ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೌರವಾನ್ವಿತ ಜೀತದಾಳುಗಳು

Last Updated 18 ಫೆಬ್ರುವರಿ 2011, 16:10 IST
ಅಕ್ಷರ ಗಾತ್ರ

ಗೌರವಧನದ ಹೆಸರಿನಲ್ಲಿ ನಲುಗುತ್ತಿರುವ ಪಾಪದ ಹೂಗಳು ಈ ಅಂಗನವಾಡಿ ಕೆಲಸಗಾರ್ತಿಯರು. ಕಳೆದ ಮೂವತ್ತೈದು ವರ್ಷಗಳಿಂದ ಅವರು ದೆಹಲಿಯ ಪಾರ್ಲಿಮೆಂಟ್ ಮತ್ತು ರಾಜ್ಯದ ವಿಧಾನ ಸೌಧದ ಎದುರಿನ ಬೀದಿಗಳಲ್ಲಿ ಮಾಡಿದ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಯಾವ ಪ್ರಧಾನಿ, ಮುಖ್ಯ    ಮಂತ್ರಿಯ ಮನಸ್ಸೂ ಇವರ ಮನವಿಗೆ ಕರಗಲಿಲ್ಲ. ಬದಲಿಗೆ ಎಲ್ಲರೂ ಕೆಲಸದ ಹೊರೆಯನ್ನು ಹೆಚ್ಚಿಸುತ್ತಲೇ ಬಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯ ಕಲ್ಯಾಣಕ್ಕಾಗಿ ಅವರ ಸಬಲೀಕರಣಕ್ಕಾಗಿ ಯೋಜನೆಗಳನ್ನು ರೂಪಿಸುತ್ತಲೇ ಇವೆ. ಆದರೆ ತನ್ನದೇ ಇಲಾಖೆಯಡಿ ಕೆಲಸ ಮಾಡುತ್ತಿರುವ ಈ ಲಕ್ಷಾಂತರ ಮಹಿಳೆಯರನ್ನು ಮಾತ್ರ ತಾರತಮ್ಯದಿಂದ ನೋಡುತ್ತಿವೆ.

1975ರಲ್ಲಿ ರಾಜ್ಯದಲ್ಲಿ ಮೊಟ್ಟಮೊದಲು ಮೈಸೂರು ಜಿಲ್ಲೆಯ ತೀ.ನರಸೀಪುರದಲ್ಲಿ           ಆರಂಭವಾದ ಈ ಸಮಗ್ರ ಶಿಶು ಅಭಿವೃದ್ಧಿ ಯೋಜನೆ ಕ್ರಮೇಣ ರಾಜ್ಯದ ಎಲ್ಲ ತಾಲ್ಲೂಕು, ನಗರಗಳನ್ನು ವ್ಯಾಪಿಸಿ ಇಂದು ಒಂದು ಬೃಹತ್ ರೂಪ ಪಡೆದಿದೆ. ಆರಂಭದಲ್ಲಿ ಶಾಲಾ ಪೂರ್ವ ಶಿಕ್ಷಣ ಮಾತ್ರ  ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕೆಲಸ ಎಂದು ಹೇಳಿ ಗೌರವಧನ ನಿಗದಿಪಡಿಸಿದ ಕೇಂದ್ರ ಸರ್ಕಾರ ಆರಂಭದಲ್ಲಿ ಕಾರ್ಯಕರ್ತೆಗೆ ಕೇವಲ 125 ರೂಪಾಯಿ, ಸಹಾಯಕಿಗೆ 70 ರೂಪಾಯಿ  ನೀಡುತ್ತಿತ್ತು.  ಬರಬರುತ್ತ ಅವರ ಸಂಖ್ಯೆ ಹೆಚ್ಚಿದಂತೆ ಕಾರ್ಯದ ಒತ್ತಡ ಹೆಚ್ಚಿತು, ಗೌರವಧನ ಆ ಪ್ರಮಾಣದಲ್ಲಿ ಹೆಚ್ಚಲಿಲ್ಲ.  ಅವರ ಕೆಲಸದ ಒತ್ತಡವನ್ನು ಗಮನಿಸಿದರೆ ಇಡೀ ವ್ಯವಸ್ಥೆಯನ್ನು ಹೊತ್ತು ನಿಂತ ಅವರ ಭಾರ ಅರ್ಥವಾಗುತ್ತದೆ.

ಹೀಗಿದ್ದರೂ ಇವರಿಗೆ ನೀಡುವ ಗೌರವಧನ 1975 ರಲ್ಲಿ 125 ರೂಪಾಯಿಗಳಿಂದ ಪ್ರಾರಂಭವಾಗಿದ್ದು 1997ರಲ್ಲಿ 400 ರೂಪಾಯಿಗೆ ತಲುಪಿತ್ತು. ಅದನ್ನು ಕೊಡುತ್ತಿದ್ದುದು ಕೇಂದ್ರ ಸರ್ಕಾರ. ಏನೆಲ್ಲ ಕೆಲಸ ಮಾಡಿಸಿಕೊಂಡ ರಾಜ್ಯ ಸರ್ಕಾರ ಈ ಯೋಜನೆ  ಕೇಂದ್ರ ಸರ್ಕಾರದ್ದು ಎಂದೇ ಹೇಳುತ್ತಿತ್ತು. ಕೊನೆಗೆ 1997 ರಿಂದ ರಾಜ್ಯ ಸರ್ಕಾರವೂ ಸ್ವಲ್ಪ ಗೌರವಧನ ಕೊಡಲು ಒಪ್ಪಿತ್ತು. ಹೀಗೆ ಪ್ರತಿವರ್ಷ ಬಜೆಟ್ ಮಂಡನೆಯ ಮುಂಚಿನ ದಿನಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ತಲೆ ಮೇಲೆ ಗಂಟು, ಕಂಕುಳಲ್ಲಿ ಕೂಸು ಹೊತ್ತು ಪಾರ್ಲಿಮೆಂಟ್ ಹಾಗೂ ವಿಧಾನಸೌಧದ ಮುಂದೆ ನಮ್ಮನ್ನೂ ನೌಕರರೆಂದು ಪರಿಗಣಿಸಿ ಎಂದು ಕೂಗುತ್ತಾರೆ.  ಆದರೆ ಸರ್ಕಾರಗಳು ವರ್ಷಕ್ಕೊ ಎರಡು ವರ್ಷಕ್ಕೊ ಐವತ್ತೋ, ನೂರೋ ರೂಪಾಯಿ  ಹೆಚ್ಚಿಸಿ ದೊಡ್ಡ ಉಪಕಾರ ಮಾಡಿದಂತೆ ಪ್ರಚಾರ ಪಡೆಯುತ್ತವೆ. ಈಗ ಕೇಂದ್ರ ಸರ್ಕಾರ 1,500 ರೂಪಾಯಿ ಮತ್ತು ರಾಜ್ಯ ಸರ್ಕಾರ 1000 ರೂಪಾಯಿ ನೀಡುತ್ತಿದೆ. ಇದರ ಅರ್ಧದಷ್ಟು ಗೌರವಧನ ಸಹಾಯಕಿಯರಿಗೆ. ಈಗ ಇನ್ನೂ 500 ರೂಪಾಯಿ ಕೊಡುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.

ನಿವೃತ್ತಿ ಎಂಬ ಗೇಟ್‌ಪಾಸ್: ಅಂಗನವಾಡಿ ಕೆಲಸಗಾರರು ಸರ್ಕಾರಿ ನೌಕರರಲ್ಲವಾದ್ದರಿಂದ ಅವರಿಗೆ ನಿವೃತ್ತಿ ಸೌಲಭ್ಯ ಇಲ್ಲ. 1975 ರಿಂದ 80 ರ ವರೆಗಿನ ಅವಧಿಯಲ್ಲಿ  ಕೆಲಸಕ್ಕೆ ಸೇರಿದವರು ಈಗ 60ನೇ ವಯಸ್ಸು ದಾಟಿದ್ದಾರೆ. ಅವರಿಗೆ ಒಂದು ದಿನ ಅಧಿಕಾರಿಗಳು ‘ನೀನು ನಾಳೆಯಿಂದ ಕೆಲಸಕ್ಕೆ ಬರಬೇಡ’ ಎಂದು ಹೇಳುತ್ತಾರೆ. ಇದು ಇಷ್ಟು ವರ್ಷ ದುಡಿದ ಮಹಿಳೆಗೆ ಸರ್ಕಾರ ಹೇಳುವ ಅಂತಿಮ ವಿದಾಯ. ಅಲ್ಪ ಗೌರವಧನ ಪಡೆದು, ಇಂದಲ್ಲ ನಾಳೆ ಕೆಲಸ ಖಾಯಂ ಆಗಬಹುದು, ಒಳ್ಳೆಯ ವೇತನ, ಪಿಂಚಣಿ, ನಿವೃತ್ತಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದವರಿಗೆ ಅಧಿಕಾರಿ ಹೇಳುವ ‘ನಾಳೆಯಿಂದ ಬರಬೇಡ’ ಎಂಬ ಒಂದೇ ಒಂದು ಮಾತಿನ ಬೀಳ್ಕೊಡುಗೆ. ಮೊದಲು ಸೇರ್ಪಡೆಯಾದ ಹಲವಾರು ಅಂಗನವಾಡಿ        ಕಾರ್ಯಕರ್ತೆಯರು, ಸಹಾಯಕಿಯರು ಬರಿಗೈಯಲ್ಲಿ ನಿವೃತ್ತಿಯಾಗಿ ಮನೆ ಸೇರಿದ್ದಾರೆ. ಕೆಲವರು ಇಹಲೋಕ ತ್ಯಜಿಸಿದ್ದಾರೆ. ಸರ್ಕಾರ ಇನ್ನೂ ಅವರ ನಿವೃತ್ತಿಯ ಬಗ್ಗೆ ಚರ್ಚಿಸುತ್ತಲೇ ಇದೆ.

ಅಂಗನವಾಡಿ ಕಾರ್ಯಕರ್ತರದು ಎರಡು ರೀತಿಯ ಹೋರಾಟ. ಒಂದು ಸರ್ಕಾರದ ಮುಂದೆ ನಡೆಸುವ ಹೋರಾಟವಾದರೆ ಮತ್ತೊಂದು ಮಹಿಳೆಯಾಗಿ ನಡೆಸುವ ಸಾಮಾಜಿಕ ಹೋರಾಟ. ದೇವೇಗೌಡರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಅಂಗನವಾಡಿಗಳನ್ನು ಖಾಸಗೀಕರಣ ಮಾಡುವ ಪ್ರಯತ್ನ ನಡೆಯಿತು. ಬೆಂಗಳೂರಿನ ಒಂದು ಯೋಜನೆಯನ್ನು ಪ್ರಾಯೋಗಿಕವಾಗಿ ಖಾಸಗಿಯವರಿಗೆ ಕೊಡಲಾಗಿತ್ತು. ಆಗ ಸಿಡಿದೆದ್ದ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಬೀದಿಬೀದಿಗಳಲ್ಲಿ ಹೋರಾಟ ನಡೆಸಿದರು.  ಸರ್ಕಾರದಡಿಯಲ್ಲಿಯೇ ಇದ್ದು ವಿಪರೀತ ಕಿರುಕುಳ ಅನುಭವಿಸುತ್ತಿರುವ ತಾವು, ಖಾಸಗೀಕರಣವಾದರೆ ಗುಲಾಮರಾಗಬೇಕಾಗುತ್ತದೆ ಮತ್ತು ಸರ್ಕಾರದ ಈ ಯೋಜನೆಯಲ್ಲಿ ಭ್ರಷ್ಟಾಚಾರ ಹೆಚ್ಚಿ ಯೋಜನೆಯ ಉದ್ದೇಶವೇ ವಿಫಲವಾಗುತ್ತದೆ ಎಂದು ಅಂದು ಸೇರಿದ ಸುಮಾರು 25,000 ರಷ್ಟು ಮಹಿಳೆಯರು ಸರ್ಕಾರಕ್ಕೆ ಮನವಿ ಮಾಡಿದರು. ಸರ್ಕಾರ ಕೊನೆಗೂ ಇವರ ಹೋರಾಟಕ್ಕೆ ಮಣಿದು ತನ್ನ ಖಾಸಗೀಕರಣದ ನಿರ್ಧಾರವನ್ನು ಕೈಬಿಟ್ಟಿತು.

ಎಸ್.ಎಂ. ಕೃಷ್ಣ ಅವರು ಮುಖ್ಯ ಮಂತ್ರಿಯಾಗಿದ್ದಾಗ ಧಾರವಾಡ ಸಮೀಪದ ಬೇಲೂರಿನಲ್ಲಿ ರಾಜ್ಯದ ಗ್ರಾಮಪಂಚಾಯತಿ ಸದಸ್ಯರುಗಳ ಸಮಾವೇಶ ನಡೆಸಿ ಅಂಗನವಾಡಿಗಳ ಆಡಳಿತವನ್ನು ಗ್ರಾಮಪಂಚಾಯತಿಗೆ ವಹಿಸಿಕೊಡುವುದಾಗಿ ಘೋಷಿಸಿದರು. ಆಗ ಮತ್ತೆ ಸಿಡಿದೆದ್ದರು ಕಾರ್ಯಕರ್ತೆಯರು ಮತ್ತು ಸಹಾಯಕಿಯರು. ಮೊದಲೇ ಸೇವಾಭದ್ರತೆ ಇಲ್ಲದ ತಮ್ಮ ಕೆಲಸ, ಗ್ರಾಮ ಪಂಚಾಯತಿ ಆಡಳಿತಕ್ಕೆ ಹೋದರೆ ಸ್ಥಳೀಯ ರಾಜಕೀಯ ತಿಕ್ಕಾಟಗಳಿಗೆ ಬಲಿಯಾಗಿ ಕೆಲಸವನ್ನೇ ಕಳೆದುಕೊಳ್ಳಬೇಕಾಗುತ್ತದೆಂಬ ಆತಂಕ ಅವರಿಗಿತ್ತು. ಅವರ ಪ್ರತಿಭಟನೆ ನಡೆಯುತ್ತಿದ್ದಾಗಲೇ ವಿಧಾನಸಭಾ ಚುನಾವಣೆ ನಡೆದು ಧರಂ ಸಿಂಗ್ ಅವರ ನಾಯಕತ್ವದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಆಗ ಮತ್ತೆ ಹೋರಾಟ ಪ್ರಾರಂಭವಾಯಿತು. ‘ಅಂಗನವಾಡಿಗಳನ್ನು ಗ್ರಾಮಪಂಚಾಯತಿ ಆಡಳಿತಕ್ಕೆ ಸೇರಿಸುವುದಾದಲ್ಲಿ ಮೊದಲು ನಮ್ಮ ಕೆಲಸ ಖಾಯಂ ಮಾಡಿ ಸೇವಾ ಭದ್ರತೆ ಒದಗಿಸಿ’ ಎಂಬ ಬೇಡಿಕೆಗೆ ಧರಂಸಿಂಗ್ ಮಣಿದರು. ಕೆಲಸ ಖಾಯಂ ಮಾಡಲಿಲ್ಲ, ಆದರೆ ಅಂಗನವಾಡಿಗಳ ಆಡಳಿತವನ್ನು ಗ್ರಾಮಪಂಚಾಯತಿ ಆಡಳಿತಕ್ಕೆ ಒಪ್ಪಿಸುವ ವಿಚಾರ ಕೈಬಿಟ್ಟರು.
ಸಾಮಾಜಿಕ ಆಯಾಮ: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಹೋರಾಟಕ್ಕೊಂದು ಸಾಮಾಜಿಕ ಆಯಾಮವಿದೆ. 1975ರಲ್ಲಿ ಆರಂಭವಾದ ಈ ಯೋಜನೆ 1980 ರ ಹೊತ್ತಿಗೆ ರಾಜ್ಯದಲ್ಲಿ ಸುಮಾರು 50ರಿಂದ 60 ಸಾವಿರ ಕೆಲಸಗಾರರನ್ನು ಹೊಂದಿತ್ತು. ಆರಂಭದಲ್ಲಿ ಹತ್ತನೇ ತರಗತಿ ಪಾಸ್ ಅಥವಾ ಫೇಲ್ ಆದವರನ್ನು ಕಾರ್ಯಕರ್ತೆಯಾಗಿ ನೇಮಿಸಲಾಗುತ್ತಿತ್ತು. ಮಕ್ಕಳ ಸೇವೆ, ಬಾಣಂತಿ  ಸೇವೆಯಂಥ ಈ ಕೆಲಸಕ್ಕೆ ಮೇಲ್ವರ್ಗದ ಮಹಿಳೆಯರಾರೂ ಬರಲಿಲ್ಲ. ಬಂದವರೆಲ್ಲ ಕೆಳ ಮಧ್ಯಮವರ್ಗ ಮತ್ತು ಕೆಳವರ್ಗದ  ಮಹಿಳೆಯರೇ. ಸಹಾಯಕಿರಂತೂ ಬಹುಪಾಲು ದಲಿತ ಹಾಗೂ ಹಿಂದುಳಿದ ವರ್ಗಗಳಿಂದಲೇ ಬಂದವರು. 1975 ರಿಂದ 80 ರ ಸಂದರ್ಭ ನಮ್ಮ ಸಮಾಜ ಇನ್ನೂ ಊಳಿಗಮಾನ್ಯ ವ್ಯವಸ್ಥೆಯ ಹಿಡಿತದಲ್ಲಿಯೇ ಇತ್ತು. ಅಂಥ ಸಂದರ್ಭದಲ್ಲಿ ಗ್ರಾಮೀಣಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಸರ್ಕಾರದ ಯೋಜನೆಯಲ್ಲಿ ತೊಡಗಿಸಿಕೊಂಡ ಈ ಮಹಿಳೆಯರು ಎದುರಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲ. ಆಗ ಕೆಲವೇ ಜನ ಪ್ರಾಥಮಿಕ ಶಾಲಾ ಶಿಕ್ಷಕಿಯರು, ಸರ್ಕಾರಿ ಆಸ್ಪತ್ರೆಗಳಲ್ಲಿನ ನರ್ಸ್‌ಗಳನ್ನು ಬಿಟ್ಟರೆ ಅಂಗನವಾಡಿ ಕೆಲಸಗಾರರ ಸಂಖ್ಯೆಯೇ ದೊಡ್ಡದು. ಆಗ ಅವರು ಅನುಭವಿಸಿದ ಪುರುಷಪ್ರಧಾನ ಸಮಾಜದ ಕಿರುಕುಳ ಅವರಿಗೇ ಗೊತ್ತು.

ಈ ಮಹಿಳೆಯರಲ್ಲಿ ಮೂರು ರೀತಿಯ ವರ್ಗ     ದವರಿದ್ದಾರೆ. 1)  ಮನೆಯಲ್ಲಿ ಕುಳಿತು ಏನುಮಾಡುವುದು, ಸಿಕ್ಕ ಸಂಬಳ ಖರ್ಚಿಗಾಗಲಿ ಎಂದು ಈ ಕೆಲಸಕ್ಕೆ ಬಂದವರು. (ಇಂತಹವರ ಸಂಖ್ಯೆ ಕಡಿಮೆ) ಇವರು ಮಧ್ಯಮ ವರ್ಗದವರು. 2) ಬಡತನವನ್ನು ಎದುರಿಸಲಾಗದೇ, ಶಿಕ್ಷಣ ಮುಂದುವರಿಸಲಾಗದೆ ಇರುವ, ಈ ಕೆಲಸ ಅನಿವಾರ್ಯ ಎಂಬ ಮಹಿಳೆಯರು. 3) ವ್ಯವಸ್ಥೆಗೆ ಬಲಿಪಶುವಾದ ಮಹಿಳೆಯರು, ಅಂದರೆ ವಿಧವೆಯರು, ವಿಚ್ಛೇದಿತೆಯರು, ವಯಸ್ಸಾದರೂ ಮದುವೆಯಾಗದಿರುವವರು, ಗಂಡನ ದಬ್ಬಾಳಿಕೆಗೋ, ಕುಡಿತಕ್ಕೋ ಬಲಿಯಾಗಿ ಅವರಿಂದ ದೂರವಿರುವವರು. ಈ ಮೂರು ರೀತಿಯ ಮಹಿಳೆಯರಲ್ಲಿ ಸಮಯ ಕಳೆಯಲು ಬಂದ ಗುಂಪಿನ ಕೆಲವರನ್ನು ಹೊರತು ಪಡಿಸಿದರೆ ಉಳಿದ ಎರಡು ಗುಂಪಿನ ಮಹಿಳೆಯರಿಗೆ ಈ ಕೆಲಸ ಅವಶ್ಯ ಮತ್ತು ಅನಿವಾರ್ಯ. ಶೇಕಡಾ ತೊಂಬತ್ತರಷ್ಟು ಇಂಥವರೇ ಈ ಕೆಲಸದಲ್ಲಿರುವುದು.

ಮೊದಲೇ ಪ್ರಬಲ ಕೌಟುಂಬಿಕ ಹಿನ್ನೆಲೆ ಇರದ ಈ ಮಹಿಳೆಯರ ಮೇಲೆ ದಾಳಿಗಳಾಗಿವೆ. ಹಲವಾರು ಮಹಿಳೆಯರು ಅಪಹರಣ ಮತ್ತು ಅತ್ಯಾಚಾರಕ್ಕೊಳಗಾಗಿದ್ದಾರೆ, ಕೊಲೆಗಳೂ ಆಗಿವೆ. ಇವರ ಕುಟುಂಬಗಳ ಸದಸ್ಯರಂತೂ ಇಂಥ ಘಟನೆಗಳನ್ನು ಎದುರಿಸುವ ಶಕ್ತಿಪಡೆದಿಲ್ಲ. ಇನ್ನು ಅಧಿಕಾರಿಗಳೋ? ಅವರು ಕೆಲಸಕ್ಕೆ ಮಾತ್ರ ಅಧಿಕಾರಿಗಳು. ಸೇವಾ ಭದ್ರತೆಯೇ ಇಲ್ಲದ ಇವರಿಗೆ ಇಲಾಖೆ ಇನ್ನಾವ ರಕ್ಷಣೆ ಕೊಡಲು ಸಾಧ್ಯ? ಎಲ್ಲರೂ ಇವರ ಮೇಲೆ ಅಧಿಕಾರ          ಚಲಾಯಿಸುವವರೇ.

ಗೌರವ ಕಾರ್ಯಕರ್ತೆಯರೆಂದು ಹೇಳಿದರೂ ಇವರಿಗೆ ಕೆಲಸದ ಸಮಯ ನಿಗದಿಯಾಗಿದೆ. ಕೆಲಸದ ಒತ್ತಡವಿದೆ. ಇವರ ಮೇಲೆ ಶಿಸ್ತಿನ ಕ್ರಮವಿದೆ, ಶಿಕ್ಷೆ ಇದೆ, ನಿರ್ದಿಷ್ಟ ಕೆಲಸಗಳಿಗೆ ಸರ್ಕಾರ ಉತ್ತರದಾಯಿತ್ವವನ್ನು ನಿರೀಕ್ಷಿಸುತ್ತದೆ. ವೇತನ ಮತ್ತು ನೌಕರಿಯ ವಿಷಯ ಬಂದಾಗ ಮಾತ್ರ ಇವರು ಗೌರವಕಾರ್ಯಕರ್ತೆಯರು. ಇವರ ಸೇವೆ ಅವಶ್ಯವಿದೆಯೆಂದು ಸರ್ಕಾರಗಳಿಗೆ ಗೊತ್ತಿದೆ. ಇವರು ತಮ್ಮ  ಬದುಕಿನ ಎಲ್ಲಾ ತೊಂದರೆಗಳ ಮಧ್ಯೆ ಉದ್ಯೋಗ ಖಾತರಿ ಯೋಜನೆಗಿಂತ ಕಡಿಮೆ ಕೂಲಿ ಪಡೆದು ಇಷ್ಟು ವರ್ಷ ದುಡಿದಿದ್ದಾರೆ. ಈಗಲಾದರೂ ಸರ್ಕಾರ ಅವರಿಗೆ ಒಂದು ಘನತೆಯ ಬದುಕು ಕಟ್ಟಿ ಕೊಡುವ ಕೆಲಸ          ಮಾಡಬೇಕು.

ಬದುಕಿನ ಮುಸ್ಸಂಜೆಯಲ್ಲಿ ಖಾಲಿ ಕೈಯಿಂದ ಮನೆಗೆ ಹೋದರೆ ಅವರನ್ನು ನೋಡಿಕೊಳ್ಳುವವರು ಯಾರು? ಜೀವನವಿಡೀ ಮಹಿಳೆ ಮಕ್ಕಳ ಸಬಲೀಕರಣಕ್ಕಾಗಿ ದುಡಿದ ಅವರು ಬದುಕು ಸ್ವಾವಲಂಬನೆಗೊಳ್ಳುವುದು ಬೇಡವೆ? ಅವರ ನಿವೃತ್ತಿ ಬದುಕಿಗಾಗಿ ಸರ್ಕಾರಗಳು ಗಮನ ಹರಿಸಬೇಕು. ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ಸೇವೆಯನ್ನು ಪಡೆಯುವುದೇ ಅವರನ್ನು ಸ್ವಾವಲಂಬಿಗಳಾಗಿಸುವ ದಾರಿ. ಈ ಮಹಿಳೆಯರೆಲ್ಲರೂ ಆರ್ಥಿಕವಾಗಿ ಸಬಲಗೊಂಡರೆ   ಅಷ್ಟೂ ಕುಟುಂಬಗಳು ಸಬಲಗೊಂಡಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT