ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸಹಾಯಕರ ಗೌರವ ಧನ ಹೆಚ್ಚಳ

Last Updated 10 ಡಿಸೆಂಬರ್ 2012, 21:01 IST
ಅಕ್ಷರ ಗಾತ್ರ

ಸುವರ್ಣ ವಿಧಾನಸೌಧ (ಬೆಳಗಾವಿ): ಗ್ರಾಮ ಸಹಾಯಕರ ಗೌರವ ಧನವನ್ನು ತಿಂಗಳಿಗೆ ರೂ 3500ರಿಂದ 7000 ರೂಪಾಯಿಗೆ ಹೆಚ್ಚಿಸಲು ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ನಡೆದ ಮೊದಲ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಸುಮಾರು 10,500 ಮಂದಿ ಗ್ರಾಮ ಸಹಾಯಕರು ಇದ್ದು, ಗೌರವ ಧನ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಇದೇ 6ರಂದು ಇಲ್ಲಿ ಪ್ರತಿಭಟನೆ ನಡೆಸಿದ್ದರು.

ಹಲವು ವರ್ಷಗಳಿಂದ ತಿಂಗಳಿಗೆ ರೂ 3500 ಗೌರವಧನಕ್ಕೆ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ವೇತನ ದ್ವಿಗುಣ ಮಾಡಿರುವುದರಿಂದ ವಾರ್ಷಿಕ 350 ಕೋಟಿ ರೂಪಾಯಿ ಹೊರೆ ಬೀಳಲಿದೆ ಎಂದು ಮೂಲಗಳು ತಿಳಿಸಿವೆ.
ಸಾಲ ಮನ್ನಾ:  ಕೃಷಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಫಲಾನುಭವಿಗಳಿಗೆ ಡಾ.ಅಂಬೇಡ್ಕರ್ ಅಭಿವೃದ್ಧಿ ನಿಗಮ, 2006ರ ಮಾರ್ಚ್ 31ರವರೆಗೆ ಮಂಜೂರು ಮಾಡಿರುವ ಸಾಲವನ್ನು ಬಡ್ಡಿ ಸಮೇತ ಮನ್ನಾ ಮಾಡಲು ಸಂಪುಟ ಸಭೆ ನಿರ್ಧರಿಸಿದೆ.

ಈ ಅವಧಿಯಲ್ಲಿ ಸುಮಾರು ಒಂದು ಲಕ್ಷ ಜನರು ಸಾಲ ಪಡೆದಿದ್ದಾರೆ. ಬಡ್ಡಿ ಸಮೇತ ಸಾಲ ಮನ್ನಾ ಮಾಡುವುದಕ್ಕೆ ರಾಜ್ಯ ಸರ್ಕಾರ ಸುಮಾರು 117 ಕೋಟಿ ರೂಪಾಯಿ ಪಾವತಿಸಲಿದೆ ಎಂದು ಮೂಲಗಳು ತಿಳಿಸಿವೆ. ಮರು ನಾಮಕರಣ: ನೆಮ್ಮದಿ ಕೇಂದ್ರಗಳಿಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರು ಇಡಲು ತೀರ್ಮಾನಿಸಲಾಗಿದೆ. ಇದೇ 25ರಂದು ವಾಜಪೇಯಿ ಅವರ ಹುಟ್ಟಿದ ಹಬ್ಬ ಇದ್ದು, ಅಂದೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ರಾಜ್ಯದಲ್ಲಿ 900 ಕಡೆ ಈ ರೀತಿಯ ಕೇಂದ್ರಗಳನ್ನು ಸ್ಥಾಪಿಸುತ್ತಿದ್ದು, ಪ್ರತಿ ಕೇಂದ್ರದ ಉಸ್ತುವಾರಿಗೆ ತಹಶೀಲ್ದಾರ್ ಅವರನ್ನು ನೇಮಿಸಲಾಗುತ್ತದೆ.

ಕಡ್ಡಾಯ ಇಲ್ಲ: ಆಶ್ರಯ, ಅಂಬೇಡ್ಕರ್ ಸೇರಿದಂತೆ ಇತರ ಯೋಜನೆಗಳಡಿ ನಿವೇಶನ ಪಡೆದ ಫಲಾನುಭವಿಗಳಿಗೆ ಇದುವರೆಗೂ ಇದ್ದ ಕಡ್ಡಾಯ ನೋಂದಣಿಯನ್ನು ಕೈಬಿಡಲಾಗಿದೆ. ಫಲಾನುಭವಿಗಳು ಇಚ್ಛಿಸಿದಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು. ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ ಎನ್ನಲಾಗಿದೆ.

ಮುಖ್ಯಮಂತ್ರಿಗೆ ಅಧಿಕಾರ: ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಸದಸ್ಯರು ನಿವೃತ್ತಿಯಾಗಿದ್ದು, ಅದೇ ಸಮುದಾಯದ ಒಬ್ಬರನ್ನು ನೇಮಿಸುವ ಅಧಿಕಾರವನ್ನು ಮುಖ್ಯಮಂತ್ರಿ ಅವರಿಗೆ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿತು.
ವಕ್ಫ್ ಆಸ್ತಿ ಕಬಳಿಸಿರುವ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ಆಯೋಗವು ಸರ್ಕಾರಕ್ಕೆ ವರದಿ ನೀಡಿದ್ದು, ಆ ಕುರಿತು ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಪಡೆದು, ಬಳಿಕ ಕ್ರಮ ತೆಗೆದುಕೊಳ್ಳಲು ಸಂಪುಟ ಸಭೆ ನಿರ್ಧರಿಸಿದೆ.
ಹೊರ ವರ್ತುಲ ರಸ್ತೆ

ಬೆಳಗಾವಿ: ಬೆಂಗಳೂರು ನಗರದ ತುಮಕೂರು ರಸ್ತೆಯಿಂದ ಬಳ್ಳಾರಿ ಮಾರ್ಗದ ಮೂಲಕ ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆಯನ್ನು 60:40ರ ಅನುಪಾತದಲ್ಲಿ ಅಭಿವೃದ್ಧಿಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿತು. ಈ ರಸ್ತೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸುತ್ತಿದೆ. ಈ ರಸ್ತೆಗಾಗಿ ಜಮೀನು ಕಳೆದುಕೊಳ್ಳುವ ಮಾಲೀಕರಿಗೆ ಶೇ 40ರಷ್ಟು ಅಭಿವೃದ್ಧಿಪಡಿಸಿದ ಜಾಗ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನಾಯಂಡಹಳ್ಳಿ ಬಳಿ ಹೊರ ವರ್ತುಲ ರಸ್ತೆ ಮತ್ತು ಬೆಂಗಳೂರು ಮೈಸೂರು ರಸ್ತೆಯ ಜಂಕ್ಷನ್‌ನಲ್ಲಿ ನಿರ್ಮಿಸುತ್ತಿರುವ ಗ್ರೇಡ್ ಸೆಪರೇಟರ್‌ಗೆ ಸಂಬಂಧಿಸಿದಂತೆ 3.21 ಎಕರೆ ಭೂಸ್ವಾಧೀನ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಂಪುಟ ಸಭೆ ಅನುಮೋದನೆ ನೀಡಿತು.

ಪೂರಕ ಅಂದಾಜು

ವಿವಿಧ ಇಲಾಖೆಗಳ ಮೂಲಕ ರೂ 9,197.65 ಕೋಟಿ ವೆಚ್ಚ ಮಾಡುವ ಪ್ರಸ್ತಾವವುಳ್ಳ ಪೂರಕ ಅಂದಾಜುಗಳ ಎರಡನೇ ಕಂತನ್ನು ರಾಜ್ಯ ಸರ್ಕಾರ ಸೋಮವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಪರವಾಗಿ ಕಾನೂನು ಸಚಿವ ಎಸ್.ಸುರೇಶಕುಮಾರ್ ಈ ಪ್ರಸ್ತಾವವನ್ನು ಸದನದಲ್ಲಿ ಮಂಡಿಸಿದರು. ಈ ಮೊತ್ತದಲ್ಲಿ 1,320.32 ಕೋಟಿ ರೂಪಾಯಿ ಕೇಂದ್ರ ಸರ್ಕಾರದಿಂದ ನೆರವಿನ ರೂಪದಲ್ಲಿ ಬರಲಿದೆ. ರೂ 8.55 ಕೋಟಿ ಇತರೆ ಜಮೆಗಳಿಗೆ ಸಂಬಂಧಿಸಿದ್ದರೆ, ರೂ 11.86 ಕೋಟಿ ಲೆಕ್ಕ ಹೊಂದಾಣಿಕೆಗೆ ಸಂಬಂಧಿಸಿದ್ದು ಎಂಬ ಮಾಹಿತಿ ಪ್ರಸ್ತಾವದಲ್ಲಿದೆ.

ವಸತಿಗಾಗಿ 509 ಕೋಟಿ ರೂಪಾಯಿ, ಶಿಕ್ಷಣ ಕ್ಷೇತ್ರದಲ್ಲಿ ರೂ 1,015 ಕೋಟಿ, ಲೋಕೋಪಯೋಗಿ ಇಲಾಖೆಯಲ್ಲಿ ರೂ 666 ಕೋಟಿ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 1,078, ಸಹಕಾರ ಇಲಾಖೆಯಡಿ ರೂ 1,845 ಕೋಟಿ ಮತ್ತು ರಾಜ್ಯ ಸರ್ಕಾರದ ಸಾಲದ ಮೇಲಿನ ಬಡ್ಡಿ ಮತ್ತು ಅಸಲು ಪಾವತಿಗಾಗಿ ರೂ 1,000 ಕೋಟಿ ವ್ಯಯಿಸುವ ಪ್ರಸ್ತಾವ ಪೂರಕ ಅಂದಾಜಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT