ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಬಾವಿ ಭರ್ತಿ: ವರ್ಷದೊಳಗೆ ಕುಸಿದ ತಡೆಗೋಡೆ

Last Updated 10 ಜುಲೈ 2013, 10:35 IST
ಅಕ್ಷರ ಗಾತ್ರ

ಸಿದ್ದಾಪುರ: ಕಳೆದ ತಿಂಗಳು ಸುರಿದ ಭಾರಿ ಮಳೆಯಿಂದ ತಾಲ್ಲೂಕಿನ ಬಿಳಗಿಯ ಪುರಾತನ ಗೋಲಬಾವಿಯ ಒಳಗಿನ ವರಾಂಡ ನೀರಿನಿಂದ ಭರ್ತಿಯಾಗಿದೆ. ಇದೇ ಸಂದರ್ಭದಲ್ಲಿ ಗೋಲಬಾವಿಯ ಮೇಲ್ಭಾಗದ ಆವರಣದಲ್ಲಿ ಇತ್ತೀಚೆಗೆ ನಿರ್ಮಿಸಲಾಗಿದ್ದ ತಡೆಗೋಡೆಯೊಂದು ಕುಸಿದು ಬಿದ್ದಿದೆ.

ಬಿಳಗಿ ಅರಸರ ಕಾಲದಲ್ಲಿ (16ನೇ ಶತಮಾನದಲ್ಲಿ) ನೆಲದೊಳಗೆ ನಿರ್ಮಿಸಲಾಗಿರುವ ಈ ವಿಸ್ಮಯ ಕಟ್ಟಡ ಮಳೆಗಾಲದಲ್ಲಿ ನೀರಿನಲ್ಲಿ ಮಾಯವಾಗುವುದು ಮಾಮೂಲು ಸಂಗತಿ. ಆದರೆ ಈ ವರ್ಷ ಜೂನ್ ತಿಂಗಳಿನಲ್ಲಿಯೇ ಗೋಲಬಾವಿಯಲ್ಲಿ ನೀರು ತುಂಬಿದೆ. ಪ್ರತಿ ವರ್ಷವೂ ಮಳೆಗಾಲದಲ್ಲಿ ನೀರಿನಲ್ಲಿಯೇ ಇದ್ದರೂ ಈ ಬಾವಿಯ ಒಳ ಆವರಣ ಇದುವರೆಗೂ  ಕುಸಿದಿಲ್ಲ. ಆದರೆ ಕೇವಲ ಕೆಲವು  ತಿಂಗಳುಗಳ ಹಿಂದೆ ಕಟ್ಟಲಾದ ಈ ಕಾಲದ ತಡೆ ಗೋಡೆ ಮಾತ್ರ ಮಳೆಗೆ ಸೋತು ನೆಲಕ್ಕಪ್ಪಳಿಸಿರುವುದು  ಸ್ಥಳೀಯರ ಆಶ್ಚರ್ಯಕ್ಕೆ ಕಾರಣವಾಗಿದೆ.

ಕಳೆದ ಹಲವು ದಶಕಗಳಿಂದ  ನಿರ್ಲಕ್ಷ್ಯಕ್ಕೆ ಒಳಗಾಗಿದ್ದ  ಈ ಗೋಲಬಾವಿಯ ಸಂರಕ್ಷಣೆ ಆರಂಭವಾದುದು ಇತ್ತೀಚೆಗೆ. ರಾಜ್ಯದ ಪ್ರವಾಸೋದ್ಯಮ ಇಲಾಖೆ ಮಂಜೂರು ಮಾಡಿದ ರೂ 5 ಲಕ್ಷ ಅನುದಾನದಲ್ಲಿ ಗೋಲಬಾವಿಯ ಆವರಣದಲ್ಲಿ ಹಲವು ಕಾಮಗಾರಿ ಕೈಗೊಳ್ಳಲಾಯಿತು. ಈ ಕಾಮಗಾರಿಗಳ ಮೂಲಕ ಗೋಲಬಾವಿಗೆ ಮರು ಜೀವ ನೀಡುವ ಕೆಲಸ ನಡೆಯಿತು. ಗೋಲಬಾವಿಯ ಆವರಣ ಚೊಕ್ಕಟ ಮಾಡಲಾಯಿತು. ಗೋಲಬಾವಿಯ ಸುತ್ತಲೂ ಬೇಲಿ ನಿರ್ಮಿಸಲಾಯಿತು. ಈ ಬಾವಿಯ ಮೇಲ್ಭಾಗದಲ್ಲಿ ಮತ್ತು ಒಳಗಿನ ವರಾಂಡದ ಸ್ಥಳದಲ್ಲಿ ಕಬ್ಬಿಣದ ಸರಳು ಅಳವಡಿಸಲಾಯಿತು. ಈ  ಎಲ್ಲ ಕಾಮಗಾರಿಗಳನ್ನು (ಗೋಲಬಾವಿಯ ಕಂಪೌಂಡ್ ವಾಲ್ ಮತ್ತು ರೇಲಿಂಗ್ ಸೌಲಭ್ಯ) ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ 2012ರ ಡಿಸೆಂಬರ್ 14ರಂದು ಉದ್ಘಾಟಿಸಿದರು.

ಈ ಗೋಲಬಾವಿಯ ಮೇಲಿನ ಆವರಣದಲ್ಲಿ  ಎತ್ತರದಿಂದ ತಗ್ಗಿನ ಸ್ಥಳಕ್ಕೆ ಧರೆ ಕುಸಿಯದಂತೆ ತಡೆಯಲು ತಡೆಗೋಡೆಯೊಂದನ್ನು ಮಾಡಲಾಗಿತ್ತು. ಉದ್ಘಾಟನೆಗೊಂಡು ಆರೇಳು ತಿಂಗಳು ಕಳೆಯುವಷ್ಟರಲ್ಲಿ ಈ ತಡೆಗೋಡೆ ಕುಸಿದು ಬಿದ್ದಿದೆ.

ಈ ಬಗ್ಗೆ ಪಂಚಾಯ್ತಿರಾಜ್ ಎಂಜಿನಿಯರಿಂಗ್ ಇಲಾಖೆಯ ಎಂಜಿನಿಯರ್ ಉಮಾ ನಾಯ್ಕ ಅವರನ್ನು `ಪ್ರಜಾವಾಣಿ' ಪ್ರತಿನಿಧಿ ಸಂಪರ್ಕಿಸಿದಾಗ, `ಈ ತಡೆ ಗೋಡೆಯನ್ನು ಗ್ರಾಮ ಪಂಚಾಯ್ತಿ ಅನುದಾನದಿಂದ ಕಟ್ಟಲಾಗಿದೆ. ಅದನ್ನು ಕಟ್ಟಲು ಹೆಚ್ಚಿನ ಅನುದಾನ ಅಗತ್ಯ ಎಂದು ಆರಂಭದಲ್ಲಿಯೇ ತಿಳಿಸಿದ್ದೆ. ಆದರೂ ಕೂಡ ರೂ 50 ಸಾವಿರ ಅನುದಾನದಲ್ಲಿ ಕೆಂಪು ಕಲ್ಲಿನಿಂದ ತಡೆಗೋಡೆ ನಿರ್ಮಿಸಲಾಯಿತು' ಎಂದು ಪ್ರತಿಕ್ರಿಯೆ ನೀಡಿದರು.

ಕಳೆದ  ನಾಲ್ಕೈದು ದಿನಗಳ ಹಿಂದೆ ಭಾರಿ ಮಳೆ ಸುರಿದ ಸಂದರ್ಭದಲ್ಲಿ ಈ ತಡೆಗೋಡೆ ಬಿದ್ದು ಹೋಗಿದ್ದು, ಈಗಾಗಲೇ ಹಾನಿಯ ಅಂದಾಜು ಮಾಡಿ ಕಳುಹಿಸಿದ್ದೇವೆ ಎಂಬುದು ಅವರು ನೀಡುವ ವಿವರ.

`ಈ ಕಾಮಗಾರಿಗಳು ಸಮರ್ಪಕವಾಗಿಲ್ಲ; ಕಳಪೆಯಾಗಿವೆ' ಎಂಬುದು ಸ್ಥಳೀಯರ ಆರೋಪವಾಗಿದೆ. ಹಲವು ಶತಮಾನಗಳ ಹಿಂದಿನ ಪುರಾತನ ತಂತ್ರಜ್ಞಾನದ ಗೋಲಬಾವಿಯ ಎದುರು ಈ ಕಾಲದ `ಆಧುನಿಕ ಕಾಮಗಾರಿ' ತಲೆ ತಗ್ಗಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT