ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಗ್ರಾಮ ಸಡಕ್ ಯೋಜನೆಗೆ ರೂ 21 ಕೋಟಿ ಬಿಡುಗಡೆ'

Last Updated 6 ಸೆಪ್ಟೆಂಬರ್ 2013, 6:27 IST
ಅಕ್ಷರ ಗಾತ್ರ

ಹಾಸನ: `ಮುಖ್ಯಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಯ ರಸ್ತೆಗಳನ್ನು ವಾಹನ ಸಂಚಾರಕ್ಕೆ ಯೋಗ್ಯವಾಗುವಂತೆ ಮಾಡಲು 21.29 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹಾದೇವಪ್ಪ ತಿಳಿಸಿದರು.
ಗುರುವಾರ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

`ಜಿಲ್ಲೆಯ ರಸ್ತೆಗಳ ಸ್ಥಿತಿಯ ಬಗ್ಗೆ ನನಗೆ ಮಾಹಿತಿ ಇದೆ. ಮಳೆಗಾಲ ಮುಗಿಯುವವರೆಗೆ ಕಾಮಗಾರಿ ಸಾಧ್ಯವಾಗದು. ಒಂದೆರಡು ತಿಂಗಳಲ್ಲಿ ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಜತೆಗೆ ರಸ್ತೆ ಸಮಸ್ಯೆಗೆ ಶಾಶ್ವತ ಪರಿಹಾರವನ್ನೂ ಕಂಡುಕೊಳ್ಳಲಾಗುವುದು. ದುದ್ದ ರಸ್ತೆ ಕಾಮಗಾರಿ ಆರಂಭಿಸುವುದಾಗಿ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಒಪ್ಪಿಕೊಂಡು, ಅದರ ಪ್ರಕಾರ 3 ದಿನ ಹಿಂದೆ ಕಾಮಗಾರಿ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು.

ಜಿಲ್ಲೆಯ ಸಮಸ್ಯೆಗಳ ಬಗ್ಗೆ ಭಾವನಾತ್ಮಕ ಹೇಳಿಕೆ ನೀಡುವುದರಿಂದ ಉಪಯೋಗವಿಲ್ಲ. ವೈಜ್ಞಾನಿಕವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಸರ್ಕಾರ ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅರಸೀಕೆರೆ ಹಾಗೂ ಚನ್ನರಾಯಪಟ್ಟಣದಲ್ಲಿ ಬರದ ಸ್ಥಿತಿ ಇದೆ. ಅಲ್ಲಿ ಆಗಿರುವ ಮಳೆಯ ಪ್ರಮಾಣ ಹಾಗೂ ಇತರ ಮಾಹಿತಿಗಳನ್ನು ಪಡೆದು ಬರ ಪೀಡಿತ ತಾಲ್ಲೂಕುಗಳೆಂದು ಘೋಷಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು.

ಮೀನುಗಾರಿಕೆ ಸ್ಥಳೀಯರಿಗೆ ಆದ್ಯತೆ:
ರಾಜ್ಯದ ಎಲ್ಲ ಜಲಾಶಯಗಳ ಮೀನುಗಾರಿಕೆಯನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಕೆಲವು ಸಮಾಜ ವಿರೋಧಿ ಶಕ್ತಿಗಳು ಪ್ರಯತ್ನಿಸುತ್ತಿವೆ. ಕೆರೆ, ಜಲಾಶಯಗಳಲ್ಲಿ ಮೀನುಗಾರಿಕೆಯನ್ನು ನಿಜವಾದ ಮತ್ತು ಸ್ಥಳೀಯ ಮೀನುಗಾರರಿಗೇ ನೀಡಬೇಕು ಎಂಬುದು ನಮ್ಮ ಅಭಿಪ್ರಾಯ, ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಹೇಮಾವತಿ ಜಲಾಶಯದಲ್ಲಿ ಮಹಾಮಂಡಳದವರು ಬೇರೆಯವರಿಗೆ ಮೀನುಗಾರಿಕೆಗೆ ಪರವಾನಿಗೆ ನೀಡಿದ್ದರಿಂದ ಉಂಟಾಗಿರುವ ಸಮಸ್ಯೆ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

ಜಿಲ್ಲೆಯ ಸಮಸ್ಯೆ ನನ್ನ ಗಮನಕ್ಕೆ ಬಂದಿದೆ. ಮೀನುಗಾರರು ಹಾಗೂ ಇತರ ಅನೇಕ ಮಂದಿ ಬಂದು ನನ್ನ ಜತೆ                         ಚರ್ಚಿಸಿದ್ದಾರೆ. ಮೃತರ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡಲಾಗಿದೆ. ಉಳಿದ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು' ಎಂದರು.

ತಪ್ಪು ರಾಜಕೀಯ ನಿರ್ಧಾರ
ಹಿಂದೆ ಕೆಲವು ತಪ್ಪು ರಾಜಕೀಯ ನಿರ್ಧಾರಗಳನ್ನು ಕೈಗೊಂಡಿರುವುದರಿಂದ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಸಮಸ್ಯೆಗಳಾಗಿದ್ದು, ಪಶು ವೈದ್ಯಕೀಯ ಕಾಲೇಜು ಇದಕ್ಕೆ ಒಂದು ಉದಾಹರಣೆ ಎಂದು ಮಹಾದೇವಪ್ಪ ಆರೋಪಿಸಿದರು.

ಬೇಕಾದಷ್ಟು ಮೂಲ ಸೌಲಭ್ಯ, ಹಣ ಒದಗಿಸಲು ಸಾಧ್ಯವಿದೆಯೇ - ಇಲ್ಲವೇ ಎಂಬುದನ್ನು ಚಿಂತಿಸದೆ  ಕಾಲೇಜು ಆರಂಭಿಸಲಾಯಿತು. ನಂತರದ ದಿನಗಳಲ್ಲಿ ಸೌಲಭ್ಯ ಕೊಡಲು ಸಾಧ್ಯವಾಗದೆ ಸಮಸ್ಯೆ ಸೃಷ್ಟಿಯಾಗಿದೆ ಎಂದರು

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಶಿವರಾಮು, ರಾಜ್ಯ ಸಭೆಯ ಮಾಜಿ ಸದಸ್ಯ ಎಚ್.ಕೆ. ಜವರೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ. ಆನಂದ್ ಹಾಗೂ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT