ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆ-ಮೇವು ಬ್ಯಾಂಕ್ ಆರಂಭಕ್ಕೆ ಆಗ್ರಹ

Last Updated 17 ಜುಲೈ 2012, 5:05 IST
ಅಕ್ಷರ ಗಾತ್ರ

ಹರಪನಹಳ್ಳಿ: ಮಳೆಯ ವೈಫಲ್ಯದಿಂದಾಗಿ ತಾಲ್ಲೂಕಿನಾದ್ಯಂತ ಆವರಿಸಿರುವ ಬರಗಾಲದ ಹಿನ್ನೆಲೆಯಲ್ಲಿ ರೈತರ ಜಾನುವಾರು ಸಂರಕ್ಷಣೆಗಾಗಿ ಗೋಶಾಲೆ ಹಾಗೂ ಮೇವು ಬ್ಯಾಂಕ್ ಆರಂಭಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ-ಎಂಎಲ್) ನೇತೃತ್ವದಲ್ಲಿ ನೂರಾರು ರೈತರು ಸೋಮವಾರ ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗ ಅನಿರ್ದಿಷ್ಟಾವಧಿ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಪಟ್ಟಣದ ಹರಿಹರ ವೃತ್ತದಿಂದ ಸರ್ಕಾರ, ಸ್ಥಳೀಯ ಶಾಸಕ ಹಾಗೂ ತಾಲ್ಲೂಕು ಆಡಳಿತದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸುತ್ತ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಹೊಸಪೇಟೆ ರಸ್ತೆ ಮುಖಾಂತರ ಮಿನಿ ವಿಧಾನಸೌಧಕ್ಕೆ ತೆರಳಿ ಬಹಿರಂಗ ಸಭೆ ನಡೆಸಿದರು.

ಪ್ರತಿಭಟನೆಯ ನೇತೃತ್ವವಹಿಸಿದ್ದ ಪಕ್ಷದ ರಾಜ್ಯಘಟಕದ ಕಾರ್ಯದರ್ಶಿ ಇದ್ಲಿ ರಾಮಪ್ಪ ಮಾತನಾಡಿ, ಕಳೆದವರ್ಷ ಸಂಭವಿಸಿದ ಭೀಕರ ಬರಗಾಲದಿಂದ ಚೇತರಿಸಿಕೊಳ್ಳುವ ಮುನ್ನವೇ ರೈತರ ಬದುಕು, ಮತ್ತೊಂದು ಬರಗಾಲದ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕೆರೆ-ಕಟ್ಟೆಗಳಲ್ಲಿ ಗುಬ್ಬಿ ಕುಡಿಯಲು ನೀರಿಲ್ಲದಷ್ಟು ಒಣಗಿಹೋಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಗಾಗಲೇ ಬಿತ್ತನೆಯಾಗಿರುವ ಬೆಳೆ ಮಳೆಯಿಲ್ಲದೇ ಕಮರಿಹೋಗಿದೆ. ಹೀಗಾಗಿ, ಪ್ರತಿ ರೈತರಿಗೆ ಪರಿಹಾರದ ರೂಪದಲ್ಲಿ ್ಙ 50ಸಾವಿರ ಪರಿಹಾರ ನೀಡಬೇಕು. ಎಲ್ಲಾ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ಎಲ್ಲಾ ರೀತಿಯ ಸಾಲ ಮನ್ನಾ ಮಾಡಬೇಕು ಮತ್ತು ಬಾಕಿ ಪಾವತಿಗೆ ಪೀಡಿಸುತ್ತಿರುವ ಬ್ಯಾಂಕ್ ಹಾಗೂ ಲೇವಾದೇವಿಗಾರರಿಗೆ ನಿರ್ಬಂಧ ಹೇರಬೇಕೆನ್ನುವುದು ಸೇರಿದಂತೆ ಸುಮಾರು 26ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸರದಿ ಪ್ರಕಾರ ಪ್ರತಿಭಟನಾಕಾರರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು. 

ಪಕ್ಷದ ಮುಖಂಡರಾದ ದೊಡ್ಡಮನಿ ಪ್ರಸಾದ್, ಸಂದೇರ್ ಪರಶುರಾಮ್, ಮೈಲಪ್ಪ, ಎನ್. ಕೆಂಚಪ್ಪ, ಬಿ. ಮಂಜುನಾಥ, ಕುಮಾರನಾಯ್ಕ, ಕೆ. ನಾಗೇಂದ್ರಪ್ಪ, ಲಿಂಗರಾಜ್, ಕೆ. ಅಶೋಕ, ಎಂ. ಕೊಟ್ರೇಶಪ್ಪ, ಕೆ. ರೇವಣ್ಣ, ಟಿ. ಪ್ರಕಾಶ್, ರೇಣುಕಮ್ಮ, ನಾಗಮ್ಮ, ಶಾಂತಮ್ಮ ಇತರರು ಧರಣಿಯಲ್ಲಿ ಪಾಲ್ಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT