ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌಡರ ಸರ್ಕಾರ ಪತನಕ್ಕೆ ಕಾಂಗ್ರೆಸ್ ಹೊಣೆಯಲ್ಲ

Last Updated 30 ಡಿಸೆಂಬರ್ 2010, 12:50 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಕಾಂಗ್ರೆಸ್ 125 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥ ಕಳೆದ ವಾರ ದೆಹಲಿಯಲ್ಲಿ ನಡೆದ ಮಹಾ ಅಧಿವೇಶನದಲ್ಲಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಡುಗಡೆ ಮಾಡಿದ ‘ಕಾಂಗ್ರೆಸ್ ಆ್ಯಂಡ್ ದಿ ಮೇಕಿಂಗ್ ಆಫ್ ದಿ ಇಂಡಿಯನ್ ನೇಷನ್’ ಪುಸ್ತಕದಲ್ಲಿ ಈ ವಿಷಯಗಳನ್ನು  ಪ್ರಸ್ತಾಪಿಸಲಾಗಿದೆ. ಸಂಯುಕ್ತರಂಗ ಸರ್ಕಾರ ಅಸ್ಥಿರಗೊಳಿಸಲು ಕಾಂಗ್ರೆಸ್ ಕಾರಣ ಎಂಬ ತನ್ನ ಮೇಲಿನ ಆರೋಪಗಳನ್ನು ಸ್ಪಷ್ಟವಾಗಿ ನಿರಾಕರಿಸಿರುವ ಅದು, ಸರ್ಕಾರ ಉರುಳಲು ಕಾರಣವಾಗಿದ್ದ ಇನ್ನಿತರ ಅಂಶಗಳನ್ನೂ ಈ ಪುಸ್ತಕದಲ್ಲಿ ಪ್ರಸ್ತಾಪಿಸಿದೆ.

ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಅನುಷ್ಠಾನಗೊಳಿಸಲು ವಿಫಲವಾದದ್ದು ಸಂಯುಕ್ತರಂಗ ಸರ್ಕಾರ ವಿಫಲವಾಗಲು ಮತ್ತೊಂದು ಕಾರಣ. ಆ ಸರ್ಕಾರಗಳನ್ನು ಅಸ್ಥಿರಗೊಳಿಸುವಂಥ ಹೀನ ಕೆಲಸಕ್ಕೆ ಕಾಂಗ್ರೆಸ್ ಎಂದಿಗೂ ಕೈಹಾಕಿಲ್ಲ ಎಂದು ಸಮಜಾಯಿಷಿ ನೀಡಿದೆ.

1997ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಂಡ ಅಂದಿನ ಎಐಸಿಸಿ ಅಧ್ಯಕ್ಷ ಸೀತಾರಾಮ ಕೇಸರಿ ಅವರ ಕ್ರಮದ ಬಗ್ಗೆ ಪುಸ್ತಕದಲ್ಲಿ ಹೆಚ್ಚಿನ ವಿವರಣೆಗಳಿಲ್ಲ. ಆದರೆ, ಗುಜ್ರಾಲ್ ನೇತೃತ್ವದ ಸರ್ಕಾರ ಪತನವಾಗಲು ಕಾರಣವಾದ ಅಂಶಗಳನ್ನು ವಿವರಿಸಲಾಗಿದೆ.

ರಾಜೀವ್ ಹತ್ಯೆಯನ್ನು ತನಿಖೆ ನಡೆಸಿ ಜೈನ್ ಆಯೋಗ ವರದಿ ನೀಡಿದ ನಂತರ ಡಿಎಂಕೆ ಸದಸ್ಯರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಕಾಂಗ್ರೆಸ್ ಮುಂದಿಟ್ಟಿದ್ದ ಬೇಡಿಕೆಯನ್ನು ಗುಜ್ರಾಲ್ ತಿರಸ್ಕರಿಸಿದ ಕಾರಣ ಬೆಂಬಲ ಹಿಂತೆಗೆದುಕೊಳ್ಳಲಾಯಿತು ಎಂದು ಹೇಳಲಾಗಿದೆ.

ಅಂದು ಕಾಂಗ್ರೆಸ್ ಯಾವ ಪಕ್ಷವನ್ನು ದೂರ ಇಡುವಂತೆ ಒತ್ತಡ ಹೇರಿತ್ತೋ ಇಂದು ಅದೇ ಡಿಎಂಕೆ ಕಾಂಗ್ರೆಸ್ ನೇತೃತ್ವದ ಸರ್ಕಾರದ ಪ್ರಮುಖ ಅಂಗ ಪಕ್ಷವಾಗಿದೆ. ತಮಿಳುನಾಡಿನಲ್ಲೂ ಡಿಎಂಕೆ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿದೆ.

ಮುಂದಿನ ಪೀಳಿಗೆಗೆ ಕಾಂಗ್ರೆಸ್ ಪಕ್ಷದ ಸಮಗ್ರ ಇತಿಹಾಸ ಮತ್ತು ವಾಸ್ತವ ಘಟನೆಗಳನ್ನು ತಿಳಿಸುವ ಉದ್ದೇಶದಿಂದ ಐದು ಸಂಪುಟಗಳನ್ನು ಹೊರತರುವ ಯೋಜನೆ ರಾಜೀವ್ ಗಾಂಧಿ ಅವರ ಕನಸಿನ ಕೂಸು. 1985ರಲ್ಲಿ ಆರಂಭವಾದ ಪುಸ್ತಕ ಪ್ರಕಟಣೆಯ ಸರಣಿಯಲ್ಲಿ ಈಗ ಹೊರಬಂದಿರುವುದು ಐದನೇ ಸಂಪುಟ. ಇದಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕ ಪ್ರಣವ್ ಮುಖರ್ಜಿ ಪ್ರಧಾನ ಸಂಪಾದಕತ್ವದಲ್ಲಿ ರಾಜಕೀಯ ಮತ್ತು ಇತಿಹಾಸ ತಜ್ಞರನ್ನು ಒಳಗೊಂಡ ಸಂಪಾದಕೀಯ ಮಂಡಳಿ ರಚಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT