ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಭೆ ಅನುಮೋದನೆ

Last Updated 10 ಮಾರ್ಚ್ 2011, 11:10 IST
ಅಕ್ಷರ ಗಾತ್ರ

ಕೊಪ್ಪಳ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಬೇಕಾದ ಕಾಮಗಾರಿ ಕುರಿತಂತೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕು. ಈ ಕ್ರಿಯಾ ಯೋಜನೆ ರೂಪಿಸಿ, ಅನುಮೋದನೆ ನೀಡಲು ಗ್ರಾಮ ಸಭೆಯನ್ನು ಕಡ್ಡಾಯವಾಗಿ ಆಯೋಜಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಮೂರ್ತಿ ಹೇಳಿದರು.

ಅವರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.ತಪ್ಪದೇ ಗ್ರಾಮ ಸಭೆಗಳನ್ನು ನಡೆಸಬೇಕು ಹಾಗೂ ಈ ಸಭೆಗಳಲ್ಲಿಯೇ ಕ್ರಿಯಾ ಯೋಜನೆಗೆ ಅನುಮೋದನೆ ನೀಡಬೇಕು. ಇದಕ್ಕೆ ತಪ್ಪಿದಲ್ಲಿ ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಗ್ರಾಮ ಸಭೆಗಳೇ ನಡೆಯುತ್ತಿಲ್ಲ. ಹೀಗಾಗಿ ಕ್ರಿಯಾ ಯೋಜನೆಗೆ ಯಾರು ಅನುಮೋದನೆ ನೀಡಬೇಕು ಎಂಬ ಸದಸ್ಯರ ಆಕ್ಷೇಪಕ್ಕೆ ಅವರು ಈ ಪ್ರತಿಕ್ರಿಯೆ ನೀಡಿದರು.

ಗೊಂದಲ
: ಸದರಿ ಯೋಜನೆಯಡಿ ಶೇ 60ರ ಹಾಗೂ ಶೇ 40ರ ಹಣ ಬಳಕೆ ಬಗ್ಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸ್ಪಷ್ಟ ಮಾಹಿತಿ ಇಲ್ಲ. ಒಂದೊಂದು ಗ್ರಾಮ ಪಂಚಾಯಿತಿಯಲ್ಲಿ ಒಂದೊಂದು ರೀತಿ ಈ ಬಗ್ಗೆ ವಿವರಣೆ ನೀಡಲಾಗುತ್ತಿದೆ. ಈ ಗೊಂದಲ ನಿವಾರಿಸಬೇಕು ಎಂದು ಬಂಡಿಹರ್ಲಾಪೂರ ಕ್ಷೇತ್ರದ ಸದಸ್ಯ ಜನಾರ್ದನ ಹುಲಿಗಿ ಆಗ್ರಹಿಸಿದರು. ಇತರ ಸದಸ್ಯರು ಸಹ ಇದಕ್ಕೆ ದನಿಗೂಡಿಸಿದರು.

ಇದಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಮೂರ್ತಿ, ಕೂಡಲೇ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಉದ್ಯೋಗ ಖಾತರಿ ಯೋಜನೆ ಕುರಿತಂತೆ ಮಾರ್ಗದರ್ಶಿ ಸೂತ್ರಗಳ ಕುರಿತು ಮಾಹಿತಿ ಒದಗಿಸಲಾಗುವುದು ಎಂದು ಹೇಳಿದರು.

ಯಥಾ ಪ್ರಕಾರ ರಾಜೀವ್‌ಗಾಂಧಿ ಸಬ್‌ಮಿಶನ್ ಯೋಜನೆಯಡಿ ಪ್ರಗತಿಯಲ್ಲಿರುವ ಕುಡಿಯುವ ನೀರಿನ ಯೋಜನೆ, ರಸ್ತೆ ಕಾಮಗಾರಿ, ವಿಶೇಷ ಅಭಿವೃದ್ಧಿ ಯೋಜನೆಯಡಿ ಕೈಗೊಂಡ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ಮಾಡಲಾಯಿತು. ಬೇಸಿಗೆಯಲ್ಲಿ ಎದುರಾಗಬಹುದಾದ ಸಂಭಾವ್ಯ ಕುಡಿಯುವ ನೀರಿನ ಸಮಸ್ಯೆ ಹಾಗೂ ಅದಕ್ಕೆ ಪರಿಹಾರವನ್ನು ಒಳಗೊಂಡಂತೆ ಶೀಘ್ರವೇ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಬಿಲ್ಗಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಡಾ.ಸೀತಾ ಜಿ.ಹಲಗೇರಿ ವೇದಿಕೆ ಮೇಲೆ ಉಪಸ್ಥಿತರಿದ್ದರು. ಸದಸ್ಯ ಕೆ.ರಾಘವೇಂದ್ರ ಹಿಟ್ನಾಳ್, ಸಮಗಂಡಿ ಗಂಗಣ್ಣ ಮರಿಮಲ್ಲಪ್ಪ, ವೀರೇಶ ಸಾಲೋಣಿ ಹಾಗೂ ಇತರರು ಚರ್ಚೆಯಲ್ಲಿ  ಪಾಲ್ಗೊಂಡಿದ್ದರು.ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನರೇಂದ್ರನಾಥ ತೊರವಿ, ಮುಖ್ಯ ಯೋಜನಾಧಿಕಾರಿ ಟಿ.ಪಿ.ದಂಡಿಗದಾಸರ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT