ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ಯಾಸ್ ಪೈಪ್‌ಲೈನ್‌ಗೆ ಒಪ್ಪಿಗೆ: ಕಾಮಗಾರಿ ಶೀಘ್ರ

2 ವರ್ಷದಲ್ಲಿ ಬುಲೆಟ್ ಟ್ಯಾಂಕರ್ ಪ್ರಮಾಣ ಶೇ 50ರಷ್ಟು ಇಳಿಕೆ
Last Updated 24 ಡಿಸೆಂಬರ್ 2013, 6:48 IST
ಅಕ್ಷರ ಗಾತ್ರ

ಮಂಗಳೂರು: ಮಂಗಳೂರು–ಬೆಂಗಳೂರು ನಡುವೆ ಅಡುಗೆ ಅನಿಲ (ಎಲ್‌ಪಿಜಿ) ಸಾಗಿಸುವ ಪೈಪ್‌ಲೈನ್ ಅಳವಡಿಕೆಗೆ ಅಗತ್ಯವಾಗಿದ್ದ ಎಲ್ಲಾ ಅನುಮತಿಗಳೂ ಲಭಿಸಿದ್ದು, ಕಾಮಗಾರಿ 2 ತಿಂಗಳೊಳಗೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಲಿದೆ. 2015ರ ನವೆಂಬರ್‌ಗೆ ಮೊದಲು ಯೋಜನೆ ಪೂರ್ಣಗೊಳ್ಳಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದ್ದಾರೆ.

‘ಒಟ್ಟು 701 ಕೋಟಿ ರೂಪಾಯಿ ವೆಚ್ಚದ ಈ ಯೋಜನೆಯಂತೆ ಮಂಗಳೂರಿನಿಂದ ಬೆಂಗಳೂರಿಗೆ ಹಾಸನ ಮೂಲಕ 362 ಕಿ.ಮೀ. ಉದ್ದಕ್ಕೆ ಪೈಪ್‌ಲೈನ್ ಅಳವಡಿಸಲಾಗುವುದು. ಈಗಾಗಲೇ ಇರುವ ಪೆಟ್ರೋಲಿಯಂ ಪೈಪ್‌ಲೈನ್ ಸಮೀಪದಲ್ಲೇ ಈ ಗ್ಯಾಸ್ ಪೈಪ್‌ಲೈನ್ ಅನ್ನು ಅಳವಡಿಸಲಾಗುವುದು. ಈ ಯೋಜನೆಗೆ ಅಗತ್ಯದ ಎಲ್ಲಾ ಇಲಾಖೆಗಳ ಅನುಮತಿ ಇದೀಗ ದೊರೆತಿದೆ' ಎಂದು ಅವರು ಸೋಮವಾರ ಸುರತ್ಕಲ್ ಸಮೀಪದ ಎಚ್‌ಪಿಸಿಎಲ್‌ನ ಸಾರಿಗೆ ನಿಲ್ದಾಣದಲ್ಲಿ (ಟ್ರಾನ್ಸ್‌ಪೋರ್ಟ್ ಹಬ್) ಪತ್ರಕರ್ತರಿಗೆ ತಿಳಿಸಿದರು.

ಈ ಗ್ಯಾಸ್ ಪೈಪ್‌ಲೈನ್‌ಗೆ ಹಾಸನದಲ್ಲಿ ಮಧ್ಯಂತರ ನಿಲುಗಡೆ ವ್ಯವಸ್ಥೆ ಇದ್ದು, ಅಲ್ಲಿಂದ ಮೈಸೂರಿಗೆ ಪೈಪ್‌ಲೈನ್ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಪೈಪ್‌ಲೈನ್‌ನಲ್ಲಿ ಅನಿಲ ಸಾಗಣೆ ಆರಂಭವಾದ ಬಳಿಕ ರಸ್ತೆಯಲ್ಲಿ ಸಂಚರಿಸುವ ಬುಲೆಟ್ ಟ್ಯಾಂಕರ್‌ಗಳ ಪ್ರಮಾಣ ಶೇ 50ರಷ್ಟು ಕಡಿಮೆಯಾಗಲಿದೆ. ಇದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಇತರ ಸರಕು ಸಾಗಣೆ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಜನವರಿಯಲ್ಲಿ ಚಾಲನೆ
ಕಳೆದ ಮಾರ್ಚ್ 18ರಂದು ಶಿಲಾನ್ಯಾಸ ಮಾಡಲಾದ ಎಚ್‌ಪಿಸಿಎಲ್‌ನ ದಕ್ಷಿಣ ಭಾರತದ ಮೊದಲ ಸಾರಿಗೆ ನಿಲ್ದಾಣವನ್ನು (ಟ್ರಾನ್ಸ್‌ಪೋರ್ಟ್ ಹಬ್) ಮುಂದಿನ ತಿಂಗಳು ಉದ್ಘಾಟಿಸಲಾಗುವುದು. ಈಗಾಗಲೇ ಇಲ್ಲಿ ಬಹುತೇಕ ನಿರ್ಮಾಣ ಕಾಮಗಾರಿಗಳು ಕೊನೆಗೊಂಡಿವೆ. ಟ್ಯಾಂಕರ್ ಚಾಲಕರಿಗೆ ಸೂಕ್ತ ವಿಶ್ರಾಂತಿ, ಚಿಕಿತ್ಸೆ, ಶುದ್ಧ ಕುಡಿಯುವ ನೀರು, ಆಹಾರ ಒದಗಿಸುವುದಕ್ಕಾಗಿ ಇದನ್ನು ಸ್ಥಾಪಿಸಲಾಗಿದೆ. ಇತರ ತೈಲ ಕಂಪೆನಿಗಳು ಸಹ ತಮ್ಮ ಚಾಲಕರ ಮತ್ತು ಸಹಾಯಕರ ಅನುಕೂಲಕ್ಕಾಗಿ ಇಂತಹ ನಿಲ್ದಾಣ ಸ್ಥಾಪಿಸಲು ಸೂಚನೆ ನೀಡಲಾಗಿದೆ ಎಂದರು.

ಇದಕ್ಕೆ ಮೊದಲು ಸಚಿವರು ಸಾರಿಗೆ ನಿಲ್ದಾಣದಲ್ಲಿನ ಸೌಲಭ್ಯ­ಗಳು ಮತ್ತು ನಿರ್ಮಾಣ ಕಾಮಗಾರಿ ವೀಕ್ಷಿಸಿ, ಕಾಮಗಾರಿಯ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿ­ದರು.

ಪೆರ್ನೆಯಲ್ಲಿ ಎಲ್‌ಪಿಜಿ ಟ್ಯಾಂಕರ್ ದುರಂತದ ಬಳಿಕ ಅಲ್ಲಿ ಕ್ಷಿಪ್ರ ಪ್ರತಿಕ್ರಿಯೆ ವಾಹನ (ಕ್ಯೂಆರ್‌ವಿ) ನಿಯೋಜಿಸಲಾಗಿದೆ. ಇದರಿಂದ ಟ್ಯಾಂಕರ್ ಅಪಘಾತ ಸ್ಥಳಕ್ಕೆ ತ್ವರಿತವಾಗಿ ತೆರಳುವುದು ಸಾಧ್ಯವಾಗಿದೆ ಎಂದು ಎಚ್‌ಪಿಸಿಎಲ್‌ನ ಎಲ್‌ಪಿಜಿ ವಿಭಾಗದ ಕಾರ್ಯ­ನಿರ್ವಾಹಕ ನಿರ್ದೇಶಕ ವೈ.ಕೆ.ಗವಳಿ ಹೇಳಿದರು.

ಎಂಆರ್‌ಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಿ.ಪಿ.ಉಪಾಧ್ಯ, ಎಚ್‌ಪಿಸಿಎಲ್‌ನ ಹಿರಿಯ ಅಧಿಕಾರಿಗಳಾದ ಲಕ್ಷ್ಮೀನಾರಾಯಣ, ಶ್ರೀನಿವಾಸ್ ಇತರರು ಇದ್ದರು.

ರ್ಷ ಮೊಯಿಲಿಗಾಗಿ ಪ್ರಾಯೋಜಕತ್ವ ಮಾಡುತ್ತಿಲ್ಲ
ಮಂಗಳೂರು ಲೋಕಸಭಾ ಕ್ಷೇತ್ರದಿಂದ ಯಾರನ್ನು ಕಣಕ್ಕೆ ಇಳಿಸಬೇಕು ಎಂಬುದನ್ನು ಪಕ್ಷದ ಚುನಾವಣಾ ಸಮಿತಿ ನಿರ್ಧರಿಸುತ್ತದೆ. ನಾನಂತೂ ನನ್ನ ಪುತ್ರ ಹರ್ಷನಿಗಾಗಿ ಪ್ರಾಯೋಜಕತ್ವ ನಿರ್ವಹಿಸುತ್ತಿಲ್ಲ ಎಂದು ವೀರಪ್ಪ ಮೊಯಿಲಿ ಹೇಳಿದರು.

ಮಂಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಜನಾರ್ದನ ಪೂಜಾರಿ ಬದಲಿಗೆ ಹರ್ಷ ಅವರಿಗೆ ಟಿಕೆಟ್ ಕೊಡಿಸಲು ನೀವು ಯತ್ನಿಸುತ್ತಿದ್ದೀರಾ ಎಂದು ಪತ್ರಕರ್ತರು ಕೇಳಿದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. `ನಾನಂತೂ ಇಲ್ಲಿಗೆ ಬರುವ ಪ್ರಶ್ನೆಯೇ ಇಲ್ಲ. ಚಿಕ್ಕಬಳ್ಳಾಪುರದಲ್ಲೇ ನಾನು ಮತ್ತೆ ಸ್ಪರ್ಧಿಸುತ್ತೇನೆ' ಎಂದು ಹೇಳುವ ಮೂಲಕ ಅವರು ಕೆಲವೊಂದು ಸೂಚ್ಯ ಸಂದೇಶವನ್ನೂ ನೀಡಿದರು.

ಪರಿಸರ ಸಚಿವಾಲಯ ಹೊಣೆ:     ಮೊಯಿಲಿ ಪ್ರತಿಕ್ರಿಯೆ ಇಲ್ಲ
ಮಂಗಳೂರು: ಜಯಂತಿ ನಟರಾಜನ್ ರಾಜೀನಾಮೆ ಬಳಿಕ ಪರಿಸರ ಸಚಿವಾಲಯದ ಹೊಣೆಗಾರಿಕೆಯನ್ನು ತಮಗೆ ನೀಡಿರುವ ಬಗ್ಗೆ ಮತ್ತು ಪರಿಸರ ಯೋಜನೆಗಳ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ವೀರಪ್ಪ ಮೊಯಿಲಿ ನಿರಾಕರಿಸಿದ್ದಾರೆ.

`ಪರಿಸರ ಸಚಿವರಾಗಿ ಜಯಂತಿ ಅವರು ಅತ್ಯುತ್ತಮ ಕೆಲಸ ಮಾಡಿದ್ದಾರೆ. ಪಕ್ಷವನ್ನು ಬಲಪಡಿಸುವು­ದಕ್ಕಾಗಿ ಮಾತ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ ಹೊರತು ಯಾವುದೇ ಒತ್ತಡದಿಂದ ಅಲ್ಲ. ಪರಿಸರ ಸೂಕ್ಷ್ಮ ಪಶ್ಚಿಮ ಘಟ್ಟಗಳಲ್ಲಿನ ಯೋಜನೆ­ಗಳ ಸಹಿತ ಇತರ ವಿಚಾರಗಳನ್ನು ದೆಹಲಿಯಲ್ಲಿ ಇಲಾಖೆಯ ಹೊಣೆ ವಹಿಸಿಕೊಂಡ ಬಳಿಕ ತಿಳಿಸಲಿದ್ದೇನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT