ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಮಟ್ಟದ ಕೃಷಿ ವಿಮಾ ಯೋಜನೆ ಜಾರಿ

Last Updated 15 ಜೂನ್ 2011, 6:30 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಪ್ರಾಯೋಗಿಕವಾಗಿ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಜಾರಿಗೊಳಿಸಲಾಗಿದೆ.

ಇದೂವರೆಗೂ ಚಾಲ್ತಿಯಲ್ಲಿದ್ದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಮತ್ತು ಪ್ರಾಯೋಗಿಕ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗಳನ್ನು ಹಿಂಪಡೆಯಲಾಗಿದೆ. ಇದೇ ಮೊದಲ ಬಾರಿಗೆ ಹೋಬಳಿ ಮತ್ತು ಗ್ರಾಮ ಮಟ್ಟದ ಬೆಳೆ ವಿಮೆಯನ್ನು ಜಾರಿಗೆ ತರಲಾಗಿದ್ದು, ಅಧಿಸೂಚಿತ ಬೆಳೆಗಳಿಗೆ ವಿಮಾ ಕಂತಿನಲ್ಲಿ ರಿಯಾಯಿತಿ ಕೂಡ ನೀಡಲಾಗಿದೆ.

ಜೋಳ, ರಾಗಿ, ಹುರುಳಿ, ಹೆಸರು, ಸಾವೆ, ಹತ್ತಿ, ನವಣೆ, ಹರಳು, ಮೆಣಸಿನಕಾಯಿ, ಸೂರ್ಯಕಾಂತಿ ಬೆಳೆಯುವ ರೈತರು ಈ ರಿಯಾಯಿಗೆ ಅರ್ಹರಾಗಿದ್ದಾರೆ.

ಏಪ್ರಿಲ್ 1ರಿಂದ ಜೂನ್ 30ರ ವರೆಗೆ ವಿಮಾ ಯೋಜನೆ ಜಾರಿಯಲ್ಲಿರುತ್ತದೆ. ಕಿಸಾನ್ ಕ್ರೆಡಿಟ್ ಸಾಲ, ಸಹಕಾರ ಸಂಘಗಳಿಂದ ಸಾಲ, ಆಭರಣದ ಮೇಲಿನ ಸಾಲ ಪಡೆದ ರೈತರು ಕಡ್ಡಾಯವಾಗಿ ವಿಮೆ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಕೃಷಿ ಇಲಾಖೆ ಸೂಚಿಸಿದೆ.

ಬೆಳೆಸಾಲ ಪಡೆಯದ ರೈತರು ಕೂಡ ಸ್ವ ಇಚ್ಛೆಯಿಂದ ಯೋಜನೆಯಲ್ಲಿ ತೊಡಗಿಸಿಕೊಳ್ಳಬಹುದು. ವಿಮಾ ಯೋಜನೆ ಮಾಡಿಸಿದರೆ ಬೆಳೆ ಬಿತ್ತನೆಯಿಂದ ಕೂಯ್ಲು ಆಗುವರೆಗಿನ ವಿವಿಧ ಬೆಳೆ ಹಂತಗಳಲ್ಲಿ ಉಂಟಾಗುವ ನಷ್ಟ ಪರಿಹಾರವನ್ನು ತುಂಬಿ ಕೊಡಲಾಗುತ್ತದೆ.

ಈ ನಿಟ್ಟಿನಲ್ಲಿ ಆಸಕ್ತ ರೈತರು ಪ್ರತಿ ಬೆಳೆಗೂ ಪ್ರತ್ಯೇಕ ಬೆಳೆ ವಿಮೆ ಅರ್ಜಿ ಸಲ್ಲಿಸಬೇಕಾಗಿದೆ. ಬೆಳೆ ಸಾಲ ಪಡೆಯದ ರೈತರು ಅಧಿಕೃತ ಏಜೆಂಟರ ಮೂಲಕ ವಿಮೆ ಮಾಡಿಸಿಕೊಳ್ಳಬಹುದಾಗಿದೆ.

ಪ್ರಕೃತಿ ವಿಕೋಪದಿಂದ ಅಥವಾ ಸ್ಥಳೀಯ ಗಂಡಾಂತರಗಳಿಂದ ಸಂಭವಿಸಬಹುದಾದ ಬೆಳೆ ನಷ್ಟದ ವಿಮೆ ಮಾಡಿಸಿಕೊಂಡ ರೈತರು ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮೆ ಸಂಸ್ಥೆಗೆ ವಿಮೆ ಮಾಡಿಸಿದ ವಿವರಗಳನ್ನು ನೀಡಬೇಕು.

ಬಿತ್ತನೆ ಪೂರ್ಣ ವಿಫಲವಾದರೆ ವಿಮಾ ಮೊತ್ತಕ್ಕೆ ಶೇ 12.5ರಷ್ಟು, ಬಿತ್ತನೆಯಾದ ನಂತರ ಮೊಳಕೆ ಬಾರದಿದ್ದಲ್ಲಿ ಶೇ 18.75ರಷ್ಟು, ಮೊಳಕೆ ಬಂದ ನಂತರ ಮುಂಚಿತವಾಗಿ ಬಾಡಿ ಹೋದರೆ ಅಥವಾ ಹಾಳಾದರೆ ಶೇ 25ರಷ್ಟು ಪರಿಹಾರವನ್ನು ವಿಮಾ ಸಂಸ್ಥೆ ಭರಿಸುತ್ತದೆ.

ಇದೇ ರೀತಿ ಬಿತ್ತನೆಗೊಂಡ ನಂತರ 1ರಿಂದ 2 ತಿಂಗಳ ಒಳಗೆ ಬೆಳೆ ಪೂರ್ಣವಾಗಿ ನಾಶಗೊಂಡರೆ ವಿಮಾ ಮೊತ್ತಕ್ಕೆ ಶೇ 50ರಷ್ಟು, ಬಿತ್ತನೆಯಾದ ನಂತರ 2ರಿಂದ 3 ತಿಂಗಳ ಒಳಗೆ ನಾಶಗೊಂಡರೆ ಶೇ 75ರಷ್ಟು ಹಾಗೂ ಬಿತ್ತನೆಯಾದ ಮೂರು ತಿಂಗಳ ಮೇಲ್ಪಟ್ಟು ಬೆಳೆ ನಾಶ ಹೊಂದಿದರೆ ಶೇ 100ರಷ್ಟು ಪರಿಹಾರ ಸಿಗುತ್ತದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕೃಷಿ ವಿಮೆಯಲ್ಲಿ ಹೆಸರು ನೋಂದಾಯಿಸಲು ಜೂನ್ 30 ಕಡೆ ದಿನ. ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಡಿ ಏಪ್ರಿಲ್ 1ರಿಂದ ಜೂನ್ 30ರೊಳಗೆ ಬೆಳೆ ಸಾಲ ಪಡೆದ ರೈತರು ಈ ತಿಂಗಳ 30 ರೊಳಗೆ ವಿಮಾ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ನೋಂದಾಯಿಸಿಕೊಳ್ಳಬೇಕು. ಬೆಳೆಸಾಲ ಪಡೆಯದ ರೈತರು ಪಹಣಿ, ಖಾತೆ, ಬ್ಯಾಂಕ್ ಪಾಸ್ ಪುಸ್ತಕ ಮುಂತಾದ ದಾಖಲೆ ನೀಡಿ ಹೆಸರು ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ವಿವರಗಳಿಗೆ ಸ್ಥಳೀಯ ವಾಣಿಜ್ಯ ಬ್ಯಾಂಕ್, ಸಹಕಾರ ಬ್ಯಾಂಕ್, ರೈತ ಸಂಪರ್ಕ ಕೇಂದ್ರ, ಕೃಷಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂರ್ಪಕಿಸುವಂತೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT