ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಸಮುದ್ರದಲ್ಲಿ ಪ್ರವಾಸಿಗನ ರಕ್ಷಣೆ

Last Updated 8 ಡಿಸೆಂಬರ್ 2012, 22:00 IST
ಅಕ್ಷರ ಗಾತ್ರ

ಪಣಜಿ (ಪಿಟಿಐ/ಐಎಎನ್‌ಎಸ್): ಗೋವಾದ ಬಾಗಾ ಬೀಚ್‌ನಲ್ಲಿ ಹಿಮಾಚಲ ಪ್ರದೇಶದ ಪ್ರವಾಸಿಗನೊಬ್ಬನನ್ನು ಕಡಲ ಕಾವಲು ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ.
`ಶುಕ್ರವಾರ ಇಲ್ಲಿನ ಸಮುದ್ರ ತೀರದಲ್ಲಿ ಮುಳುಗಿ ಹರಿದು ಹೋಗುತ್ತ್ದ್ದಿದ 21 ವರ್ಷದ ಸುರೇಶ್ ಕುಮಾರ್ ಎಂಬುವವರನ್ನು ಕೂಡಲೇ ರಕ್ಷಿಸಲಾಯಿತು' ಎಂದು ರಕ್ಷಣಾ ಸಿಬ್ಬಂದಿ ತಿಳಿಸಿದ್ದಾರೆ.

ಸುರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸುರೇಶ್ ತಮ್ಮ ಇಬ್ಬರು ಮಿತ್ರರೊಂದಿಗೆ ಇಲ್ಲಿಗೆ ಬಂದಿದ್ದರು. ಮುನ್ನೆಚ್ಚರಿಕೆ ಸೂಚನೆಯನ್ನು ಕಡೆಗಣಿಸಿ ಅವರು ಸಮುದ್ರಕ್ಕೆ ಇಳಿದಿದ್ದರು ಎಂದು ಅವರು ಹೇಳಿದ್ದಾರೆ.

ಬೀಚ್‌ಗಳಲ್ಲಿ ಗಸ್ತು: ಇಬ್ಬರು ವಿದೇಶಿ ಪ್ರವಾಸಿಗರ ಮೇಲೆ ಮಾನಭಂಗಕ್ಕೆ ಯತ್ನಿಸಿದ ಘಟನೆಯಿಂದ ಎಚ್ಚೆತ್ತುಕೊಂಡಿರುವ ಗೋವಾ ಪೊಲೀಸರು, ಗೋವಾ ಬೀಚ್‌ಗಳಲ್ಲಿ ಮತ್ತು ಅವುಗಳಿಗೆ ಹೊಂದಿಕೊಂಡಿರುವ ಬೆಟ್ಟಗಳ ಮೇಲೆ ಗಸ್ತು ತಿರುಗುತ್ತಿದ್ದಾರೆ.

ಕೆಲ ಬೀಚ್‌ಗಳ ಮಧ್ಯೆ ಬೆಟ್ಟವಿದೆ. ಸ್ಥಳೀಯರು ಸೇರಿದಂತೆ ವಿದೇಶಿ ಪ್ರವಾಸಿಗರು ಇಲ್ಲಿ ಚಾರಣ ನಡೆಸುತ್ತಾರೆ. ಶುಕ್ರವಾರ ಅಂಜುನಾ ಬೀಚ್‌ನಿಂದ ಬಾಗಾ ಬೀಚ್‌ಗೆ ಆಸ್ಟ್ರೇಲಿಯಾದ ಪ್ರವಾಸಿಯೊಬ್ಬರು ತೆರಳುತ್ತಿದ್ದಾಗ ಕೆಲವರು ಮಾನಭಂಗಕ್ಕೆ ಯತ್ನಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬೀಚ್ ರಕ್ಷಣೆಗೆ ಸರ್ವೆ: ಗೋವಾ ಬೀಚ್ ಬಳಿಯ ಸ್ಥಳಗಳನ್ನು ಅತಿಕ್ರಮಣಕಾರರಿಂದ ರಕ್ಷಿಸಲು ಪ್ರವಾಸೋದ್ಯಮ ಇಲಾಖೆ ಸರ್ವೆ ಕಾರ್ಯ ಕೈಗೆತ್ತಿಕೊಳ್ಳಲು ಮುಂದಾಗಿದೆ.

`ಬೀಚ್‌ಗೆ ಹೊಂದಿಕೊಂಡಿರುವ ಪ್ರದೇಶವನ್ನು ಅತಿಕ್ರಮಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಈ ಭೂಮಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಇದೆ. ಸರ್ಕಾರಕ್ಕೆ ಸೇರಿದ ಸ್ಥಳವನ್ನು ಗುರುತಿಸಲು ಸರ್ವೆ ಕಾರ್ಯ ನಡೆಸಲು ತೀರ್ಮಾನಿಸಿದ್ದೇವೆ' ಎಂದು ಗೋವಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ನಿಖಿಲ್ ದೇಸಾಯಿ ತಿಳಿಸಿದ್ದಾರೆ.

ಸರ್ಕಾರಕ್ಕೆ ಸೇರಿರುವ ಬೀಚ್ ಪಕ್ಕದ ಸ್ಥಳ ಬೆಲೆ ಬಾಳುವಂತಹದ್ದು. ಕೆಲ ಖಾಸಗಿ ಹೋಟೆಲ್ ಮತ್ತು ರಿಯಲ್ ಎಸ್ಟೇಟ್ ಮಾಲೀಕರು ಸರ್ಕಾರಕ್ಕೆ ಸೇರಿದ ಭೂಮಿಯನ್ನು ಕಬಳಿಸುತ್ತಿದ್ದಾರೆ. ಇದರಿಂದಾಗಿ ಬೀಚ್‌ಗೆ ಹೊಂದಿಕೊಂಡಿರುವ ಶೇ 25ರಷ್ಟು ಪ್ರದೇಶ ಈಗಾಗಲೇ ಖಾಸಗಿಯವರ ಪಾಲಾಗಿದೆ. ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನದ ಸಹಾಯದಿಂದ ಇದನ್ನು ತಡೆಗಟ್ಟಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಲ ಸಂಪನ್ಮೂಲ ಸಚಿವ ದಯಾನಂದ ಮಾಂಡ್ರೇಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT