ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಶಾಲೆಗಳಿಗೆ ಸೌಲಭ್ಯ: ಸಂಸದ ಸೂಚನೆ

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಗೋಶಾಲೆಗಳಲ್ಲಿ ಸೂಕ್ತ ಸೌಲಭ್ಯಗಳನ್ನು ಕಲ್ಪಿಸುವ ಜತೆಗೆ, ಮೇವು ವ್ಯರ್ಥವಾಗುವುದನ್ನು ಸರಿಪಡಿಸಬೇಕು ಎಂದು ಸಂಸತ್ ಸದಸ್ಯ ಜನಾರ್ದನಸ್ವಾಮಿ ಸೂಚಿಸಿದರು.

ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಬಳಿ ತಾಲ್ಲೂಕು ಆಡಳಿತ ಸ್ಥಾಪಿಸಿರುವ ಗೋಶಾಲೆಗೆ ಶನಿವಾರ ಭೇಟಿ ನೀಡಿ ಅವರು ಮಾತನಾಡಿದರು.

ಗೋಶಾಲೆಯಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ಮಾಡಲು ಸಿಬ್ಬಂದಿ ಇಲ್ಲದಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಮೇವು ಹಾಕಲು ವ್ಯವಸ್ಥೆ ಮಾಡದ ಪರಿಣಾಮ ಅಪಾರ ಪ್ರಮಾಣದ ಮೇವು ನೆಲದ ಮೇಲೆ ಬಿದ್ದು ವ್ಯರ್ಥವಾಗುತ್ತಿದೆ. ಮೇವು ಹಾಕಲು ತಾತ್ಕಾಲಿಕ ಅನುಕೂಲ ಮಾಡಬೇಕು ಎಂದು ನಿರ್ಮಿತಿ ಕೇಂದ್ರದ ಅಧಿಕಾರಿಗಳಿಗೆ ತಾಕೀತು ಮಾಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೊಳಕಾಲ್ಮುರು ತಾಲ್ಲೂಕಿನಲ್ಲಿ ಬರ ನಿರ್ವಹಣೆ ಹಿನ್ನೆಲೆಯಲ್ಲಿ ಎರಡು ಕಡೆ ಗೋಶಾಲೆ ಆರಂಭಿಸಲಾಗಿದೆ. ಈವರೆಗೆ ಒಟ್ಟು 6,348 ಜಾನುವಾರುಗಳು  ಸೌಲಭ್ಯ ಪಡೆದುಕೊಂಡಿದ್ದು 72 ಟನ್ ಮೇವು ದಾಸ್ತಾನು ಮಾಡಲಾಗಿದೆ. ಪ್ರತಿ ಜಾನುವಾರಿಗೆ 5  ಕೆ.ಜಿ. ಯಂತೆ ಈತನಕ ಒಟ್ಟು 34 ಟನ್ ಮೇವು ಖರ್ಚಾಗಿದೆ.
 
ಮಳೆ ಬಿದ್ದರೆ ಗೋಶಾಲೆ ಅಗತ್ಯವಿಲ್ಲ ಎನ್ನುವವರೆಗೂ ಗೋಶಾಲೆಗಳು ಕಾರ್ಯ ನಿರ್ವಹಿಸಲಿದೆ ಎಂದು ಭರವಸೆ ನೀಡಿದರು. ತಾಲ್ಲೂಕಿನ ಕುಡಿಯುವ ನೀರು ಸಮಸ್ಯೆ ನಿರ್ವಹಣೆಗೆ ರೂ 56 ಲಕ್ಷ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಪ್ರಸ್ತುತ ರೂ 32 ಲಕ್ಷ ವೆಚ್ಚದಲ್ಲಿ 9 ನೀರು ಸರಬರಾಜು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ರಂಗಯ್ಯನದುರ್ಗ ಜಲಾಶಯದಲ್ಲಿ ಹೆಚ್ಚಿರುವ ಹೂಳು ಎತ್ತಲು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸುವುದಾಗಿ ಹೇಳಿದರು.

ಜಿ.ಪಂ. ಸದಸ್ಯೆ ಮಾರಕ್ಕ, ತಹಶೀಲ್ದಾರ್ ವೆಂಕಟಪ್ಪ, ಪೊಭ್ರೆಷನರಿ ಉಪ ವಿಭಾಗಾಧಿಕಾರಿ ಡಾ. ಸ್ನೇಹ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT