ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಡ್ಜೆಟ್ ಲೋಕ: ಟ್ಯಾಬ್ಲೆಟ್ ಮಹಾಯುದ್ಧಕ್ಕೆ ಮುನ್ನುಡಿ

Last Updated 4 ಜನವರಿ 2012, 19:30 IST
ಅಕ್ಷರ ಗಾತ್ರ

ಬುದ್ಧನ ಕಾಲದ ಒಂದು ಪ್ರಖ್ಯಾತ ಕಥೆಯಿದೆ. ಕಿಸಾಗೌತಮಿ ಎಂಬಾಕೆ ತನ್ನ ಮಗು ಸತ್ತುಹೋದಾಗ ದುಃಖಿಸಿಕೊಂಡು ಬುದ್ಧನ ಬಳಿಗೆ ಬಂದು ಮಗುವನ್ನು ಬದುಕಿಸಿಕೊಡಲು ಬೇಡಿಕೊಳ್ಳುತ್ತಾಳೆ. ಒಂದೇ ಒಂದು ಸಾವು ಸಂಭವಿಸದ ಮನೆಯಿಂದ ಒಂದು ಹಿಡಿ ಸಾಸಿವೆ ತರಲು ಬುದ್ಧ ಆಕೆಗೆ ಹೇಳುತ್ತಾನೆ. ಸಾಸಿವೆ ತರಲಾರದೆ ಕೊನೆಗೆ ಸಾವಿನಿಂದ ಯಾರಿಗೂ ಬಿಡುಗಡೆಯಿಲ್ಲ ಎಂಬುದನ್ನು ಕಿಸಾಗೌತಮಿ ಅರಿಯುತ್ತಾಳೆ.

ಇಂದಿನ ಕಾಲದಲ್ಲಿ ಬುದ್ಧ ಇದ್ದಿದ್ದರೆ ಕಿಸಾಗೌತಮಿಗೆ ಬಹುಶಃ ಒಂದೇ ಒಂದು ಗ್ಯಾಡ್ಜೆಟ್ ಇಲ್ಲದ ಮನೆಯಿಂದ ಸಾಸಿವೆ ತರಲು ಹೇಳುತ್ತಿದ್ದನೇನೋ? ಅಷ್ಟರ ಮಟ್ಟಿಗೆ ಗ್ಯಾಜೆಟ್‌ಗಳು ಪ್ರತಿಯೊಂದು ಮನೆಯಲ್ಲಿ, ಕೈಯಲ್ಲಿ, ಮೈಯಲ್ಲಿ, ಕಾಲಲ್ಲಿ, ಎಲ್ಲ ಕಡೆ ಸರ್ವಾಂತರ್ಯಾಮಿಯಾಗಿದೆ. ಸರ್ವಸಂಗ ಪರಿತ್ಯಾಗಿ ಜಂಗಮರ ಕೈಯಲ್ಲೂ ಮೊಬೈಲ್ ಫೋನ್, ಧ್ವನಿ ಮುದ್ರಣ ಯಂತ್ರ, ಟ್ಯಾಬ್ಲೆಟ್ ಗಣಕ (ಕಂಪ್ಯೂಟರ್), ಇತ್ಯಾದಿ ಗ್ಯಾಜೆಟ್‌ಗಳು ಕಾಣಸಿಗುತ್ತವೆ. 

ಗ್ಯಾಜೆಟ್‌ಗಳು ಈ ರೀತಿ ಜನಜೀವನದ ಅವಿಭಾಜ್ಯ ಅಂಗವಾಗಿರುವಾಗ ಅವುಗಳ ಬಗ್ಗೆ ಕನಿಷ್ಠಮಟ್ಟದ ತಿಳಿವಳಿಕೆ ಪಡೆದುಕೊಳ್ಳಬೇಕೆಂದು ಎಲ್ಲರೂ ಎಂದುಕೊಳ್ಳುವುದುರಲ್ಲಿ ಆಶ್ಚರ್ಯವಿಲ್ಲ. ಗ್ಯಾಡ್ಜೆಟ್ ಒಂದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಅದನ್ನು ಬಳಸುವುದನ್ನು ಪೂರ್ತಿಯಾಗಿ ಅರಿತೆನೆಂದುಕೊಂಡಾಗ ಅದು ಹಳತಾಗಿರುತ್ತದೆ. ಅದರ ಎರಡು ಪಟ್ಟು ಶಕ್ತಿ ಹಾಗೂ ಸೌಲಭ್ಯದ ಇನ್ನೊಂದು ಅದೇ ಜಾತಿಯ ಗ್ಯಾಡ್ಜೆಟ್ ಮಾರುಕಟ್ಟೆಯಲ್ಲಿಲಭ್ಯವಾಗಿರುತ್ತದೆ. ಅಂದರೆ ಗ್ಯಾಜೆಟ್‌ಗಳ ಬಗ್ಗೆ ಒಮ್ಮೆ ತಿಳಿದುಕೊಂಡು ನನಗೆಲ್ಲ ತಿಳಿದಾಯಿತು ಎಂದುಕೊಳ್ಳುವಂತಿಲ್ಲ. ಗ್ಯಾಡ್ಜೆಟ್ ಬಗ್ಗೆ ತಿಳಿದುಕೊಳ್ಳುವುದು ಒಂದು ರೀತಿಯ ಯಾತ್ರೆ. ಅದಕ್ಕೆ ಕೊನೆ ಇರುವಂತಿಲ್ಲ. ಬನ್ನಿ ಈ ಗ್ಯಾಡ್ಜೆಟ್ ಯಾತ್ರೆಯನ್ನು ಪ್ರಾರಂಭಿಸೋಣ.

ಈ ಅಂಕಣದಲ್ಲಿ ಗ್ಯಾಜೆಟ್‌ಗಳ ಬಗ್ಗೆ ಅರಿತುಕೊಳ್ಳುವುದನ್ನು ಹಲವು ರೀತಿಯಲ್ಲಿಮಾಡೋಣ. ಗ್ಯಾಡ್ಜೆಟ್‌ಗಳಲ್ಲಿ ಹಲವು ಬಗೆ. ಉದಾಹರಣೆಗೆ ಮೊಬೈಲ್ ಫೋನ್, ಡಿಜಿಟಲ್ ಕ್ಯಾಮೆರಾ, ಸಂಗೀತ, ಸಿನಿಮಾ ನೋಡಲು ಅನುವುಮಾಡಿಕೊಡುವಂತವು, ಟ್ಯಾಬ್ಲೆಟ್, ವಿ-ಪುಸ್ತಕ ರೀಡರ್ ವೈದ್ಯಕೀಯ ಗ್ಯಾಡ್ಜೆಟ್‌ಗಳು - ಹೀಗೆ ಹಲವಾರು ನಮೂನೆಯ ಗ್ಯಾಡ್ಜೆಟ್‌ಗಳು ಮಾರುಕಟ್ಟೆಯಲ್ಲಿಲಭ್ಯವಿವೆ. ಪ್ರತಿಯೊಂದು ವಿಭಾಗದ ಗ್ಯಾಡ್ಜೆಟ್ ಬಗ್ಗೆ ಪ್ರಾಥಮಿಕ ತಿಳಿವಳಿಕೆ ಪಡೆದುಕೊಳ್ಳುವುದು ಒಂದು ಹಂತ. ಬೇರೆ ಬೇರೆ ಕಂಪೆನಿಗಳ ವಿಧವಿಧದ ಗ್ಯಾಜೆಟ್‌ಗಳ ಬಗ್ಗೆ ತಿಳಿದುಕೊಳ್ಳುವುದು ಇನ್ನೊಂದು ಹಂತ. ಈ ಎರಡನ್ನೂ ಸಮಾಂತರವಾಗಿ ನಡೆಸಿಕೊಂಡು ಹೋಗೋಣ. ಏನಂತೀರಾ?

ಟ್ಯಾಬ್ಲೆಟ್ ಯುದ್ಧ
ಇದು ಯಾವುದೇ ಔಷಧ ಕಂಪೆನಿಗಳ ನಡುವೆ ನಡೆದ ಅಥವಾ ನಡೆಯುತ್ತಿರುವ ಸಮರ ಅಲ್ಲ. ಗ್ಯಾಡ್ಜೆಟ್ ಲೋಕದಲ್ಲಿಯ ಒಂದು ಯೋಧ ಟ್ಯಾಬ್ಲೆಟ್. ಇವುಗಳನ್ನು ಮೊತ್ತಮೊದಲು ತಯಾರಿಸಿದ್ದು ಮೈಕ್ರೋಸಾಫ್ಟ್ ಕಂಪೆನಿ, 2000ರ ಆಸುಪಾಸಿನಲ್ಲಿ. ಆದರೆ ಇತ್ತೀಚೆಗೆ ಯಾಕೋ ಮೈಕ್ರೋಸಾಫ್ಟ್ ಮಾಡಿದ ಕೆಲಸಗಳು ಜನರ ಕಣ್ಣಿಗೆ ಬೀಳುತ್ತಿಲ್ಲ. ಈಗ ಮಾರುಕಟ್ಟೆಗೆ ಬರುತ್ತಿರುವ ಟ್ಯಾಬ್ಲೆಟ್ ಗಣಕಗಳಲ್ಲಿ ಏನೇನು ಗುಣ ವೈಶಿಷ್ಟ್ಯಗಳಿವೆಯೋ ಅವೆಲ್ಲವನ್ನೂ ಮೈಕ್ರೋಸಾಫ್ಟ್ ಟ್ಯಾಬ್ಲೆಟ್ ಒಳಗೊಂಡಿತ್ತು. ಆದರೂ ಮೈಕ್ರೋಸಾಫ್ಟ್ ಕಂಪೆನಿಯ ಟ್ಯಾಬ್ಲೆಟ್ ಮೂಲೆ ಸೇರಿತು.

2010 ಜನವರಿಯಲ್ಲಿ ಆಪಲ್ ಕಂಪೆನಿ ಐಪ್ಯಾಡ್ ಎಂಬ ಹೆಸರಿನ ಟ್ಯಾಬ್ಲೆಟ್ ಗಣಕವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಇದು ಗಣಕ ಕ್ಷೇತ್ರದಲ್ಲಿ ಬಿರುಗಾಳಿಯನ್ನೇ ಬೀಸಿತು. ಅಮೆರಿಕದಲ್ಲಿ ಆಪಲ್ ಕಂಪೆನಿ ಮತ್ತು ಅದರ ಮುಖ್ಯಸ್ಥರಾಗಿದ್ದ ಸ್ಟೀವ್ ಜಾಬ್ಸ್ ಅವರಿಗೆ ಅವರ ಕುರುಡು ಅಭಿಮಾನಿಗಳ ದೊಡ್ಡ ಬಳಗವೇ ಇದೆ. ಆಪಲ್ ಕಂಪೆನಿ ಏನೇ ನೀಡಿದರೂ ಅದು ಅದ್ಭುತವಾಗಿರುತ್ತದೆ ಎಂಬ ನಂಬಿಕೆಯಿಂದ ಅವರೆಲ್ಲರೂ ಐಪ್ಯಾಡ್ ಕೊಂಡುಕೊಂಡುದರಿಂದ ಐಪ್ಯಾಡ್ ಮಾರಾಟದಲ್ಲಿ ಹೊಸ ದಾಖಲೆಯನ್ನೇ ಬರೆಯಿತು. ಹಾಗೆಂದು ಹೇಳಿ ಐಪ್ಯಾಡ್‌ನಲ್ಲಿ ಜನರಿಗೆ ಅಗತ್ಯವಿಲ್ಲದ ಅಥವಾ ಉಪಯೋಗಿಸಲು ಕ್ಲಿಷ್ಟಕರವಾದ ತಂತ್ರಾಂಶಗಳಿದ್ದವು ಎಂದಲ್ಲ.

ಐಪ್ಯಾಡ್ ಅನ್ನು ಟ್ಯಾಬ್ಲೆಟ್‌ನ ಬಳಕೆದಾರನನ್ನು ಸರಿಯಾಗಿ ಅರ್ಥಮಾಡಿಕೊಡು ವಿನ್ಯಾಸಗೊಳಿಸಲಾಗಿತ್ತು. ಅದು ಪರಿಣತರಿಗಾಗಿ ತಯಾರಾಗಿದ್ದುದಲ್ಲ. ಜನಸಾಮಾನ್ಯರಿಗಾಗಿತ್ತು. ಆದುದರಿಂದ ಪರಿಣತರು ಬಳಸುವ ಸವಲತ್ತುಗಳು ಯಾವುವೂ ಅದರಲ್ಲಿರಲಿಲ್ಲ. ಮೊದಲನೆಯ ಆವೃತ್ತಿ ಅಂತಹ ಅದ್ಭುತವಾಗೇನೂ ಇರಲಿಲ್ಲ. ಈಗಿನ ಆವೃತ್ತಿ ಹಲವು ಹೆಚ್ಚಿನ ಸವಲತ್ತುಗಳನ್ನು ಒಳಗೊಂಡು ಹೆಚ್ಚು ಉಪಯುಕ್ತವಾಗಿದೆ.

ಮೈಕ್ರೋಸಾಫ್ಟ್ ಮತ್ತು ಆಪಲ್ ನಡುವೆ ಟ್ಯಾಬ್ಲೆಟ್ ಯುದ್ಧ ನಿಜವಾಗಿ ನಡೆಯಲಿಲ್ಲ ಅಥವಾ ನಡೆಯುತ್ತಿಲ್ಲ. ನಿಜವಾದ ಸಮರ ನಡೆಯುತ್ತಿರುವುದು ಆಪಲ್ ಐಪ್ಯಾಡ್ ಮತ್ತು ಗೂಗಲ್ ಆಂಡ್ರೋಯಿಡ್ ನಡುವೆ. ಆಂಡ್ರೋಯಿಡ್ ಮೂಲತಃ ಸ್ಮಾರ್ಟ್‌ಫೋನ್‌ಗಳಿಗಾಗಿರುವ ಕಾರ್ಯಾಚರಣೆಯ ವ್ಯವಸ್ಥೆ. ಕೆಲವು ಟ್ಯಾಬ್ಲೆಟ್ ಗಣಕ ತಯಾರಕರು ಈ ಆಂಡ್ರೋಯಿಡ್ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸತೊಡಗಿದರು. ಆಂಡ್ರೋಯಿಡ್ ಮುಕ್ತ ತಂತ್ರಾಂಶವಾಗಿರುವುದರಿಂದ ಇಂತಹ ಟ್ಯಾಬ್ಲೆಟ್ ಗಣಕಗಳ ಬೆಲೆ ಐಪ್ಯಾಡ್‌ಗಿಂತ ತುಂಬ ಕಡಿಮೆ ಇದೆ.

ಐಪ್ಯಾಡ್‌ನಲ್ಲಿ ಏನೇನು ಮಾಡಬಹುದೋ ಅದೆಲ್ಲವನ್ನೂ ಆಂಡ್ರೋಯಿಡ್ ಟ್ಯಾಬ್ಲೆಟ್ ಬಳಸಿ ಮಾಡಬಹುದು. ಲಕ್ಷಗಟ್ಟಳೆ ಉಚಿತ ತಂತ್ರಾಂಶಗಳು ಆಂಡ್ರೋಯಿಡ್ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಎಲ್ಲ ಕಾರಣಗಳಿಂದಾಗಿ ಆಂಡ್ರೋಯಿಡ್ ಟ್ಯಾಬ್ಲೆಟ್‌ಗಳು ಅತಿ ವೇಗದಲ್ಲಿ ಮಾರಾಟವಾಗುತ್ತಿವೆ. ಈ ನಮೂನೆಯಲ್ಲಿ ಸದ್ಯಕ್ಕೆ ಮುಂಚೂಣೀಯಲ್ಲಿರುವುದು ಸ್ಯಾಮ್‌ಸಂಗ್‌ನವರ ಟ್ಯಾಬ್ ಹೆಸರಿನ ಟ್ಯಾಬ್ಲೆಟ್ ಗಣಕ.

ಅಷ್ಟು ಸುಲಭದಲ್ಲಿ ಬಿಟ್ಟುಕೊಟ್ಟು ಗೊತ್ತಿಲ್ಲದ ಆಪಲ್ ಕಂಪೆನಿ ಐಪ್ಯಾಡ್‌ನ ಮೂರನೆಯ ಆವೃತ್ತಿಯನ್ನು ಸಿದ್ಧಮಾಡುತ್ತಿದೆ. ಫೆಬ್ರುವರಿ 2012ರಲ್ಲಿ ಮಾರುಕಟ್ಟೆಗೆ ಇದು ಬರಲಿದೆ. ಇದರ ಎಲ್ಲ ಗುಣವೈಶಿಷ್ಟ್ಯಗಳೂ ಇನ್ನೂ ಸರಿಯಾಗಿ ಗೊತ್ತಾಗಿಲ್ಲ. ಮೈಕ್ರೋಸಾಫ್ಟ್‌ನವರು ನಮಗೂ ಈ ಯುದ್ಧಕ್ಕೂ ಸಂಬಂಧವಿಲ್ಲ ಎಂದು ಸುಮ್ಮನೆ ಕೂತಿಲ್ಲ. ಅವರು ವಿಂಡೋಸ್ 8 ಎಂಬ ಹೊಚ್ಚ ಹೊಸ ಕಾರ್ಯಾಚರಣೆಯ ವ್ಯವಸ್ಥೆಯನ್ನು ವಿಶೇಷವಾಗಿ ಟ್ಯಾಬ್ಲೆಟ್‌ಗಾಗಿಯೇ ಸಿದ್ಧಮಾಡಿದ್ದಾರೆ. ಇದನ್ನು ಒಳಗೊಂಡ ಟ್ಯಾಬ್ಲೆಟ್ ಗಣಕಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ಈ ಸಮರದಲ್ಲಿ ನಾವೂ ಇದ್ದೇವೆ ಎಂದು ಅಮೆನ್‌ನವರು ತಮ್ಮ ಕಿಂಡಲ್ ಫಯರ್ ಮತ್ತು ಬಾರ್ನ್ಸ್ ನೋಬಲ್ ಅವರು ತಮ್ಮ ವಿ-ಪುಸ್ತಕ ರೀಡರ್ ಮೂಲಕ ಸಣ್ಣಮಟ್ಟದಲ್ಲಿ ಈ ಯುದ್ಧದಲ್ಲಿ ಭಾಗಿಯಾಗಲು ಪ್ರಯತ್ನಿಸುತ್ತಿದ್ದಾರೆ. ಈ ವಿ-ಪುಸ್ತಕ ರೀಡರ್‌ಗಳು ಟ್ಯಾಬ್ಲೆಟ್ ಗಣಕಗಳೇನೂ ಅಲ್ಲದಿದ್ದರೂ ಅವು ಟ್ಯಾಬ್ಲೆಟ್ ಗಣಕಗಳು ಮಾಡುವ ಕೆಲವು ಕೆಲಸಗಳನ್ನು ಮಾಡಬಲ್ಲವು. ಆದುದರಿಂದ ಟ್ಯಾಬ್ಲೆಟ್ ಮಾರುಕಟ್ಟೆಯ ಸ್ವಲ್ಪ ಭಾಗವನ್ನು ಅವು ಸ್ವಾಹಾ ಮಾಡುತ್ತಿವೆ.

ಒಟ್ಟಿನಲ್ಲಿ 2012ನೆಯ ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಟ್ಯಾಬ್ಲೆಟ್ ಯುದ್ಧ ನಡೆಯಲಿದೆ. ಕೊನೆಗೆ ಯಾರು ಗೆಲ್ಲುತ್ತಾರೆ ಎಂದು ಈಗಲೇ ಭವಿಷ್ಯ ಹೇಳುವಂತಿಲ್ಲ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಅಂತಿಮವಾಗಿ ಗೆಲ್ಲುವವನು ಗ್ರಾಹಕ. ಆತನಿಗೆ ಹಲವು ಆಯ್ಕೆಗಳು ಲಭ್ಯವಾಗಲಿವೆ. ನಿಜವಾದ ಯುದ್ಧದಲ್ಲಿ ಗಾಯಗೊಂಡವರಿಗೆ ಟ್ಯಾಬ್ಲೆಟ್‌ನೀಡುವುದು ವಾಡಿಕೆ. ಈ ಟ್ಯಾಬ್ಲೆಟ್ ಯುದ್ಧದಲ್ಲಿ ಯಾರೂ ಗಾಯಗೊಳ್ಳುವುದಿಲ್ಲ. ಬದಲಿಗೆ ಗ್ರಾಹಕನಿಗೆ ಲಾಭವೇ ಆಗಲಿದೆ.

ಆಂಡ್ರೋಯಿಡ್ ಎಂದರೇನು?

ಆಂಡ್ರೋಯಿಡ್ (android) ಎಂದರೆ ಮೊಬೈಲ್ ಫೋನ್‌ಗಳಲ್ಲಿ ಬಳಕೆಯಾಗುವ ಒಂದು ವಿಧದ ಕಾರ್ಯಾಚರಣೆಯ ವ್ಯವಸ್ಥೆ (operating system). ಇದು ಮೂಲತಃ ಮುಕ್ತ ತಂತ್ರಾಂಶವಾದ ಲಿನಕ್ಸ್‌ನಿಂದ ವಿಕಾಸವಾದುದು. 2005ರಲ್ಲಿ ಇದೇ ಹೆಸರಿನ ಕಂಪೆನಿ ಇದನ್ನು ಪ್ರಥಮವಾಗಿ ತಯಾರು ಮಾಡಿತು.

ನಂತರ ಗೂಗಲ್ ಈ ಕಂಪೆನಿಯನ್ನು ಕೊಂಡುಕೊಂಡು ಮುಕ್ತವಾಗಿ ಬಿಡುಗಡೆ ಮಾಡಿದೆ. ಈಗ ಪ್ರಪಂಚದ ಸುಮಾರು ಶೇಕಡ 60 ಸ್ಮಾರ್ಟ್‌ಫೋನ್‌ಗಳು ಈ ಕಾರ್ಯಾಚರಣೆಯ ವ್ಯವಸ್ಥೆಯನ್ನು ಬಳಸುತ್ತವೆ.

ಈ ನಮೂನೆಯ ಫೋನುಗಳಲ್ಲಿ ಅಂತರಜಾಲ ಸಂಪರ್ಕ, ಇಮೈಲ್, ಜಿಪಿಎಸ್, ಇತ್ಯಾದಿ ಎಲ್ಲ ಸೌಲಭ್ಯಗಳಿರುತ್ತವೆ.

ಟ್ಯಾಬ್ಲೆಟ್ ಎಂದರೇನು?
ಇವು ನುಂಗಲಾರದ, ಖಾಯಿಲೆ ಗುಣಪಡಿಸಲಾರದ ಟ್ಯಾಬ್ಲೆಟ್ಟುಗಳು. ಇವುಗಳ ಹೆಸರು ಮಾತ್ರ ಟ್ಯಾಬ್ಲೆಟ್. ಇವು ಗಾತ್ರದಲ್ಲಿ ನೆಟ್‌ಬುಕ್ ಮತ್ತು ದೊಡ್ಡ ಫೋನ್‌ಗಳ ನಡುವಿನ ಗಾತ್ರದವು.

ಸರಿಯಾಗಿ ಹೇಳುವುದಾದರೆ ಟ್ಯಾಬ್ಲೆಟ್ ಗಣಕ (ಕಂಪ್ಯೂಟರ್) ಎನ್ನಬೇಕು. ಇವುಗಳ ಗಾತ್ರ ಸುಮಾರು 8 ಇಂಚಿನಿಂದ 10 ಇಂಚು ಉದ್ದ, 5 ರಿಂದ 8 ಇಂಚು ಅಗಲ, ಸುಮಾರು ಅರ್ಧ ಇಂಚು ದಪ್ಪ ಇರುತ್ತವೆ.

ಇವುಗಳಿಗೆ ಭೌತಿಕ ಕೀಲಿಮಣೆ ಇರುವುದಿಲ್ಲ. ಬದಲಿಗೆ ಸ್ಪರ್ಶಸಂವೇದಿ (touchscreen) ಪರದೆ ಇರುತ್ತದೆ. ಅದರಲ್ಲಿ ಕೀಲಿಮಣೆ ಮೂಡಿಬರುತ್ತದೆ. ಸಾಮಾನ್ಯರಿಗೆ ಅಗತ್ಯವಿರುವ ಕೆಲಸಗಳನ್ನೆಲ್ಲ ಇದು ಮಾಡಬಲ್ಲುದು.

ಉದಾಹರಣೆಗೆ ಇಮೈಲ್, ಅಂತರಜಾಲ ವೀಕ್ಷಣೆ, ಕಡತ ತಯಾರಿ, ವಿ-ಪುಸ್ತಕ ಓದುವುದು ಇತ್ಯಾದಿ.

ಇವುಗಳನ್ನು ಬಳಸಿ ಪ್ರೋಗ್ರಾಮ್ಮಿಂಗ್, ಉತ್ತಮ ಗ್ರಾಫಿಕ್ಸ್, ಚಿತ್ರಸಂಚಲನೆ (ಅನಿಮೇಶನ್) ಎಲ್ಲ ತಯಾರಿಸಲು ಅಸಾಧ್ಯ. ಆದರೆ ಇವುಗಳನ್ನು ಬಳಸಿ ಚಲನಚಿತ್ರ, ಚಿತ್ರಸಂಚಲನೆ ಎಲ್ಲ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT