ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಾಲ್ ಪೈ: ಕರಾವಳಿಯ ಕ್ರಿಕೆಟ್ ಮೇಸ್ಟ್ರು

Last Updated 20 ಡಿಸೆಂಬರ್ 2010, 13:20 IST
ಅಕ್ಷರ ಗಾತ್ರ

ಕೇರಳದ ವಿರುದ್ಧ 1957ರಲ್ಲಿ ಕರ್ನಾಟಕ ಆಡಿದ್ದ ಆ ರಣಜಿ ಪಂದ್ಯ ಹಲವು ದೃಷ್ಟಿಯಿಂದ ಮಹತ್ವದ್ದಾಗಿತ್ತು. ರಾಜ್ಯಗಳ ಪುನರ್‌ವಿಂಗಡಣೆ ನಂತರ ಕೇರಳ ವಿರುದ್ಧ ಕರ್ನಾಟಕ ಆಡಿದ್ದ ಮೊದಲ ಪಂದ್ಯ ಅದು. ಮಂಗಳೂರಿನಲ್ಲಿ ನಡೆದ ಮೊದಲ ರಣಜಿ ಪಂದ್ಯ. ಆ ಪಂದ್ಯದಲ್ಲಿ ಆಡಿದ್ದ 12ರ ತಂಡದಲ್ಲಿ ಮೂರು ಮಂದಿ ಸ್ಥಳೀಯರು ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದರು!

ಸ್ಥಳೀಯರಾದ ಬಿ.ಗಣಪತಿ ರಾವ್, ಶೃಂಗೇರಿ ಗೋಪಾಲ್ ಪೈ ಮತ್ತು ಬಿ.ಸಿ.ಆಳ್ವ ನೆಹರೂ ಮೈದಾನದಲ್ಲಿ ನಡೆದ ಆ ಐತಿಹಾಸಿಕ ಪಂದ್ಯದಲ್ಲಿ ಆಡಿದ್ದರು. ಮಂಗಳ ಕ್ರೀಡಾಂಗಣದ ಸ್ಕೌಟ್ಸ್ ಭವನದ ಬಳಿ ಟೆನಿಸ್ ಅಕಾಡೆಮಿ ನಡೆಸುತ್ತಿರುವ ಅನಂತರಾಯ ಶೆಣೈ ಆ ಪಂದ್ಯದ 12ನೇ ಆಟಗಾರ ಆಗಿದ್ದರು. ಈ  ಪಂದ್ಯದಲ್ಲಿ ಗಣಪತಿ ರಾವ್ ಶತಕ ಬಾರಿಸಿದ್ದರೆ, ಗೋಪಾಲ ಪೈ ಅರ್ಧ ಶತಕ ಹೊಡೆದಿದ್ದರು!

ಇತ್ತೀಚೆಗೆ (ಡಿ. 9) ಬೆಂಗಳೂರಿನಲ್ಲಿ ನಿಧನರಾದ ಗೋಪಾಲ ಪೈ, ಕರಾವಳಿಯ ಕ್ರಿಕೆಟ್‌ಗೆ ಗೌರವ ತಂದಿದ್ದ ಹಿರಿಯ ಆಟಗಾರರಲ್ಲಿ ಒಬ್ಬರು. ಈ ವರ್ಷ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಕ್ರಿಕೆಟ್ ಕ್ಷೇತ್ರದ  4-5 ಮಂದಿ ಹಿರಿಯರನ್ನು ಕಳೆದುಕೊಂಡಿತು. ಬಿ.ಗಣಪತಿ ರಾವ್, ಕಳೆದ ಆಗಸ್ಟ್ ಮೊದಲ ವಾರ ನಿಧನರಾಗಿದ್ದರು. ಟೆಸ್ಟ್ ಕೂಡ ಆಡಿದ್ದ ಅವಿಭಜಿತ ದಕ್ಷಿಣ ಕನ್ನಡ (ಈಗ ಉಡುಪಿ) ಜಿಲ್ಲೆಯ ಜಿ.ಆರ್. (ಗುಂಡಿಬೈಲು ರಾಮ) ಸುಂದರಂ, ರಣಜಿ ಪಂದ್ಯವನ್ನು ಆಡುವುದನ್ನು ಸ್ವಲ್ಪದರಲ್ಲೇ ಕಳೆದುಕೊಂಡ ಸಿಂಡಿಕೇಟ್ ಬ್ಯಾಂಕ್‌ನ ಪ್ರತಿಭಾವಂತ ಜೇಮ್ಸ್ ವಿಲ್ಸನ್ ಅಮ್ಮಣ್ಣ ಇದೇ ವರ್ಷ ನಿಧನರಾಗಿದ್ದರು.

‘ಗೋಪಾಲ್ ಮಾಸ್ಟ್ರು’: ಶೃಂಗೇರಿ ಅಣ್ಣಪ್ಪ ಪೈ ಮತ್ತು ಕಲ್ಯಾಣಿ ಬಾಯಿ ಅವರ ಪುತ್ರರಾದ ಗೋಪಾಲ ಪೈ (ಜನನ: ಜೂನ್ 14, 1922), ನಗರದ ಪೆಂಟ್‌ಲ್ಯಾಂಡ್ ಪೆಟ್ ಕ್ರಿಕೆಟ್ ಕ್ಲಬ್ (ಪಿಪಿಸಿಎ) ಗೆ ಆಡುತ್ತಿದ್ದರು. ಆಗ ಮಂಗಳೂರಿನ ಲೀಗ್‌ನಲ್ಲಿ ಆಡುತ್ತಿದ್ದ ಹೆಸರಾಂತ ಕ್ಲಬ್‌ಗಳಲ್ಲಿ ಪಿಪಿಸಿಎ ಒಂದಾಗಿತ್ತು.  ಗೋಪಾಲ ಪೈ ಉರ್ವದ ಕೆನರಾ ಹೈಸ್ಕೂಲ್‌ನಲ್ಲಿ ಗಣಿತ ಶಿಕ್ಷಕರಾಗಿದ್ದರು. ಹೀಗಾಗಿ ಅವರು ಸ್ನೇಹಿತರ ವಲಯದಲ್ಲಿ ಪ್ರೀತಿಯ ‘ಗೋಪಾಲ್ ಮಾಸ್ಟ್ರು’ ಆಗಿದ್ದರು. ಸ್ವಾತಂತ್ರ್ಯಪೂರ್ವದಲ್ಲಿ ಅವಿಭಜಿತ ದಕ್ಷಿಣ ಕನ್ನಡ, ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಕಾರಣ ಅವರು 50ರ ದಶಕದ ಮೊದಲ ಕೆಲವು ವರ್ಷ ಮದರಾಸು (ಈಗಿನ ತಮಿಳುನಾಡು) ತಂಡಕ್ಕೆ ಆಡಿದ್ದರು.

ಮಂಗಳೂರಿನಲ್ಲಿ ನಡೆದ ಚೊಚ್ಚಲು ರಣಜಿ ಪಂದ್ಯದಲ್ಲಿ (1957ರ ನವೆಂಬರ್ 30, ಡಿಸೆಂಬರ್ 1, 2) ಕರ್ನಾಟಕ, ಮೊದಲ ದಿನ 5 ವಿಕೆಟ್‌ಗೆ 81 ರನ್ ಕಳೆದುಕೊಂಡಿತ್ತು. ಗೋಪಾಲ್ ಪೈ ಅರ್ಧ ಶತಕ (58) ಬಾರಿಸಿದರೆ, ಸ್ವಂತ ನೆಲದಲ್ಲಿ ಗಣಪತಿ ರಾವ್ 125 ರನ್ ಕೊಡುಗೆಯಿತ್ತರು. ಏಳನೇ ಕ್ರಮಾಂಕದಲ್ಲಿ ಬೆಂಗಳೂರಿನ ಟಿ.ಡಿ. ಕೃಷ್ಣ 82 ರನ್ ಹೊಡೆದಿದ್ದರು. ಆರನೇ ವಿಕೆಟ್‌ಗೆ ಪೈ ಮತ್ತು ಗಣಪತಿ ರಾವ್ ಜತೆಯಾಟ 116 ರನ್. ಕರ್ನಾಟಕದ ಮೊತ್ತ 382ಕ್ಕೆ ಬೆಳೆಯಿತು. ಕೇರಳ 156 ಮತ್ತು 155 ರನ್ನಿಗೆ ಕುಸಿದು ಕರ್ನಾಟಕ ಇನ್ನಿಂಗ್ಸ್ ಜಯ ಗಳಿಸಿತ್ತು. ಗೋಪಾಲ್ ಪೈ ಅವರಿಗೆ ಆಗ 35 ವರ್ಷ. ನಂತರ ಹೆಚ್ಚು ಕಾಲ ಆಡಲಿಲ್ಲ. ಅವರು ಒಟ್ಟು ಆಡಿದ್ದು ಎಂಟು ಪ್ರಥಮ ದರ್ಜೆ ಪಂದ್ಯಗಳನ್ನು ಮಾತ್ರ. ಆದರೆ ಸ್ಥಳೀಯ ಲೀಗ್‌ನಲ್ಲಿ ಅವರು 50 ವರ್ಷದವರೆಗೂ ಆಡಿದ್ದು ಅವರ ಕ್ರಿಕೆಟ್ ಪ್ರೀತಿಗೆ ನಿದರ್ಶನ.

ಗೋಪಾಲ್ ಪೈ, ಸ್ಥಳೀಯ ಟೂರ್ನಿಗಳಲ್ಲಿ ರನ್ ಹೊಳೆ ಹರಿಸಿದ ಕೆಲವು ಸಂದರ್ಭಗಳಿವೆ. ತಾಜ್ ಮಹಲ್ ಸಿಲ್ವರ್ ಜುಬಿಲಿ ಕಪ್ ಆಗ ನಡೆಯುತ್ತಿದ್ದುದು ಪೂರ್ಣ ಇನಿಂಗ್ಸ್ ಆಧಾರದಲ್ಲಿ. ಇದಕ್ಕೆ ಇಂತಿಷ್ಟೇ ದಿನ ಎಂದು ಇರುತ್ತಿರಲಿಲ್ಲ ಎಂಬುದೊಂದು ವಿಶೇಷ. ಕೆಲವು ಪಂದ್ಯ ಎಂಟು ದಿನಗಳವರೆಗೆ ಬೆಳೆದ ಉದಾಹರಣೆ ಇತ್ತು. ಬಹುಶಃ ಇಂಥ ಟೂರ್ನಿ ದೇಶದಲ್ಲೇ ಅಪರೂಪ.

ಗೋಪಾಲ್ ಪೈ ಈ ಟೂರ್ನಿಯ ಒಂದು ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ದ್ವಿತೀಯ ಇನಿಂಗ್ಸ್‌ನಲ್ಲಿ ಶತಕ ಹೊಡೆದಿದ್ದರು ಎಂದು ಇಲ್ಲಿನ ಕ್ರಿಕೆಟ್ ಇತಿಹಾಸ ಬಗ್ಗೆ ನೆನಪು ಹೊಂದಿರುವ ದ.ಕ. ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮ್ಯಾನೇಜರ್ ಕೆ. ಬಾಲಕೃಷ್ಣ ಪೈ ಹೇಳುತ್ತಾರೆ. ಸ
ಪಿಪಿಸಿಎ ಕ್ಲಬ್ ಸತತ ಮೂರು ವರ್ಷ (1962-63, 1963-64, 1964-65) ತಾಜ್‌ಮಹಲ್ ಟ್ರೋಫಿ ಗೆದ್ದುಕೊಂಡಿತ್ತು. ತಾಜಮಹಲ್ ಹೋಟೆಲ್ ರಜತ ವರ್ಷದ ನೆನಪಿಗಾಗಿ ಕುಡ್ಪಿ ಶ್ರೀನಿವಾಸ ಶೆಣೈ 1951ರಲ್ಲಿ ಈ ಟ್ರೋಫಿಯನ್ನು ದ.ಕ. ಕ್ರಿಕೆಟ್ ಸಂಸ್ಥೆಗೆ ದಾನವಾಗಿ ನೀಡಿದ್ದರು. ತಾಜ್‌ಮಹಲ್ ಕಪ್ ನಾಕೌಟ್ ಆಧಾರದಲ್ಲಿ ನಡೆಯುತಿತ್ತು.

ಪಾಟಿಯಾಲದಲ್ಲಿ ಎನ್‌ಐಎಸ್ ತರಬೇತಿ ಪಡೆದ ಈ ಭಾಗದ ಮೊದಲಿರೆಂಬ ಕ್ರಿಕೆಟ್ ತರಬೇತುದಾರರೆಂಬ ಹೆಗ್ಗಳಿಕೆ ಗೋಪಾಲ್ ಪೈ ಅವರದು. ಖ್ಯಾತನಾಮರಾದ ದಯಾನಂದ ಕಾಮತ್, ಜೆ.ಕೆ.ಮಹೇಂದ್ರ ಸೇರಿದಂತೆ ನೂರಾರು ಮಂದಿ ಆಟಗಾರರು ಅವರಿಂದ ತರಬೇತಿ ಪಡೆದಿದ್ದಾರೆ.
ಆಗ ಕ್ರಿಕೆಟ್‌ನಷ್ಟೇ ಇತರ ಆಟಗಳಲ್ಲೂ ಆಟಗಾರರು ಆಸ್ಥೆ ತೋರುತ್ತಿದ್ದರು. ಅನಂತರಾಯ ಶೆಣೈ ಟೆನಿಸ್‌ನಲ್ಲಿ ಉತ್ತಮ ಆಟಗಾರರಾಗಿದ್ದರು. ಈ ವಯಸ್ಸಿನಲ್ಲೂ ಅವರ ಆಸಕ್ತಿ ಮುಂದುವರಿದಿದೆ. ಗೋಪಾಲ ಪೈ ಮತ್ತು ಅವರ ಸೋದರ ಕಮಲಾಕ್ಷ ಪೈ ಒಳ್ಳೆಯ ಬ್ಯಾಡ್ಮಿಂಟನ್ ಆಟಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT