ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಅಂಚಿನಲ್ಲಿ ಕಾಡಾನೆಗಳ ಬೀಡು

Last Updated 3 ಜನವರಿ 2012, 19:20 IST
ಅಕ್ಷರ ಗಾತ್ರ

ಕನಕಪುರ:  ಹೊಸ ವರ್ಷದ ದಿನದಿಂದ ತಾಲ್ಲೂಕಿನ ಕಾಡಂಚಿನ ಹಳ್ಳಿಗಳಲ್ಲಿ ವಾಸ್ತವ್ಯ ಹೂಡಿರುವ ಕಾಡಾನೆಗಳ ಹಿಂಡು ಮಂಗಳವಾರ ಮಧ್ಯಾಹ್ನ ತಾಲ್ಲೂಕಿನ ಉಯ್ಯಂಬಳ್ಳಿ ಹೋಬಳಿಯ ಹಳ್ಳಿಗಳಲ್ಲಿ ಕಾಣಿಸಿಕೊಂಡು ರೈತರಲ್ಲಿ ಆತಂಕ ಮೂಡಿಸಿವೆ.

ಭಾನುವಾರ ಬೆಳಿಗ್ಗೆ ಮರಳವಾಡಿ ಹೋಬಳಿಯಲ್ಲಿ ಕಾಣಿಸಿಕೊಂಡ ಆನೆಗಳ ಹಿಂಡನ್ನು ಕಾಡಿಗೆ ಅಟ್ಟಲಾಯಿತು. ಈಗ ಅದೇ ಹಿಂಡು ಕಾಡಿಗೆ ಹೋಗದೇ, ಉಯ್ಯಂಬಳ್ಳಿ ಹೋಬಳಿಯ ಕಪನೀಗೌಡನದೊಡ್ಡಿ, ಯಡಮಾರನಹಳ್ಳಿ ಗ್ರಾಮದಲ್ಲಿ ಕಾಣಿಸಿಕೊಂಡಿವೆ. ಇದರಿಂದ ರೈತರು ಆತಂಕಪಡುತ್ತಿದ್ದಾರೆ.

ಸೋಮವಾರ ತಡರಾತ್ರಿಯಲ್ಲಿ ಯಡಮಾರನಹಳ್ಳಿಯ ಸುತ್ತಮುತ್ತಲ ಜಮೀನಿನಲ್ಲಿ ಕಾಣಿಸಿಕೊಂಡ ಸುಮಾರು 15 ಆನೆಗಳು ಮುಂಜಾನೆ ಯಡಮಾರನಹಳ್ಳಿ, ಕಪನೀಗೌಡನದೊಡ್ಡಿ, ದೊಡ್ಡಾಲಹಳ್ಳಿ, ಮಹಿಮನಹಳ್ಳಿ ಗ್ರಾಮಗಳಲ್ಲಿನ  ರೈತರ ಜಮೀನುಗಳ ಮೇಲೆ ದಾಳಿ ನಡೆಸಿ ಒಕ್ಕಣೆಗಾಗಿ ಸಂಗ್ರಹಿಸಿದ್ದ ರಾಗಿಮೆದೆಗಳನ್ನು ಸಂಪೂರ್ಣವಾಗಿ ನಾಶಮಾಡಿವೆ.   ಆನೆದಾಳಿಯಿಂದ ಕಂಗಾಲಾಗಿರುವ ರೈತರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿ ಅವುಗಳನ್ನು ಕಾಡಿಗೆ ಅಟ್ಟುವಂತೆ ಮನವಿ ಮಾಡಿದ್ದಾರೆ. ಅದರಂತೆ ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು  ಪಟಾಕಿ ಸಿಡಿಸುತ್ತಾ, ತಮಟೆ ಸದ್ದು ಮಾಡುತ್ತಾ, ಆನೆಗಳನ್ನು  ಸಂಜೆ ವೇಳೆಗೆ ಮುತ್ತತ್ತಿ ಅರಣ್ಯ ಪ್ರದೇಶದ ಕಡೆಗೆ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 

ಶಾಶ್ವತ ಕ್ರಮ: ಇತ್ತೀಚಿನ ದಿನಗಳಲ್ಲಿ ಕಾಡಾನೆಗಳು ನಾಡನ್ನು ಸೇರುತ್ತಿವೆ. ಕನಕಪುರ ತಾಲ್ಲೂಕಿನ ಸುತ್ತಲೂ ಅರಣ್ಯ ಪ್ರದೇಶ ಇರುವುದರಿಂದ ಆನೆಗಳು ಪ್ರತಿದಿನ ಗ್ರಾಮಗಳಿಗೆ ನುಗ್ಗಿ ಬೆಳೆಗಳನ್ನು ನಾಶಪಡಿಸುತ್ತಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಹಾನಿಯಾದ ಬೆಳೆಗೆ ವರದಿ ಕಳಿಸಿ ಒಂದು ಅಥವಾ ಎರಡು ಸಾವಿರ  ಪರಿಹಾರವನ್ನು ನೀಡುತ್ತಿದ್ದಾರೆ. ಅದು ಒಂದೆರಡು ವರ್ಷಗಳು ನಂತರ ರೈತರನ್ನು ತಲುಪುತ್ತದೆ.  ಆದರೆ ಬೆಳೆಯನ್ನೇ ನಂಬಿಕೊಂಡಿರುವಂತ ರೈತರು ಇದರಿಂದ ಸಂಕಷ್ಟವನ್ನು ಅನುಭವಿಸುವಂತಾಗಿದೆ. ಅರಣ್ಯ ಇಲಾಖೆಯವರು ಪ್ರತಿಸಾರಿ ಆನೆಗಳು ಬಂದಾಗ ಶಾಶ್ವತ ಪರಿಹಾರ ಮಾಡುವುದಾಗಿ ಭರವಸೆಯನ್ನು ನೀಡುತ್ತಲೆ ಇದ್ದಾರೆ. ಆದರೆ ಈವರೆಗೂ ಅಂತಹ ಶಾಶ್ವತ ಪರಿಹಾರವನ್ನು ಮಾಡಿಲ್ಲ, ಮುಂದಾದರು ಆನೆಗಳು ಹೊರಬರದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ನೊಂದ ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT