ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾನೈಟ್ ಮಾಫಿಯಾದಿಂದ ಹೋರಾಟಗಾರರಿಗೆ ಕಿರುಕುಳ

Last Updated 14 ಫೆಬ್ರುವರಿ 2012, 10:20 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯ ಇಳಕಲ್ ಭಾಗದಲ್ಲಿ ಕಾನೂನು ಬಾಹಿರವಾಗಿ ಕಾರ್ಯಾ ಚರಿಸುತ್ತಿರುವ ಗ್ರಾನೈಟ್ ಕಾರ್ಖಾನೆಗಳ ವಿರುದ್ಧ ಹೋರಾಟ ಮಾಡುತ್ತಿರುವ ಚಳುವಳಿಗಾರರಿಗೆ ಜೀವ ಬೆದರಿಕೆ ಮತ್ತು ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಪರಿಸರಕ್ಕೆ ಹಾನಿಕಾರಕವಾದ ಮತ್ತು ಬಳಕೆಗೆ ಅನುಮತಿ ಇಲ್ಲದ ಕಟ್ ಜಿ.ಆರ್ ಅಥವಾ ಏರೋಲೈಟ್ ಎಂಬ ವಿಷಕಾರಿ ರಾಸಾಯ ನಿಕವನ್ನು 14 ಗ್ರಾನೈಟ್ ಘಟಕಗಳು ಬಳಕೆ ಮಾಡುತ್ತಿರುವ ಬಗ್ಗೆ ಹೋರಾಟ ನಡೆಸುತ್ತಿರುವ  ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ನಾಗರಾಜ ಹೊಂಗಲ್ ಮತ್ತು ಸಾಮಾಜಿಕ ಕಾರ್ಯಕರ್ತ ಅಣ್ಣಾಜಿರಾವ್ ಕೋರೆನವರ ವಿರುದ್ಧ ಸುಳ್ಳು ಮೊಕದಮ್ಮೆಗಳನ್ನು ದಾಖಲಿಸಿ ಹೋರಾಟವನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸಲಾಗಿದೆ.

ಅನುಮತಿ ಇಲ್ಲದಿರುವ ಏರೋಲೈಟ್ ದ್ರಾವಣವನ್ನು ಬಳಕೆ ಮಾಡುತ್ತಿರುವ ಗ್ರಾನೈಟ್ ಘಟಕಗಳು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಎಲ್ಲ ಕಾಯ್ದೆ-ಕಾನೂನನ್ನು ಈಗಾಗಲೇ ಗಾಳಿಗೆ ತೂರಿ, ಸಂಬಂಧಪಟ್ಟ ಅಧಿಕಾರಿ ವರ್ಗವನ್ನು ತನ್ನ ಹಣ ಬಲದಿಂದ ಮಣಿಸಿದೆ. ಇದೀಗ ಏರೋಲೈಟ್ ಬಳಕೆ ವಿರುದ್ಧದ ಹೋರಾಟದ ಧ್ವನಿಯನ್ನು ಅಡಗಿಸುವ ಪ್ರಯತ್ನದಲ್ಲಿ ತೊಡಗಿದೆ.

ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತ ನಾಡಿದ ನಾಗರಾಜ್ ಹೊಂಗಲ್, ಏರೋಲೈಟ್ ಬಳಕೆ ವಿರುದ್ಧದ ಹೋರಾಟವನ್ನು ಕೈಬಿಡುವಂತೆ ಆರಂಭದಲ್ಲಿ ಜೀವ ಬೆದರಿಕೆ ಒಡ್ಡಿದ್ದ ದುಷ್ಕರ್ಮಿ ಗಳು ಇದೀಗ ತಮ್ಮ ವಿರುದ್ಧ ಸುತ್ತಲಿನ ಅಮಾಯಕ ದಲಿತರನ್ನು ಎತ್ತಿಕಟ್ಟಿ, ಜಾತಿ ನಿಂದನೆಯ ಸುಳ್ಳು ದೂರನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ತಮ್ಮ ಕುಟುಂಬವು ಹತ್ತಾರು ವರ್ಷದಿಂದ ನಡೆಸಿಕೊಂಡು ಬರುತ್ತಿರುವ ವಿದ್ಯುತ್ ಮಗ್ಗದಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ಆರೋಪಿಸಿ, ಮಗ್ಗಕ್ಕೆ ನುಗ್ಗಿ ದಾಂದಲೆ ನಡೆಸುವುದು, ನೇಯ್ಗೆ ಕಾರ್ಯಕ್ಕೆ ಅಡ್ಡಿ ಪಡಿಸುವುದು, ಅಲ್ಲದೇ ಕುಟುಂಬದ ಸದಸ್ಯರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಮಗ್ಗವನ್ನು ನಡೆಸಲು ಅಡಚಣೆ ಮಾಡುತ್ತಿರುವ ಬಗ್ಗೆ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆದರೆ ಪೊಲೀಸರಿಂದ ಈ ಬಗ್ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ದೂರಿರುವ ಅವರು, ಹತ್ತಾರು ಜನರಿಗೆ ಉದ್ಯೋಗ ಒದಗಿಸುತ್ತಿರುವ ವಿದ್ಯುತ್ ಮಗ್ಗವನ್ನು ಯಾವುದೇ ಅಡಚಣೆ ಇಲ್ಲದೇ ಕಾರ್ಯಾಚರಿಸಲು ಪೊಲೀಸರು ರಕ್ಷಣೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

  ಘಟನೆಯ ನೈಜತೆ ಅರಿವಿದ್ದರೂ ಪೊಲೀಸರು ಹೋರಾಟಗಾರರ ವಿರುದ್ಧ ಜಾತಿ ನಿಂದನೆ ದೂರನ್ನು ದಾಖಲಿಸಿಕೊಂಡಿರುವುದು ಸಂಶಯಕ್ಕೆ ಎಡೆ ಮಾಡಿದೆ ಎಂದು ಅವರು ಆಪಾದಿಸಿದ್ದಾರೆ.

ಒಂದು ವೇಳೆ ನಾವು ನಡೆಸುತ್ತಿರುವ ವಿದ್ಯುತ್ ಮಗ್ಗದಿಂದ ಸಮೀಪದ ನಿವಾಸಿಗಳಿಗೆ ಹಾಗೂ ಪರಿಸರ ಮಾಲಿನ್ಯವಾಗುತ್ತಿದ್ದರೆ ಅದರ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸಿದರೆ ಎದುರಿಸಲು ಸಿದ್ಧರಿದ್ದೇವೆ, ಅದನ್ನು ಬಿಟ್ಟು ಅಮಾಯಕ ದಲಿತರ ಮೂಲಕ ಸುಳ್ಳು ಜಾತಿ ನಿಂದನೆ ದೂರು ದಾಖಲಿಸಿರುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.

ಮತ್ತೊಬ್ಬ ಹೋರಾಟಗಾರ ಅಣ್ಣಾಜಿರಾವ್ ಕೋರೆನವರ ಅವರ ಕುಟುಂಬದವರು ನಡೆಸುತ್ತಿರುವ ಪಡಿತರ ಅಂಗಡಿ ಮೂಲಕ ಸೀಮೆ ಎಣ್ಣೆ ಮಾರಾಟ ಮಾಡುತ್ತಿರುವುದಕ್ಕೆ ಅಡಚಣೆ ಉಂಟುಮಾಡುವ ಪ್ರಯತ್ನ ಕೂಡ ನಡೆದಿದೆ.

ಈ ಕುರಿತು `ಪತ್ರಿಕೆ~ಯೊಂದಿಗೆ ಮಾತನಾಡಿದ ಅಣ್ಣಾಜಿರಾವ್ ಕೋರೆನವರ, ಅಜ್ಜನ ಕಾಲದಿಂದ ನಮ್ಮ ಕುಟುಂಬ ಸೀಮೆಎಣ್ಣೆ ಮಾರಾಟ ಮಾಡುತ್ತಿದೆ, ಆದರೆ ಇದೀಗ ಗ್ರಾನೈಟ್ ಮಾಫಿಯಾ ಸೀಮೆಎಣ್ಣೆ ಕಳಪೆಯಾಗಿದೆ, ಸಮರ್ಪಕವಾಗಿ ಹಂಚಿಕೆ ಮಾಡುತ್ತಿಲ್ಲ ಎಂದು ಗ್ರಾಹಕರಲ್ಲದ ಅಮಾಯಕ ದಲಿತರನ್ನು ಎತ್ತಿಕಟ್ಟಿ ಅಂಗಡಿ ಬಂದ್ ಮಾಡಿಸಲು ಯತ್ನಿಸುತ್ತಿರುವುದಾಗಿ ದೂರಿದರು.

ನಾಗರಾಜ ಹೊಂಗಲ್ ಮತ್ತು ಅಣ್ಣಾಜಿರಾವ್ ಕೋರೆನವರ ಅವರು  ಏರೋಲೈಟ್ ಬಳಕೆ ವಿರುದ್ಧ ನಡೆಸುತ್ತಿರುವ ಕಾನೂನಾತ್ಮಕ ಹೋರಾಟದಿಂದ ವಿಚಲಿತವಾಗಿರುವಂತೆ ಕಂಡುಬಂದಿರುವ ಗ್ರಾನೈಟ್ ಮಾಫಿಯಾ ಇದೀಗ ಹೋರಾಟವನ್ನು ಮುಗಿಸುವ ಪ್ರಯತ್ನದಲ್ಲಿ ತೊಡಗಿದೆ.

ದಕ್ಷತೆಗೆ ಹೆಸರಾದ ಪೊಲೀಸ್ ವರಿಷ್ಠಾಧಿಕಾರಿ ಈಶ್ವರ ಚಂದ್ರ ವಿದ್ಯಾಸಾಗರ ಅವರು ಇಳಕಲ್ ಗ್ರಾನೈಟ್ ಮಾಫಿಯಾದತ್ತ ಗಮನ ಹರಿಸಿ ಹೋರಾಟಗಾರರ ವಿರುದ್ಧ ನಡೆಯುತ್ತಿರುವ ಷಡ್ಯಂತ್ರವನ್ನು ಬಯಲುಮಾಡಿ, ನ್ಯಾಯ ಒದಗಿಸುವರೇ ಎಂಬುದು ಜಿಲ್ಲೆಯ ಪ್ರಜ್ಞಾವಂತ ಜನತೆಯ ಪ್ರಶ್ನೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT