ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಪಂಚಾಯ್ತಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ

ಮಲೇಬೆನ್ನೂರು: ಪುರಸಭೆಯಾಗಲು ಚಿಗುರೊಡೆದ ಕನಸು
Last Updated 17 ಸೆಪ್ಟೆಂಬರ್ 2013, 8:39 IST
ಅಕ್ಷರ ಗಾತ್ರ

ಮಲೇಬೆನ್ನೂರು: ಇಲ್ಲಿನ ಗ್ರಾಮ ಪಂಚಾಯ್ತಿಯನ್ನು ಪುರಸಭೆಯನ್ನಾಗಿ ಪರಿವರ್ತಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಕರೆದಿದ್ದ ವಿಶೇಷ ಸಭೆಯಲ್ಲಿ ಮಂಡಿಸಿದ್ದ ಗೊತ್ತುವಳಿಗೆ ಸರ್ವ ಸದಸ್ಯರು ಕೈ ಎತ್ತುವ ಮೂಲಕ ಸಮ್ಮತಿ ಸೂಚಿಸಿ ಅನುಮೋದನೆ ನೀಡಿದರು.

ಗ್ರಾಮ ಪಂಚಾಯ್ತಿ ಪಿಡಿಒ ನಾಗೇಶ್ವರ ರಾವ್‌ ಪ್ರಾಸ್ತಾವಿಕವಾಗಿ ವಿಶೇಷ ಸರ್ವ ಸದಸ್ಯರ ಸಭೆ ಕರೆದಿರುವ ಕುರಿತು ವಿಷಯ ಮಂಡಿಸಿದರು. ಕಳೆದ ವಾರ ಜಿಲ್ಲಾಧಿಕಾರಿ ಕಚೇರಿ ಆದೇಶದಂತೆ ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೆ
ಏರಿಸುವ ಕುರಿತು ನಿಗದಿತ ನಮೂನೆಗಳಲ್ಲಿ ಮಾಹಿತಿ ಕೇಳಿದ್ದರು. 

ಅದರಂತೆ ಗ್ರಾಮದ ಭೌಗೋಳಿಕ ವಿಸ್ತೀರ್ಣ, ಜನಸಂಖ್ಯೆ, ಮೂಲ ಸೌಕರ್ಯ, ವಾಣಿಜ್ಯ, ಶಿಕ್ಷಣ ಸಂಸ್ಥೆ, ಕೈಗಾರಿಕೆ, ಮೂಲಸೌಕರ್ಯ, ಕಂದಾಯ ವಸೂಲಾತಿ, ಸರ್ಕಾರಿ ಖಾಸಗಿ ಕಚೇರಿ ಇತರೆ ಮಾಹಿತಿ ಕಳುಹಿಸಿಕೊಡಲಾಗಿತ್ತು.

ಆದರೆ ಗ್ರಾಮದ ಜನಸಂಖ್ಯೆ 36,254 ಇದ್ದು, ಪುರಸಭೆಯಾಗುವ ಎಲ್ಲ ಅರ್ಹತೆ ಇರುವ ಕಾರಣ ಗ್ರಾಮ ಪಂಚಾಯ್ತಿ ಸರ್ವ ಸದಸ್ಯರ ಸಭೆಯಲ್ಲಿ ಅನುಮೋದಿಸಿ ಪುನಃ ಕಳುಹಿಸಿಕೊಡಲು ಜಿಲ್ಲಾಧಿಕಾರಿ ಕಚೇರಿ ಹಿಂದಿರುಗಿಸಿತ್ತು, ಪ್ರಸ್ತುತ 52 ಸದಸ್ಯ ಬಲದ ರಾಜ್ಯದಲ್ಲಿನ ದೊಡ್ಡ ಗ್ರಾಮಕ್ಕೆ ಅನುದಾನ ಕಡಿಮೆಯಾಗಿ ಅಭಿವೃದ್ಧಿ ಕೆಲಸ ಕುಂಠಿತವಾಗಿವೆ.

ಸಿಬ್ಬಂದಿ ಸಂಬಳ, ಸ್ಚಚ್ಛತೆ ಮಾಡಲು ಹಣ ಹೊಂದಿಸುವುದು  ಕಷ್ಟಕರವಾಗಿದೆ. ಗ್ರಾಮ ಪಂಚಾಯ್ತಿ ಮೇಲ್ದರ್ಜೆಗೆ ಪರಿವರ್ತನೆಗೊಳಿಸುವುದು ಉಳಿದ ಮಾರ್ಗ ಎಂದು ಗ್ರಾ.ಪಂ. ಅಧ್ಯಕ್ಷ ಬೋವಿ ಹನುಮಂತಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಸ್ಥಿತ ಸದಸ್ಯರು ಪುರಸಭೆಯಾಗಿ ಪರಿವರ್ತನೆ ಮಾಡಲು ಚರ್ಚಿಸಿ ಗೊತ್ತುವಳಿಗೆ ಕರತಾಡನದೊಂದಿಗೆ ಒಪ್ಪಿಗೆ ಸೂಚಿಸಿದರು.
ಉಪಾಧ್ಯಕ್ಷೆ ಶಹತಾಜ್‌ ಬಾನು, ಸದಸ್ಯರು, ಕಾರ್ಯದರ್ಶಿ ಹಾಗೂ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT