ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ

Last Updated 21 ಜುಲೈ 2012, 9:35 IST
ಅಕ್ಷರ ಗಾತ್ರ

ಮಲೇಬೆನ್ನೂರು: ಇಲ್ಲಿನ ಕಾಲಭೈರವ ರಸ್ತೆ- ಕಲ್ಲೇಶ್ವರ ಬಡಾವಣೆ ನಾಗರಿಕರು ಶುಕ್ರವಾರ  ಖಾಲಿಕೊಡಗಳೊಂದಿಗೆ ಆಗಮಿಸಿ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿ ಗ್ರಾಮ ಪಂಚಾಯ್ತಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮದ ಈ ಭಾಗದಲ್ಲಿ 20 ದಿನಗಳಿಂದ ಕುಡಿಯುವ ನೀರು ಪೂರೈಕೆ ಮಾಡಿಲ್ಲ. ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಕಿರುನೀರು ಸರಬರಾಜು ಮಾಡುವ ಟ್ಯಾಂಕ್ ಬಳಿ ಶುಕ್ರವಾರ ಪ್ರತಿಭಟನೆ ಮಾಡಿ ಒಂದೆರೆಡು ದಿನದಲ್ಲಿ ಸಮಸ್ಯೆ ಪರಿಹರಿಸದಿದ್ದಲ್ಲಿ ಗ್ರಾ.ಪಂ. ಕಚೇರಿ ಎದುರು ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದರೂ ಗ್ರಾಮ ಪಂಚಾಯ್ತಿ ಅಲಕ್ಷಿಸಿದೆ ಎಂದು ನಾಗರಿಕರು ಆರೋಪಿಸಿದರು.

ಶ್ರಾವಣ ಮಾಸ ಬಂದಿದ್ದು ಹಬ್ಬಕ್ಕೆ ಸುಣ್ಣ ಬಣ್ಣ ಹಚ್ಚಿ ಉಂಡೆ ತಯಾರಿ ಮಾಡಬೇಕಿದೆ. ಆದರೆ, ಎಲ್ಲಿ ಕುಡಿಯುವ ನೀರು ಬರುವುದೋ ನೋಡಿಕೊಂಡು ಕೊಡ ಹೊತ್ತು ತಿರುಗುವುದು ನಿತ್ಯದ ಕೆಲಸ ಆಗಿದೆ.

ಮೇಲ್ಭಾಗದಲ್ಲಿ ನಲ್ಲಿಗಳಿಗೆ ಮೋಟರ್ ಅಳವಡಿಸಿಕೊಳ್ಳುವ ಕಾರಣ ಕೆಳಭಾಗದವರಿಗೆ ನೀರು ಬರುತ್ತಿಲ್ಲ. ರಾತ್ರಿ ವೇಳೆ ವಾಲ್ವ್ ತಿರುಗಿಸಿ ನೀರನ್ನು ಪಡೆಯುತ್ತಾರೆ, ಬೆಳಿಗ್ಗೆ ನೀರುಗಂಟಿಗಳಿಗೆ ಕೇಳಿದರೆ ನಮಗೇನೂ ಗೊತ್ತಿಲ್ಲ ಎನ್ನುತ್ತಾರೆ.

ಗ್ರಾಮ ಪಂಚಾಯ್ತಿ ಸರ್ವಸದಸ್ಯರು ಕೊಮಾರನಹಳ್ಳಿಯಲ್ಲಿ ನಡೆಸಿದ ಕಾರ್ಯಾಚರಣೆಯಂತೆ ಇಲ್ಲಿ ನಲ್ಲಿಗಳಿಗೆ ಅಳವಡಿಸಿದ ಮೋಟರ್‌ಗಳನ್ನು ತೆರವುಮಾಡಿಸಿ, ಅಕ್ರಮ ಸಂಪರ್ಕ ತೆರವು ಮಾಡಿಸಿ ನಾಗರಪಂಚಮಿ ಹಬ್ಬದ ಹೊತ್ತಿಗೆ ಕುಡಿಯುವ ನೀರನ್ನು ಸರಬರಾಜು ಮಾಡಿ ಎಂದು ಆಗ್ರಹಿಸಿದರು.

ಗ್ರಾ.ಪಂ. ಕಾರ್ಯದರ್ಶಿ ಚಂದ್ರಪ್ಪ ಹಾಗೂ ಉಪಾಧ್ಯಕ್ಷ ನಿಟ್ಟೂರು ಹೊನ್ನಪ್ಪ, ಸದಸ್ಯ ಕೆ.ಜಿ. ಮಂಜುನಾಥ್ ಮಾಡಿದ ಸಂಧಾನ  ವಿಫಲವಾಯ್ತು. ಕೊನೆಗೆ ಪಿಡಿಒ ಎನ್. ಮೃತ್ಯುಂಜಯಪ್ಪ ಹಾಗೂ ಗ್ರಾ.ಪಂ. ಸಿಬ್ಬಂದಿ ಆಗಮಿಸಿ ಕುಡಿಯುವ ನೀರು ಸರಬರಾಜು ಮಾಡುವ ಭರವಸೆ ನೀಡಿದರು.

ಧರಣಿ ನಿರತರೊಂದಿಗೆ ಚರ್ಚಿಸಿ ಶನಿವಾರದಿಂದ ಪಂಪ್‌ಸೆಟ್ ಹಾಗೂ ಅಕ್ರಮ ಸಂಪರ್ಕ ತೆಗೆಸುವುದಾಗಿ ಆಶ್ವಾಸನೆ ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆಯುವಂತೆ ಮಾಡವಲ್ಲಿ ಯಶಸ್ವಿ ಆದರು.

ಕೆ.ಜಿ. ಲೋಕೇಶ್, ಕೂಲಂಬಿ ನಾರೇಶ್, ಗೋಪನಾಳ್ ಮಂಜುನಾಥ್, ಕೆ.ಜಿ. ಚಂದ್ರಪ್ಪ, ಸಿರಿಗೆರೆ ಸಿದ್ದೇಶ್, ಶಿವಕುಮಾರ್, ಹಾಲಪ್ಪ, ಸಾವಿತ್ರಮ್ಮ, ಮಂಜಮ್ಮ, ಶೀಲಮ್ಮ, ಚಂದ್ರಮ್ಮ, ಸವಿತಾ, ವೀಣಾ, ಗೀತಮ್ಮ, ಸಾವಿತ್ರಿ, ನಯಿಮಾ, ರಮೀಜಾಬೀ, ಶಾಹಿನಾ, ಜಯಮ್ಮ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT