿಸುವ ಸ್ಥಿತಿ ಬಂದಿದೆ. ಬೇಸಿಗೆಯಲ್ಲಿ ಅಂತರ್ಜಲ ಕುಸಿದ ಸಂದರ್ಭದಲ್ಲಿ ಪ್ಲೊರೈಡ್‌­ಯುಕ್ತ ನೀರು ಸೇವಿಸಿ ಹಲವು ರೋಗಗಳಿಂದ ಬಳಲುವುದು ಇಲ್ಲಿ ಸಾಮಾನ್ಯ. ಕಿರುನೀರು ಸರಬರಾಜು ಯೋಜನೆ ಅಡಿ ಲಕ್ಷಾಂತರ ₨ ಖರ್ಚು ಮಾಡಿ ನೀರಿನ ತೊಟ್ಟಿಗಳನ್ನು ನಿರ್ಮಿಸಿ­ಸಲಾಗಿದೆ. ಅಸಮರ್ಪಕ ನೀರಿನ ಪೂರೈಕೆಯೂ ಗ್ರಾಮಸ್ಥರ ಉಪಯೋಗಕ್ಕೆ ಬರದಂತಾಗಿದೆ. ಆಯನೂರು ರಸ್ತೆ ಮಾರ್ಗದಲ್ಲಿ ನಿರ್ಮಿಸ­ಲಾಗುತ್ತಿರುವ ಬೃಹತ್‌ ಕುಡಿಯುವ ನೀರಿನ ಟ್ಯಾಂಕ್‌ ಕಾಮಗಾರಿ ನನೆಗುದಿಗೆ ಬಿದ್ದಿದ್ದು, ಮುಗಿಯವ ಲಕ್ಷಣ ಇನ್ನು ಕಾಣುತ್ತಿಲ್ಲ.

ಗ್ರಾಮದ ಮಧ್ಯ ಭಾಗದಲ್ಲಿ ನಿರ್ಮಿಸಲಾ­ಗಿರುವ ಮಹಿಳಾ ಶೌಚಾಲಯ ಬಳಕೆಗೆ ಬಾರದ ಸ್ಥಿತಿಯಲ್ಲಿದೆ. ಸುತ್ತಲೂ ಮುಳ್ಳುಕಂಟಿ ಆವರಿಸಿರುವುದು ಮಹಿಳೆಯರು ಶೌಚಾಲಯಕ್ಕೆ ಹೋಗಲು ಭಯ ಪಡುತ್ತಿದ್ದಾರೆ. ಹೆಚ್ಚಿನ ಹಣ ಖರ್ಚು ಮಾಡಿ ನಿರ್ಮಾಣ ಮಾಡಲಾಗಿದ್ದರು ಶೌಚಾಲಯ ಸ್ಥಿತಿ ಅಯೋ­ಮಯ ಸ್ಥಿತಿ ತಲುಪಿದೆ ಎಂದು ಗ್ರಾಮಸ್ಥರು ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಮಳೆ ಮತ್ತು ಕಲುಷಿತ ನೀರು ಸರಾಗವಾಗಿ ಹರಿದು ಹೋಗಲು ಗ್ರಾಮದ ಪ್ರಮುಖ ರಸ್ತೆಗಳಲ್ಲಿ ನಿರ್ಮಿಸಲಾಗಿರುವ ಚರಂಡಿಗಳು ಹೂಳಿನಿಂದ ತುಂಬಿವೆ. ಇನ್ನೂ ಕೆಲ ಚರಂಡಿಗಳಲ್ಲಿ ಮುಳ್ಳುಕಂಟಿಗಳು ಬೆಳೆದು ನಿಂತಿವೆ. ಚರಂಡಿಯಿಂದ ಬರುವ  ದುರ್ನಾತ ನೈರ್ಮಲ್ಯ ಹಾಳು ಮಾಡುತ್ತಿದೆ.

ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಸಮರ್ಪಕ­ವಾಗಿ ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾ­ರಿಗಳು ನಿಷ್ಕಾಳಜಿ ವಹಿಸುತ್ತಲೇ ಬಂದಿ­ದ್ದಾರೆ. ಈ ಕಾರಣ ಜನರು ಬೇಸತ್ತಿದ್ದಾರೆ. ನನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಜಾರಿಗೊಳಿಸಲು ಈಗಲಾದರೂ ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಆಗ್ರಹಿಯಿಸಿದ್ದಾರೆ.


‘ಗ್ರಾಮಕ್ಕೆ ಸೌಲಭ್ಯ ನೀಡಿ’
ಹಲವು ದಶಕಗಳಿಂದ ಗ್ರಾಮಕ್ಕೆ ಮೂಲ­ಭೂತ ಸೌಲಭ್ಯಗಳು ಒದಗಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ವಿಫಲವಾಗಿದೆ. ಕುಡಿಯುವ ನೀರು ಹಾಗೂ ರಸ್ತೆ ಸಮಸ್ಯೆಯಿಂದ ಜನರು ನಿತ್ಯ ಬಳಲುತ್ತಿದ್ದಾರೆ. ಸ್ಥಳೀಯವಾಗಿ ಗ್ರಾಮ ಪಂಚಾಯಿತಿ ಇದ್ದರು ಸೌಲಭ್ಯಕ್ಕೆ ಪರದಾಡು ಸ್ಥಿತಿ ಇದೆ. ಹೈಟೆಕ್‌ ಯುಗದಲ್ಲೂ ಸೌಲಭ್ಯ ಕಾಣದೇ ನಮ್ಮ ಗ್ರಾಮ ಕುಗ್ರಾಮವಾಗಿ ಉಳಿದೆ.

– ವಿಶ್ವನಾಥ ನಾಯಕ ಗೋನ್ವಾರ, ಸ್ಥಳೀಯ

ಶುದ್ದ ನೀರು ಕೊಡಿ
ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಅಲೆದಾಟ ಸಾಮಾನ್ಯ. ಹಳ್ಳದಲ್ಲಿನ ಪ್ಲೊರೈಡ್‌ಯುಕ್ತ ನೀರನ್ನು ಸೇವಿಸಿ ಜನರು  ರೋಗಗಳಿಂದ ಬಳಲುತ್ತಿದ್ದೇವೆ. ಶುದ್ದ ಕುಡಿವ ನೀರು ಕೋಡಿ.
– ಹನುಮಂತಪ್ಪ ಗೋನ್ವಾರ, ಸ್ಥಳೀಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT