ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ಗೋದಾಮಿನಲ್ಲೇ ಪಾಠ!

Last Updated 10 ಜೂನ್ 2011, 19:30 IST
ಅಕ್ಷರ ಗಾತ್ರ

ಬಳ್ಳಾರಿ: ಈ ಗ್ರಾಮದಲ್ಲಿ ಪ್ರೌಢಶಾಲೆ ಪ್ರಾರಂಭವಾಗಿ ನಾಲ್ಕು ವರ್ಷಗಳೇ ಕಳೆಯುತ್ತ ಬಂದಿವೆ. 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿ ವರ್ಷ ಇಲ್ಲಿ 8ರಿಂದ 10ನೇ ತರಗತಿವರೆಗೆ ಶಿಕ್ಷಣ ಪಡೆಯುತ್ತಾರೆ. ಆದರೆ, ಈ ಶಾಲೆಗೆ ಒಂದು ಸ್ವಂತ ಕಟ್ಟಡವಿಲ್ಲ.

ಶಾಲೆ ತೆರೆದಿರುವ ಸರ್ಕಾರ ಕಟ್ಟಡ ಕಟ್ಟಿಸದಿದ್ದರೂ, ಶಿಕ್ಷಕರು ಅಂಗನವಾಡಿಯ ಕಟ್ಟಡದಲ್ಲೂ, ಪಕ್ಕದಲ್ಲಿರುವ ಊರ ಗೌಡರ ಗೋದಾಮಿನಲ್ಲೂ ತರಗತಿ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳೂ ವಿಧಿಯಿಲ್ಲದೆ ಆಹಾರ ಧಾನ್ಯ ಇರಿಸುವ ಸ್ಥಳದಲ್ಲೇ ಕುಳಿತು ಪಾಠ ಕೇಳುತ್ತಿದ್ದಾರೆ.

ಬಳ್ಳಾರಿ ತಾಲ್ಲೂಕಿಗೆ ಸೇರಿದ್ದರೂ ತಾಲ್ಲೂಕು ಕೇಂದ್ರದಿಂದ 45 ಕಿಮೀ ದೂರದಲ್ಲಿರುವ ಗುತ್ತಿಗನೂರು ಎಂಬ ಪುಟ್ಟ ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯದ್ದೇ ಈ ದುಸ್ಥಿತಿ.

2007ರ ಆಗಸ್ಟ್‌ನಲ್ಲಿ ಈ ಗ್ರಾಮದಲ್ಲಿ ಪ್ರೌಢಶಾಲೆ ಆರಂಭಿಸಲಾಗಿದ್ದು, ಶಿಕ್ಷಣ ಇಲಾಖೆ ಈವರೆಗೆ ಕಟ್ಟಡ ಕಟ್ಟಿಸಿಲ್ಲ. ಆರಂಭದಲ್ಲಿ ಗ್ರಾಮದ ಮಧ್ಯದಲ್ಲಿರುವ ಅಂಗನವಾಡಿಯ ಕಟ್ಟಡದಲ್ಲೇ ಎಂಟನೇ ತರಗತಿ ಆರಂಭಿಸಿದ ಶಿಕ್ಷಕರು, ನಂತರದ ವರ್ಷಗಳಲ್ಲಿ ಪಕ್ಕದಲ್ಲೇ ಇರುವ ಊರಿನ ವಿರೂಪಾಕ್ಷಗೌಡರ ಆಹಾರ ಧಾನ್ಯದ ಗೋದಾಮಿನಲ್ಲಿ ತರಗತಿಯೊಂದನ್ನು ಆರಂಭಿಸಿದ್ದಾರೆ. ಅಲ್ಲದೆ, ಅಂಗನವಾಡಿ ಕಟ್ಟಡದ ಪಕ್ಕದಲ್ಲೇ ಒಂದು ತಗಡಿನ ಶೆಡ್ ಹಾಕಿ ಅಲ್ಲೊಂದು ತರಗತಿ ನಡೆಸುತ್ತಿದ್ದಾರೆ.

ಶಂಕುಸ್ಥಾಪನೆ ಆಗಿದೆ: ಗ್ರಾಮದ ಪಕ್ಕದಲ್ಲಿರುವ ಹಳ್ಳಕ್ಕೆ ಬರುವ ಪ್ರವಾಹದ ಭೀತಿಯಿಂದಾಗಿ ಗುತ್ತಿಗನೂರು ಗ್ರಾಮವನ್ನು ಸ್ಥಳಾಂತರಿಸಲೆಂದೇ ಊರಿಂದ ಎರಡು ಕಿ.ಮೀ ದೂರದಲ್ಲಿ ಸರ್ಕಾರ ಕೆಲವು ವರ್ಷಗಳ ಹಿಂದೆಯೇ ಸ್ಥಳ ನಿಗದಿಪಡಿಸಿದೆ. ಅಲ್ಲಿ ಊರವರಿಗೆಲ್ಲ ನಿವೇಶನ ಕೊಟ್ಟರೂ ಮತ್ತೆ ಹಳ್ಳಕ್ಕೆ ಪ್ರವಾಹ ಬಾರದ್ದರಿಂದ ಗ್ರಾಮಸ್ಥರ‌್ಯಾರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿಲ್ಲ. ಎರಡು ವರ್ಷಗಳ ಹಿಂದೆ ಆ ಜಾಗದಲ್ಲೇ ಇರುವ ನಾಲ್ಕೂವರೆ ಎಕರೆ ಭೂಮಿಯನ್ನು ಪ್ರೌಢಶಾಲೆಯ ಕಟ್ಟಡಕ್ಕೆಂದು ನೀಡಲಾಗಿದೆ. ಆದರೆ, ಶಿಕ್ಷಣ ಇಲಾಖೆಯ ಹೆಸರಿಗೆ ಆ ಭೂಮಿಯ ಖಾತೆ ಬದಲಾವಣೆ ಆಗುವುದು ವಿಳಂಬವಾಗಿದೆ. ಎರಡು ವರ್ಷಗಳ ಹಿಂದೆಯೇ ಕಂಪ್ಲಿಯ ಶಾಸಕರು ಶಾಲೆಯ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿಯಾಗಿದೆ. ಆದರೆ, ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗದ್ದರಿಂದ ನಿರ್ಮಾಣ ಕಾಮಗಾರಿ ಆರಂಭವಾಗೇ ಇಲ್ಲ.

ತೀವ್ರ ಸಮಸ್ಯೆ:
ಶಾಲೆಯ ಕಟ್ಟಡ ಇಲ್ಲದ್ದರಿಂದ ತೀವ್ರ ಸಮಸ್ಯೆ ಆಗಿದೆ. ಮಳೆ ಬಂದರೆ ಶೆಡ್ ಸೋರುತ್ತದೆ. ಬಿಸಿಲಿನಲ್ಲಿ ಗೋದಾಮಿನ ಛಾವಣಿ ಹೆಚ್ಚು ಬಿಸಿಯಾಗಿ ಸಾಕಷ್ಟು ತೊಂದರೆ ಎದುರಾಗುತ್ತದೆ. ಅಲ್ಲದೆ, ಆಟದ ಮೈದಾನ, ಕಂಪ್ಯೂಟರ್ ಕೊಠಡಿ, ವಿಜ್ಞಾನ ಕೊಠಡಿ, ಗ್ರಂಥಾಲಯ ಇಲ್ಲ ಎಂದು ಅನೇಕ ವಿದ್ಯಾರ್ಥಿಗಳು `ಪ್ರಜಾವಾಣಿ~ಗೆ ತಿಳಿಸಿದರು.

ಪ್ರಸ್ತಾವ ಸಲ್ಲಿಸಲಾಗಿದೆ: 2011-12ನೇ ಸಾಲಿನ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಯೋಜನೆ ಅಡಿ ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿದೆ. ಕೆಲವೇ ತಿಂಗಳುಗಳಲ್ಲಿ ಅನುದಾನ ಮಂಜೂರಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ.ಎಚ್. ಬಾಲರಾಜ್ ತಿಳಿಸಿದರು.

ಗುತ್ತಿಗನೂರು, ಓರ್ವಾಯಿ, ಪಟ್ಟಣಸೆರಗು ಗ್ರಾಮಗಳಲ್ಲದೆ, ಕೆಲವು ಕ್ಯಾಂಪ್‌ಗಳ ಮಕ್ಕಳು 9ನೇ ತರಗತಿಗಾಗಿ ಇದೇ ಪ್ರೌಢಶಾಲೆ ಅವಲಂಬಿಸಿದ್ದಾರೆ. ಈ ಶಾಲೆ ಆರಂಭಕ್ಕೆ ಮುನ್ನ ದೂರದ ಬಳ್ಳಾರಿ, ಕುಡುತಿನಿ ಅಥವಾ ಕುರುಗೋಡುಗಳಲ್ಲಿ ಇರುವ ಪ್ರೌಢಶಾಲೆಗೆ ಹೋಗದೇ ಕೆಲವರು ಶಾಲೆ ಬಿಟ್ಟಿದ್ದಾರೆ ಎಂದು ಪಾಲಕರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT