ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಅಬ್ಬರಿಸುತ್ತಿದೆಯೇ?

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಪ್ರತಿ ವ್ಯಕ್ತಿಯೂ ಗುದ ದ್ವಾರದಿಂದ ಪ್ರತಿ ದಿನ `ಗ್ಯಾಸ್~ ಹೊರಹಾಕುತ್ತಾನೆ. ಪ್ರತಿಯೊಬ್ಬರ ಜಠರ ಮತ್ತು ಕರುಳಿನಲ್ಲಿ ಸ್ವಲ್ಪ ಮಟ್ಟಿನ `ಗ್ಯಾಸ್~ ಸಂಚಯ ಯಾವತ್ತೂ ಇದ್ದೆೀ ಇರುತ್ತದೆ. ಸಾಮಾನ್ಯ ಮನುಷ್ಯ ದಿನಕ್ಕೆ ಸುಮಾರು 14 ಸಾರಿ `ಗ್ಯಾಸ್~ ಹೊರಹಾಕುವುದು ಸಾಮಾನ್ಯ. ಇದಕ್ಕಿಂತ ಹೆಚ್ಚಾದರೆ ಮಾತ್ರ ತೊಂದರೆ.

                                            ----
 

ಅಪಾನವಾತ, ಹೂಸು, ವಾಯು ಪ್ರಕೋಪ (flatulence)  ಎಂದೆಲ್ಲ ಕರೆಸಿಕೊಳ್ಳುತ್ತಾ ಉದರದಲ್ಲಿ ಸಂಚಯವಾಗುವ ವಾಯುವೇ ಈಗೀಗ ಆಡು ಮಾತಿನಲ್ಲಿ ಇಂಗ್ಲಿಷ್‌ನ `ಗ್ಯಾಸ್~ ಎಂದು ಕರೆಸಿಕೊಳ್ಳುತ್ತಿದೆ. ಸಾಮಾನ್ಯವಾಗಿ ಕರುಳಿನಲ್ಲಿ 500 ರಿಂದ 2000 ಮಿಲಿಯಷ್ಟು `ಗ್ಯಾಸ್~ ಉತ್ಪಾದನೆಯಾಗುತ್ತದೆ ಮತ್ತು ಇದು ಗುದ ದ್ವಾರದ ಮೂಲಕ ಹೊರಹೋಗುತ್ತದೆ.

ಸಾಮಾನ್ಯವಾಗಿ ಐದು ರೀತಿಯ ವಾಸನೆ ರಹಿತ `ಗ್ಯಾಸ್~ಗಳು ಇರುತ್ತವೆ. ಅವುಗಳೆಂದರೆ ನೈಟ್ರೋಜನ್, ಹೈಡ್ರೋಜನ್, ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ಆಕ್ಸಿಜನ್. ಇದಲ್ಲದೇ ವಿಶಿಷ್ಟ ವಾಸನೆಯುಳ್ಳ ಸ್ಕೇಟೋಲ್, ಇಂಡೋಲ್ ಮತ್ತು ರಂಜಕಯುಕ್ತ ಗ್ಯಾಸ್‌ಗಳೂ ಉದರದಲ್ಲಿ ಉತ್ಪಾದನೆಯಾಗುತ್ತವೆ.

ಉರಿಯುವ ಗುಣವಿರುವ ಗ್ಯಾಸ್‌ನಿಂದ ನೀವು ಬಳಲುತ್ತಿದ್ದರೆ ಇದಕ್ಕೆ ಕಾರಣ ಹೈಡ್ರೋಜನ್ ಮತ್ತು ಮೀಥೇನ್. ಉದರದಲ್ಲಿ ಈ `ಗ್ಯಾಸ್~ನ ಪ್ರಮಾಣ ನೇರವಾಗಿ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳ ಮೇಲೆ, ಅವುಗಳಿಂದಾಗುವ ಹುದುಗುವಿಕೆ (fermentation) ಜೀರ್ಣ ಕ್ರಮ, ಹೀರುವ ಕ್ರಿಯೆ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.

ವಿವಿಧ ರೀತಿಯ ವಾಸನೆಗಳು `ಗ್ಯಾಸ್~ನ ಪ್ರಮಾಣ ಮತ್ತು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತವೆ. ಕರುಳಿನ ಕೆರಳಿಕೆಯಂತಹ (irritable bowel syndrome) ಕೆಲವು ರೋಗಗಳು ಸಹ ಈ `ಗ್ಯಾಸ್~ಗೆ ಕಾರಣವಾಗಬಹುದು.

`ಗ್ಯಾಸ್~ ಎಲ್ಲರಲ್ಲೂ ಇದ್ದೇ ಇರುತ್ತದೆ. ಕೆಲವರಲ್ಲಿ ಹೆಚ್ಚು. ಈ `ಗ್ಯಾಸ್~ ಹೆಚ್ಚಾದರೆ ಮಾರಣಾಂತಿಕ ಅಲ್ಲದಿದ್ದರೂ, ಸಾಮಾಜಿಕವಾಗಿ ಮುಜುಗರವನ್ನು ಉಂಟು ಮಾಡಬಲ್ಲದು. ಈ ಕಾರಣದಿಂದಲೇ ಈಸಮಸ್ಯೆ ಹೆಚ್ಚಾಗಿರುವ ರೋಗಿಗಳು ವೈದ್ಯರನ್ನು ಸಂಪರ್ಕಿಸುತ್ತಾರೆ.

`ಗ್ಯಾಸ್~ಗೂ ಕತೆ ಇದೆ
`ಗ್ಯಾಸ್~ನ ಇತಿಹಾಸದಲ್ಲಿ ಅನೇಕ ರೋಚಕ ಕತೆಗಳೇ ದಾಖಲಾಗಿವೆ. ಆಧುನಿಕ ವೈದ್ಯಕೀಯ ಪಿತಾಮಹ ಹಿಪ್ಪೋಕ್ರೇಟಸ್‌ನು `ಅಪಾನವಾತವನ್ನು ಹೊರಬಿಡುವುದು ವ್ಯಕ್ತಿಯ ಆರೋಗ್ಯಕ್ಕೆ ಹಿತಕರ~ ಎಂದು ಪ್ರತಿಪಾದಿಸಿದ್ದ. ರೋಮನ್ ಚಕ್ರವರ್ತಿ ಕ್ಲಾಡಿಯಸ್, ಎಲ್ಲ ರೋಮನ್ ಪ್ರಜೆಗಳೂ ಅಗತ್ಯ ಬಿದ್ದಾಗ ಹೂಸನ್ನು ಪಾಸ್ ಮಾಡಬಹುದೆಂದು ಫರ್ಮಾನು ಹೊರಡಿಸಿದ್ದ.

ದುರದೃಷ್ಟವಶಾತ್, ಚಕ್ರವರ್ತಿ ಕಾನ್‌ಸ್ಟಾಂಟಿನ್ ಕ್ರಿ.ಪೂ. 315ರಲ್ಲಿ ಈ ರಾಜಾಜ್ಞೆಯನ್ನು ಹಿಂದಕ್ಕೆ ತೆಗೆದುಕೊಂಡಿದ್ದ.

18ನೇ ಶತಮಾನದ ಮಧ್ಯಭಾಗದಲ್ಲಿ ಫ್ರೆಂಚ್ ಅಣಕು ಕಲಾವಿದ ಜೋಸೆಫ್ ಫ್ಯೂಗೋಲ್‌ ನಿಂದಾಗಿ `ಗ್ಯಾಸ್~ ಪ್ರಾಮುಖ್ಯ, ಜನಪ್ರಿಯತೆ ಪಡೆದುಕೊಂಡಿತು. ಕಲಾವಿದ ಫ್ಯೂಗೋಲ್ ತನಗೆ ಬೇಕಾದಾಗ, ಬೇರೆ ಬೇರೆ ಗತಿಗಳಲ್ಲಿ, ಬೇರೆ ಬೇರೆ ಶ್ರುತಿಗಳಲ್ಲಿ ನಿನಾದಗಳನ್ನು ಹುಟ್ಟಿಸಿ ಹೂಸನ್ನು ಬಿಡುತ್ತಿದ್ದ.

ಈತನ ಜನಪ್ರಿಯತೆ ಎಷ್ಟಿತ್ತೆಂದರೆ ಈತನ ತರಹವೇ ಅನೇಕ ತದ್ರೂಪಿಗಳು ಹುಟ್ಟಿಕೊಂಡರು. ಆದರೆ ಅವರೆಲ್ಲ ಹೊಟ್ಟೆಯಲ್ಲಿ `ಗ್ಯಾಸ್~ನ ಟ್ಯೂಬ್‌ಗಳನ್ನು ಅಡಗಿಸಿ ಇಟ್ಟುಕೊಂಡಿದ್ದುದು ನಂತರ ಪತ್ತೆಯಾಯಿತು.

ಇತ್ತೀಚೆಗೆ ಈ ಗ್ಯಾಸನ್ನು ಅಮರತ್ವಗೊಳಿಸಿದ ಕೀರ್ತಿ ಹಾಲಿವುಡ್ ನಟ ಮೆಲ್‌ಬ್ರೂಕ್‌ನಿಗೆ ಸಲ್ಲಬೇಕು. ಈತ Blazing saddles  ಎಂಬ ಸಿನಿಮಾದಲ್ಲಿ ಕಾಳು ತಿಂದು ಹೂಸು ಬಿಡುವ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾನೆ.

ಬರುವುದೇಕೆ?
-ಆಹಾರದಲ್ಲಿ ನಾರಿನಂಶ ಕೊರತೆ

-ಹೊಟ್ಟೆಯಲ್ಲಿ ಪರಾವಲಂಬಿ ಹುಳುಗಳು

-ಕರುಳಿನಲ್ಲಿ ಊತ

-ಕರುಳಿನಲ್ಲಿ ತಡೆ

-ಥೈರಾಯಿಡ್ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸದಿರುವುದು

-ಮಾದಕ ವಸ್ತು ಸೇವನೆ

ವೈದ್ಯರ ಭೇಟಿ ಯಾವಾಗ?
ಗುದ ದ್ವಾರದಿಂದ ಅಧಿಕ `ಗ್ಯಾಸ್~ ಹೊರಹೋಗುತ್ತಿದ್ದು ಹೊಟ್ಟೆನೋವು ಬರುತ್ತಿದ್ದರೆ, ಮಲ ವಿಸರ್ಜನೆಯ ಕ್ರಮದಲ್ಲಿ ಗಮನಾರ್ಹ ಬದಲಾವಣೆಗಳು ಕಂಡು ಬಂದರೆ, ಭೇದಿ ಆಗುತ್ತಿದ್ದರೆ, ಮಲಬದ್ಧತೆ ಇದ್ದರೆ, ಮಲವು ರಕ್ತ ಮಿಶ್ರಿತವಾಗಿದ್ದರೆ, ಜ್ವರ, ವಾಂತಿ, ವಾಕರಿಕೆಯ ಲಕ್ಷಣಗಳು ಕಂಡುಬಂದರೆ ವಿಳಂಬ ಮಾಡದೇ ವೈದ್ಯರನ್ನು ಸಂಪರ್ಕಿಸಬೇಕು.

(ಮುಂದುವರಿಯುತ್ತದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT