ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗೌರಿ-ಗಣೇಶ ದೇಶ ಕಟ್ಟುವ ಹಬ್ಬವಾಗಲಿ'

Last Updated 6 ಸೆಪ್ಟೆಂಬರ್ 2013, 6:21 IST
ಅಕ್ಷರ ಗಾತ್ರ

ಕೊಪ್ಪಳ: ಗೌರಿ-ಗಣೇಶ ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸುವ ಮೂಲಕ ದೇವರಿಗೆ ಭಕ್ತಿ-ಭಾವ ಸಮರ್ಪಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.

ಗೌರಿ-ಗಣೇಶ ಹಬ್ಬದ ಆಚರಣೆ ಕುರಿತು ಜಿಲ್ಲಾ ಆಡಳಿತ ಭವನದ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಶಾಂತಿಪಾಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಬ್ಬವನ್ನು ಶಾಂತಿ ಹಾಗೂ ಸೌಹಾರ್ದದಿಂದ ಆಚರಿಸಬೇಕು. ಗಣೇಶ ಮೂರ್ತಿಗಳನ್ನು ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೂರಿಸಬೇಕು.   ಗಣೇಶ ಮೂರ್ತಿ ಕೂರಿಸುವ ಸಂಘಟಕರು ನಗರಸಭೆ, ಜೆಸ್ಕಾಂ ಹಾಗೂ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ. ಈ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಏಕ-ಗವಾಕ್ಷಿ ಯೋಜನೆಯಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು. 

ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯುವುದು, ಮೈಕ್ ಬಳಕೆ ನಿಷೇಧಿಸಲಾಗಿದೆ. ಹಬ್ಬವನ್ನು ಪರಿಸರ ಸ್ನೇಹಿಯನ್ನಾಗಿಸಲು ಮಣ್ಣಿನ ಗಣಪತಿ ಮೂರ್ತಿಯನ್ನು ಸಾರ್ವಜನಿಕರು ಬಳಸುವುದು ಸೂಕ್ತ. ಮನೆ-ಮನೆಗಳಲ್ಲಿ ಕೂರಿಸುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಆಯಾ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ, ಸೂಕ್ತ ಸ್ಥಳದಲ್ಲಿ ನೀರಿನ ಟ್ಯಾಂಕರ್ ವ್ಯವಸ್ಥೆಗೆ ಸೂಚನೆ ನೀಡಲಾಗುವುದು. ಕುಡಿಯುವ ನೀರಿನ ಬಾವಿಗಳಲ್ಲಿ ಗಣೇಶ ಮೂರ್ತಿ ವಿಸರ್ಜಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 1,020 ಕಡೆ ಸಾರ್ವಜನಿಕ ಗಣಪತಿ ವಿಗ್ರಹ ಕೂರಿಸಲಾಗುತ್ತಿದೆ, ಈ ಪೈಕಿ ಹಬ್ಬದ ಮೂರನೇ ದಿನ 320, ಐದನೇ ದಿನ 532, ಒಂಬತ್ತನೇ ದಿನ 40, ಹನ್ನೊಂದನೇ ದಿನ 28 ಹೀಗೆ ಸುಮಾರು ಹದಿನೈದನೇ ದಿನದವರೆಗೂ ಗಣಪತಿ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ಆದರೆ, ಗಣಪತಿ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಕೆಲವು ಯುವಕರು, ವ್ಯಕ್ತಿಗಳು ಮದ್ಯಪಾನ ಮಾಡಿಕೊಂಡು, ಅಶ್ಲೀಲ ಹಾಡುಗಳಿಗೆ ಅಸಭ್ಯ ನತ್ಯ ಮಾಡುತ್ತಾ ಸಾಗುವುದು ಸಲ್ಲದು.

ಆಸ್ಪತ್ರೆ ಹಾಗೂ ಧಾರ್ಮಿಕ ಕೇಂದ್ರಗಳ ಎದುರು ಪಟಾಕಿ ಹಚ್ಚುವುದನ್ನು ನಿಷೇಧಿಸಲಾಗಿದೆ. ಮೆರವಣಿಗೆಗೆ ಡಿಜೆ ಸೌಂಡ್ ಸಿಸ್ಟಂ ಬದಲು ಡೊಳ್ಳು ಕುಣಿತ, ಪೂಜಾ ಕುಣಿತ, ಭಜನಾ ಮಂಡಳಿಗಳನ್ನು ಬಳಸಿದಲ್ಲಿ, ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಪೆಂಡಾಲ್ ಹಾಗೂ ಗಣೇಶ ಮೂರ್ತಿಗಳ ರಕ್ಷಣೆಗಾಗಿ ಆಯಾ ಸಂಘಟಕರು ಸ್ವಯಂ-ಸೇವಕರನ್ನು ನೇಮಿಸಿಕೊಳ್ಳಬೇಕು. ಪೆಂಡಾಲ್ ನಿರ್ಮಿಸುವಾಗ ಸಾರ್ವಜನಿಕರಿಗೆ ಹಾಗೂ ವಾಹನಗಳ ಸಂಚಾರಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಪೆಂಡಾಲ್‌ನಲ್ಲಿ ಅಗ್ನಿ ಅವಘಡಗಳನ್ನು ತಪ್ಪಿಸಲು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು. ಒಟ್ಟಾರೆಯಾಗಿ ಹಬ್ಬ ಶಾಂತಿಯುತವಾಗಿ ನಡೆಸಲು ಎಲ್ಲರೂ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿ.ಪಂ. ಉಪಕಾರ್ಯದರ್ಶಿ ರವಿ ಬಸರಿಹಳ್ಳಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಾಂಡುರಂಗಶೆಟ್ಟಿ, ಬಸವರಾಜ ಬಾವಲತ್ತಿ, ವೆಂಕಟಪ್ಪ ನಾಯಕ್, ವಿಜಯ್ ಬಿರಾದಾರ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT