ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಯೋಜನೆಗೆ ಶೀಘ್ರ ಚಾಲನೆ:ಸಚಿವ

Last Updated 12 ಫೆಬ್ರುವರಿ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಆಯುಷ್ ಇಲಾಖೆಯು ಇತರೆ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ `ಆಯುಷ್ ಗ್ರಾಮ~ಯೋಜನೆಗೆ ಮಾರ್ಚ್ 3ರಂದು ಚಾಲನೆ ದೊರೆಯಲಿದ್ದು, ಇದರ ಪ್ರಯುಕ್ತ ಮೈಸೂರಿನ ಡಿ.ಬಿ.ಕುಪ್ಪೆ ಗ್ರಾಮವನ್ನು ಆಯುಷ್ ಗ್ರಾಮವಾಗಿ ದತ್ತು ಪಡೆದುಕೊಳ್ಳಲಿದೆ~ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಪ್ರಕಟಿಸಿದರು.

ಆಯುಷ್ ಇಲಾಖೆಯು ನಗರದ ಅರಮನೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಅಂತರರಾಷ್ಟ್ರೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ತಿಳಿಸಿದರು.

`ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಿಂದ ಎಚ್‌ಐವಿಯನ್ನು ಗುಣಪಡಿಸುವ ನಿಟ್ಟಿನಲ್ಲಿ ಆಯುಷ್‌ನ ವಿಶೇಷ ಘಟಕವನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗುವುದು. ಆಧುನಿಕ ಯುಗದಲ್ಲಿ ಎದುರಾಗುತ್ತಿರುವ ಹಲವು ಆರೋಗ್ಯ ಸಮಸ್ಯೆಗಳ ಸವಾಲನ್ನು ಎದುರಿಸಲು ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ ಅಗತ್ಯವಿದ್ದು, ಈ ದಿಸೆಯಲ್ಲಿ ಆಯುಷ್ ಇಲಾಖೆಯಡಿ ತರಬೇತಿ ಮತ್ತು ಸಂಶೋಧನಾ ಕೇಂದ್ರವನ್ನು ರಚಿಸಲಾಗುವುದು~ ಎಂದರು.

`ಗಾಂಧೀಜಿಯು ಪ್ರಕೃತಿ ಚಿಕಿತ್ಸೆಯನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಆದ್ದರಿಂದ ಮುಂದಿನ ಅಕ್ಟೋಬರ್ 2 ರಂದು ಪಕೃತಿ ಚಿಕಿತ್ಸಾ ದಿನಾಚರಣೆಯನ್ನಾಗಿ ಘೋಷಿಸಲಾಗುವುದು~ ಎಂದರು.

ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ದತ್ತ ವಿಜಯಾನಂದ ಸ್ವಾಮೀಜಿ, `ಎಲ್ಲರೂ ಆಯುರ್ವೇದ ಔಷಧಿಗಳಿಗೆ ಮೊರೆ ಹೋದರೆ,  ಸಮರ್ಪಕವಾಗಿ ಆಯುರ್ವೇದ ಔಷಧಿಗಳ ಪೂರೈಸಲು ಸಾಧ್ಯವಾಗದೇ ಇರಬಹುದು. ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಅಗತ್ಯವಿದೆ~ ಎಂದು ಅಭಿಪ್ರಾಯಪಟ್ಟರು.

ರಾಜ್ಯಸಭಾ ಸದಸ್ಯ ಡಾ.ಎಂ.ರಾಮಾಜೊಯಿಸ್, `ಉತ್ತಮ ಆರೋಗ್ಯ ಕಾಪಾಡುವಲ್ಲಿ ನಿರಂತರ ಯೋಗ ಪ್ರಮುಖ ಪಾತ್ರ ವಹಿಸುತ್ತದೆ. ದೇಹ ಆರೋಗ್ಯ ಮಾತ್ರವಲ್ಲ, ಉತ್ತಮ ನಡವಳಿಕೆಯನ್ನು ರೂಪಿಸುವಲ್ಲಿ ಯೋಗ ಕ್ರಿಯೆಯು ಸಹಕಾರಿಯಾಗಿದೆ ಎಂದರು.

ರಾಮಾನುಜ ಮಿಷನ್ ಟ್ರಸ್ಟ್‌ನ ಡಾ.ಚತುರ್ವೇದಿ ಸ್ವಾಮೀಜಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕಿ ಮೋಟಮ್ಮ, ಆಯುಷ್ ಇಲಾಖೆಯ ನಿರ್ದೇಶಕ ಜಿ.ಎನ್.ಶ್ರೀಕಂಠಯ್ಯ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT