ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಂಥಾಲಯ ಚಳವಳಿಯ ನೇತಾರ ನೀಲಮೇಘನ್‌

ವ್ಯಕ್ತಿ ಸ್ಮರಣೆ
Last Updated 2 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

‘ಮೊ ದಲ ಬಾರಿ ಮೌಂಟ್‌ ಎವರೆಸ್ಟ್‌ ಶಿಖರವನ್ನೇರಿದ್ದೀರಿ. ಅನುಭವ ಹೇಳುತ್ತೀರಾ’ ಎಂದು ತೇನ್‌ಸಿಂಗ್‌ ಅವರನ್ನು ಕೆಲ ಪತ್ರಕರ್ತರು ಪ್ರಶ್ನೆ ಕೇಳುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುವ ಅವರು ‘ನಾನು ಹತ್ತಿದ್ದು ಇದು ಮೊದಲೇನಲ್ಲ. ಬಾಲ್ಯದಿಂದಲೇ ನನ್ನ ಕನಸಿನಲ್ಲಿ ಪ್ರತಿದಿನ ಹತ್ತುತ್ತಿದ್ದೆ. ಇವತ್ತು ಅಧಿಕೃತವಾಗಿ ಏರಿದ್ದೇನೆ ಅಷ್ಟೆ. ಇದರಲ್ಲಿ ವಿಶೇಷವೇನಿಲ್ಲ’ ಎನ್ನುತ್ತಾರೆ.

ಇತ್ತೀಚೆಗೆ ನಿಧನರಾದ ಗ್ರಂಥಾಲಯ ಚಳವಳಿಗಳ ನೇತಾರ ಪ್ರೊ. ಎ. ನೀಲಮೇಘನ್‌ ಕೂಡ ಇದೇ ವರ್ಗಕ್ಕೆ ಸೇರಿದ ಕನಸಿನ ಜೀವಿ ಎಂದು ನೆನಪಿಸಿಕೊಂಡು ಭಾವುಕ ರಾಗಿದ್ದು ಅವರ ಸ್ನೇಹಿತರು ಹಾಗೂ ಶಿಷ್ಯರು. ತೇನ್‌ಸಿಂಗ್‌ ಕನಸು ಕಾಣುತ್ತಿದ್ದ ರೀತಿಯನ್ನು ವಿವರಿಸುತ್ತಲೇ ಮೇಘನ್‌ ಅವರು ತಮ್ಮ ಕನಸಿನ ಕಥೆಯನ್ನು ವಿದ್ಯಾರ್ಥಿಗಳ ಎದುರು ಬಿಚ್ಚಿಟ್ಟವರು. ಸದಾ ಹೊಸ ಹೊಸ ಕನಸುಗಳನ್ನು ಹೆಣೆಯುತ್ತಾ ಬದುಕಿ ಅದನ್ನು ಸಾಕಾರಗೊಳಿಸಿದವರು.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ದಂತಕತೆ ನೀಲಮೇಘನ್‌ ಅವರು ಶ್ರೇಷ್ಠ ವಿದ್ವಾಂಸ, ಅತ್ಯುತ್ತಮ ಮಾರ್ಗದರ್ಶಕ, ಸಂಶೋಧಕ ಹಾಗೂ ಸ್ಫೂರ್ತಿಯ ಸೆಲೆ. ಭಾರತದ ಗ್ರಂಥಾಲಯದ ಹರಿಕಾರ ಡಾ.ಎಸ್‌.ಆರ್‌.ರಂಗನಾಥನ್ ಅವರ ಜ್ಞಾನ, ಆದರ್ಶ, ತತ್ವಗಳನ್ನು ತಮ್ಮ ವೃತ್ತಿ ಬದುಕಿನಲ್ಲಿ ಸಾರಿದವರು.

ನೀಲಮೇಘನ್ ತಮ್ಮ 88ನೇ ವಯಸ್ಸಿನಲ್ಲಿ ಕಳೆದ ಜುಲೈ ಇಪ್ಪತ್ತೆಂಟರಂದು ತೀರಿಕೊಂಡಾಗ ಅವರ ಸ್ನೇಹಿತರು, ಸಹೋದ್ಯೋಗಿಗಳು, ವಿದ್ಯಾರ್ಥಿಗಳು, ಹಿತೈಷಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಗುಣಗಾನದಲ್ಲಿ ಪೈಪೋಟಿ ಇದ್ದಂತಿತ್ತು. ದೇಶ, ವಿದೇಶಗಳಿಂದ ಹರಿದುಬಂದ ಸಂತಾಪದ ಸಂದೇಶಗಳಲ್ಲಿ ಪ್ರೀತಿ ತುಂಬಿ ತುಳುಕುತ್ತಿತ್ತು. ಬೆಂಗಳೂರಿನ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಆರೋಗ್ಯ ವಿಚಾರಿಸಲು ಅಮೆರಿಕದಿಂದ ವಿದ್ಯಾರ್ಥಿಗಳು ಬಂದಿದ್ದರು.

ಉದಕ ಮಂಡಲ (ಊಟಿ)ದಲ್ಲಿ ಶ್ರೀವೈಷ್ಣವ ಸಮುದಾಯದ ಕುಟುಂಬದಲ್ಲಿ 1926ರಲ್ಲಿ ಜನಿಸಿದ ಅವರು ಚಿಕ್ಕಂದಿನಿಂದಲೇ ಕನಸುಗಳ ಬೆನ್ನಟ್ಟಿದವರು. ಗ್ರಂಥಾಲಯದ ಪಿತಾಮಹ ರಂಗನಾಥನ್‌ ಅವರನ್ನು ಆದರ್ಶವಾಗಿಸಿಕೊಂಡು ಬೆಳೆದವರು. ನಂತರ ಅವರಿಂದಲೇ ಪಾಠ ಹೇಳಿಸಿಕೊಂಡು ಗುರುವಿನಷ್ಟೇ ಖ್ಯಾತಿ ಸಂಪಾದಿಸಿದರು. ಗ್ರಂಥಪಾಲಕರಾಗಿ ಕೆಲಸ ಶುರುಮಾಡಿ  ಗ್ರಂಥಾಲಯ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣರಾದರು.  ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವಲಯದಲ್ಲಿ ವಿಶೇಷ ಸಾಧನೆಯ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡವರು. ಕೊನೆಯುಸಿರೆಳೆಯುವ 10 ದಿನಗಳ ಮುನ್ನವಷ್ಟೇ ನೀಲಮೇಘನ್‌ ಗ್ರಂಥಾಲಯ ಕ್ಷೇತ್ರದ ಅಭಿವೃದ್ಧಿ ಸಂಬಂಧಿಸಿದಂತೆ ಯುಜಿಸಿಗೆ ಪತ್ರ ಕೂಡ ಬರೆದಿದ್ದರು. ಇದು ಅವರಲ್ಲಿ ಕೊನೆಯುಸಿರಿನ ತನಕ ಜೀವಂತವಿದ್ದ ತುಡಿತಕ್ಕೊಂದು ಉದಾಹರಣೆ ಅಷ್ಟೆ.

1947ರಲ್ಲಿ ಮದ್ರಾಸ್‌ ವಿವಿಯಿಂದ ಭೌತಶಾಸ್ತ್ರದಲ್ಲಿ ಪದವಿ ಪಡೆದಿದ್ದ ಅವರು ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪೂರೈಸಿದ್ದರು. ನಂತರ ಅಮೆರಿಕದ ಕೊಲಂಬಿಯಾ ವಿವಿಯಿಂದ ಗ್ರಂಥಾಲಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು. ಆ ಬಳಿಕ ಸುಮಾರು 12 ವರ್ಷ ಅವರು ಹೆಸರಾಂತ ಉದ್ಯಮಗಳು, ಶಿಕ್ಷಣ ಸಂಸ್ಥೆಗಳ ಗ್ರಂಥಾಲಯ ವಿಭಾಗಗಳಲ್ಲಿ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು. ಹೊಸ ಹೊಸ ಯೋಜನೆಗಳನ್ನು ರೂಪಿಸಿದರು. ಗ್ರಂಥಾಲಯದ ಸಾಫ್ಟ್‌ವೇರ್‌ ಅಭಿವೃದ್ಧಿಪಡಿಸಲು ಶ್ರಮಿಸಿದರು.
1962ರಲ್ಲಿ ನೀಲಮೇಘನ್ ಅವರನ್ನು ಬೆಂಗಳೂರಿನಲ್ಲಿರುವ ಭಾರತೀಯ ಸಾಂಖ್ಯಿಕ ಸಂಸ್ಥೆಯ ಡಾಕ್ಯುಮೆಂಟೇಷನ್‌ ರಿಸರ್ಚ್‌ ಅಂಡ್‌ ಟ್ರೈನಿಂಗ್‌ ಸೆಂಟರ್‌ನಲ್ಲಿ (ಡಿಆರ್‌ಟಿಸಿ) ಕಾರ್ಯನಿರ್ವಹಿಸಲು ಖುದ್ದಾಗಿ ರಂಗನಾಥನ್‌ ಅವರೇ ಆಹ್ವಾನಿಸಿದ್ದು ವಿಶೇಷ. ಈ ಸಂಸ್ಥೆಯಲ್ಲಿ ಅವರು ರೀಡರ್‌, ಪ್ರೊಫೆಸರ್‌ ಹಾಗೂ ಮುಖ್ಯಸ್ಥರಾಗಿ 1978ರವರೆಗೆ ಕಾರ್ಯನಿರ್ವಹಿಸಿದ್ದರು. 

ಮಾಹಿತಿಯು ಸುಲಭವಾಗಿ, ಯಾವ ಸಂದರ್ಭದಲ್ಲಾದರೂ, ಎಲ್ಲರಿಗೂ ಸಿಗಬೇಕು ಎಂಬುದು ಅವರ ಧ್ಯೇಯವಾಗಿತ್ತು. ಹೊಸ ತಂತ್ರಜ್ಞಾನ ಕಲಿಸಲು ಹಾಗೂ ಕಲಿಯಲು ಅವರ ಮನಸ್ಸು ಸದಾ ತುಡಿಯುತ್ತಿತ್ತು. ವಿದ್ಯಾರ್ಥಿಗಳು ಎಂದರೆ ಅವರಿಗೆ ಪಂಚಪ್ರಾಣ. ಹೆಂಡತಿ, ಮಕ್ಕಳ ಮೇಲಿನ ಪ್ರೀತಿಗಿಂತ ಅದು ಹೆಚ್ಚು ಎನ್ನಬಹುದು. ವಾರಕ್ಕೊಮ್ಮೆಯಾದರೂ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು.
‘ಮಗಳ ಮದುವೆ ಹಿಂದಿನ ದಿನ ಕೂಡ ತರಗತಿಗೆ ಬಂದು ಪಾಠ ಮಾಡಿದ ಪುಣ್ಯಾತ್ಮ ಆತ. ಬೆಳಿಗ್ಗೆ 8 ಗಂಟೆಗೆ ಕಾಲೇಜಿನ ಕಚೇರಿಗೆ ಬಂದರೆ ಮನೆಗೆ ಹಿಂದಿರುಗುತ್ತಿದ್ದದ್ದು ರಾತ್ರಿ 11ಕ್ಕೆ. ಹಾಸ್ಟೆಲ್‌ಗೆ ಬಂದು ವಿದ್ಯಾರ್ಥಿಗಳ ಜತೆ ಊಟ ಮಾಡುತ್ತಿದ್ದರು’ ಎಂದು ಈಗ ಉನ್ನತ ಹುದ್ದೆಯಲ್ಲಿರುವ ಅವರ ವಿದ್ಯಾರ್ಥಿಗಳು ಗುರುವಿನ ಗುಣಗಾನ ಮಾಡುತ್ತಾರೆ.

ದೇಶ, ವಿದೇಶಗಳಲ್ಲಿ ಸುಮಾರು ಮೂರು ದಶಕಗಳ ಕಾಲ ಪಾಠ ಮಾಡಿದ್ದವರು ಅವರು. ವಿವಿಧ ವಿವಿಗಳಿಗೆ ತೆರಳಿ ಉಪನ್ಯಾಸ ನೀಡಿದ್ದಾರೆ. ಗ್ರಂಥಾಲಯ ವಿಜ್ಞಾನದ ಬಗೆಗಿನ ಯೋಜನೆಗಳ ಕುರಿತು ಮಾರ್ಗದರ್ಶನ ಹಾಗೂ ತರಬೇತಿ ನೀಡಲು ‘ಯುನೆಸ್ಕೊ’ದಿಂದಲೂ ಅವರಿಗೆ ಆಹ್ವಾನ ಬಂದಿತ್ತು. ಸುಮಾರು 10 ವರ್ಷ ಅಲ್ಲಿ ಸೇವೆ ಸಲ್ಲಿಸಿದ್ದರು. ‘ಒಮ್ಮೆ ತುರ್ತು ಕೆಲಸದ ಮೇಲೆ ಬೆಂಗಳೂರಿನಿಂದ ಕೋಲ್ಕತ್ತಕ್ಕೆ ವಿಮಾನದಲ್ಲಿ ಹೊರಟ್ಟಿದ್ದರು. ಸಂಪರ್ಕ ವಿಮಾನಕ್ಕಾಗಿ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದು ಕೊಂಡಿದ್ದರು. ಆಗ ನನ್ನನ್ನು ಅಲ್ಲಿಗೆ ಕರೆಸಿ ಅರ್ಧ ಗಂಟೆ ನನ್ನ ಸಂಶೋಧನಾ ಪ್ರಬಂಧದ ಬಗ್ಗೆ ಚರ್ಚಿಸಿದ್ದರು’ ಎಂದು ಆ ದಿನಗಳನ್ನು ನೆನಪಿಸಿಕೊಂಡ ಅವರ ವಿದ್ಯಾರ್ಥಿಯೊಬ್ಬರು ಗದ್ಗದಿತರಾದರು.

ಹಲವು ವಿದ್ಯಾರ್ಥಿಗಳು ನೀಲಮೇಘನ್‌ ಮಾರ್ಗದರ್ಶನದಲ್ಲಿ ಡಾಕ್ಟರೇಟ್‌ ಪದವಿ ಸಂಪಾದಿಸಿ ದ್ದಾರೆ. 250ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳನ್ನು ಅವರು ಮಂಡಿಸಿದ್ದರು. ಪ್ರತಿಷ್ಠಿತ ಸಂಶೋಧನಾ ಪತ್ರಿಕೆಗಳಲ್ಲಿ ಆ ಪ್ರಬಂಧಗಳು ಪ್ರಕಟವಾಗಿವೆ. 10ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ. ಕನ್ನಡದಲ್ಲಿ ಗ್ರಂಥಾಲಯ ವಿಜ್ಞಾನದ ಪಠ್ಯಗಳನ್ನು ರಚಿಸಿದ್ದಾರೆ. ಅಂತರ ಗ್ರಂಥಾಲಯ ನೆಟ್‌ವರ್ಕ್‌ (ಇಂಟರ್‌ ಲೈಬ್ರರಿ ಲೋನ್‌) ಪರಿಕಲ್ಪನೆ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರಯತ್ನ ನಡೆಸಿದ್ದರು.

ಇಷ್ಟೆಲ್ಲಾ ಸಾಧನೆ ಮಾಡಿರುವ ಅವರ ಬಗ್ಗೆ ಇಂದಿನ ಯುವ ಜನಾಂಗಕ್ಕೆ ಹೆಚ್ಚಿನವರಿಗೆ ಮಾಹಿತಿಯೇ ಇಲ್ಲ. ಅವರ ಸಾಧನೆಗೆ ಚಪ್ಪಾಳೆ ತಟ್ಟಿದವರೂ ಇಲ್ಲ. ಶಹಬ್ಬಾಸ್‌ ಎಂದವರು ಕಡಿಮೆ. ಇದರ ಪರಿವೆಯೇ ಇಲ್ಲದ ನೀಲಮೇಘನ್‌, ತಮ್ಮ ಜ್ಞಾನ ಶಿಖರವನ್ನು ಎತ್ತರಿಸಿಕೊಳ್ಳುತ್ತಾ, ವಿಸ್ತರಿಸಿಕೊಳ್ಳುತ್ತಾ ಸಾಗಿದವರು.

‘ಎಷ್ಟೊಂದು ಸಾಧನೆ ಮಾಡಿದರೂ ನೀಲಮೇಘನ್‌ ಎಲೆಮರೆ ಕಾಯಿಯಂತಿದ್ದರು. ದೇಶದ ದೊಡ್ಡ ದೊಡ್ಡ ವಿಜ್ಞಾನಿಗಳ ಸಾಲಿನಲ್ಲಿ ಇವರ ಹೆಸರೂ ಇರಬೇಕಿತ್ತು. ಆದರೆ, ಹಿತ್ತಲ ಗಿಡ ಮದ್ದಲ್ಲ ಎಂಬಂತೆ ಸರ್ಕಾರ ಇವರ ಸಾಧನೆಯನ್ನು ಗುರುತಿಸಲೇ ಇಲ್ಲ. ಇದಕ್ಕೆ ಅವರು ಆಸೆ ಪಟ್ಟವರೂ ಅಲ್ಲ’ ಎಂದು ಅವರ ಕೆಲ ವಿದ್ಯಾರ್ಥಿಗಳು ತಮ್ಮ ಗುರುವಿನ ಸಾಧನೆ ಹಾಗೂ ವ್ಯಕ್ತಿತ್ವವನ್ನು ಕೊಂಡಾಡು ತ್ತಾರೆ. ಅವರ ನಾಲ್ವರು ಮಕ್ಕಳೂ ಈಗ ಉನ್ನತ ಹುದ್ದೆಗಳಲ್ಲಿದ್ದಾರೆ.

‘ಯಾವುದೇ ದೇಶಕ್ಕೆ ಹೋದರೂ ಅಲ್ಲೊಬ್ಬ ನನ್ನ ವಿದ್ಯಾರ್ಥಿ ಸಿಗುತ್ತಾನೆ. ಸರ್‌, ಹೇಗಿದ್ದೀರಾ? ಈಗಲೂ ನಿಮಗೆ ಸಿಟ್ಟುಬರುವುದಿಲ್ಲವೇ ಎಂದು ಕೇಳುತ್ತಾರೆ. ಮನೆಗೆ ಆಹ್ವಾನಿಸುತ್ತಾರೆ. ಅವರ ಆ ಪ್ರೀತಿ, ವಿಶ್ವಾಸ ಸದಾ ಅಮರ. ಅದೇ ನನಗೆ ಲಭಿಸಿದ ಭಾರತ ರತ್ನ’ ಎಂದು ನೀಲಮೇಘನ್‌ ಅವರು ಕೆಲದಿನಗಳ ಹಿಂದೆಯಷ್ಟೇ ಸ್ನೇಹಿತರಿಗೆ ಹೇಳಿದ್ದರಂತೆ.

ಅವರಿಗೆ ದೊಡ್ಡ ಪ್ರಶಸ್ತಿ ಪುರಸ್ಕಾರಗಳು ಲಭಿಸಲಿಲ್ಲ. ಆದರೆ, ಕಾಯಕ ಪ್ರೀತಿ ಹಾಗೂ ವಿದ್ಯಾರ್ಥಿಗಳ ಪ್ರೇಮ ಅವರು ಗಳಿಸಿಕೊಂಡ ದೊಡ್ಡ ಸಂಪತ್ತು. ವೈಯಕ್ತಿಕ ಜೀವನಕ್ಕಿಂತ ಹೆಚ್ಚಾಗಿ ಅವರು ಪ್ರೀತಿಸಿದ್ದು ವೃತ್ತಿ ಬದುಕನ್ನು. ಅವರ ಶಿಷ್ಯರು ಈಗ ಶಿಕ್ಷಕರಾಗಿ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಪಾಠ ಮಾಡಲು ಬೆಂಗಳೂರಿಗೆ ಬಂದು ಈ ನಗರಿಯಲ್ಲೇ ನೆಲೆಯೂರಿದ ನೀಲಮೇಘನ್‌ ಈಗ ಇಲ್ಲದಿರಬಹುದು. ಆದರೆ ಅವರ ಕನಸುಗಳು ಹಾಗೂ ಜ್ಞಾನ ವಿದ್ಯಾರ್ಥಿಗಳ ರೂಪದಲ್ಲಿ ಹರಿದಾಡುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT