ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಎದುರೇ ಶವ ಸಂಸ್ಕಾರಕ್ಕೆ ಮುಂದಾದರು...

Last Updated 24 ಆಗಸ್ಟ್ 2012, 5:20 IST
ಅಕ್ಷರ ಗಾತ್ರ

ಮುಂಡರಗಿ: ಗ್ರಾಮದಿಂದ ಸ್ಮಶಾನಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದಿರುವುದನ್ನು ಖಂಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಕಚೇರಿ ಎದುರು ಕಟ್ಟಿಗೆಗಳನ್ನು ಇಟ್ಟು ಶವ ಸಂಸ್ಕಾರಕ್ಕೆ ಮುಂದಾದ ಘಟನೆ ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿ ಬುಧವಾರ ಸಂಜೆ ನಡೆದಿದೆ.

ಗ್ರಾಮದಲ್ಲಿ ಹಿಂದೂ-ಮುಸ್ಲಿಮರ ಎರಡು ಪ್ರತ್ಯೇಕ ಸ್ಮಶಾನಗಳು ಗ್ರಾಮದ ಹೊರವಲಯದಲ್ಲಿ ಇದ್ದು, ಎರಡೂ ಸ್ಮಶಾನಗಳಿಗೆ ತೆರಳಲು ಒಂದೇ  ರಸ್ತೆ ಯನ್ನು ಬಳಸಲಾಗುತ್ತಿದೆ. ಸ್ಮಶಾನಕ್ಕೆ ತೆರಳುವ ಇಕ್ಕಟ್ಟಾದ ಕಚ್ಚಾ ರಸ್ತೆಯು ಇತ್ತೀಚೆಗೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ರಸ್ತೆಯ ಎರಡೂ ಬದಿಗಳಲ್ಲಿ ಗಿಡಗಂಟೆಗಳು ಬೆಳೆದು ರಸ್ತೆ ಸಂಪೂರ್ಣವಾಗಿ ಹೂತು ಹೋಗಿದೆ.

ಬುಧವಾರ ಗ್ರಾಮದಲ್ಲಿ ವೃದ್ಧರೊ ಬ್ಬರು ತೀರಿಕೊಂಡಿದ್ದು, ಗ್ರಾಮಸ್ಥರು ಅವರ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಲು ಸ್ಮಶಾನಕ್ಕೆ ತೆರಳಿದ್ದಾರೆ. ಸ್ಮಶಾ ನಕ್ಕೆ ತೆರಳಲು ಹಾಗೂ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರ ಮಾಡಲು ಸಾಧ್ಯವಿಲ್ಲ ದ್ದರಿಂದ ಗ್ರಾಮಸ್ಥರೆಲ್ಲ ಕೋಪಗೊಂಡು ಗ್ರಾಮ ಪಂಚಾಯ್ತಿ ಕಚೇರಿ ಎದುರು ಕಟ್ಟಿಗೆಗಳನ್ನು ಒಟ್ಟಿ ಶವ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾರೆ.


ಸುದ್ದಿ ತಿಳಿಯುತ್ತಿದ್ದಂತೆಯೇ ಸಂಬಂಧ ಪಟ್ಟ ಅಧಿಕಾರಿಗಳು  ಸ್ಥಳಕ್ಕಾಗಮಿಸಿ ದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳ ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕಾಗಮಿಸಿದ ಗ್ರಾಮದ ಹಿರಿಯರು, ಮುಖಂಡರು, ಗ್ರಾಮ ಪಂಚಾಯ್ತಿಯ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಗ್ರಾಮಸ್ಥರನ್ನು ಸಮಾಧಾನಪಡಿಸಿದ್ದಾರೆ. ಸ್ಮಶಾನದ ರಸ್ತೆಯನ್ನು ತಕ್ಷಣ ದುರಸ್ತಿ ಗೊಳಿಸುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಗ್ರಾಮ ಪಂಚಾಯ್ತಿ ಮುಂದೆ ಕೂಡಿಟ್ಟಿದ್ದ ಕಟ್ಟಿಗೆಗಳನ್ನು ಸ್ಮಶಾನಕ್ಕೆ ಸಾಗಿಸಿ ಅಲ್ಲಿ ಅಂತ್ಯಕ್ರಿಯೆ ಯನ್ನು ನೆರವೇರಿಸಿದ್ದಾರೆ.

ಗ್ರಾಮದಲ್ಲಿ ಯಾರಾದರೂ ತೀರಿಕೊಂಡರೆ ಅವರ ಅಂತ್ಯ ಸಂಸ್ಕಾರ ಮಾಡುವುದಕ್ಕೆ ಗ್ರಾಮಸ್ಥರು ಹರಸಾಹಸ ಪಡಬೇಕಾಗಿದ್ದು, ಗ್ರಾಮ ಪಂಚಾಯ್ತಿಯವರಿಗೆ ನಿತ್ಯ ಶಾಪ ಹಾಕುತ್ತಿದ್ದಾರೆ. ಸ್ಮಶಾನಕ್ಕೆ ತೆರಳುವ ರಸ್ತೆಯನ್ನು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಮಾಡಿಕೊಂಡಿದ್ದರೂ ಸಾರ್ವಜನಿಕರ ಅಳಲನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ಗ್ರಾಮದ ಯುವಕ ದುದ್ದು ಹಣಗಿ ಈ ಸಂದರ್ಭದಲ್ಲಿ ದೂರಿದರು.

ಗ್ರಾಮದಲ್ಲಿರುವ ರಸ್ತೆಗಳೆಲ್ಲ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದು, ಜನ ಜಾನುವಾರುಗಳು ಸಂಚರಿಸಲು ಬಾರದಂತಾಗಿವೆ. ಸಾರ್ವಜನಿಕರು ಬಳಸಿದ ಗಲೀಜು ನೀರು ಹರಿದು ಹೋಗಲು ರಸ್ತೆಯ ಪಕ್ಕದಲ್ಲಿ ಗಟಾರಗಳು ಇಲ್ಲದ್ದರಿಂದ ಹೊಲಸು ನೀರೆಲ್ಲ ರಸ್ತೆಯಲ್ಲೆ ಸಂಗ್ರಹವಾಗತೊಡಗಿದ್ದು, ರಸ್ತೆಯ ಮಧ್ಯದಲ್ಲಿಯ ಗುಂಡಿಗಳೆಲ್ಲ ಕ್ರಿಮಿ ಕೀಟಗಳ ವಾಸಸ್ಥಾನವಾಗಿವೆ. ಇದರಿಂದಾಗಿ ಗ್ರಾಮದಲ್ಲಿ ಸಾಂಕ್ರಾಮಿಕ ರೋಗಗಳು ಹರಡತೊಡಗಿವೆ ಎಂದು ಹಣಗಿ ಆರೋಪಿಸಿದ್ದಾರೆ.

ಗ್ರಾಮದ ಮೇಲ್ಭಾಗದಲ್ಲಿ ಶಿಂಗಟಾ ಲೂರ ಹುಲಿಗುಡ್ಡ ಏತನೀರಾವರಿ ಯೋಜನೆಯ ಕಾಮಗಾರಿ ಭರದಿಂದ ಸಾಗಿದ್ದು, ಈಗಾಗಲೇ ನೀರು ಸಂಗ್ರಹವಾಗತೊಡಗಿದೆ. ಗ್ರಾಮದ ಮೇಲ್ಭಾಗದಲ್ಲಿ ಬೃಹತ್ ಪ್ರಮಾಣದ ನೀರು ಸಂಗ್ರಹವಾದರೆ ಗ್ರಾಮವೆಲ್ಲ ಜವುಳು ಹಿಡಿಯಲಿದ್ದು, ಗ್ರಾಮ ಪಂಚಾಯ್ತಿಯವರು ಯಾವುದೇ ಮುಂಜಾಗ್ರತೆ ತೆಗೆದುಕೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದ ಸಮುದಾಯ ಆರೋಗ್ಯ ಕೇಂದ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು  ಯುವಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT