ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಪಿನಾಥ ಬೆಟ್ಟ ಹತ್ತುವುದು ಕಷ್ಟ

Last Updated 1 ಜುಲೈ 2012, 9:55 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರಮುಖ ಬೆಟ್ಟಗಳಲ್ಲಿ ಒಂದಾಗಿರುವ ಗೋಪಿನಾಥ ಬೆಟ್ಟವು ಮೂಲಸೌಕರ್ಯದ ಕೊರತೆಯನ್ನು ಎದುರಿಸುತ್ತಿದ್ದು, ಬೆಟ್ಟವನ್ನೇರಲು ಜನರು ಪ್ರಯಾಸಪಡುತ್ತಿದ್ದಾರೆ. ತಾಲ್ಲೂಕಿನ ಮುಖ್ಯ ಧಾರ್ಮಿಕ ಕೇಂದ್ರವೂ ಆಗಿರುವ ಗೋಪಿನಾಥ ಬೆಟ್ಟಕ್ಕೆ ಪ್ರತಿ ದಿನ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಭೇಟಿ ನೀಡುತ್ತಾರಾದರೂ ಅಗತ್ಯ ಸೌಲಭ್ಯ ಇಲ್ಲದಿರುವ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ದ್ವಿಚಕ್ರ ವಾಹನ ಮತ್ತು ಇತರ ವಾಹನಗಳಲ್ಲಿ ಪ್ರಯಾಣಿಸಿದರೂ ಬೆಟ್ಟದ ತುದಿಯನ್ನು ಸುರಕ್ಷಿತವಾಗಿ ತಲುಪಲಾಗುವುದಿಲ್ಲ ಎಂದು ಆತಂಕ ವ್ಯಕ್ತಪಡಿಸುತ್ತಾರೆ.

ಬಹುವರ್ಷಗಳಿಂದ ಡಾಂಬರೀಕರಣ ಕಾಣದ ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದರೆ, ಆವರಣ ಪೂರ್ತಿ ದೂಳು ಆವರಿಸಿಕೊಳ್ಳುತ್ತದೆ. ಪಾದಚಾರಿಗಳಿಗಂತೂ ದೂಳಿನ ಅಭಿಷೇಕವಾಗುತ್ತದೆ. ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುವವರಂತೂ ಜಾರಿ ಬೀಳುವ ಭೀತಿ ಎದುರಿಸುತ್ತಾರೆ. ದ್ವಿಚಕ್ರ ವಾಹನವು ಜಾರಿಬಿದ್ದು, ಸವಾರರು ಗಾಯಗೊಂಡ ಘಟನೆಗಳು ನಡೆದಿವೆ.

`ಬೆಟ್ಟದ ಮೇಲೆ ಗೋವರ್ಧನಗಿರಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಜನರು ಬರುತ್ತಾರೆ. ಇಲ್ಲಿ ದೇವಾಲಯವಷ್ಟೇ ಅಲ್ಲ, ಬೃಹತ್ ಬಂಡೆಗಲ್ಲುಗಳಿವೆ. ಪುರಾತನ ಕಾಲದ ಗವಿಯೂ ಇದೆ. ಆದರೆ ಸಮರ್ಪಕ ರಸ್ತೆ ಸೌಕರ್ಯ ಇರದ ಕಾರಣ ಬಹಳಷ್ಟು ಮಂದಿಗೆ ದೇವಾಲಯಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಪಾದಚಾರಿಗಳಿಗಂತೂ ಬೆಟ್ಟ ಹತ್ತುವುದು ಕಷ್ಟ. ವಾಹನಗಳು ಸಂಚರಿಸಿದರೆ, ಎಲ್ಲೆಡೆ ದೂಳು ವ್ಯಾಪಿಸುತ್ತದೆ. ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ~ ಎಂದು ನಿವೃತ್ತ ಉದ್ಯೋಗಿ ನಾರಾಯಣಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದರು.

`ರಸ್ತೆ ದುರಸ್ತಿಗಾಗಿ ಜಿಲ್ಲಾ ಮತ್ತು ತಾಲ್ಲೂಕು ಆಡಳಿತಕ್ಕೆ ಹಲವಾರು ಬಾರಿ ಕೋರಿದೆವು. ರಸ್ತೆ ದುರಸ್ತಿ ಕಾಮಗಾರಿಯ ಬಗ್ಗೆ ಭರವಸೆಯೂ ದೊರೆಯಿತು. ಕಾಮಗಾರಿ ಕೈಗೊಳ್ಳಲಾಗಿಲ್ಲ. ರಸ್ತೆ ದುರಸ್ತಿ ಕಾಮಗಾರಿ ಶೀಘ್ರವೇ ಕೈಗೊಂಡರೆ ಜನರಿಗೆ ಅನುಕೂಲವಾಗುತ್ತದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗುತ್ತದೆ~ ಎಂದು ಅವರು ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT