ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋರಿ ತೆರವಿಗೆ ಶ್ರೀರಾಮ ಸೇನೆ ಗಡುವು

Last Updated 20 ಜನವರಿ 2011, 8:30 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ನಾರಾಯಣಪುರದಲ್ಲಿರುವ ಬಸವ ಜಲಾಶಯದ ಬಳಿ ನಿರ್ಮಿಸಲಾಗಿರುವ ಗೋರಿಯನ್ನು ತೆರವುಗೊಳಿಸಲು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಶ್ರೀರಾಮಸೇನೆ ರಾಜ್ಯ ಘಟಕದ ಗೌರವಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಗ್ರಹಿಸಿದರು.

ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಜಾಗೆಗಳನ್ನು ಕಬಳಿಸಿ ಕಟ್ಟಲಾಗಿರುವ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾರ್ಯಾಚರಣೆ ನಡೆಸಿರುವ ಸರ್ಕಾರ, ರೈತರ ಜೀವನಾಡಿಯಾಗಿರುವ ಜಲಾಶಯದ ಬಳಿ ನಿರ್ಮಿಸಿರುವ ಈ ಗೋರಿಯನ್ನು ತೆರವುಗೊಳಿಸಲು ಏಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.

ಒಂದು ತಿಂಗಳ ಒಳಗಾಗಿ ಈ ಗೋರಿಯನ್ನು ತೆರವು ಮಾಡಬೇಕು. ಇಲ್ಲದಿದ್ದಲ್ಲಿ ಕಾನೂನು ರೀತಿಯಿಂದ ಈ ಗೋರಿ ತೆರವುಗೊಳಿಸಲು ಹೋರಾಟ ಮಾಡಲಾಗುವುದು. ಅದೂ ಸಾಧ್ಯವಾಗದಿದ್ದಲ್ಲಿ, ಆ ಭಾಗದ ರೈತರಲ್ಲಿ ಅರಿವು ಮೂಡಿಸಿ, ರೈತರು ಹಾಗೂ ಶ್ರೀರಾಮ ಸೇನೆ ಕಾರ್ಯಕರ್ತರು ಕರಸೇವೆಯ ಮೂಲಕ ಈ ಗೋರಿ ತೆರವಿಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ನಾರಾಯಣಪುರ ಅಣೆಕಟ್ಟು ಸರ್ಕಾರಿ ಆಸ್ತಿ. ಅಣೆಕಟ್ಟಿನ ನೀಲ ನಕ್ಷೆಯ ಪ್ರಕಾರ ಇಲ್ಲಿ ಯಾವುದೇ ಮಸೀದಿ, ಮಂದಿರಗಳು ಇಲ್ಲ. ಆದರೆ ಕಳೆದ 6-7 ವರ್ಷದ ಹಿಂದೆ ಜಲಾಶಯದ ಗೇಟ್ ಎದುರಿಗೆ ಅನಧಿಕೃತವಾಗಿ ಗೋರಿ ನಿರ್ಮಾಣ ಮಾಡಲಾಗಿದೆ. 2006 ರಲ್ಲಿ ಈ ಬಗ್ಗೆ ಶ್ರೀರಾಮ ಸೇನೆ ದೊಡ್ಡ ಹೋರಾಟ ಮಾಡಿತ್ತು. ಆ ಸಂದರ್ಭದಲ್ಲಿ 2007 ರ ಜನವರಿ ಒಳಗಾಗಿ ಈ ಗೋರಿಯನ್ನು ತೆರವು ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಈ ವರೆಗೂ ಈ ಗೋರಿ ಅಲ್ಲಿಯೇ ಇದೆ ಎಂದು ತಿಳಿಸಿದರು.

2007ರಲ್ಲಿ ಬೆಂಗಳೂರಿನಲ್ಲಿ ಬಂಧಿತನಾದ ಉಗ್ರ ಇಮ್ರಾನ್ ನಾರಾಯಣಪುರ ಜಲಾಶಯದ ಸುತ್ತ ಓಡಾಡಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೇ ನಾರಾಯಣಪುರ ಬಳಿ ಗ್ರಾಮದ ಕಾಯಿನ್ ಬಾಕ್ಸ್‌ನಿಂದ ಉಗ್ರ ಇಮ್ರಾನ್‌ನ ಸೆಟ್‌ಲೈಟ್ ಫೋನ್‌ಗೆ ಕರೆ ಮಾಡಿರುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಅಲ್ಲದೇ ಇಮ್ರಾನ್‌ನ ಬಳಿ ನಾರಾಯಣಪುರ ಜಲಾಶಯದ ನೀಲನಕ್ಷೆ ಕೂಡ ಸಿಕ್ಕಿದೆ. ಹೀಗಾಗಿ ಈ ಗೋರಿಯಲ್ಲಿ ಉಗ್ರರು ಆಶ್ರಯ ಪಡೆದಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಇದೀಗ ಸುಪ್ರೀಂ ಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದು, ಸರ್ಕಾರಿ ಜಾಗೆಯಲ್ಲಿರುವ ಪ್ರಾರ್ಥನಾ ಮಂದಿರ ತೆರವು ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆಯ ಹೋರಾಟಕ್ಕೆ ಮತ್ತೆ ಬಲ ಬಂದಂತಾಗಿದ್ದು, ಈ ಗೋರಿಯನ್ನು ತೆರವುಗೊಳಿಸುವವರೆಗೆ ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.
ಗೋಹತ್ಯೆ ನಿಷೇಧ, ಕಸಾಯಿ ಖಾನೆ ಮುಚ್ಚುವುದು, ಅನಧೀಕೃತ ಪಬ್, ಕ್ಲಬ್‌ಗಳನ್ನು ಮುಚ್ಚುವುದು ಸೇರಿದಂತೆ ಸುಪ್ರೀಂ ಕೋರ್ಟ್ ಹಲವಾರು ನಿರ್ದೇಶನ ನೀಡಿದೆ. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದೂಗಳ ಭಾವನೆಗಳನ್ನು ಕೆರಳಿಸುವ ಕೆಲಸವನ್ನು ಮಾಡುತ್ತಿವೆ ಎಂದ ಆರೋಪಿಸಿದರು. 

 ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ರಾಜ್ಯದ ಬಿಜೆಪಿ ಸರ್ಕಾರ ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲು ಮುಂದಾಗಿದೆ. ಈಗಾಗಲೇ 5 ಸಾವಿರಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳನ್ನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಈಗಾಗಲೇ 100ಕ್ಕೂ ಹೆಚ್ಚು ಪ್ರಾರ್ಥನಾ ಮಂದಿರಗಳನ್ನು ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.

ಶಬರಿಮಲೆಯಲ್ಲಿ ನಡೆದ ದುರಂತದಲ್ಲಿ ಮಡಿದವರಿಗೆ ರಾಜ್ಯ ಸರ್ಕಾರ ತಲಾ ರೂ. 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಶ್ರೀರಾಮಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಚನ್ನಯ್ಯಸ್ವಾಮಿ ಆನಂಪಲ್ಲಿ, ಕಾರ್ಯದರ್ಶಿ  ವಿಜಯಕುಮಾರ ಪಾಟೀಲ, ಭಗತಸಿಂಗ್ ಸೇವಾ ಸಮಿತಿ ಅಧ್ಯಕ್ಷ ನಿರಂಜನ ಸಜ್ಜನ ಮುಂತಾದವರು ಹಾಜರಿದ್ದರು.  ನಂತರ ನಾರಾಯಣಪುರ ಜಲಾಶಯದ ಬಳಿ ಇರುವ ಗೋರಿ ತೆರವುಗೊಳಿಸಲು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT